ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಬಿಯಾ ಮೇಲೆ ನಿಲ್ಲದ ದಾಳಿ; ಖಂಡನೆ

Last Updated 22 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಟ್ರಿಪೋಲಿ/ಟೊಬ್ರಕ್, ಲಿಬಿಯಾ (ಪಿಟಿಐ/ಎಎಫ್‌ಪಿ): ಸತತವಾಗಿ ಮೂರನೇ ರಾತ್ರಿಯೂ ಲಿಬಿಯಾ ರಾಜಧಾನಿಯಲ್ಲಿ ಭಾರಿ ಸ್ಫೋಟಗಳ ಸದ್ದು ಕೇಳಿಸಿದ್ದು,  ವೈಮಾನಿಕ ದಾಳಿ ಮುಂದುವರಿದಿದೆ.  ಸುಮಾರು 1,000 ಕಿ.ಮೀ. ವ್ಯಾಪ್ತಿಯವರೆಗೆ ವಿಮಾನ ಹಾರಾಟ ನಿಷೇಧ ವಲಯ ವಿಸ್ತರಿಸುವ ಸಾಧ್ಯತೆಯಿದೆ. ಸಮ್ಮಿಶ್ರ ಪಡೆಗಳು ಅಧ್ಯಕ್ಷ ಮುಅಮ್ಮರ್ ಗಡಾಫಿಯ ಮನೆಯ ಆವರಣ ಮತ್ತು ನಗರದ ಹೊರವಲಯದಲ್ಲಿರುವ ಬೃಹತ್ ನೌಕಾ ನೆಲೆಯನ್ನು ಗುರಿಯಾಗಿಸಿ ಮತ್ತೆ ಬಾಂಬ್ ದಾಳಿಗಳನ್ನು ನಡೆಸಿವೆ. ಇದಲ್ಲದೆ, ಗಡಾಫಿಯ ಪ್ರಬಲ ಹಿಡಿತದಲ್ಲಿರುವ ಜುವಾರಹ್, ಸಿರ್ಟೆ, ಸೆಭಾ, ಮಿಸ್ರುಟಾ, ಹಾಗೂ ಕದನಪೀಡಿತ ಅಜ್‌ಡಬಿಯಾ ನಗರಗಳ ಮೇಲೂ ಅವು ದಾಳಿ ಮುಂದುವರಿಸಿವೆ.

ಗಡಾಫಿ ನೇತೃತ್ವದ ಸರ್ಕಾರಿ ಪಡೆಗಳು ಯುದ್ಧವಿರಾಮ ಘೋಷಿಸಬೇಕೆಂಬ ವಿಶ್ವಸಂಸ್ಥೆಯ ನಿರ್ಣಯವನ್ನು ಉಲ್ಲಂಘಿಸಿ ಪ್ರತಿ ದಾಳಿ ನಡೆಸುತ್ತಿವೆ. ಸಮ್ಮಿಶ್ರ ಪಡೆಗಳ ದಾಳಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ನಾಗರಿಕರು ಪ್ರಾಣ ಕಳೆದುಕೊಂಡಿರುವುದಾಗಿಯೂ ಸರ್ಕಾರ ಆರೋಪಿಸಿದೆ. ಗಡಾಫಿ ವಿರೋಧಿಗಳ ಹಿಡಿತದಲ್ಲಿರುವ ಬೆಂಘಾಝಿ ನಗರವನ್ನು ಮರುವಶ ಮಾಡಿಕೊಳ್ಳಲು ಗಡಾಫಿ ಪಡೆ ಯತ್ನಿಸುತ್ತಿದೆ.

ಈ ಮಧ್ಯೆ, ಕಳೆದ ರಾತ್ರಿ ಪೂರ್ವ ಲಿಬಿಯಾದಲ್ಲಿ ಕಣ್ಮರೆಯಾಗಿದ್ದ ಮೂವರು ಪಾಶ್ಚಿಮಾತ್ಯ ಪತ್ರಕರ್ತರನ್ನು ಗಡಾಫಿ ಬೆಂಬಲಿಗರ ಪಡೆಗಳು ಬಂಧಿಸಿವೆ. ‘ಏಜೆನ್ಸ್ ಫ್ರಾನ್ಸ್ ಪ್ರೆಸ್ಸೆ’ಯ ವರದಿಗಾರ ಡೇವ್ ಕ್ಲಾರ್ಕ್ ಮತ್ತು ಛಾಯಾಚಿತ್ರಗ್ರಾಹಕ ರಾಬರ್ಟೊ ಸ್ಮಿತ್  ಮತ್ತು ಜೋ ರಾಯೆಡ್ಲ್ ಬಂಧಿಸಲ್ಪಟ್ಟಿರುವುದನ್ನು ಅವರ ವಾಹನ ಚಾಲಕ ಮೊಹಮ್ಮದ್ ಹಮೀದ್ ತಿಳಿಸಿದ್ದಾನೆ.

ನಾಗರಿಕರ ರಕ್ಷಣೆಯೇ ಗುರಿ (ವಾಷಿಂಗ್ಟನ್ ವರದಿ):
ಲಿಬಿಯಾ ನಾಯಕ ಮುಅಮ್ಮರ್ ಗಡಾಫಿಯನ್ನು ಗುರಿಯಾಗಿಸಿ ಅಮೆರಿಕ ನೇತೃತ್ವದ ಸಮ್ಮಿಶ್ರ ಪಡೆಗಳು ವೈಮಾನಿಕ ಮತ್ತು ಕ್ಷಿಪಣಿ ದಾಳಿ ನಡೆಸುತ್ತಿಲ್ಲ ಎಂದು ಪುನರುಚ್ಚರಿಸಿರುವ ಒಬಾಮ ಆಡಳಿತ, ಅಲ್ಲಿನ ನಾಗರಿಕರ ರಕ್ಷಣೆಗೆ ಎಲ್ಲ ಕ್ರಮಗಳನ್ನು ಜರುಗಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಂಡಿರುವುದಾಗಿ ಹೇಳಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಉನ್ನತ ರಾಷ್ಟ್ರೀಯ ಭದ್ರತಾ ಸಲಹೆಗಾರರ ಜೊತೆ ಲಿಬಿಯಾ ಪರಿಸ್ಥಿತಿ ಬಗ್ಗೆ ಚರ್ಚಿಸಿ, ಮಾಹಿತಿ ಪಡೆದ ಬಳಿಕ ಅವರ ಯುದ್ಧತಂತ್ರಗಾರಿಕೆ ಸಂಪರ್ಕಗಳ ರಾಷ್ಟ್ರೀಯ ಉಪಭದ್ರತಾ ಸಲಹೆಗಾರ ಬೆನ್ ರೋಡ್ಸ್ ಮೇಲಿನಂತೆ ತಿಳಿಸಿದ್ದಾರೆ.

ಈ ನಡುವೆ, ಕಳೆದ ವಾರ ಈಜಿಪ್ಟ್‌ನಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮತ್ತು ಲಿಬಿಯಾ ವಿರೋಧಿ ನಾಯಕರು ಭೇಟಿಯಾದ ನಂತರವೂ ಬೆಂಘಾಝಿ ಮತ್ತಿತರ ನಗರಗಳಲ್ಲಿ ಪ್ರಬಲವಾಗಿರುವ ವಿರೋಧಿ ಪಡೆಗಳೊಂದಿಗೆ ಸಮ್ಮಿಶ್ರ ಪಡೆಗಳು ಸಂಪರ್ಕ ಕಾಯ್ದುಕೊಂಡಿದ್ದು, ಸಮಾಲೋಚನಾ ಪ್ರಕ್ರಿಯೆ ಮುಂದುವರಿದಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ಮಾರ್ಕ್ ಟೋನರ್ ಹೇಳಿದ್ದಾರೆ.

ಬೀಜಿಂಗ್ ವರದಿ:ಲಿಬಿಯಾ ಬಿಕ್ಕಟ್ಟಿನಿಂದ ತನ್ನ ಹಲವು ಕಂಪೆನಿಗಳು ಭಾರಿ ನಷ್ಟ ಅನುಭವಿಸಬಹುದಾದ ಸಾಧ್ಯತೆಗಳ ಹಿನ್ನೆಲೆಯಲ್ಲಿ ಈ ಉತ್ತರ ಆಫ್ರಿಕಾ ದೇಶದಲ್ಲಿನ ತನ್ನೆಲ್ಲ ಬಂಡವಾಳ ಹೂಡಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಚೀನಾ ನಿರ್ಧರಿಸಿದೆ. ಖಮೇನಿ ಖಂಡನೆ (ಟೆಹರಾನ್ ವರದಿ): ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಮಂಗಳವಾರ ತಮ್ಮ ಹೊಸ ವರ್ಷದ ಸಂದೇಶದಲ್ಲಿ ಲಿಬಿಯಾದ ಮೇಲೆ ಪಾಶ್ಚಿಮಾತ್ಯ ಸಮ್ಮಿಶ್ರ ಪಡೆಗಳ ಸೇನಾ ಕಾರ್ಯಾಚರಣೆಯನ್ನು ಖಂಡಿಸಿದ್ದು, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಸುಳ್ಳುಗಾರ ಎಂದು ಜರೆದಿದ್ದಾರೆ.

ಆದರೆ ತನ್ನ ಜನರನ್ನೇ ಹತ್ಯೆ ಮಾಡುತ್ತಿರುವ ಗಡಾಫಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಪ್ರಾಂತೀಯ ಬಂಡಾಯವನ್ನು ಬೆಂಬಲಿಸಿದ್ದಾರೆ. ಲಿಬಿಯಾಕ್ಕೆ ಬೆಂಬಲ (ಸೋಲ್ ವರದಿ):  ಲಿಬಿಯಾ ಮೇಲಿನ ಸಮ್ಮಿಶ್ರ ಪಡೆಗಳ ವಾಯು ದಾಳಿಯನ್ನು ‘ಮಾನವೀಯತೆಯ ವಿರೋಧಿ’ ಎಂದು ಖಂಡಿಸಿರುವ ಉತ್ತರ ಕೊರಿಯಾ, ವಿದೇಶಿಯರ ಈ ದಾಳಿಗೆ ಪ್ರತಿಯಾಗಿ ಸ್ವಯಂರಕ್ಷಣೆ ಮಾಡಿಕೊಳ್ಳುವ ಲಿಬಿಯಾ ನೀತಿಯನ್ನು ಬೆಂಬಲಿಸಿದೆ. (ಕಂಪಾಲ ವರದಿ): ಲಿಬಿಯಾ ವಿರುದ್ಧ ಪಾಶ್ಚಿಮಾತ್ಯರ ಸೇನಾ ದಾಳಿಯನ್ನು ಖಂಡಿಸಿರುವ ಉಗಾಂಡ ಅಧ್ಯಕ್ಷ ಯೊವೇರಿ ಮುಸೆವೇನಿ, ಈ ಅಮಾನವೀಯ ಕೃತ್ಯವನ್ನು ತಡೆಯಲು ಮಾತುಕತೆ ನಡೆಸುವಂತೆ ಆಗ್ರಹಿಸಿದ್ದಾರೆ.

ವಾರಾಂತ್ಯಕ್ಕೆ ಭದ್ರತಾ ಮಂಡಳಿ ತುರ್ತು ಸಭೆ
ವಿಶ್ವಸಂಸ್ಥೆ (ಪಿಟಿಐ): ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈ ವಾರಾಂತ್ಯದಲ್ಲಿ ಸಭೆ ಸೇರಿ ಲಿಬಿಯಾ ಮೇಲಿನ ಸೇನಾ ಕಾರ್ಯಾಚರಣೆಯು ತನ್ನ 1973ರ ನಿರ್ಣಯಕ್ಕೆ ಬದ್ಧವಾಗಿ ನಡೆಯುತ್ತಿದೆಯೇ ಎಂಬುದರ ಕುರಿತು ಚರ್ಚಿಸಲಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಹರ್ದೀಪ್ ಸಿಂಗ್ ಪುರಿ ಮಂಗಳವಾರ ತಿಳಿಸಿದ್ದಾರೆ. ಲಿಬಿಯಾ ಮೇಲಿನ ದಾಳಿ ತಡೆಗೆ ಭದ್ರತಾ ಮಂಡಳಿಯ ತುರ್ತು ಸಭೆ ಕರೆಯಬೇಕೆಂಬ ಆ ದೇಶದ ವಿದೇಶಾಂಗ ಸಚಿವರ ಮನವಿಯನ್ನು 15 ಸದಸ್ಯ ರಾಷ್ಟ್ರಗಳ ಮಂಡಳಿ ಸೋಮವಾರ ತಿರಸ್ಕರಿಸಿದ್ದು, ಆದರೆ ವಾಸ್ತವಾಂಶ ತಿಳಿಯಲು ಬಯಸಿರುವುದನ್ನು ಪುರಿ ಸ್ಪಷ್ಟಪಡಿಸಿದ್ದಾರೆ.
 
‘ಅಮೆರಿಕ ಪಡೆಗಳಿಗೆ ಹೆಚ್ಚಿದ ಭಾರ’
ವಾಷಿಂಗ್ಟನ್ (ಪಿಟಿಐ): ಇರಾಕ್ ಮತ್ತು ಆಫ್ಘಾನಿಸ್ತಾನದ ಬಳಿಕ ಈಗ ಲಿಬಿಯಾ ಮೇಲೆ ಸೇನಾ ದಾಳಿಗೆ ಪ್ರವೇಶಿಸಿರುವ ಮತ್ತು ಭೂಕಂಪ-ಸುನಾಮಿಯಿಂದ ತತ್ತರಿಸಿದ ಜಪಾನ್‌ನಲ್ಲಿ ಮಾನವೀಯ ನೆರವಿಗೆ ಮುಂದಾಗಿರುವ ಅಮೆರಿಕ ಪಡೆಗಳು ಬಹಳ ಒತ್ತಡದ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವುದಾಗಿ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.

ಅವರು ಮಂಗಳವಾರ ಚಿಲಿ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ ಅವರೊಡನೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅಮೆರಿಕದ ಸೇನಾಪಡೆಗಳು ವಿಶ್ವದಾದ್ಯಂತ ಹೆಚ್ಚಿನ ಹೊಣೆಗಾರಿಕೆ ಮತ್ತು ಒತ್ತಡದ ಭಾರವನ್ನು ಹೊತ್ತಿದೆ’ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT