ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆನ್ಸ್ ಹೀಗೆ ಬಳಸಿ

ವಾರದ ವೈದ್ಯ
ಅಕ್ಷರ ಗಾತ್ರ

ಕಾಂಟ್ಯಾಕ್ಟ್ ಲೆನ್ಸ್ ಬಳಕೆಯ ಬಗ್ಗೆ ಜನರಲ್ಲಿ ಹಲವು ರೀತಿಯ ಗೊಂದಲಗಳಿವೆ. ಇದರ ಅವಶ್ಯಕತೆ, ಮಹತ್ವ, ಉಪಯೋಗದ ಬಗ್ಗೆಯೂ ಸಾಕಷ್ಟು ಅನುಮಾನಗಳಿವೆ. ಯಾವ ವಯಸ್ಸಿನವರಿಗೆ ಯಾವ ಲೆನ್ಸ್ ಹೆಚ್ಚು ಸೂಕ್ತ, ವೃದ್ಧರು, ಮಕ್ಕಳೂ ಲೆನ್ಸ್ ಹಾಕಿಕೊಳ್ಳಬಹುದೇ, ಹೇಗೆ ಉಪಯೋಗಿಸಬೇಕು, ಯಾವಾಗ ತೆಗೆದಿಡಬೇಕು... ಇಂತಹ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಕಾಂಟ್ಯಾಕ್ಟ್ ಲೆನ್ಸ್ ಬಗ್ಗೆ ವಿವರಿಸಿ.
ಇದೊಂದು ತೆಳುವಾದ ಕೃತಕ ಮಸೂರ­ವಾಗಿದ್ದು, ದೃಷ್ಟಿ ದೋಷಗಳನ್ನು ಸರಿಪಡಿಸಲು ಕಣ್ಣಿನ ಮೇಲ್ಮೈ ಮೇಲೆ ಧರಿಸಲಾ­ಗುತ್ತದೆ.

*ಇದರಲ್ಲಿ ಎಷ್ಟು ಬಗೆಯ ಪ್ರಕಾರಗಳಿವೆ?
ಇದರಲ್ಲಿ ಎರಡು ಸಾಮಾನ್ಯ ವಿಧಗಳಿವೆ. -ಮೃದು (ಸಾಫ್ಟ್ ಲೆನ್ಸ್) ಮತ್ತು ಕಠಿಣ (ಹಾರ್ಡ್‌ ಲೆನ್ಸ್) ಲೆನ್ಸ್ಗಳು. ಮೃದು ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಮೃದುವಾದ, ಕಣ್ಣಿಗೆ ಹೊಂದಿಕೊಳ್ಳುವ ಪ್ಲಾಸ್ಟಿಕ್‌ನಿಂದ  ಮಾಡಲಾಗುತ್ತದೆ. ಇಲ್ಲಿ ಕಾರ್ನಿಯಾಗೆ ಆಮ್ಲಜನಕ ಹಾದುಹೋಗಲು ಅವಕಾಶ ಇರುತ್ತದೆ. ಇವುಗಳನ್ನು ಧರಿಸುವುದೂ ಸುಲಭ. ಅಲ್ಲದೆ ಇವು ಕಠಿಣ ಲೆನ್ಸ್ಗಳಿಗಿಂತಲೂ ಹೆಚ್ಚು ಆರಾಮದಾಯಕ ಅನುಭವವನ್ನು ನೀಡುತ್ತವೆ. ಕಠಿಣ ಅಂತರ್ವ್ಯಾಪ್ಯತೆಯುಳ್ಳ ಕಾಂಟ್ಯಾಕ್ಟ್ ಲೆನ್ಸ್ (RGPs) ಸಾಮಾನ್ಯವಾಗಿ ಸ್ಪಷ್ಟವಾದ ಮತ್ತು ಚುರುಕಾದ ದೃಷ್ಟಿಯನ್ನು ನೀಡುತ್ತದೆ. ಮೃದು ಲೆನ್ಸ್ ಗಳಿಗಿಂತಲೂ ಹೆಚ್ಚು ಬಾಳಿಕೆ ಬರುತ್ತದೆ. ಉಪಯೋಗವೂ ಸುಲಭ. ಆದರೆ ಇದು ಮೃದು ಲೆನ್ಸ್ಗಳಷ್ಟು ಆರಾಮದಾಯಕವಲ್ಲ.

4ಪ್ರತಿನಿತ್ಯ ಬಳಸಿ ಬಿಸಾಡಬಹುದಾದ ಮತ್ತು ಸಾಕಷ್ಟು ದಿನ ಬಳಸಬಹುದಾದ ಲೆನ್ಸ್ಗಳ ನಡುವಿನ ವ್ಯತ್ಯಾಸ ಏನು?
ತಾತ್ಕಾಲಿಕವಾಗಿ ಬಳಸಬಹುದಾದ ಲೆನ್‌ಸಗಳನ್ನು ಒಂದು ಬಾರಿ ಬಳಸಿದ ನಂತರ ಬಿಸಾಡಬೇಕಾಗುತ್ತದೆ. ಅವುಗಳಲ್ಲಿ ನೀರಿನ ಅಂಶ ಹೆಚ್ಚಾಗಿ ಇರುವುದರಿಂದ ಕೆಲವು ಗಂಟೆಗಳವರೆಗೆ ಮಾತ್ರ ಅವುಗಳನ್ನು ಬಳಸಬಹುದು. ಆದರೆ ಪುನರಾವರ್ತಿತ ಬದಲಿ ಲೆನ್ಸ್ಗಳನ್ನು ಕೆಲವು ತಿಂಗಳ ಬಳಕೆಯ ನಂತರ ಬದಲಾಯಿಸಬೇಕಾಗುತ್ತದೆ.

*ಕಾಂಟ್ಯಾಕ್ಟ್ ಲೆನ್ಸ್ಗಳ ನಿರ್ವಹಣೆಯ ಬಗ್ಗೆ ತಿಳಿಸಿ.

ಕಾಂಟ್ಯಾಕ್ಟ್ ಲೆನ್ಸ್ಗಳ ಸೂಕ್ತ ರೀತಿಯ ಉಪಯೋಗಕ್ಕಾಗಿ ಇಲ್ಲಿರುವ ಕೆಲವು ಮಾರ್ಗಗಳನ್ನು ಅನುಸರಿಸಬೇಕು:

*ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಹಿಡಿಯುವ ಮೊದಲು ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.

*ಲೆನ್ಸ್ಗಳನ್ನು ಸ್ವಚ್ಛಗೊಳಿಸಲು ಕಾಂಟ್ಯಾಕ್ಟ್ ಲೆನ್ಸ್ ಶುದ್ಧೀಕರಣ ದ್ರಾವಣವನ್ನು ಬಳಸಿ.

*ಸ್ವಚ್ಛವಾದ ಲೆನ್ಸ್ ಕೇಸ್ ಅಥವಾ ಲೆನ್ಸ್ ಹೋಲ್ಡರ್‌ನಲ್ಲಿ ಲೆನ್ಸ್ ಅನ್ನು ಇರಿಸಿ ಮತ್ತು ತಾಜಾ ದ್ರಾವಣವನ್ನು ತುಂಬಿಸಿ.

*ಶಿಫಾರಸು ಮಾಡಿರುವ ಸಮಯವನ್ನು ಮೀರಿ ಲೆನ್ಸ್ಗಳನ್ನು ಬಳಸಬೇಡಿ.

*ಮಲಗುವಾಗ ಮರೆಯದೇ ಲೆನ್ಸ್ ತೆಗೆದಿಡಿ.

*ಕನ್ನಡಕಕ್ಕೆ ಹೋಲಿಸಿದರೆ ಲೆನ್ಸ್ ಬಳಕೆ ಹೆಚ್ಚು ದುಬಾರಿಯೇ?
ಲೆನ್ಸ್ಗಳ ನಿರ್ವಹಣೆಯನ್ನೂ ಸೇರಿಸಿ ಹೇಳುವುದಾದರೆ ಹೌದು. ಲೆನ್ಸ್ಗಳನ್ನು ಆಗಾಗ್ಗೆ ಬದಲಿಸಬೇಕಾಗಿರುವುದರಿಂದ ಹಾಗೂ ಅವುಗಳನ್ನು ಸ್ವಚ್ಛಗೊಳಿಸಲು ದ್ರಾವಣವನ್ನು ಬಳಸುವುದರಿಂದ ಇವು ಸ್ವಲ್ಪ ದುಬಾರಿಯಾಗುತ್ತವೆ. ಆದರೆ ಕನ್ನಡಕಕ್ಕೆ ಹೋಲಿಸಿದಾಗ ಇವು ಹೆಚ್ಚಿನ ಅನುಕೂಲ ಹೊಂದಿರುವುದನ್ನೂ ಕಡೆಗಣಿಸುವಂತಿಲ್ಲ.

*ಕನ್ನಡಕದ ವೈದ್ಯ ಚೀಟಿಯ (prescription) ಮೂಲಕ ಲೆನ್ಸುಗಳನ್ನು ಖರೀದಿಸಬಹುದೇ?
ಕನ್ನಡಕ ಹಾಗೂ ಲೆನ್ಸ್ಗಳ ದೃಷ್ಟಿ ಶಕ್ತಿ (ಪವರ್) ಒಂದೇ ಆಗಿರುವುದಿಲ್ಲ. ಕನ್ನಡಕವು ಕಣ್ಣಿನಿಂದ 12 ಸೆಂ.ಮೀ. ಅಂತರದಲ್ಲಿದ್ದರೆ, ಲೆನ್ಸುಗಳನ್ನು ನೇರವಾಗಿ ಕಣ್ಣಿನ ಮೇಲ್ಮೈ ಮೇಲೆ ಕೂರಿಸಿರುತ್ತೇವೆ. ಆದ್ದರಿಂದ ವೈದ್ಯರ ಚೀಟಿಯಿಲ್ಲದೇ ಲೆನ್ಸ್ಗಳನ್ನು ಖರೀದಿಸಬಾರದು. ಕೇವಲ ಔಷಧ ಅಂಗಡಿಯವರ ಸಲಹೆಯ ಮೇರೆಗೆ ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ.

*ಕ್ರೀಡೆ ಮತ್ತು ಹೊರಾಂಗಣ ಚಟುವಟಿಕೆಗಳಲ್ಲಿ ಲೆನ್ಸ್ ಬಳಸಬಹುದೇ?
ಖಂಡಿತ, ಕ್ರೀಡೆ ಮತ್ತು ಹೊರಾಂಗಣ ಚಟುವಟಿಕೆಗಳಲ್ಲಿ ಕನ್ನಡಕಗಳಿಗಿಂತಲೂ ಲೆನ್ಸ್ ಹೆಚ್ಚು ಉಪಯುಕ್ತ ಮತ್ತು ಸುರಕ್ಷಿತ.

*ಕಾಂಟ್ಯಾಕ್ಟ್ ಲೆನ್ಸ್ಗಳ ಅಪಾಯ ಅಥವಾ ಅಡ್ಡ ಪರಿಣಾಮಗಳನ್ನು ತಿಳಿಸಿ.
ಲೆನ್ಸ್ಗಳನ್ನು ಸರಿಯಾದ ಕ್ರಮದಲ್ಲಿ ಕಣ್ಣಿನ ಒಳಗೆ ಕೂರಿಸದೇ ಹೋದರೆ, ಮಲಗುವಾಗ ತೆಗೆದು ಇಡದೇ ಹೋದರೆ ಅವು ಬಿಗಿಯಾಗಿ ಅಸಹನೆ ಉಂಟಾಗುವ ಸಾಧ್ಯತೆ ಇರುತ್ತದೆ.

4ಕಾಂಟ್ಯಾಕ್ಟ್ ಲೆನ್ಸುಗಳು ಕಣ್ಣನ್ನು ಪರಚುವ ಸಾಧ್ಯತೆ ಇದೆಯೇ?
ಹಳೆಯ, ವಾಯಿದೆ ಮೀರಿದ ಲೆನ್ಸ್ ಬಳಸಿದರೆ, ವೈದ್ಯರ ಸೂಚನೆಗಿಂತ ಹೆಚ್ಚು ಹೊತ್ತು ಹಾಕಿಕೊಂಡರೆ ಅಂತಹ ಲೆನ್ಸುಗಳು ಕಣ್ಣನ್ನು ಪರಚಬಹುದು.

*ಲೆನ್ಸ್ ಬಳಸುವುದರಿಂದ ಕಣ್ಣಿನ ಸೋಂಕು ಬರುವ ಸಂಭವ ಉಂಟೇ?
ಲೆನ್ಸ್ನ ಗುಣಮಟ್ಟ, ಅವುಗಳ ಸ್ವಚ್ಛತೆ, ನಿರ್ವಹಣೆ ಮುಂತಾದ ಸಂಗತಿಗಳನ್ನು ಇದು ಅವಲಂಬಿಸಿರುತ್ತದೆ. ಕಣ್ಣಿನ ಸುರಕ್ಷತೆಗಾಗಿ ವೈದ್ಯರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಹಾಗೂ ಲೆನ್ಸ್ ಸ್ವಚ್ಛತೆಯನ್ನು ಕಾಪಾಡುವುದು ಮುಖ್ಯ.

*ಮಕ್ಕಳಿಗೂ ಲೆನ್ಸ್ ಅಳವಡಿಸಬಹುದೇ? ಅವರಿಗೆ ಯಾವ ಲೆನ್ಸ್ ಉತ್ತಮ?

ಮಕ್ಕಳ ದೃಷ್ಟಿ ದೋಷದ ಮೇಲೆ ಅವರಿಗೆ ಲೆನ್ಸ್ ಅಗತ್ಯವಿದೆಯೇ ಎಂದು ನಿರ್ಧರಿಸಲಾಗುತ್ತದೆ. ಇದೆ ಎಂದಾದರೆ, ಯಾವುದು ಹೆಚ್ಚು ಉತ್ತಮ ಎಂಬುದನ್ನು ವೈದ್ಯರು ತಪಾಸಣೆ ಮತ್ತು ಪರೀಕ್ಷೆಯ ನಂತರ ನಿರ್ಧರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT