ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಬಿಯಾ: ಎನ್‌ಟಿಸಿ ನೆಲೆ ಟ್ರಿಪೋಲಿಗೆ

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಟ್ರಿಪೋಲಿ (ಎಎಫ್‌ಪಿ): ಲಿಬಿಯಾದಲ್ಲಿ ಮಧ್ಯಂತರ ಸರ್ಕಾರ ರಚಿಸಿರುವ ಎನ್‌ಟಿಸಿ (ನ್ಯಾಷನಲ್ ಟ್ರಾನ್ಸಿಷನಲ್ ಕೌನ್ಸಿಲ್) ಮುಖಂಡರು ಇದೀಗ ತಮ್ಮ ನೆಲೆಯನ್ನು ಬೆಂಘಝಿಯಿಂದ ರಾಜಧಾನಿ ಟ್ರಿಪೋಲಿಗೆ ಸ್ಥಳಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

 ಸರ್ವಾಧಿಕಾರಿ ಮುಅಮ್ಮರ್ ಗಡಾಫಿ  ವಿರುದ್ಧ ಏಳು ತಿಂಗಳ ಕಾಲ ನಡೆದ ದಂಗೆಯಲ್ಲಿ ಬೆಂಘಝಿ ಪ್ರತಿಭಟನಾಕಾರರ ಪ್ರಮುಖ ನೆಲೆಯಾಗಿತ್ತು.

ರಾಷ್ಟ್ರದಲ್ಲಿ ಪುನಃ ಶಾಂತಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ಟ್ರಿಪೋಲಿಯನ್ನೇ ರಾಜಧಾನಿಯಾಗಿ ಮಾಡಿಕೊಳ್ಳಲಾಗುವುದು ಎಂದು ಎನ್‌ಟಿಸಿ ಮಖ್ಯಸ್ಥರು ಹೇಳಿದ್ದಾರೆ.
 
`ಶನಿವಾರದಿಂದ ಅಧಿಕ ಸಂಖ್ಯೆಯ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಪುನಃ ಕೆಲಸಕ್ಕೆ ವಾಪಸಾಗಲಿದ್ದಾರೆ. ಪ್ರತಿಭಟನಾಕಾರರೇ ಈಗ ತಮ್ಮ ರಾಜಧಾನಿ ಟ್ರಿಪೊಲಿಯನ್ನು ರಕ್ಷಿಸಿಕೊಳ್ಳಲಿದ್ದಾರೆ ~ ಎಂದು ಗೃಹ ಮ್ತು ರಕ್ಷಣಾ ಸಚಿವ ಅಹಮ್ಮದ್ ದರ‌್ರಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

`ಮುಂದಿನ ವಾರದ ವೇಳೆಗೆ ಟ್ರಿಪೋಲಿಗೆ ಸಂಪೂರ್ಣ ಸ್ಥಳಾಂತರವಾಗುತ್ತೇವೆ. ಟ್ರಿಪೋಲಿಯೇ ನಮ್ಮ ರಾಜಧಾನಿ~ ಎಂದು ಎನ್‌ಟಿಸಿ ಮುಖ್ಯಸ್ಥ ಮುಸ್ತಾಫ ಅಬ್ದೆಲ್ ಜಲೀಲ್ ಹೇಳಿದ್ದಾರೆ.

ಈ ಮಧ್ಯೆ, `ಲಿಬಿಯಾ ಹೊತ್ತಿ ಉರಿದರೂ ಸರಿ. ನಾನು ದೀರ್ಘಯುದ್ಧ ಮಾಡುತ್ತೇನೆಯೇ ಹೊರತು ಶರಣಾಗುವುದಿಲ್ಲ. ಪ್ರತಿಭಟನಾಕಾರರ ವಿರುದ್ಧ ಗೆರಿಲ್ಲಾ ದಾಳಿ ನಡೆಸಿ~ ಎಂದು ಸಿರಿಯಾ ವಾಹಿನಿ ಮೂಲಕ ಕರೆ ನೀಡಿದ್ದ ಗಡಾಫಿ ಎಲ್ಲಿದ್ದಾರೆಂಬುದು ಇನ್ನೂ ಪತ್ತೆಯಾಗದೆ, ನಿಗೂಢತೆ ಮುಂದುವರಿದಿದೆ. ಇದೇ ವೇಳೆ ಎನ್‌ಟಿಸಿ ಗಡಾಫಿ ಬೆಂಬಲಿಗರಿಗೆ ಶರಣಾಗಲು ಮುಂದಿನ ಶನಿವಾರದವರೆಗೆ ಗಡುವು ವಿಸ್ತರಿಸಿದೆ.

ಗಡಾಫಿ ಕುಟುಂಬ ಸದಸ್ಯರಿಗೆ ಅಲ್ಜೀರ್ಸ್‌ನಲ್ಲಿ ಆಶ್ರಯ?
ಕೈರೊ (ಐಎಎನ್‌ಎಸ್/ ಆರ್‌ಐಎ ನೊವೊಸ್ತಿ):
ಲಿಬಿಯಾ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಕುಟುಂಬ ಸದಸ್ಯರಿಗೆಆಶ್ರಯ ನೀಡಿರುವ ಅಲ್ಜೀರಿಯಾ ಸರ್ಕಾರವು, ಅವರನ್ನು ರಾಜಧಾನಿ ಅಲ್ಜೀರ್ಸ್‌ಗೆ ಸ್ಥಳಾಂತರಲು ನಿರ್ಧರಿಸಿದೆ ಎನ್ನಲಾಗಿದೆ.

ಗಡಾಫಿ ಪತ್ನಿ ಸಫಿಯಾ, ಪುತ್ರಿ ಆಯೆಷಾ, ಇಬ್ಬರು ಪುತ್ರರಾದ ಮೊಹಮ್ಮದ್ ಮತ್ತು ಹನ್ನಿಬಲ್ ಆ.29ರಿಂದ ಆಗ್ನೇಯ ಗಡಿ ಭಾಗದಲ್ಲಿ ಆಶ್ರಯ ಪಡೆದಿದ್ದಾರೆ.

ಗಡಾಫಿ ಪುತ್ರಿ ಆಯೆಷಾ ಅಲ್ಜೀರಿಯಾಕ್ಕೆ ಬಂದ ನಂತರ ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದಾರೆ. ಆಯೆಷಾ ಗರ್ಭವತಿಯಾಗಿದ್ದನ್ನು ಪರಿಗಣಿಸಿಯೇ ಗಡಾಫಿ ಕುಟುಂಬ ಸದಸ್ಯರಿಗೆ ಅಲ್ಜೀರಿಯಾ ಆಶ್ರಯ ನೀಡಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ. ಇದೇ ವೇಳೆ ಲಿಬಿಯಾದಲ್ಲಿ ಮಧ್ಯಂತರ ಸರ್ಕಾರ ರಚಿಸಿರುವ ಎನ್‌ಟಿಸಿ, ಗಡಾಫಿ ಕುಟುಂಬ ಸದಸ್ಯರನ್ನು ಗಡಿಪಾರು ಮಾಡಬೇಕೆಂದು ಅಲ್ಜೀರಿಯಾವನ್ನು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT