ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಬಿಯಾದ ವೃದ್ಧ

Last Updated 26 ಫೆಬ್ರುವರಿ 2011, 15:35 IST
ಅಕ್ಷರ ಗಾತ್ರ

ಎನ್.ಎ. ಎಂ. ಇಸ್ಮಾಯಿಲ್

ಅರಬಿಯಲ್ಲಿ ಮುಅಮ್ಮರ್ ಎಂದರೆ ‘ಹೆಚ್ಚು ಕಾಲ ಬದುಕಿದ’ ಎಂದರ್ಥ. ಸರಳವಾಗಿ ಹೇಳಬೇಕೆಂದರೆ ಹಿರಿಯ ಅಥವಾ ಮುದುಕ. ಹೆಸರಿಟ್ಟುಕೊಂಡಾಗಲೇ ಹಿರಿಯನಾಗಿದ್ದ ಮುಅಮ್ಮರ್ ಗಡಾಫಿ  ತನ್ನ 27ನೇ ವಯಸ್ಸಿನಲ್ಲೇ ಲಿಬಿಯಾದ ಆಡಳಿತ ಮುಖ್ಯಸ್ಥನ ಪದವಿಗೇರಿದಾತ. ಈಗ ನಿಜ ಅರ್ಥದಲ್ಲಿ ಮುದುಕನಾದರೂ ಅಧಿಕಾರಕ್ಕೆ ಅಂಟಿಕೊಂಡಿರುವ ಹೆಗ್ಗಳಿಕೆಯೂ ಗಡಾಫಿಗೇ ಮೀಸಲು. ಬಾಯಲ್ಲಿ ಇಸ್ಲಾಮಿಕ್ ಸಮಾಜವಾದ, ನೇರ ಪ್ರಜಾಪ್ರಭುತ್ವದ ಮಾತುಗಳು ಓತಪ್ರೋತವಾಗಿ ಬರುತ್ತವೆಯಾದರೂ ಅಧಿಕಾರ ಉಳಿಸಿಕೊಳ್ಳಲು ಅಪ್ರಜಾಸತ್ತಾತ್ಮಕವಾದ ಎಲ್ಲವನ್ನೂ ಮಾಡಿದ ಗಡಾಫಿಯನ್ನು ಲಿಬಿಯಾದ ಜನತೆ 42 ವರ್ಷಗಳ ಕಾಲ ಸಹಿಸಿಕೊಂಡಿದ್ದರು. ಟ್ಯುನಿಶಿಯಾದಲ್ಲಿ, ಈಜಿಪ್ಟ್‌ನಲ್ಲಿ ಸರ್ಕಾರಗಳು ಉರುಳುತ್ತಿದ್ದಂತೆ ಲಿಬಿಯಾದಲ್ಲೂ ಜನರು ಬೀದಿಗಿಳಿದಿದ್ದಾರೆ.

ಆಫ್ರಿಕಾದ ಒಂದು ಮೂಲೆಯಲ್ಲಿ ಅರಬ್ ಜಗತ್ತಿಗೆ ಹತ್ತಿರವಾಗಿರುವ ಲಿಬಿಯಾ ಬುಡಕಟ್ಟುಗಳಿಂದ ತುಂಬಿದ ದೇಶ. ಗಡಾಫಿ ಹುಟ್ಟಿದ್ದು 1942ರಲ್ಲಿ. ತಂದೆ-ತಾಯಿಗಳು ಅಲೆಮಾರಿ ಬುಡಕಟ್ಟೊಂದಕ್ಕೆ ಸೇರಿದವರು. ಶಿಕ್ಷಣ ಪಡೆಯಲು ಗಡಾಫಿಗೆ ಕಷ್ಟವಾಗಲಿಲ್ಲ. ಬೆನ್ಗಾಝಿ ವಿಶ್ವವಿದ್ಯಾಲಯದಲ್ಲಿ ಭೂಗೋಳ ಕಲಿಯಲು ಸೇರಿದರೂ ರಾಜಕೀಯವಾಗಿ ಬಹಳ ಸಂವೇದನಾಶೀಲನಾಗಿದ್ದರಿಂದ  ಪದವಿ ಪಡೆಯುವತನಕ ವಿಶ್ವವಿದ್ಯಾಲಯದಲ್ಲಿ ಉಳಿಯಲಿಲ್ಲ. ಈಜಿಪ್ಟ್‌ನ ಮುತ್ಸದ್ದಿ ಗಮಾಲ್ ಅಬ್ದುಲ್ ನಾಸೆರ್ ಅವರ ಅರಬ್ ಸಮಾಜವಾದದಿಂದ ಪ್ರಭಾವಿತನಾದ ಗಡಾಫಿ 1956 ಸೂಯೇಝ್ಾ ಬಿಕ್ಕಟ್ಟಿನ ಸಂದರ್ಭದಲ್ಲಿ ಇಸ್ರೇಲ್ ವಿರೋಧಿ ಪ್ರತಿಭಟನೆಗಳಲ್ಲಿ ಪ್ರಮುಖ ಪಾತ್ರವಹಿಸಿದ. ರಾಜಕೀಯ ಮಹತ್ವಾಕಾಂಕ್ಷೆಯ ಭಾಗವಾಗಿಯೇ ಸೇನೆಗೆ ಸೇರಿದ.

ಗ್ರೀಸ್‌ನಲ್ಲಿರುವ ಹೆಲೆನಿಕ್ ಮಿಲಿಟರ್ ಅಕಾಡೆಮಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಹೊತ್ತಿನಲ್ಲೇ ಲಿಬಿಯಾದ ರಾಜಸತ್ತೆಯನ್ನು ಕಿತ್ತೆಸೆಯುವ ಸಂಚು ರೂಪಿಸಿದ್ದ ಗಡಾಫಿಗೆ ಆಗ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿಲ್ಲ. ಮುಂದೆ ಬ್ರಿಟನ್‌ನಲ್ಲೂ ಸೇನಾ ಶಿಕ್ಷಣವನ್ನು ಪಡೆದು ಸ್ವದೇಶಕ್ಕೆ ಹಿಂದಿರುಗಿದ ಮೇಲೆ ತನ್ನ ಸಂಚನ್ನು ಕಾರ್ಯರೂಪಕ್ಕೆ ತಂದ. ಹಾಗೆ ನೋಡಿದರೆ ಲಿಬಿಯಾಕ್ಕೆ ಬಹುದೊಡ್ಡ ಅರಸೊತ್ತಿಗೆಯ ಇತಿಹಾಸವೇನೂ ಇಲ್ಲ. ಇಲ್ಲಿದ್ದದ್ದು ಏಕೈಕ ದೊರೆ ಇದ್ರಿಸ್. 1969ರಲ್ಲಿ ಈತ ಚಿಕಿತ್ಸೆ ಪಡೆಯಲು ಟರ್ಕಿಗೆ ಹೋಗಿದ್ದಾಗ ಗಡಾಫಿ ನೇತೃತ್ವದ ಸೇನೆಯ ಕಿರಿಯ ಅಧಿಕಾರಿಗಳ ಗುಂಪೊಂದು ರಾಜಕುಮಾರನನ್ನು ಬಂಧನದಲ್ಲಿಟ್ಟಿತು. ಹೀಗೆ ರಕ್ತರಹಿತ ಕ್ರಾಂತಿಯೊಂದರ ಮೂಲಕ ಲಿಬಿಯಾ ಅರಸೊತ್ತಿಗೆಯಿಂದ ಸ್ವತಂತ್ರವಾಗಿ ಅರಸನೆಂದು ಹೇಳಿಕೊಳ್ಳದ ಮತ್ತೊಬ್ಬ ಅರಸನ ಕೈವಶವಾಯಿತು.

ಸಣ್ಣ ವಯಸ್ಸಿಗೇ ಅಧಿಕಾರಕ್ಕೇರಿದ ಗಡಾಫಿಯ ಬಗ್ಗೆ ಲಿಬಿಯಾದ ಜನರಿಗೂ,ಜಗತ್ತಿಗೂ ಒಂದಷ್ಟು ನಿರೀಕ್ಷೆಗಳಿದ್ದವು. ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಬದಲಾವಣೆಗಳು ನಡೆಯುತ್ತಿದ್ದ ಕಾಲ ಘಟ್ಟದಲ್ಲಿ ಅಧಿಕಾರಕ್ಕೇರಿದ  ಯುವಕ ಗಡಾಫಿ ಅನೇಕರಿಗೆ ಆಫ್ರಿಕಾ ಹಾಗೂ ಅರಬ್ ಜಗತ್ತಿನ ಚೆ-ಗುವಾರನಂತೆ ಕಂಡದ್ದರಲ್ಲಿ ಆಶ್ಚರ್ಯವೇನೂ  ಇಲ್ಲ. ಇದಕ್ಕೆ ತಕ್ಕಂತೆ ದೇಶದ ಮುಖ್ಯಸ್ಥನಾಗಿ ಅಧಿಕಾರಕ್ಕೇರಿದ ನಂತರವೂ ಇತರರಂತೆ ತನ್ನನ್ನು ಸೇನೆಯ ಮುಖ್ಯಸ್ಥನಾಗಿ ಘೋಷಿಸಿಕೊಳ್ಳದೆ ‘ಕರ್ನಲ್’ ಪದವಿಯಲ್ಲೇ ಉಳಿದುಕೊಂಡದ್ದು ಹಲವರಲ್ಲಿ ಭರವಸೆಯನ್ನು ಮೂಡಿಸಿತು. ಅಮೆರಿಕದ ಸಾಮ್ರಾಜ್ಯಶಾಹಿ ಧೋರಣೆಗಳ ಕುರಿತಂತೆ ಪಕ್ಕಾ ಎಡಪಂಥೀಯನಂತೆ ಮಾತನಾಡುತ್ತಲೇ ಇದ್ದುದು ಗಡಾಫಿಗೆ ಕ್ಯೂಬಾದ ನಾಯಕ ಫಿಡೆಲ್ ಕ್ಯಾಸ್ಟ್ರೋಗೆ ಇದ್ದ ಇಮೇಜ್ ನೀಡಿತು.

ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಆಫ್ರಿಕಾದ ಇತರ ಅನೇಕ ದೇಶಗಳಿಗಿಂತ ಒಳ್ಳೆಯ ಸ್ಥಿತಿಯಲ್ಲಿರುವ ಲಿಬಿಯಾದ ಕುರಿತಂತೆ ಹೊರ ಜಗತ್ತಿನಲ್ಲಿ ಸ್ವಲ್ಪ ಮಟ್ಟಿಗೆ ಒಳ್ಳೆಯ ಅಭಿಪ್ರಾಯವೇ ಇತ್ತು. ಐರ್ಲೆಂಡ್‌ನಲ್ಲಿ ನಡೆಯುತ್ತಿದ್ದ ಭಯೋತ್ಪಾದಕ ಚಟುವಟಿಕೆಗಳಿಗೆ ಲಿಬಿಯಾದ ಬೆಂಬಲವಿದೆಯೆಂಬ ಕಾರಣಕ್ಕೆ ಯೂರೋಪ್ ಮಾತ್ರ ಲಿಬಿಯಾವನ್ನು ‘ಭಯೋತ್ಪಾದಕ’ ದೇಶಗಳ ಪಟ್ಟಿಯಲ್ಲಿಟ್ಟಿತ್ತು. 1986ರಲ್ಲಿ ಬರ್ಲಿನ್‌ನ ನೈಟ್ ಕ್ಲಬ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಗಡಾಫಿಯ ಪಾತ್ರವನ್ನು ಸಂಶಯಿಸಿ ಅಮೆರಿಕ ಲಿಬಿಯಾದ ಮೇಲೆ ಬಾಂಬ್ ದಾಳಿ ನಡೆಸಿತ್ತು. ಅಮೆರಿಕದ ಅಧ್ಯಕ್ಷ ರೊನಾಲ್ಡ್ ರೇಗನ್ ಗಡಾಫಿಯನ್ನು ‘ಹುಚ್ಚು ನಾಯಿ’ ಎಂದು ಕರೆದಿದ್ದರು. 1988ರಲ್ಲಿ ಸ್ಕಾಟ್ಲೆಂಡ್‌ನಲ್ಲಿ ಪಾನ್ ಆಮ್ ವಿಮಾನದಲ್ಲಿ ಬಾಂಬಿಟ್ಟ ಆರೋಪವೂ ಲಿಬಿಯಾದ ಮೇಲಿತ್ತು. ಬಹುಕಾಲ ಇದನ್ನು ನಿರಾಕರಿಸುತ್ತಲೇ ಬಂದಿದ್ದರು ಗಡಾಫಿ . ಈ ಕಾರಣಕ್ಕಾಗಿ ಲಿಬಿಯಾವನ್ನು ವಿಶ್ವಸಂಸ್ಥೆ ನಿಷೇಧಕ್ಕೆ ಗುರಿಪಡಿಸಿತ್ತು. 2003ರಲ್ಲಿ ಈ ಅಪರಾಧ ಒಪ್ಪಿಕೊಂಡು ಮೃತರಿಗೆ ಪರಿಹಾರ ಕೊಟ್ಟದ್ದು ಈಗ ಇತಿಹಾಸ.

ಜಾರ್ಜ್ ಬುಷ್ ಲಿಬಿಯಾದ ಮೇಲಿನ ಅಮೆರಿಕದ ನಿಷೇಧವನ್ನು ತೆರವುಗೊಳಿಸಿದ್ದು ಇದರ ಜೊತೆಗೆ ಇತರ ಪಶ್ಚಿಮದ ರಾಷ್ಟ್ರಗಳು ಲಿಬಿಯಾದ ಜೊತೆಗೆ ವ್ಯವಹರಿಸಲು ಆರಂಭಿಸಿದ್ದು ಆ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿತು. 2009ರಲ್ಲಿ ಗಡಾಫಿ ಮೊದಲ ಬಾರಿಗೆ ಅಮೆರಿಕಕ್ಕೂ ಭೇಟಿ ನೀಡಿದರು. ಎಲ್ಲವೂ ಸರಿಯಾಯಿತು ಎಂದು ಹೊರಜಗತ್ತು ಭಾವಿಸುತ್ತಿರುವಾಗ ದೇಶದೊಳಗೆ ನಡೆಯುತ್ತಿದ್ದುದೇ ಬೇರೆ. ಕಳೆದ ನಲವತ್ತೆರಡು ವರ್ಷಗಳಿಂದಲೂ ಮಾಧ್ಯಮಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದ ಗಡಾಫಿಗೆ ಒಳಗೆ ಕುದಿಯುತ್ತಿದ್ದ ಸಿಟ್ಟಿನ ಬಗ್ಗೆ ತಿಳಿಯದಿರುವುದೇನೂ ಇಲ್ಲ. ಈಜಿಪ್ಟ್‌ನಲ್ಲಿ ಹೊಸ್ನಿ ಮುಬಾರಕ್ ಬಿದ್ದ ತಕ್ಷಣವೇ ಲಿಬಿಯಾದ ಜನತೆ ಸಿಡಿದೆದ್ದರು. ‘ಅರಬ್-ಇಸ್ಲಾಮಿಕ್ ಸಮಾಜವಾದ’ದ ಹರಿಕಾರನೀಗ ಯಾವುದೇ ಸರ್ವಾಧಿಕಾರಿಗೆ ಕಡಿಮೆ ಇಲ್ಲದಂತೆ ನರಮೇಧದಲ್ಲಿ ತೊಡಗಿರುವುದು ಇತಿಹಾಸದ ದೊಡ್ಡ ವ್ಯಂಗ್ಯ.

ಹೊರದೇಶಗಳಿಗೆ ಹೋದಾಗಲೆಲ್ಲಾ ಗಡಾಫಿ ಗಮನಸೆಳೆಯುವುದೇ ತಮ್ಮ ಸುತ್ತ ಇರುವ ಮಹಿಳಾ ಅಂಗರಕ್ಷಕರಿಂದ. ಐಷಾರಾಮಿ ಡೇರೆಯಲ್ಲಿ ಮಹಿಳಾ ಅಂಗರಕ್ಷಕರಿಂದ ಸುತ್ತುವರೆದು ತಮಾಷೆಯ ವ್ಯಕ್ತಿಯಂತೆ ಕಾಣಿಸುವ ಈತನೊಳಗೆ ಒಬ್ಬ ಸೂಕ್ಷ್ಮ ತಂತ್ರಗಾರನಾದ ರಾಜಕಾರಣಿಯೂ ಇದ್ದಾನೆ. ಅಮೆರಿಕದಿಂದ ಆರಂಭಿಸಿ ತನ್ನ ಮೇಲೆ ನಿಷೇಧ ಹೇರಿದ ಎಲ್ಲಾ ದೇಶಗಳನ್ನು ಒಲಿಸಿಕೊಳ್ಳುವಲ್ಲಿ ಈ ಚಾಣಾಕ್ಷತೆ ಕಾಣಿಸುತ್ತದೆ. ದೇಶದೊಳಗೂ ಇದನ್ನು ಬಹುಕಾಲ ಬಳಸಿದ್ದರಿಂದಲೇ 42 ವರ್ಷಗಳಿಂದಲೂ ಅಧಿಕಾರದಲ್ಲಿ ಉಳಿದದ್ದು ಎಂದು ವಿಶ್ಲೇಷಕರು ಹೇಳುತ್ತಾರೆ. ಇಡೀ ಜಗತ್ತು ಗಡಾಫಿಯನ್ನು ಲಿಬಿಯಾದ ಸರ್ವಾಧಿಕಾರಿ ಎಂದು ಕರೆಯುತ್ತಿದ್ದರೂ ದೇಶದೊಳಗೆ ಪ್ರಜಾಪ್ರಭುತ್ವವಿದೆ ಎಂಬುದನ್ನು ಸಾಬೀತು ಮಾಡಲು ಈತ ಹೂಡಿದ ತಂತ್ರಗಳು ಹಲವು. ನೇರ ಪ್ರಜಾಪ್ರಭುತ್ವ, ಇಸ್ಲಾಮಿಕ್ ಸಮಾಜವಾದ ಎಂಬೆಲ್ಲ ಪದಪುಂಜಗಳು ಹುಟ್ಟಿಕೊಂಡದ್ದೇ ಹೀಗೆ.

ದೇಶವನ್ನು ಆಳುತ್ತಿರುವುದು ನಾನಲ್ಲ ಲಿಬಿಯನ್ ಜನರು. ನಾನೇನಿದ್ದರೂ ಮಾರ್ಗದರ್ಶಿ ಮಾತ್ರ ಎಂಬಂಥ ಮಾತುಗಳನ್ನಾಡುತ್ತಿದ್ದ ಗಡಾಫಿ ತನ್ನ ವಿಚಾರಗಳನ್ನು ವಿರೋಧಿಸುವ ಯಾವ ಸಂಘಟನೆಯನ್ನು ಬಹಿರಂಗವಾಗಿ ಅಸ್ತಿತ್ವದಲ್ಲಿರಲು ಬಿಡುತ್ತಿರಲಿಲ್ಲ. ಇದೇ ಕಾರಣಕ್ಕಾಗಿ ಬಂಧನದಲ್ಲಿರುವವರ ಸಂಖ್ಯೆ ಎಷ್ಟೆಂದೇ ತಿಳಿಯದ ಸ್ಥಿತಿ ಇದೆ. ಗಡಾಫಿಯನ್ನು ಅಧಿಕಾರದಿಂದ ಕೆಳಗಿಳಿಸಿ ಎಂಬ ಘೋಷಣೆಯಿಟ್ಟುಕೊಂಡೇ 2006ರಲ್ಲಿ ಆರಂಭವಾದ ವೆಬ್‌ಸೈಟ್ ಒಂದು ಹೇಳುತ್ತಿರುವಂತೆ 343 ಜನರನ್ನು ರಾಜಕೀಯ ಭಿನ್ನಮತವನ್ನು ನೆಪವಾಗಿಸಿ ಕೊಲ್ಲಲಾಗಿದೆ. ಹ್ಯೂಮನ್ ರೈಟ್ಸ್ ವಾಚ್ ಹೇಳುವಂತೆ ಕಾಣೆಯಾಗಿರುವವರ ಸಂಖ್ಯೆಯೂ ಬಹಳ ದೊಡ್ಡದೇ.

ಗಡಾಫಿ ಗೆ ಇಬ್ಬರು ಹೆಂಡತಿಯರು, ಎಂಟು ಮಕ್ಕಳು. ಅವರಲ್ಲಿ ಏಳು ಜನ ಗಂಡು ಮಕ್ಕಳು. ಇಬ್ಬರು ದತ್ತು ಪುತ್ರರು. ಗಡಾಫಿ ಮಕ್ಕಳು ಸಹ ಅಪ್ಪನಂತೆ ದೇಶವನ್ನು ತಮ್ಮ ಆಸ್ತಿಯಾಗಿ ಮಾಡಿಕೊಂಡಿರುವ ವರದಿಗಳೂ ಹೊರಬೀಳುತ್ತಿವೆ.
ತನ್ನ ಅಧಿಕಾರದ 39ನೇ ವರ್ಷದ ಆಚರಣೆಯಲ್ಲಿ ಇನ್ನು ಭಯೋತ್ಪಾದಕ ಚಟುವಟಿಕೆಗಳಿಲ್ಲ, ಯುದ್ಧಗಳಿಲ್ಲ ಎಂದು ಹೇಳಿಕೊಂಡ ಗಡಾಫಿ ದೇಶದ ಹೊರಗೆ ನಡೆಸುತ್ತಿದ್ದ ಯುದ್ಧಗಳನ್ನು ದೇಶದೊಳಕ್ಕೆ ತಂದದ್ದು ನಿಜ. ಗಡಾಫಿ ತನ್ನ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ನೆರೆಯ ದೇಶಗಳಿಂದ ಬಾಡಿಗೆ ಸೈನಿಕರನ್ನು ಬಳಸಿಕೊಂಡು ಲಿಬಿಯನ್ನರನ್ನು ಕೊಲ್ಲುತ್ತಿದ್ದಾರೆಂಬ ಆರೋಪವಿದೆ.

2002ರಲ್ಲಿ ಲಿಬಿಯಾದ ಪ್ರಜಾಪ್ರಭುತ್ವೀಕರಣಕ್ಕೆ ಕರೆ ನೀಡಿದ್ದ ಭಿನ್ನಮತೀಯ ಫೈತಿ ಅಲ್‌ಜಹಾಮಿ ಅವರನ್ನು 2009ರಲ್ಲಿ ಅವರು ಕೊನೆಯುಸಿರೆಳೆಯುವ ತನಕ ಬಂಧನದಲ್ಲಿರಿಸಲಾಗಿತ್ತು. ತನ್ನ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ನಿಜ ಅರ್ಥದ ಪ್ರತಿಭಟನೆಗಳಲ್ಲ ಎಂದು ಜಗತ್ತನ್ನು ನಂಬಿಸಲು ಗಡಾಫಿ ನಡೆಸುತ್ತಿರುವ ಪ್ರಯತ್ನ ಮುಂದುವರೆದಿದೆ. ಅಲ್‌ಖೈದಾ ಇದರ ಹಿಂದಿದೆ ಎನ್ನುತ್ತಿರುವುದು ಈ ತಂತ್ರದ ಒಂದು ಭಾಗವಷ್ಟೇ ಎಂಬುದು ಜಗತ್ತಿಗೇ ತಿಳಿದಿರುವ ಸರಳ ಸತ್ಯ.2003ರ ತನಕ ಇದ್ದ ನಿಷೇಧಗಳು ಲಿಬಿಯಾದಲ್ಲಿದ್ದ ಭಾರೀ ಪ್ರಮಾಣದ ತೈಲಕ್ಕೆ ಮಾರುಕಟ್ಟೆಯಿಲ್ಲದಂತೆ ಮಾಡಿತ್ತು. ಆದರೆ ಈಗ ಆ ಸಮಸ್ಯೆಯಿಲ್ಲ. ಬಹುತೇಕ ಪಶ್ಚಿಮದ ಕಂಪೆನಿಗಳು ಇಲ್ಲಿಗೆ ಬಂದಿವೆ.

ಆರ್ಥಿಕತೆಯ ಉದಾರೀಕರಣ ಸಾಗಿದೆ. ಹಣವೂ ಹರಿದು ಬರುತ್ತಿದೆ. ಆದರೆ ಇದ್ಯಾವುದರ ಲಾಭವೂ ತಮಗೆ ದೊರೆಯುತ್ತಿಲ್ಲ ಎಂಬ ಲಿಬಿಯಾದ ಜನತೆಯ ಆಕ್ರೋಶ ಈಗ ಪ್ರತಿಭಟನೆಯಾಗಿ ಕಾಣಿಸಿಕೊಂಡಿದೆ. ಈ ಹಿಂದಿನಂತೆ ಇದು ಕೇವಲ ರಾಜಕೀಯ ಭಿನ್ನಾಭಿಪ್ರಾಯ, ಪ್ರಜಾಪ್ರಭುತ್ವದ ಅಭೀಪ್ಸೆಗಳಷ್ಟೇ ಆಗಿಲ್ಲದೆ ಆರ್ಥಿಕ ಕಾರಣಗಳೂ ಇರುವುದರಿಂದ ಹೋರಾಟ ಬಲಗೊಳ್ಳುತ್ತಲೇ ಸಾಗಿದೆ. ಹಸಿವು ಬದಲಾವಣೆಯನ್ನು ತರಬಲ್ಲದು ಎಂಬುದಕ್ಕೆ ಈಜಿಪ್ಟ್ ನಂತರದ ಸಾಕ್ಷ್ಯ ಲಿಬಿಯಾ ಆಗಬಹುದೇನೋ. ಹಸಿವು ಪ್ರೇರೇಪಿಸಿರುವ ಹೋರಾಟವನ್ನು ಹಾದಿ ತಪ್ಪಿಸುವುದು ಸುಲಭವಲ್ಲ. ಲಿಬಿಯಾಕ್ಕೆ ‘ಮುದುಕ’ನಿಂದ ಮುಕ್ತಿ ದೊರೆಯುವ ಕಾಲ ಹತ್ತಿರವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT