ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಬಿಯಾ: ಗಡಾಫಿ ಹತ್ಯೆ

Last Updated 20 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಟ್ರಿಪೋಲಿ (ಪಿಟಿಐ/ಐಎಎನ್‌ಎಸ್): ಲಿಬಿಯಾದ ಪದಚ್ಯುತ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ  ಗುರುವಾರ ಸಿದ್ರಾದಲ್ಲಿ ಬಂಡುಕೋರರೊಡನೆ ನಡೆದ ಕಾಳಗದಲ್ಲಿ ಹತ್ಯೆಯಾಗಿದ್ದಾರೆ. ಗಡಾಫಿಯ ಪುತ್ರ ಮುತಾಸ್ಸಿಮ್ ಮತ್ತು ರಕ್ಷಣಾ ಸಚಿವ ಅಬು-ಬಕರ್ ಯೂನಿಸ್ ಜಬರ್ ಅವರ ಮೃತದೇಹಗಳು ಸಹ ಇದೇ ಪ್ರದೇಶದಲ್ಲಿ ಪತ್ತೆಯಾಗಿವೆ ಎಂದು ವರದಿಗಳು ತಿಳಿಸಿವೆ.

ತನ್ನ ಜನ್ಮಸ್ಥಳ ಮತ್ತು ತವರೂರು ಸಿದ್ರಾದ ನೆಲಮಾಳಿಗೆಯೊಂದರಲ್ಲಿ ಅವಿತುಕೊಂಡಿದ್ದ 69 ವಯಸ್ಸಿನ ಗಡಾಫಿ ಅವರನ್ನು ರಾಷ್ಟ್ರೀಯ ಸಂಧಿಕಾಲ ಮಂಡಳಿ (ಎನ್‌ಟಿಸಿ)ಯ ಯೋಧರು ಸೆರೆಹಿಡಿದ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆದು ತೀವ್ರ ಗಾಯಗೊಂಡಿದ್ದಾರೆ. ಈ ಕದನದಲ್ಲಿ ಎರಡೂ ಕಾಲು, ತಲೆ, ಭುಜಕ್ಕೆ ಗಾಯಗಳಾಗಿ ರಕ್ತಸ್ರಾವದಿಂದ ಕೆಳಗೆ ಬಿದ್ದ ಗಡಾಫಿ, ನಂತರದಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿರುವುದಾಗಿ ಎನ್‌ಟಿಸಿ ಕ್ಷೇತ್ರ ಕಮಾಂಡರ್ ಮೊಹಮ್ಮದ್ ಬುರಾಸ್ ಅಲಿ ಅಲ್-ಮ್ಯಾಕ್ನೀ ತಿಳಿಸಿರುವುದಾಗಿ ಕ್ಸಿನ್ಹುವಾ ವರದಿ ಮಾಡಿದೆ. 

 ಪಾನ್  ಅರೇಬಿಕ್  ಉಪಗ್ರಹ  ಚಾನೆಲ್  ಅಲ್ ಜಜೀರಾ ಟಿವಿ ಕೂಡಾ ಗಡಾಫಿ ಹತನಾಗಿರುವುದಾಗಿ ಪ್ರಸಾರ ಮಾಡಿದೆ. ಲಿಬಿಯಾ ನ್ಯಾಷನಲ್ ಟಿವಿ ಮತ್ತು ಅಲ್ ಜಜೀರಾ ಟಿವಿ ವ್ಯಕ್ತಿಯೊಬ್ಬ ರಕ್ತಸಿಕ್ತನಾಗಿ ಒದ್ದಾಡುತ್ತಿದ್ದ ದೃಶ್ಯವನ್ನು ತೋರಿಸಿವೆ. ತನ್ನನ್ನು ಎನ್‌ಟಿಸಿ ಯೋಧರು ಸೆರೆಹಿಡಿದುದನ್ನು ಅರಿತ ಗಡಾಫಿ, ತನಗೆ ಗುಂಡು ಹಾರಿಸದಂತೆ ಅಂಗಲಾಚಿದ್ದನ್ನು ಸೈನಿಕನೊಬ್ಬ ತಿಳಿಸಿದ್ದಾಗಿ ಬಿಬಿಸಿ ಸುದ್ದಿ ಬಿತ್ತರಿಸಿದೆ. ಈ ಘಟನೆಯನ್ನು ಪ್ರಸ್ತಾಪಿಸಿರುವ ಎನ್‌ಟಿಸಿ ವಕ್ತಾರ ಅಬ್ದೆಲ್ ಹಫೀಜ್ ಘೋಗಾ, `ನಿರಂಕುಶ ಆಡಳಿತ ಮತ್ತು ಸರ್ವಾಧಿಕಾರ ಕೊನೆಗೊಂಡ ಕ್ಷಣ ಇದಾಗಿದ್ದು, ಗಡಾಫಿ ತನ್ನ ಹಣೆ ಬರಹವನ್ನು ತಲುಪಿದ್ದಾರೆ~ ಎಂದು ಪ್ರತಿಕ್ರಿಯಿಸಿದ್ದಾರೆ.

ಸುಮಾರು ನಾಲ್ಕು ದಶಕಗಳ ಕಾಲ ಲಿಬಿಯಾವನ್ನು ಆಳಿದ ಗಡಾಫಿಯ ಸಾವಿನ ಸುದ್ದಿ ತಿಳಿದ ತಕ್ಷಣ ಬಂಡುಕೋರರ ಬೆಂಬಲಿಗರು ಬೀದಿಗಿಳಿದು `ಅಲ್ಲಾಹು ಅಕ್ಬರ್~ ಘೋಷಣೆ ಕೂಗುತ್ತಾ ವಿಜಯೋತ್ಸವ ಆಚರಿಸಿದರು.

ರಾಷ್ಟ್ರದ ಬಾವುಟಗಳನ್ನು ಹಿಡಿದು, ರಸ್ತೆಗಳಲ್ಲಿ ಕಾರು ಮತ್ತಿತರ ವಾಹನಗಳನ್ನು ಹಾರ್ನ್ ಇನ್ನಿತರ ಶಬ್ದಗಳನ್ನು ಮಾಡುತ್ತಾ, ಓಡಿಸಿ ಸಂತಸ ಸೂಚಿಸಿದ್ದಾರೆ. ಕೆಲವರು ಬಂದೂಕಿನಿಂದ ಆಗಸದತ್ತ ಗುಂಡು ಹಾರಿಸಿದರು. ಇನ್ನು ಕೆಲವರು ಪರಸ್ಪರ ತಬ್ಬಿಕೊಂಡು, ಮುತ್ತಿಕ್ಕಿದರು. ಇವರೆಲ್ಲ ರಾಷ್ಟ್ರಗೀತೆಯನ್ನೂ ಹಾಡಿದರು.

ಲಿಬಿಯಾ ಪ್ರಧಾನಿ ಮಹಮೂದ್ ಜಿಬ್ರಿಲ್ ಅವರು ತುರ್ತು ಸುದ್ದಿಗೋಷ್ಠಿ ನಡೆಸಿ, ಗಡಾಫಿ ಹತ್ಯೆಯಾಗಿರುವ ವಿಷಯವನ್ನು ಖಚಿತಪಡಿಸಿದ್ದಾರೆ. `ನಾವು ಬಹಳ ಸಮಯದಿಂದ ಈ ಸನ್ನಿವೇಶಕ್ಕಾಗಿ ಕಾಯುತ್ತಿದ್ದೆವು~ ಎಂದು ಅವರು ಹೇಳಿದ್ದಾರೆ.

ಆದರೆ ನ್ಯಾಟೊ ಮತ್ತು ಅಮೆರಿಕ ವಿದೇಶಾಂಗ ಇಲಾಖೆ ನಾವು ಗಡಾಫಿ ಸಾವಿನ ಸುದ್ದಿಯನ್ನು ಖಚಿತಪಡಿಸಲಾಗದು ಎಂದು ಪ್ರತಿಕ್ರಿಯಿಸಿವೆ.

ಈ ಮಧ್ಯೆ, ಗಡಾಫಿಯ ಮೃತದೇಹವನ್ನು ಮಿಸ್ರಾತಾದಲ್ಲಿನ ಮಸೀದಿಗೆ ಅಂತ್ಯಕ್ರಿಯೆಗಾಗಿ ಕೊಂಡೊಯ್ಯಲಾಗುತ್ತದೆ ಎಂದು ಎನ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಇನ್ನೊಬ್ಬ ಎನ್‌ಟಿಸಿ ಅಧಿಕಾರಿ ಗಡಾಫಿ ಶವವನ್ನು ಭದ್ರತಾ ಕಾರಣಗಳಿಂದ ರಹಸ್ಯ ಸ್ಥಳಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT