ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಬಿಯಾ ಸಂಘರ್ಷ: ತೈಲ ಆಘಾತದ ಭೀತಿ

Last Updated 12 ಮಾರ್ಚ್ 2011, 18:30 IST
ಅಕ್ಷರ ಗಾತ್ರ

ಲಿಬಿಯಾದಲ್ಲಿ ನಡೆಯುತ್ತಿರುವ ಸಂಘರ್ಷ ವಿಶ್ವದ ಎಲ್ಲ ದೇಶಗಳ ಆಡಳಿತಗಾರರಲ್ಲಿ ನಡುಕ ಹುಟ್ಟಿಸಿದೆ. ಪೆಟ್ರೋಲ್,ಡೀಸೆಲ್,ಅನಿಲ ಬೆಲೆ ಏರಿಕೆ ಭೀತಿ ಸಾಮಾನ್ಯ ಜನರನ್ನು ಕಾಡತೊಡಗಿದೆ. ಸಂಘರ್ಷದಿಂದಾಗಿ ಲಿಬಿಯಾದಲ್ಲಿ ಕಚ್ಚಾ ತೈಲ ಉತ್ಪಾದನೆಗೆ ಅಡಚಣೆಯುಂಟಾಗಿದೆ. ವಿಶ್ವದ ಒಟ್ಟು ತೈಲ ಉತ್ಪಾದನೆಯಲ್ಲಿ ಲಿಬಿಯಾದ ಪಾಲು ಶೇ. 2ರಷ್ಟು. ಈಗಾಗಲೇ ಪೂರೈಕೆ ಮುಕ್ಕಾಲು ಭಾಗದಷ್ಟು ನಿಂತಿದೆ. ಪರಿಸ್ಥಿತಿ ಸುಧಾರಣೆ ಆಗಬಹುದಾದ ಸಾಧ್ಯತೆಗಳು ಕಾಣಿಸುತ್ತಿಲ್ಲ. ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಆಗಿರುವ ಪರಿಣಾಮಕ್ಕಿಂತ ಅದು ಮಾರುಕಟ್ಟೆಯ ಮೇಲೆ ಮಾಡಿರುವ ಆಘಾತ ದೊಡ್ಡದು. 

 ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೂರು ವರ್ಷಗಳ ಹಿಂದೆ ಮಾಮೂಲಿ ಕಚ್ಚಾ ತೈಲದ ಬೆಲೆ ಒಂದು ಬ್ಯಾರಲ್‌ಗೆ (159 ಲೀಟರ್) 46 ಡಾಲರ್ ಇದ್ದದ್ದು 2008ರ ಆರ್ಥಿಕ ಕುಸಿತ ಸಮಯದಲ್ಲಿ 147 ಡಾಲರ್‌ಗಳಿಗೆ ಏರಿತ್ತು. ಅದು ಕ್ರಮೇಣ ಕಳೆದ ವರ್ಷದ ಡಿಸೆಂಬರ್ ವೇಳೆಗೆ 87.83 ಡಾಲರ್‌ಗಳಿಗೆ ಇಳಿದಿತ್ತು. ಅದೀಗ ಮತ್ತೆ 104 ಡಾಲರ್‌ಗೆ ಏರಿದೆ. ಏರಿಕೆ ನಿಲ್ಲುವ ಯಾವ ಸೂಚನೆಯೂ ಕಾಣುತ್ತಿಲ್ಲ.

ಬ್ರೆಂಟ್ ಕಚ್ಚಾ ತೈಲದ ಬೆಲೆ ಒಂದು ಬ್ಯಾರಲ್‌ಗೆ 115 ಡಾಲರ್ ಆಗಿದೆ. ಸಿಹಿ ತೈಲವೆಂದೇ ಕರೆಯಲಾಗುವ ಈ ತೈಲದಲ್ಲಿ ರಂಜಕದ ಅಂಶ ಕಡಿಮೆ ಇರುತ್ತದೆ. ಹೀಗಾಗಿಯೇ ಅದು ಉತ್ತಮವಾದ ತೈಲವೆಂದು ಹೆಸರಾಗಿದೆ. ಲಿಬಿಯಾದ ತೈಲ ಈ ವರ್ಗಕ್ಕೆ ಸೇರಿದೆ. ರಂಜಕದ ಅಂಶ ಕಡಿಮೆಯಿರುವ ಇನ್ನೂ ಕೆಲವು ತೈಲಗಳ ಮಾದರಿಗಳಿವೆ. ಆದರೆ ಆ ರೀತಿಯ ತೈಲದ ಉತ್ಪಾದನೆ ಕಡಿಮೆ.

ಲಿಬಿಯಾದ ಜೊತೆಗೆ ಇಂಗ್ಲೆಂಡ್, ನಾರ್ವೆ, ಡೆನ್ಮಾರ್ಕ್ ಕರಾವಳಿ ತೀರದ ಸಮುದ್ರದಾಳದಿಂದ ಉತ್ಪಾದನೆ ಮಾಡಲಾಗುತ್ತಿರುವ ಈ ತೈಲ ತನ್ನದೇ ಆದ ಭಿನ್ನ ಮಾರುಕಟ್ಟೆಯನ್ನು ನಿರ್ಮಾಣ ಮಾಡಿಕೊಂಡಿದೆ. ಮುಂದುವರಿದ ದೇಶಗಳು ಹೆಚ್ಚು ಕೊಳ್ಳುತ್ತಿರುವುದು ಈ ತೈಲವನ್ನೇ. ಈ ತೈಲ ಬಳಸುವವರು ಸಾಮಾನ್ಯ ತೈಲ ಬಳಸಬೇಕಾಗಿ ಬಂದಿರುವುದು ದೊಡ್ಡ ಸಮಸ್ಯೆಯಾಗಿದೆ.

ಹಿಂದೆ ಇರಾಕ್ ಬಿಕ್ಕಟ್ಟಿನ ಸಂದರ್ಭದಲ್ಲಿ ಇಂಥದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 120ರಿಂದ 140 ಡಾಲರ್‌ವರೆಗೆ ಹೋದದ್ದೂ ಇದೆ. ಅದರ ಪರಿಣಾಮವಾಗಿಯೇ ಜನರು ಇಂದು ಸಂಕಷ್ಟದಲ್ಲಿದ್ದಾರೆ. ತೈಲ ಬೆಲೆಗಳು ಇನ್ನೇನು ಇಳಿದವು ಎಂದುಕೊಳ್ಳುತ್ತಿರುವಾಗಲೇ ಈ ಆಘಾತದ ಭೀತಿ ತಲೆದೋರಿದೆ.

ಟ್ಯುನೀಶಿಯಾ ಮತ್ತು ಈಜಿಪ್ಟ್‌ನಲ್ಲಿನ ಜನಾಂದೋಲದ ಬೆನ್ನಲ್ಲಿಯೇ ಹುಟ್ಟಿಕೊಂಡ ತೈಲ ಆಘಾತದ ಭೀತಿ ಇದೀಗ ಮತ್ತಷ್ಟು ವ್ಯಾಪಕವಾಗಿ ಹಬ್ಬಿದೆ. ಹಾಗೆ ನೋಡಿದರೆ ಈಜಿಪ್ಟ್ ತೈಲ ರಫ್ತು ಮಾಡುವ ದೇಶ ಅಲ್ಲ. ಆದರೆ  ಪರ್ಷಿಯನ್ ಕೊಲ್ಲಿ ಮತ್ತು ಯೂರೋಪಿನ ತೈಲ ಮಾರುಕಟ್ಟೆಗೆ ಸಂಪರ್ಕ ಒದಗಿಸುವ ಸೂಯಜ್ ಕಾಲುವೆ ಪ್ರದೇಶ ಈಜಿಪ್ಟ್‌ನ ಬಗಲಲ್ಲಿ ಇದೆ.  ಹೀಗಾಗಿ ಈಜಿಪ್ಟ್‌ನಲ್ಲಿನ ಅಸ್ಥಿರತೆ ತೈಲ ಸಾಗಣೆ ಮಾರ್ಗದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಿತು.

ಈಜಿಪ್ಟ್ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ತೈಲ ಬೆಲೆಗಳಲ್ಲಿ ಏರಿಕೆ ಕಂಡುಬಂತು.  ಪ್ರಜಾತಂತ್ರಕ್ಕಾಗಿ ಆರಂಭವಾದ ಜನಾಂದೋಲನ ಕ್ರಮೇಣ ಉತ್ತರ ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ಹಬ್ಬಿದೆ. ವಿಶ್ವದ ಅತಿ ಹೆಚ್ಚು ತೈಲ ಸಂಪನ್ಮೂಲಗಳಿರುವ ದೇಶಗಳಿಗೆ ಜನಾಂದೋಲನ ಹಬ್ಬುತ್ತಿರುವುದೇ ತೈಲಭೀತಿಗೆ ಮುಖ್ಯ ಕಾರಣ. ಆಂದೋಲನ ಸಿಡಿಯಬಹುದಾದ ಮುಂದಿನ ದೇಶ ಯಾವುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಬಹೆರೇನ್‌ನಲ್ಲಿ ಕಂಡು ಬರುತ್ತಿರುವ ತಳಮಳ, ಸಂಘರ್ಷ ಸೌದಿ ಅರೇಬಿಯಾದಲ್ಲಿಯೂ ಕಾಣಿಕೊಂಡರೆ ಏನು ಗತಿ ಎಂಬುದೇ ಮುಂದುವರಿದ ದೇಶಗಳ, ಅಷ್ಟೇ ಏಕೆ ಎಲ್ಲ ದೇಶಗಳ ಆಡಳಿತಗಾರರ ಆತಂಕ.

ಸೌದಿ ಅರೇಬಿಯಾಕ್ಕೆ ಹತ್ತಿರವಿರುವ ತೈಲ ರಾಷ್ಟ್ರ ಬಹರೇನ್‌ನಲ್ಲಿ ಈಗಾಗಲೇ ಜನಾಂದೋಲನ ಸಿಡಿದಿದೆ. ಆಂದೋಲನ ಮುಂದಾಳುಗಳಾಗಿರುವವರ ಮನವೊಲಿಸುವ ಪ್ರಯತ್ನವನ್ನು ದೊರೆ ಅಹಮದ್ ಅಲ್ ಖಲೀಫಾ  ಮಾಡುತ್ತಿದ್ದಾರೆ. ಅದರ ಜೊತೆಗೇ ಆಂದೋಲವನ್ನು ಹತ್ತಿಕ್ಕುವ ಪ್ರಯತ್ನಗಳನ್ನೂ ನಡೆಸುತ್ತಿದ್ದಾರೆ. ಷಿಯಾ  ಬಹುಮತವಿರುವ ಬಹರೇನ್‌ನ ಆಡಳಿತ ಸುನ್ನಿ ಜನಾಂಗಕ್ಕೆ ಸೇರಿದ ಖಲೀಫಾ ಕುಟುಂಬದ ಕೈಯಲ್ಲಿದೆ.

ಖಲೀಫಾ ರಾಜರ ವಿರುದ್ಧ ಷಿಯಾಗಳು ದನಿ ಎತ್ತಿದ್ದಾರೆ. ಷಿಯಾ ಪ್ರಾಬಲ್ಯದ ಇರಾನ್ ಆಡಳಿಗಾರರು ಮೊದಲಿನಿಂದಲೂ ಬಹರೇನ್ ತಮ್ಮ ದೇಶದ ಭಾಗವೆಂದೇ ಹೇಳುತ್ತ ಬಂದಿದ್ದಾರೆ. ಬಹುಸಂಖ್ಯಾತ ಷಿಯಾಗಳಿಗೆ ನೆರವು ನೀಡಿ ಬಹರೇನನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಇರಾನ್‌ಗೆ ಇದೀಗ ಉತ್ತಮ ಅವಕಾಶ ಒದಗಿ ಬಂದಿದೆ. ಇರಾನ್ ಪ್ರಾಬಲ್ಯ ಅಡಗಿಸಲು ಮೊದಲಿನಿಂದಲೂ ಯತ್ನಿಸುತ್ತ ಬಂದಿರುವ ಅಮೆರಿಕಕ್ಕೆ ಈ ಬೆಳವಣಿಗೆ ದೊಡ್ಡ ಆಘಾತವೇ ಸರಿ.

ಈ ಬೆಳವಣಿಗೆ ಇಲ್ಲಿಗೆ ಮುಗಿಯುವುದಿಲ್ಲ. ಬಹರೇನ್‌ನ ನೆರೆಯಲ್ಲಿರುವ ಸೌದಿ ಅರೇಬಿಯಾದ ಪೂರ್ವ ಪ್ರಾಂತಗಳಲ್ಲಿಯೂ ಷಿಯಾಗಳೇ ಬಹುಸಂಖ್ಯಾತರು. ಸಹಜವಾಗಿಯೇ ಬಹರೇನ್‌ನ ಜನಾಂದೋಲನ ಆ ಪ್ರಾಂತ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದೇ ಇದೆ. ಸೌದಿ ಅರೇಬಿಯಾದ ತೈಲ ಕಣಜ ಇರುವುದೇ ಈ ಪ್ರಾಂತ್ಯಗಳಲ್ಲಿ.

ಈ ಪ್ರಾಂತಗಳಲ್ಲಿ ಷಿಯಾಗಳು ಆಂದೋಲನ ಆರಂಭಿಸಿದರೆ ಅದು ತೈಲ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಆಗುವುದು ಖಚಿತ. ಆದರೆ ಇಡೀ ಸೌದಿಯಲ್ಲಿ ಷಿಯಾಗಳ ಸಂಖ್ಯೆ ದೊಡ್ಡದಲ್ಲ. ಆದರೆ ತೈಲ ಪ್ರದೇಶಗಳಲ್ಲಿ ಅರಾಜಕ ಸ್ಥಿತಿ ನಿರ್ಮಾಣ ಮಾಡುವಷ್ಟು ಪ್ರಮಾಣದಲ್ಲಿ ಷಿಯಾ ಜನಾಂಗದವರು ಇರುವುದರಿಂದ  ಅಪಾಯದ ಭೀತಿ ಇದೆ. ಈ ಹೆದರಿಕೆ ಸೌದಿ ಅರೇಬಿಯಾದ ದೊರೆಗೂ ಇದೆ.

ಅನಾರೋಗ್ಯದಿಂದ ಬಳಲುತ್ತಿರುವ ದೊರೆಗೆ ಇದೀಗ 87 ವರ್ಷ. ಬಿಕ್ಕಟ್ಟಿನ ಭೀತಿ ಹಿನ್ನೆಲೆಯಲ್ಲಿ ದೇಶದ ಆಡಳಿತವನ್ನು ನಿಬಾಯಿಸುವಷ್ಟು ಅನುಭವ  ದೊರೆಯ ಮಕ್ಕಳಿಗೆ ಇಲ್ಲ. ಹೀಗಾಗಿ ಅಧಿಕಾರದ ಶಕ್ತಿ ಕೇಂದ್ರ ಅಲುಗಾಡುತ್ತಿದೆ. ಸಾಮಾನ್ಯ ಜನರಿಗೆ ಅನುಕೂಲ ಹೆಚ್ಚಿಸುವ ಮತ್ತು ನಿರುದ್ಯೋಗ ಕಡಿಮೆ ಮಾಡುವ ಉದ್ದೇಶದ ಕಾರ್ಯಕ್ರಮಗಳಿಗೆ ದೊರೆ 37 ಬಿಲಿಯನ್ ಡಾಲರ್ ಅನುದಾನವನ್ನು ಪ್ರಕಟಿಸಿದ್ದಾರೆ. ಆದರೆ ಇದು ಎಷ್ಟರಮಟ್ಟಿಗೆ ಜನರ ಅತೃಪ್ತಿಯನ್ನು ನಿವಾರಿಸುವಲ್ಲಿ ಸಫಲವಾಗುತ್ತದೆ ಎನ್ನುವುದನ್ನು ಈಗಲೇ ಹೇಳುವುದು ಕಷ್ಟ.

 ಸೌದಿ ಅರೆಬಿಯಾ ತೈಲ ಸಂಪನ್ಮೂಲ ದೇಶ.  ನಿತ್ಯ 8.4 ಮಿಲಿಯನ್ ಬ್ಯಾರಲ್ (ಬ್ಯಾರಲ್‌ಗೆ 159 ಲೀಟರ್) ಕಚ್ಚಾ ತೈಲವನ್ನು ಉತ್ಪಾದಿಸುತ್ತಿದೆ. ವಿಶ್ವದ ಒಟ್ಟು ತೈಲ ಉತ್ಪಾದನೆಯಲ್ಲಿ ಸೌದಿಯ ಪಾಲು ಶೇ 9. ಇತ್ತೀಚಿನ ವರ್ಷಗಳಲ್ಲಿ ಆರು ಲಕ್ಷ ಬ್ಯಾರಲ್‌ಗಳನ್ನು ಹೆಚ್ಚುವರಿಯಾಗಿ ಉತ್ಪಾದಿಸುತ್ತಿದೆ. ಅಗತ್ಯಬಿದ್ದರೆ ಇನ್ನೂ ಮೂರು ಲಕ್ಷ ಬ್ಯಾರಲ್ ಉತ್ಪಾದಿಸಬಹುದಾದ ಸಾಮರ್ಥ್ಯ ಅದಕ್ಕಿದೆ. ಲಿಬಿಯಾ, ಬಹರೇನ್‌ನಲ್ಲಿ ಕಂಡುಬಂದಂಥ ಚಳವಳಿಯೇನಾದರೂ ಸೌದಿ ಅರೇಬಿಯಾದಲ್ಲಿ ನಡೆದು ತೈಲ ಉತ್ಪಾದನೆ ಮೇಲೆ ಕೆಟ್ಟ ಪರಿಣಾಮ ಆದರೆ ತೈಲ  ಆಘಾತವಾಗುವ ಸಾಧ್ಯತೆ ಹೆಚ್ಚಾಗುತ್ತದೆ.

ಬಹರೇನ್ ದೇಶ ಇರಾನ್ ವಶವಾಗಬಹುದಾದ ಸಾಧ್ಯತೆಯನ್ನು  ತಪ್ಪಿಸಲು ಅಮೆರಿಕದ ಆಡಳಿತಗಾರರು ಸೌದಿ ಅರೇಬಿಯಾನ್ನು ಛೂಬಿಟ್ಟು ಮಿಲಿಟರಿ ಕಾರ್ಯಾಚರಣೆಗೆ ಇಳಿಯುವಂತೆ ಮಾಡಬಹುದೆಂಬ ಊಹೆಗಳೂ ಇದೀಗ ಚಲಾವಣೆಯಲ್ಲಿವೆ. ಆದರೆ ಇತರ ದೇಶಗಳಲ್ಲಿ ಹಸ್ತಕ್ಷೇಪ  ಮಾಡಲು ಹೋದ ಕಡೆಯಲ್ಲೆಲ್ಲಾ ಅಮೆರಿಕ  ಮಣ್ಣು ಮುಕ್ಕಿದೆ. ಇರಾಕ್, ಆಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದ ಸೇನೆಗೆ ಬಂದಿರುವ ಗತಿಯೇ ಇದಕ್ಕೆ ಉತ್ತಮ ಉದಾಹರಣೆ. ಆದರೆ ಬಹರೇನ್ ದೇಶವನ್ನು ಇರಾನ್  ಆಕ್ರಮಿಸಿಕೊಳ್ಳಬಹುದಾದಂಥ ಅಪಾಯಕಾರಿ ಬೆಳವಣಿಗೆಯನ್ನು ತಡೆಯದಿದ್ದರೆ ಅದರಿಂದ ಆಗಬಹುದಾದ ಕೆಟ್ಟ  ಪರಿಣಾಮಗಳೂ ಘೋರವಾದುವು.
 
ಬಹರೇನ್ ದೇಶವನ್ನು  ತನ್ನ ತೆಕ್ಕೆಗೆ ತೆಗೆದುಕೊಳ್ಳುವಂಥ ಹುಚ್ಚು ಸಾಹಸಕ್ಕೆ  ಇರಾನ್ ಇಳಿದರೆ ಮಾತ್ರ  ಸಮಸ್ಯೆ ಉದ್ಭವವಾಗುತ್ತದೆ. ಆರ್ಥಿಕ ಕುಸಿತದಿಂದ ಅಮೆರಿಕ ಇದೀಗ ತಾನೆ  ಚೇತರಿಸಿಕೊಳ್ಳುತ್ತಿದೆ. ಅಮೆರಿಕವಷ್ಟೇ ಏಕೆ ವಿಶ್ವದ ಬಹುಪಾಲು ರಾಷ್ಟ್ರಗಳಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ಇಂಥ ಸಂದರ್ಭದಲ್ಲಿ ತಲೆದೋರಬಹುದಾದ ತೈಲ ಬಿಕ್ಕಟ್ಟು ವಿಶ್ವದ ಮೇಲೆ ತೀವ್ರವಾದ ಕೆಟ್ಟ ಪರಿಣಾಮ ಬೀರುವುದು ಖಚಿತ.

ಭಾರತವೂ ಈ ತೈಲ ಬಿಕ್ಕಟ್ಟಿನ ಆತಂಕದಲ್ಲಿದೆ. ಅಭಿವೃದ್ಧಿಯ ಮೇಲೆ ಮತ್ತೆ ಕೆಟ್ಟ ಪರಿಣಾಮವಾಗುವ ಆತಂಕ ಆಡಳಿಗಾರರನ್ನು ಕಾಡುತ್ತಿದೆ. ಮಾರುಕಟ್ಟೆ ಆಧಾರದ ಮೇಲೆ ತೈಲ ಬೆಲೆಗಳು ನಿರ್ಧಾರ ಮಾಡುವಂಥ ನೀತಿಯನ್ನು (ಸದ್ಯಕ್ಕೆ ಪೆಟ್ರೋಲ್ ಮಾತ್ರ ಈ ನೀತಿಯ ವ್ಯಾಪ್ತಿಗೆ ತರಲಾಗಿದೆ.) ಕೇಂದ್ರ ಸರ್ಕಾರ ಅನುಸರಿಸಲು ಆರಂಭಿಸಿರುವುದರಿಂದ ಮುಂಬರುವ ದಿನಗಳಲ್ಲಿ ತೈಲ ಬೆಲೆ ಏರಿಸುವುದು ಅನಿವಾರ್ಯವಾಗಬಹುದು. 

 ತೈಲ ಬಿಕ್ಕಟ್ಟಿನ ಭೀತಿ ಅಭಿವೃದ್ಧಿಯ ಪರಿಕಲ್ಪನೆಯ ಬಗೆಗಿನ ಚಿಂತನೆಯನ್ನೇ ಬದಲಾಯಿಸಿದೆ. ಹೆಚ್ಚು ಅಭಿವೃದ್ಧಿ ಮಾಡಬೇಕಾದರೆ ಹೆಚ್ಚು ತೈಲ ಬೇಕು. ಆದರೆ ತೈಲ ಸಂಪನ್ಮೂಲ ಬರಿದಾಗುತ್ತ ಹೋಗುತ್ತಿದೆ. ತೈಲದಿಂದ ಪರಿಸರದ ಮೇಲೆ ಆಗುತ್ತಿರುವ ಕೆಟ್ಟ ಪರಿಣಾಮ ಆಘಾತಕಾರಿಯಾದುದು.

ಭೂಮಿಯಲ್ಲಿ ತೈಲ ಬರಿದಾಗುವುದರಿಂದ ಆಗುವ ಪರಿಣಾಮಗಳೂ ಆತಂಕ ಹುಟ್ಟಿಸುವಂಥವೇ ಆಗಿವೆ. ಎಲ್ಲಕ್ಕಿಂತ ಹೆಚ್ಚಾಗಿ ಬಡ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ತೈಲಕೊಳ್ಳಲು ಅಪಾರವಾಗಿ ಹಣ ಖರ್ಚು ಮಾಡಬೇಕಾಗಿ ಬಂದಿದೆ. ಹೀಗಾಗಿ ತೈಲವೇ ಒಂದು ಸಮಸ್ಯೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಇಂಧನ ಮೂಲಗಳನ್ನು ಬಲಪಡಿಸಬೇಕು. ಇದರ ಜೊತೆಗೆ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕು. ಅದಕ್ಕಾಗಿ ಮಾನವನ ಜೀವನ ಶೈಲಿಯೇ ಬದಲಾಗಬೇಕು. 

 ಲಿಬಿಯಾ ಬಿಕ್ಕಟ್ಟಿನಿಂದ ಉಂಟಾಗಿರುವ ತೈಲದ ಕೊರತೆಯನ್ನು ಸ್ವಲ್ಪವಾದರೂ ತುಂಬುವಷ್ಟು ಸಾಮರ್ಥ್ಯ ಸೌದಿ ಅರೇಬಿಯಾಕ್ಕೆ ಇದೆ. ಈಗಾಗಲೇ ಹೆಚ್ಚುವರಿಯಾಗಿ ತೈಲವನ್ನು ಉತ್ಪಾದಿಸಿ ಮಾರುಕಟ್ಟೆಗೆ ಪೂರೈಸುತ್ತಿದೆ. ಆದರೆ ಸೌದಿ ತೈಲದ ಬಳಕೆಯಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿವೆ.

ಲಿಬಿಯಾ ಕಚ್ಚಾ ತೈಲ ಪಡೆಯುತ್ತಿದ್ದ ದೇಶಗಳು ಅದಕ್ಕೆ ಅಗತ್ಯವಾದ  ಸಂಸ್ಕರಣೆಯ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದವು. ಹಾಗೆಯೇ ಸೌದಿ ತೈಲವನ್ನು ಬಳಸುತ್ತಿದ್ದವರು ಅದಕ್ಕೆ ತಕ್ಕದಾದ ತಂತ್ರಜ್ಞಾನ ಅಳವಡಿಸಿಕೊಂಡಿದ್ದರು. ಲಿಬಿಯಾ ತೈಲ ಸಂಸ್ಕರಣೆ ಮಾಡುತ್ತಿದ್ದ ಘಟಕಗಳಲ್ಲಿ ಸೌದಿ ತೈಲ ಸಂಸ್ಕರಣೆ ಮಾಡುವುದು ಕಷ್ಟ. ಹೀಗಾಗಿ ಆ ಸೌಲಭ್ಯ ಎಲ್ಲಿದೆಯೋ ಅಲ್ಲಿಗೆ ಸೌದಿ ತೈಲವನ್ನು ಸಾಗಿಸಿ ನಂತರ ಅದನ್ನು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
 
ಹೊಸ ಲೆಕ್ಕಚಾರದ ಪ್ರಕಾರ ಸೌದಿ ತೈಲ ಭಾರತಕ್ಕೆ ಬಂದು ಸಂಸ್ಕರಿಸಿದ ನಂತರ ಯೂರೋಪ್‌ಗೆ ಪೂರೈಕೆ ಆಗಬೇಕಾಗಿದೆ. ಇದು ಸಮಸ್ಯೆಯ ಒಂದು ಮುಖ ಅಷ್ಟೆ.  ತೈಲ ಉತ್ಪಾದಿಸುವ ರಾಷ್ಟ್ರಗಳ ಒಕ್ಕೂಟವೊಂದಿದೆ. (ಒಪೆಕ್) ಆಲ್ಜೀರಿಯಾ, ಅಂಗೋಲ, ಈಕ್ವೆಡಾರ್, ಇರಾನ್, ಇರಾಕ್, ಕುವೈತ್, ಲಿಬಿಯಾ, ನೈಜೀರಿಯಾ, ಕತಾರ್, ಯುಎಇ,  ವೆನುಜುವೆಲಾ ಮುಂತಾದುವು  ಸದಸ್ಯ ರಾಷ್ಟ್ರಗಳು.

ತೈಲದ ಬೆಲೆಗಳು ಇಳಿಯದಂತೆ ಮತ್ತು ಬಿಕ್ಕಟ್ಟು ಉಂಟಾಗದಂತೆ ನೋಡಿಕೊಳ್ಳುವುದೇ ಈ ಒಕ್ಕೂಟದ ಉದ್ದೇಶ. ಈ ಉದ್ದೇಶದ ಇನ್ನೂ ಎರಡು ಸಂಘಟನೆಗಳಿವೆ. ಈಗಿನ ರಷ್ಯಾ ದೇಶ ಮತು ಹಿಂದಿನ ಸೋವಿಯತ್ ರಾಷ್ಟ್ರದಿಂದ ಹೊರಹೋದ ಕೆಲವು ದೇಶಗಳಲ್ಲಿ ಸಾಕಷ್ಟು ತೈಲ ಸಂಪನ್ಮೂಲ ಇದೆ.  ಈ ದೇಶಗಳಿಂದ ಅಂತರಾಷ್ಟೀಯ ಮಾರುಕಟ್ಟೆಗೆ ತೈಲ ಬರುತ್ತಿದ್ದರೂ ಅದು ಇನ್ನೂ ವ್ಯವಸ್ಥಿತ ರೂಪ ಪಡೆದಿಲ್ಲ. 

 ವಿಶ್ವದಲ್ಲಿ ಉತ್ಪಾದನೆ ಮಾಡಲಾಗುವ ಒಟ್ಟು ತೈಲದ ಪ್ರಮಾಣದಲ್ಲಿ ಈ ಒಕ್ಕೂಟದ (ಒಪೆಕ್) ರಾಷ್ಟ್ರಗಳ ಪಾಲು ಶೇ. 79. ಹೀಗಾಗಿಯೇ ಈ ಒಕ್ಕೂಟಕ್ಕೆ ಮಹತ್ವ ಬಂದಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಬೇಕಾದ ಜವಾಬ್ದಾರಿಯೂ ಈ ಒಕ್ಕೂಟದ ಮೇಲಿದೆ. ರಾಜಕೀಯ ಶಕ್ತಿಯಾಗಿ ತೈಲ ಬೆಳೆದಿದೆ. ಹೀಗಾಗಿಯೇ 1973ರ ಅರಬ್-ಇಸ್ರೇಲ್ ನಡುವಣ ಸಂಘರ್ಷದ ಸಂದರ್ಭದಲ್ಲಿ ಅಮೆರಿಕ ಸೇರಿದಂತೆ ಪಶ್ಚಿಮ ರಾಷ್ಟ್ರಗಳ ಮೇಲೆ ಈ ಒಕ್ಕೂಟ ತೈಲ ನಿರ್ಬಂಧ ಹೇರಿದ್ದಾಗ ತೈಲವನ್ನು ಅಸ್ತ್ರವಾಗಿ ಬಳಸಲಾಗಿತ್ತು.
 
2008ರಲ್ಲಿ  ತೈಲ ಉತ್ಪಾದನೆ ತಗ್ಗಿಸಬೇಕೆಂಬ ಒಕ್ಕೂಟದ ಕೆಲವು ಸದಸ್ಯರ ಅಭಿಪ್ರಾಯವನ್ನು ಸೌದಿ ತಿರಸ್ಕರಿಸಿದ್ದೂ ಇದೆ.   ಅಭಿವೃದ್ಧಿ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಸೌದಿ ಹೆಚ್ಚುವರಿ ತೈಲ ಉತ್ಪಾದಿಸುತ್ತಿದೆ. ಆದರೆ ಅದು ಎಷ್ಟು ದಿನ ನಡೆಯಬಲ್ಲದು? ಸಂಘರ್ಷ ತಲೆದೋರದಿದ್ದರೆ ಮಾತ್ರ ತೈಲ ಉತ್ಪಾದನೆಯನ್ನು ಸೌದಿ ಅರೇಬಿಯಾ ಹೆಚ್ಚಿಸಲು ಸಾಧ್ಯ. ಅಂಥ ವಾತಾವರಣ ಮತ್ತು ರಾಜಕೀಯ  ಸ್ಥಿರತೆ ಸೌದಿಯಲ್ಲಿ ನೆಲೆಸುವುದೇ?.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT