ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಬಿಯಾದಿಂದ ಬಂದವರು...

Last Updated 19 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಕೊಲ್ಲಿ ರಾಷ್ಟ್ರ ಲಿಬಿಯಾದಲ್ಲಿ ನಡೆದ ಅಧಿಕಾರದ ಕಿತ್ತಾಟದಿಂದ ಅದೆಷ್ಟು ಮುಗ್ಧ ಭಾರತೀಯರು ನಲುಗಿಹೋಗಿದ್ದಾರೆನ್ನುವುದು ವಿಷಾದನೀಯ ಸಂಗತಿ. ಎಷ್ಟೋ ವರ್ಷಗಳಿಂದ ಅಲ್ಲಿ ನೆಲೆಸಿ ಜೀವನ ನಡೆಸುತ್ತಿದ್ದ ಭಾರತೀಯರು ತಮ್ಮ ಮನೆಮಠ, ಆಸ್ತಿಪಾಸ್ತಿ ಎಲ್ಲಾ ಬಿಟ್ಟು, ಬರಿಗೈಯಲ್ಲಿ ರಾತ್ರೋರಾತ್ರಿ, ನಿಂತನಿಲುವಿನಲ್ಲಿ ವಾಪಸ್ಸು ಬರಬೇಕೆಂದರೆ ಹೇಗಾಗಿರಬೇಡ. ಸಿರಿವಂತ ತೈಲರಾಷ್ಟ್ರ...ತಮ್ಮ ದುಡಿಮೆಗೆ ಒಳ್ಳೆಯ ಪ್ರತಿಫಲ ದೊರಕುತ್ತದೆ, ಅಗಣಿತ ಅವಕಾಶಗಳು ಸಿಗುತ್ತವೆ ಎಂದು ಕನಸು ಹೊತ್ತು, ಬದುಕನ್ನು ಅರಸಿ ಹೋಗಿದ್ದ ಭಾರತೀಯರು ಏಕಾಏಕಿ ಹಿಂದಿರುಗಿ ಬರಬೇಕಾದಾಗ ಅದೆಷ್ಟು ನೋವಿನ ಕ್ಷಣಗಳನ್ನು ಎದುರಿಸಿರಬೇಕು...

ಕೆಲವು ವರ್ಷಗಳಿಂದ ಲಿಬಿಯಾದ ರಾಜಧಾನಿ ಟ್ರಿಪೋಲಿಯಲ್ಲಿ ನೆಲೆಸಿದ್ದ ಡಾ. ಜಯಲಕ್ಷ್ಮಿ ನನ್ನ ಆತ್ಮೀಯ ಗೆಳತಿ. ಲಿಬಿಯಾದ ಮೇರೆ ಮೀರಿದ ಗಲಾಟೆಯಲ್ಲಿ ಇರಲಾಗದೆ ಮುನ್ನೆಚ್ಚರಿಕೆಯಿಂದ ಎರಡು ದಿನಗಳ ಹಿಂದೆಯಷ್ಟೇ ವಾಪಸ್ಸು ಬಂದ ಭಾರತೀಯರಲ್ಲಿ ಆಕೆಯೂ ಒಬ್ಬರು. ಬಂದ ಕೂಡಲೇ ಫೋನ್ ಮಾಡಿ, ಲಿಬಿಯಾದ ಕರಾಳ ಸ್ಥಿತಿಯನ್ನು, ‘ಮುಅಮ್ಮರ್ ಗಡಾಫಿ’ಯ ಆಡಳಿತದ ಆರ್ಭಟವನ್ನು, ಪ್ರಜೆಗಳ ಅಸಹಾಯಕತೆಯನ್ನು ಪ್ರತ್ಯಕ್ಷದರ್ಶಿಯಾಗಿ ಕಂಡಂತಹ ತಮ್ಮ ಅನುಭವವನ್ನು ಎಳೆಎಳೆಯಾಗಿ ಹಂಚಿಕೊಂಡಾಗ, ಆ ಶ್ರೀಮಂತ ನಾಡಿನ ಪರಿಸ್ಥಿತಿಯನ್ನು ತಿಳಿದು ಅಚ್ಚರಿಯಾಯಿತು. ಅಧಿಕಾರ ದಾಹವೆನ್ನುವುದು ಹೇಗೆ ಒಬ್ಬ ವ್ಯಕ್ತಿಯನ್ನು ಆವರಿಸಿಕೊಳ್ಳುತ್ತದೆ ಎಂಬುದನ್ನು ಮತ್ತು ನಮ್ಮ ನಾಡಿನ ಅಧಿಕಾರ ದಾಹಿಗಳ ಎಷ್ಟು ಗುಣಗಳು ಅವನನ್ನು ಹೋಲುತ್ತವೆ- ನಮ್ಮವರು ಎಷ್ಟರಮಟ್ಟಿಗೆ ಪರವಾಗಿಲ್ಲ ಎಂಬುದನ್ನು ಅರಿಯಲಿಕ್ಕಲಾದರೂ ಲಿಬಿಯಾದ ಪರಿಸ್ಥಿತಿಯನ್ನು ಅವಲೋಕಿಸಬೇಕು...

ಲಿಬಿಯಾದ ಅಲ್ಫಾನ್ತಾ ವಿಶ್ವವಿದ್ಯಾನಿಲಯದ ದಂತ ವೈದ್ಯಕೀಯ ವಿದ್ಯಾಸಂಸ್ಥೆಯಲ್ಲಿ ಸಹ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಯಲಕ್ಷ್ಮಿ ಇದೇ ಫೆಬ್ರವರಿ 15ರಂದು ನಡೆಯುತ್ತಿದ್ದ ಪರೀಕ್ಷೆಯ ಮೇಲ್ವಿಚಾರಕಿಯಾಗಿದ್ದರು.

ವಿದ್ಯಾರ್ಥಿಗಳೆಲ್ಲಾ ಪರೀಕ್ಷೆ ಬರೆದು ಮುಗಿಸಿದ್ದರು. ಇನ್ನೇನು ಅವರ ಬಳಿಯಿಂದ ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಬೇಕಾಗಿತ್ತು... ಅದೇ ಸಮಯಕ್ಕೆ ಬೆಚ್ಚಿ ಬೀಳುವಂತಹ ಸುದ್ದಿ ಬಂದಿತು. ‘ಈ ಕ್ಷಣದಿಂದ ಇಡೀ ಲಿಬಿಯಾದಲ್ಲಿ ಕರ್ಫ್ಯೂ ಹೇರಲಾಗಿದೆ, ಯಾರಾದರೂ ಆಜ್ಞೆ ಪಾಲಿಸದಿದ್ದರೆ ಅವರಿಗೆ ಘೋರ ಶಿಕ್ಷೆ’, ಎಂಬ ಸುದ್ದಿ ಬೆಚ್ಚಿ ಬೀಳಿಸಿತು.

ಫೆಬ್ರವರಿ 23ರವರೆಗೆ ಇದ್ದ ಕರ್ಫ್ಯೂ ದಿನಗಳಲ್ಲಿ ಮನೆಯೊಳಗೇ ಬಂಧಿಯಾಗಿ ಭಯದಲ್ಲಿ ತತ್ತರಿಸುತ್ತಾ ಜೀವನ ನಡೆಸಬೇಕಾಯ್ತು. ಈ ಕರ್ಫ್ಯೂ ಯಾತಕ್ಕಾಗಿ? ಇದಕ್ಕೆ ಕಾರಣಕರ್ತರು ಯಾರು? ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ಲಿಬಿಯಾದ ಇತಿಹಾಸವನ್ನು ಸ್ವಲ್ಪ ಕೆದಕಬೇಕು...

ಲಿಬಿಯಾ, ಇದು ಅತ್ಯಂತ ಶ್ರೀಮಂತ ರಾಷ್ಟ್ರ. ಇದರ ರಾಷ್ಟ್ರಧ್ವಜವೇ ವಿಶೇಷವಾಗಿದೆ. ಪೂರ್ತಿ ಹಸಿರು ಬಣ್ಣದ ಧ್ವಜ ಅದು. ಪ್ರಪಂಚದ ಬೇರೆ ಯಾವ ರಾಷ್ಟ್ರದ ಧ್ವಜವೂ ಹೀಗೆ ಕೇವಲ ಒಂದು ಬಣ್ಣದಿಂದ ರೂಪಿತವಾಗಿಲ್ಲ! ಪ್ರಪಂಚದ ಶೇಕಡ ಎರಡರಷ್ಟು ತೈಲ ಸಂಪತ್ತನ್ನು ಹೊಂದಿದೆ. ಇಲ್ಲಿ ನೈಸರ್ಗಿಕವಾಗಿ ದೊರೆಯುವ ಅನಿಲವನ್ನು ವಿಮಾನ ಚಾಲನೆಯ ಇಂಧನವನ್ನಾಗಿ ಬಳಸಬಹುದು.

ಇಂತಹ ನಿಧಿಯನ್ನು ಹೊಂದಿರುವ ಏಕೈಕ ರಾಷ್ಟ್ರ ಇದು. ಹಾಗಾಗಿ ಪ್ರಪಂಚದ ಮೂಲೆಮೂಲೆಯಿಂದ ಹಣದ ಹೊಳೆ ಹರಿದು ಬರುತ್ತದೆ. ಈ ಹೇರಳ ಸಂಪತ್ತನ್ನು ತನ್ನ ಸ್ವಂತ ಸ್ವತ್ತು ಎಂದೇ ತಿಳಿದುಕೊಂಡು, ಅದನ್ನೆಲ್ಲಾ ತನ್ನ ಹತೋಟಿಯಲ್ಲಿ ಇಟ್ಟುಕೊಂಡಿರುವ ನಾಯಕನೇ ಗಡಾಫಿ.

ಸುಮಾರು 42 ವರ್ಷಗಳಿಂದ ಲಿಬಿಯಾವನ್ನು ಆಳುತ್ತಿರುವ ಸುಮಾರು ಎಪ್ಪತ್ತರ ಪ್ರಾಯದ ಗಡಾಫಿ ಇಡೀ ರಾಷ್ಟ್ರವನ್ನು ತನ್ನ ಮುಷ್ಟಿಯೊಳಗೆ ಇಟ್ಟುಕೊಂಡಿದ್ದ. ಅಲ್ಲಿಯ ಬಹುತೇಕ ಪ್ರಜೆಗಳು ‘ಅಲ್ಲಾ, ಗಡಾಫಿ ಮತ್ತು ಲಿಬಿಯಾ’ ಎಂದೇ ಹೇಳುವಷ್ಟು ಗಡಾಫಿಯನ್ನು ನಂಬಿದ್ದರು. ಹಾಗೇ ಹೇಳಬೇಕೆಂದು ಗಡಾಫಿ ಶಾಸನವನ್ನೂ ರೂಪಿಸಿದ್ದ. ಅವನ ವಿರುದ್ಧ ಯಾರಾದರೂ ಮೆಲುದನಿಯ ಸೊಲ್ಲು ಎತ್ತಿದರೂ ಸಾಕು, ಅವರಿಗೆ ಮರಣವೇ ಗತಿ. ಅಂತಹ ಡಿಕ್ಟೇಟರ್ ಆಳ್ವಿಕೆ ಆತನದು. ಇಡೀ ಲಿಬಿಯಾದಲ್ಲಿ ಎಲ್ಲಿಯೂ ಬೇರೆ ವ್ಯಕ್ತಿಗಳ ಕಟೌಟ್ ಆಗಲಿ, ಪೋಸ್ಟರ್ ಆಗಲಿ ಕಾಣಿಸುವುದೇ ಇಲ್ಲ.

ಏನಿದ್ದರೂ ಗಡಾಫಿಯೊಬ್ಬನದೇ ಕಟೌಟ್, ಫೋಟೋ ಕಾಣುವುದು, ಪ್ರಜೆಗಳು ಮೆರವಣಿಗೆ ನಡೆಸಿ , ‘ಗಡಾಫಿಯಿಂದಲೇ ಲಿಬಿಯಾ, ಗಡಾಫಿ ಇಲ್ಲದಿದ್ದರೆ ಲಿಬಿಯಾ ಇಲ್ಲ...’ ಎಂದು ಸ್ತುತಿಸಬೇಕು. ಅಷ್ಟರಮಟ್ಟಿಗೆ ಪ್ರಜೆಗಳ ನರನಾಡಿಯಲ್ಲಿ ತನ್ನ ಹೆಸರನ್ನು ಛಾಪಿಸಿದ್ದ. ಮಿಲಿಯನ್‌ಗಟ್ಟಲೆ ಆಸ್ತಿಯನ್ನು ತನ್ನ ಮಕ್ಕಳು, ಚಿಕ್ಕಪ್ಪ, ಚಿಕ್ಕಮ್ಮ ಮುಂತಾದ ಆಪ್ತ ಬಂಧುಗಳ ಹೆಸರಿಗೆ ಮಾಡಿ, ತಾನು ಯಾವ ಆಸ್ತಿಯನ್ನೂ ಹೊಂದಿಲ್ಲ ಎಂದು ಜನತೆಗೆ ಹೇಳುತ್ತಿದ್ದ. ಆದರೆ ಅವನ ಐಷಾರಾಮದ ಜೀವನ ಪ್ರಜೆಗಳ ಕಣ್ಣು ಕುಕ್ಕುವಂತಿತ್ತು. ಮಗನ ಒಂದು ಹೊಸ ವರ್ಷದ ಪಾರ್ಟಿಗೆ ಅವನು ಮಿಲಿಯನ್ ಯೂರೋಗಳನ್ನು ಖರ್ಚು ಮಾಡಿದ್ದನಂತೆ.

ಅಪಾರ ಬುದ್ಧಿವಂತನಾದ ಗಡಾಫಿ ಲಿಬಿಯಾದ ಹಕ್ಕುದಾರ ತಾನೊಬ್ಬನೇ ಎಂಬಂತೆ ವರ್ತಿಸುತ್ತಿದ್ದ. ಲಿಬಿಯಾದ ಯಾವುದಾದರೂ ಪ್ರದೇಶದಲ್ಲಿರುವ ಯಾರಾದರೊಬ್ಬರು ಅವನ ವಿರುದ್ಧ ಪ್ರತಿಭಟಿಸಿದ್ದರೆ ಅಥವ ಏನಾದರೂ ಗಲಾಟೆ ಸಂಭವಿಸಿದ್ದರೆ ಆ ಸುದ್ದಿ ಉಳಿದ ಪ್ರದೇಶದ ಬೇರಾರಿಗೂ ತಲುಪುತ್ತಲೇ ಇರಲಿಲ್ಲ. ಯಾವೊಂದು ಮಾಧ್ಯಮದಲ್ಲಾಗಲೀ, ಟಿ.ವಿ ವಾಹಿನಿಗಳಲ್ಲಾಗಲೀ ಆ ಸುದ್ದಿ ಪ್ರಸಾರವಾಗುತ್ತಲೇ ಇರಲಿಲ್ಲ. ಪ್ರತಿಯೊಂದು ಮಾಧ್ಯಮವನ್ನೂ ತನ್ನ ಹತೋಟಿಯಲ್ಲಿಟ್ಟುಕೊಂಡಿದ್ದ ಗಡಾಫಿ. ಹಾಗಾಗಿ ಜನರಿಗೆ ಅವನ ಆಳ್ವಿಕೆಯ ನ್ಯೂನತೆ ಬಗ್ಗೆ ಮಾಹಿತಿಯೇ ತಿಳಿಯುತ್ತಿರಲಿಲ್ಲ. ತಮ್ಮ ರಾಷ್ಟ್ರದಲ್ಲಿ ಯಾವುದೇ ಗಲಭೆ-ಗೊಂದಲಗಳಿಲ್ಲ. ಗಡಾಫಿಯ ಆಳ್ವಿಕೆಯಲ್ಲಿ ಒಬ್ಬೇ ಒಬ್ಬರಿಗೂ ತೊಂದರೆಯಾಗಿಲ್ಲ. ಎಲ್ಲರೂ ಸುಖವಾಗಿದ್ದಾರೆ ಎಂದೇ ಭಾವಿಸಿದ್ದರು. ಹೀಗೆ ಗಡಾಫಿ ಪ್ರಜೆಗಳನ್ನು ಅಂಧತ್ವದಲ್ಲಿ ಇಟ್ಟಿದ್ದ. ಆದರೆ ತನ್ನ ಬಗ್ಗೆ ಸದಾ ಜಾಗರೂಕನಾಗಿಯೇ ಇದ್ದ. ಅವನಿಗೆ 40 ಜನ ಅಂಗರಕ್ಷಕರಿದ್ದರು. ಅವರೆಲ್ಲಾ ಮಹಿಳೆಯರೇ ಆಗಿದ್ದರು! ಪುರುಷರನ್ನು ನಂಬದ ಗಡಾಫಿ ಬರೀ ಮಹಿಳಾ ಅಂಗರಕ್ಷಕರನ್ನೇ ನೇಮಿಸಿಕೊಂಡಿದ್ದ. ಪ್ರತಿ ರಾತ್ರಿಯೂ ಅವನ ಮಲಗುವ ಜಾಗ ಸ್ಥಳಾಂತರವಾಗುತ್ತಿತ್ತು. ನೂರಾರು ಟೆಂಟ್‌ಗಳನ್ನು ರ್ಮಿಸಿಕೊಂಡಿದ್ದ ಆತ, ಆ ರಾತ್ರಿ ಯಾವ ಟೆಂಟ್‌ನಲ್ಲಿ ಮಲಗಿದ್ದಾನೆಂಬುದು ಸ್ವತಃ ಅವನ ಮಕ್ಕಳಿಗೂ ಗೊತ್ತಾಗುತ್ತಿರಲಿಲ್ಲ! ಅಷ್ಟರಮಟ್ಟಿಗೆ ರಹಸ್ಯವನ್ನು ಕಾಪಾಡಿಕೊಳ್ಳುತ್ತಿದ್ದ.

ತಮ್ಮ ಒಂದು ವಿಮಾನವನ್ನು ಲಿಬಿಯಾದವರು ನಾಶಪಡಿಸಿದರೆಂದು ಅಮೆರಿಕದವರು ಲಿಬಿಯಾದೊಂದಿಗೆ ಯಾವುದೇ ರೀತಿಯ ವ್ಯಾಪಾರ-ವಹಿವಾಟು ನಡೆಸಬಾರದೆಂದು ನಿಷೇಧ ಹೇರಿದರು. ಇದು ನಡೆದದ್ದು ಸುಮಾರು 22 ವರ್ಷಗಳ ಹಿಂದೆ. ಅಮೆರಿಕದವರ ಈ ನಿರ್ಧಾರದಿಂದ ಕುಪಿತಗೊಂಡ ಗಡಾಫಿ, ತನ್ನ ನಾಡಿನಲ್ಲೂ ಅಮೆರಿಕಾದ ಯಾವ ಅಸ್ತಿತ್ವವೂ ಇರಬಾರದೆಂದು ನಿರ್ಧರಿಸಿದ. ಅಮೆರಿಕಾವನ್ನು ಅಪಾರವಾಗಿ ದ್ವೇಷಿಸುವುದಷ್ಟೇ ಅಲ್ಲದೆ ತನ್ನ ನಾಡಿನ ಶಿಕ್ಷಣದಲ್ಲಿ ಆಂಗ್ಲ ಭಾಷೆಯನ್ನು ಪೂರ್ತಿಯಾಗಿ ತೆಗೆದು ಹಾಕಿಬಿಟ್ಟ. ಎಲ್ಲರೂ ಅರೆಬಿಕ್ ಭಾಷೆಯನ್ನು ಬಳಸಬೇಕು ಎಂದೇ ಕಟ್ಟಾಜ್ಞೆ ಮಾಡಿದ್ದ. ಇದೆಷ್ಟು ಕಟ್ಟುನಿಟ್ಟಾಗಿತ್ತೆಂದರೆ ಆ 22 ವರ್ಷಗಳಲ್ಲಿ ಲಿಬಿಯಾದಲ್ಲಿ ವ್ಯಾಸಂಗ ಮಾಡಿದವರಾರಿಗೂ ಆಂಗ್ಲ ಭಾಷೆಯ ಗಾಳಿ-ಗಂಧವೂ ಗೊತ್ತಿಲ್ಲ! ಈಗ್ಗೆ ಕೆಲವು ಕಾಲದಿಂದ ಈ ಆಜ್ಞೆ ಸ್ವಲ್ಪ ಸಡಿಲವಾಗಿ, ಆಂಗ್ಲ ಭಾಷೆ ಮತ್ತೆ ನುಸುಳುತ್ತಿರುವಂತೆಯೇ ಬೇರೆ ಬಗೆಯ ಗಲಾಟೆ ಪ್ರಾರಂಭವಾಯಿತು.

ಗಡಾಫಿಯ ಡಿಕ್ಟೇಟರ್ ಆಳ್ವಿಕೆಯಲ್ಲಿ ನರಳಿದ ಕೆಲವರು ಮೆಲ್ಲಗೇ ತಿರುಗಿ ಬೀಳತೊಡಗಿದರು. ದಿನೇದಿನೇ ವಿರೋಧಿ ಬಣದ ಸಂಖ್ಯೆ ಹೆಚ್ಚಾಗತೊಡಗಿತು. ಯಾವಾಗ ವಿರೋಧಿ ಬಣ ಧೈರ್ಯವಾಗಿ ಸೊಲ್ಲೆತ್ತತೊಡಗಿತೋ ಆಗ ಗಡಾಫಿ ಉಗ್ರರೂಪ ತಾಳಿದ. ಅಧಿಕಾರ ಬಿಟ್ಟು ಕೊಡಬೇಕೆಂಬ ಜನರ ಬೇಡಿಕೆ ಅವನನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿತು. ವಿರೋಧಿ ಬಣದವರನ್ನು ಮಟ್ಟ ಹಾಕಲು ತನ್ನ ಅಧಿಕಾರವನ್ನು ಉಪಯೋಗಿಸತೊಡಗಿದ. ಇಷ್ಟೆಲ್ಲಾ ಆದರೂ ಲಿಬಿಯಾದ ಎಲ್ಲಾ ಪ್ರಜೆಗಳಿಗೂ ಇದಾವುದರ ಬಗ್ಗೆ ಗೊತ್ತೇ ಇರಲಿಲ್ಲ. ಆದರೆ ವಿರೋಧಿ ಬಣದವರೂ ಗಡಾಫಿಯ ಬಾಣಕ್ಕೆ ಪ್ರತ್ಯಸ್ತ್ರ ಹೂಡಿದರು. ಲಿಬಿಯಾದ ಮಾಧ್ಯಮಗಳ ಮೂಲಕ ಅವರು ಜನರನ್ನು ತಲುಪಲು ಸಾಧ್ಯವಿರಲಿಲ್ಲ. ಆದ್ದರಿಂದ ಅವರು ಗಲಭೆಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ‘ದೋಹಾ’ದಲ್ಲಿರುವ ಟಿ.ವಿ. ವಾಹಿನಿಗೆ ಕಳುಹಿಸುತ್ತಿದ್ದರು. ದೋಹಾದಿಂದ ಪ್ರಸಾರವಾಗುವ ವಾಹಿನಿಯಿಂದ ಲಿಬಿಯಾದ ಜನತೆಗೆ ತಮ್ಮ ನಾಡಿನ ಪರಿಸ್ಥಿತಿಯ ಬಗ್ಗೆ ಚಿತ್ರಣ ಸಿಗುತ್ತಿತ್ತು! ಹಾಗೆಯೇ ಮೊಬೈಲ್, ಇಂಟರ್ನೆಟ್ ಮೂಲಕವೂ ಮಾಹಿತಿ ಸಿಗತೊಡಗಿತು. ಹೀಗಾಗಿ ಎಷ್ಟೋ ಜನರು ಜಾಗೃತರಾಗಿ ವಿರೋಧಿ ಬಣದವರ ಜತೆಗೂಡಿ, ಗಡಾಫಿಯ ಪದಚ್ಯುತಿಯಾಗಬೇಕೆಂದು ಹೋರಾಡತೊಡಗಿದರು. ವಿರೋಧಿಗಳ ಹೋರಾಟ ತೀವ್ರವಾಗುತ್ತಿದ್ದಂತೆಯೇ ವಾಯುದಳದವರಿಗೆ ವಿರೋಧಿ ಬಣದವರನ್ನು ಗುಂಡಿಕ್ಕಿ ಕೊಲ್ಲಲು ಆದೇಶಿಸಿದ.

ಅಲ್ಲಿಯವರೆಗೂ ವಾಯುದಳದವರು ಗಡಾಫಿಯ ಕಡೆಗೇ ಇದ್ದರು. ಆದರೆ ಗಡಾಫಿಯ ಈ ಆದೇಶವನ್ನು ಪಾಲಿಸಲು ಅವರು ಒಪ್ಪಲಿಲ್ಲ. ಏಕೆಂದರೆ ವಿರೋಧಿ ಬಣದಲ್ಲಿ ಅವರ ಬಂಧು-ಬಾಂಧವರು ಇದ್ದರು. ಅವರನ್ನು ಕೊಲ್ಲಲು ಸಿದ್ಧರಿರಲಿಲ್ಲ. ಹಾಗಾಗಿ ವಾಯುದಳದವರೂ ವಿರೋಧಿ ಬಣವನ್ನು ಸೇರಿದರು! ಹೀಗೇ ಗಡಾಫಿಯ ವಿರೋಧಿ ಬಣ ಬೆಳೆಯುತ್ತಲೇ ಹೋಯಿತು. ಪರಿಸ್ಥಿತಿ ತೀರಾ ಹದಗೆಟ್ಟಾಗ ಗಡಾಫಿ ಕರ್ಫ್ಯೂ ವಿಧಿಸಿದ. ಇಡೀ ಲಿಬಿಯಾದಲ್ಲಿ ಅಲ್ಲೋಲಕಲ್ಲೋಲ ಉಂಟಾಯಿತು. ಜನ ತತ್ತರಿಸಿದರು. ಅನ್ಯ ದೇಶಗಳಿಂದ ಬಂದು ನೆಲೆಸಿದ ಜನರಿಗೆ ಲಿಬಿಯಾದಲ್ಲಿ ತಮ್ಮ ವಾಸ್ತವ್ಯವನ್ನು ಮುಂದುವರೆಸಲು ದುಗುಡವುಂಟಾಯಿತು. ಯಾವ ಕ್ಷಣದಲ್ಲಿ ಬೇಕಾದರೂ ಗಲಭೆ-ಯುದ್ಧ ಆಗುವ ಸಾಧ್ಯತೆಯಿತ್ತು.

ಜಯಲಕ್ಷ್ಮಿ ಈ ಸಮಯದಲ್ಲಿ ಭಾರತದ ರಾಯಭಾರಿ ಮಣಿಯವರನ್ನು ಸಂಪರ್ಕಿಸಿದರು. ಅವರು ಮಾರನೆಯ ಬೆಳಿಗ್ಗೆಯೇ ವಾಪಸ್ಸು ಭಾರತಕ್ಕೆ ಹೋಗಿಬಿಡಿ ಎಂದು ಸಲಹೆಯಿತ್ತರು. ಬೆಳಿಗ್ಗೆ ಆರು ಗಂಟೆಗೆ ವಿಮಾನ ಹೊರಡಲು ವ್ಯವಸ್ಥೆಯಾಗಿತ್ತು. ತಕ್ಷಣ ಬಂದು ಬೋರ್ಡಿಂಗ್ ಪಾಸ್‌ಗಳನ್ನು ತೆಗೆದುಕೊಂಡು ಹೋಗಿ ಎಂದು ರಾಯಭಾರಿ ಮಣಿಯವರು ಹೇಳಿದ ಕೂಡಲೇ ಜಯಲಕ್ಷ್ಮಿ ಮತ್ತು ಅವರ ಪತಿ ಡಾ.ವಿಶ್ವನಾಥ್, ತಮ್ಮ ಪರಿಚಿತ ಭಾರತೀಯರೆಲ್ಲರಿಗೂ ಫೋನ್ ಮಾಡಿ ಅವರೂ ಬೋರ್ಡಿಂಗ್ ಪಾಸ್ ಪಡೆಯಲು ವಿಷಯ ಮುಟ್ಟಿಸಿದರು. ತಕ್ಷಣ ಎಲ್ಲರೂ ಕಾಯೋನ್ಮುಖರಾದರು. ಹೋಗಿ ಬೋರ್ಡಿಂಗ್ ಪಾಸ್‌ಗಳನ್ನು ಪಡೆದುಕೊಂಡು ಮನೆಗೆ ಬರುವಷ್ಟರಲ್ಲಿ ರಾತ್ರಿ ಹನ್ನೊಂದೂವರೆಯಾಗಿತ್ತು! ಮತ್ತೆ ಬೆಳಗಿನ ಜಾವ ಆರುಗಂಟೆಗೆ ಏರ್‌ಪೋರ್ಟ್‌ಗೆ ಹೋಗಬೇಕಾಗಿತ್ತು. ಲಗೇಜ್ ಪ್ಯಾಕ್ ಮಾಡಿಕೊಳ್ಳುತ್ತಿದ್ದಂತೆಯೇ ಜಯಲಕ್ಷ್ಮಿಯವರಿಗೆ ರಾಯಭಾರಿ ಮಣಿಯವರ ಫೋನ್ ಬಂದಿತು. ‘ಡಾ. ಜಯ, ಬೆಳಿಗ್ಗೆ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನವಾಗುವ ಸಂಭವವಿದೆ. ಬೆಳಿಗ್ಗೆ ನೀವು ಏರ್‌ಪೋರ್ಟ್‌ಗೆ ಬರಲು ತೊಂದರೆಯಾಗಬಹುದು. ನೀವುಗಳು ಗಲಾಟೆಯಲ್ಲಿ ಸಿಲುಕಿಬಿಟ್ಟರೆ ಏನು ಬೇಕಾದರೂ ಅನಾಹುತವಾಗಬಹುದು. ಆದ್ದರಿಂದ ಮಧ್ಯರಾತ್ರಿ 2 ಗಂಟೆಗೇ ಏರ್‌ಪೋರ್ಟ್‌ಗೆ ಬಂದು ಸೇರಿಕೊಂಡುಬಿಡಿ. ಬರೀ ನಿಮ್ಮ ಮುಖ್ಯವಾದ ಕಾಗದ ಪತ್ರಗಳನ್ನು, ಹಣ-ಒಡವೆಗಳನ್ನು ಮಾತ್ರ ತೆಗೆದುಕೊಂಡು ಹೊರಡಿ. ಇನ್ನೆಲ್ಲವನ್ನೂ ಹಾಗೇ ಬಿಟ್ಟು ಬನ್ನಿ...’ ಎಂದು ಮಣಿ ಹೇಳಿದರು. ಮತ್ತೆ ಜಯಲಕ್ಷ್ಮಿ ಮತ್ತು ವಿಶ್ವನಾಥ್ ತಮ್ಮ ಭಾರತೀಯ ಸ್ನೇಹಿತರಿಗೆ ವಿಷಯ ಮುಟ್ಟಿಸಿದರು. ಅವರು ತಮ್ಮ ಸ್ನೇಹಿತರಿಗೆ ದಾಟಿಸಿದರು. ಹೀಗೆ ಒಬ್ಬರಿಂದ ಒಬ್ಬರಿಗೆ ಫೋನ್‌ಗಳು ಕ್ಷಣಮಾತ್ರದಲ್ಲಿ ಹರಿದಾಡಿದವು. ಜಯಲಕ್ಷ್ಮಿ-ವಿಶ್ವನಾಥ್ ಮಧ್ಯರಾತ್ರಿ ಮನೆಯಿಂದ ಹೊರಟರು. ಅಲ್ಲಿಯ ಬ್ಯಾಂಕ್‌ನಲ್ಲಿದ್ದ ತಮ್ಮ ಸಂಬಳವನ್ನೂ ಆ ಸರಿರಾತ್ರಿಯಲ್ಲಿ ಪಡೆಯಲಾಗಲಿಲ್ಲ. ತಾವು ವಾಸವಿದ್ದ ಮನೆಯ ಮಾಲೀಕನಿಗೂ ವಿಷಯ ಮುಟ್ಟಿಸಲಾಗಲಿಲ್ಲ. ಪಕ್ಕದ ಮನೆಯಲ್ಲಿ ವಾಸವಿದ್ದ ಲಿಬಿಯನ್ನನಿಗೆ ಮನೆಯ ಬೀಗದ ಕೈ ಕೊಟ್ಟು, ಮಾಲಿಕನಿಗೆ ವಿಷಯ ಮುಟ್ಟಿಸಲು ಹೇಳಿದರು. ಆಗ ಆ ಲಿಬಿಯನ್ನನು ಏನು ಹೇಳಿದ್ದು- ‘ನೀವು ಹೀಗೆ ವಾಪಸ್ಸು ಹೋಗುತ್ತಿರುವುದು ನಮಗೆ ತುಂಬಾ ಸಂಕಟವಾಗುತ್ತಿದೆ.
ಯಾರದೋ ತಪ್ಪಿಗೆ ನೀವುಗಳು ಬಲಿಪಶುಗಳಾಗುವಂತಾಗಿದೆ. ನಿಮ್ಮ ನೋವು, ಅಸಹಾಯಕ ಸ್ಥಿತಿ ನೋಡಿ ನಮ್ಮ ನಾಯಕರ ಬಗ್ಗೆ ನಾಚಿಕೆಯಾಗುತ್ತಿದೆ. ಆದರೂ ನನ್ನದೊಂದು ವಿನಂತಿ...ದಯವಿಟ್ಟೂ ನಿಮ್ಮ ದೇಶದಲ್ಲಿ ಲಿಬಿಯಾದ ಈ ಕೆಟ್ಟ ಪರಿಸ್ಥಿತಿಯ ಬಗ್ಗೆ ಏನೂ ಹೇಳಬೇಡಿ. ಲಿಬಿಯಾದ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿ. ಇಂದಲ್ಲಾ ನಾಳೆ ಪರಿಸ್ಥಿತಿ ಸುಧಾರಣೆ ಆಗಿ ಲಿಬಿಯಾ ಶಾಂತವಾಗುತ್ತದೆ. ಮತ್ತೇ ಎಲ್ಲಾ ಸರಿಹೋಗುತ್ತದೆ...’. ಹೀಗೆ ಹೇಳುವಾಗ ಅವನ ಕಣ್ಣಿನಲ್ಲಿ ನೀರಾಡಿತ್ತಂತೆ.

ಅವನಿಂದ ಬೀಳ್ಕೊಂಡ ಮೇಲೆ ಏರ್‌ಪೋರ್ಟ್‌ಗೆ ಹೇಗೆ ಹೋಗಬೇಕೆಂಬ ಸಮಸ್ಯೆ. ಅದೃಷ್ಟವೆಂಬಂತೆ ಯಾವುದೋ  ಟ್ಯಾಕ್ಸಿ ಸಿಕ್ಕಿತು. ಜಯಲಕ್ಷ್ಮಿ-ವಿಶ್ವನಾಥ್ ಏರ್‌ಪೋರ್ಟ್ ತಲುಪಿದರೆ, ಅಲ್ಲಿ ಲಕ್ಷಾಂತರ ಜನ ಜಮಾಯಿಸಿದ್ದರು. ತಮ್ಮ ತಮ್ಮ ತಾಯ್ನಿಡಿಗೆ ಹೋಗಲು ಕಂಗಾಲಾಗಿ ಪರಿತಪಿಸುತ್ತಿದ್ದರು. ರಾಯಭಾರಿಗಳು ತಮ್ಮ ತಮ್ಮ ದೇಶದ ಜನರಿಗೆ ಸಹಾಯ ಮಾಡಲು ತಮ್ಮ ನಾಡಿನ ಬಾವುಟಗಳನ್ನು ಹಿಡಿದುಕೊಂಡು ಪರದಾಡುತ್ತಿದ್ದರು. ಎಲ್ಲಾ ಕಡೆಯೂ ತೀವ್ರ ಸ್ವರೂಪದ ತಪಾಸಣೆ ಕಾರ್ಯ. ಯಾರ ಬಳಿಯಾದರೂ ಲಿಬಿಯಾದ ಕರೆನ್ಸಿ ದಿನಾರ್‌ಗಳು ಇದ್ದರೆ ಕಸಿದುಕೊಳ್ಳುವವರು ಅಡಿಗಡಿಗೂ ಇದ್ದರು. ಚೀನಿಯರಿಗಂತೂ ಬಟ್ಟೆಗಳನ್ನೂ ತೆಗೆದುಕೊಂಡು ಹೋಗಲು ಬಿಡುತ್ತಿರಲಿಲ್ಲ. ಅವರಿಂದ ಪಡೆದ ಬಟ್ಟೆಗಳ ರಾಶಿ ಏರ್‌ಪೋರ್ಟ್‌ನಲ್ಲಿ ಬೆಟ್ಟದ ಹಾಗೆ ಬಿದ್ದಿತ್ತು. ದೋಚುವವರು ಮನಸ್ಸಿಗೆ ಬಂದಂತೆ ದೋಚಿಕೊಳ್ಳುತ್ತಿದ್ದರೆ, ತಾಯ್ನಿಡಿಗೆ ಹೊರಟ ಪ್ರಯಾಣಿಕರ ಜೀವ ಬಾಯಲ್ಲಿ. ಕೈಗೆ ಸಿಕ್ಕಷ್ಟು ಹಣ, ಒಡವೆ, ವಾಚು, ಲ್ಯಾಪ್‌ಟಾಪ್....ಎಲ್ಲವನ್ನೂ ಕಿತ್ತುಕೊಳ್ಳುವವರನ್ನು ದಾಟಿಯೇ ಸಾಗುವ ಅನಿವಾರ್ಯತೆ. ಜೀವ ಉಳಿದರೆ ಸಾಕೆಂದು ಬೇಡುವ ಸ್ಥಿತಿ ಉಂಟಾಗಿತ್ತು. ಕೊನೆಗೂ ಕ್ಷೇಮವಾಗಿ ಹಿಂತಿರುಗಿದ ಭಾರತೀಯರು ಇನ್ನೂ ಆ ‘ಶಾಕ್’ನಿಂದ ಹೊರಬಂದಿಲ್ಲ.

ಜಯಲಕ್ಷ್ಮಿ ತಮ್ಮ ಅನುಭವವನ್ನು ಹಂಚಿಕೊಂಡಾಗ ಅವರ ದನಿಯಲ್ಲಿ ಗಡಾಫಿಯ ಅಧಿಕಾರದಾಹದ ಬಗ್ಗೆ ಬೇಸರವಿತ್ತು, ಲಿಬಿಯಾದ ಪ್ರಜೆಗಳ ಮುಗ್ಧತೆಯ ಬಗ್ಗೆ ಮರುಕವಿತ್ತು-ನೋವಿತ್ತು. ತಾವೇನೋ ಕ್ಷೇಮವಾಗಿ ಬಂದೆವು. ಆದರೆ ಎಷ್ಟೋ ಜನ ಭಾರತೀಯರು ತಾವು ಎಷ್ಟೋ ವರ್ಷಗಳಿಂದ ದುಡಿದದ್ದನ್ನೆಲ್ಲಾಕಳೆದುಕೊಂಡರು, ತಮ್ಮ ಎಷ್ಟೋ ಕನಸುಗಳನ್ನು ನಂದಿಸಿಕೊಂಡು ಬಂದ ತಮ್ಮ ಸಹ ಪ್ರಯಾಣಿಕರ ಗೋಳನ್ನು ನೆನೆದು ಮಿಡಿದರು....

ಇಂದು ಲಿಬಿಯಾದಲ್ಲಿರುವ ಪರಿಸ್ಥಿತಿ ನಾಳೆ ಯಾವ ನಾಡಿನದ್ದೂ ಆಗಬಹುದು. ಮನುಷ್ಯನ ಹಣ-ಅಧಿಕಾರದ ಆಸೆ ಈ ಮಟ್ಟಕ್ಕೆ ತಂದುಬಿಡುತ್ತದೆ. ಆದರೆ ಎಲ್ಲೂ ಹಾಗಾಗದಿರಲಿ...ಮರೆತು ಹೋಗುತ್ತಿರುವ ಮಾನವತೆ ಜೀವಂತವಾಗಿ ಪ್ರಪಂಚದಲ್ಲಿ ಶಾಂತಿ ನೆಲೆಸಲಿ ಎಂದು ಹಾರೈಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT