ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆವಿ ನೀತಿಗೆ ವಿರೋಧ: ಅಕ್ಕಿ ಗಿರಣಿಗಳು ಸ್ಥಗಿತ

Last Updated 17 ಡಿಸೆಂಬರ್ 2013, 7:10 IST
ಅಕ್ಷರ ಗಾತ್ರ

ಬಳ್ಳಾರಿ: ಸರ್ಕಾರ ಜಾರಿಗೆ ತಂದಿರುವ ಲೆವಿ ನೀತಿ ವಿರೋಧಿಸಿ ಸೋಮವಾರದಿಂದ ಅನಿರ್ದಿಷ್ಟ ಅವಧಿಯ ಮುಷ್ಕರ ಆರಂಭಿಸಿರುವ ಜಿಲ್ಲೆಯ ಅಕ್ಕಿ ಗಿರಣಿಗಳ ಮಾಲೀಕರು, ಗಿರಣಿಗಳನ್ನು ಸ್ಥಗಿತಗೊಳಿಸಿದ್ದಾರೆ.

ಸಿರುಗುಪ್ಪ ಪಟ್ಟಣದಲ್ಲಿರುವ 75ಕ್ಕೂ ಅಧಿಕ ಅಕ್ಕಿ ಗಿರಣಿಗಳಿಗೆ ಬೀಗ ಹಾಕಿದ ಮಾಲೀಕರು,  ಯಾವುದೇ ಚಟುವಟಿಕೆ ನಡೆಸದೆ ಭತ್ತ ಮತ್ತು ಅಕ್ಕಿ ವಹಿವಾಟಿನ ವ್ಯವಹಾರ ಸ್ಥಗಿತಗೊಳಿಸಿದರು.

ಕಳೆದ 30 ವರ್ಷಗಳಿಂದ ಸರ್ಕಾರ  ನಿಗದಿ ಮಾಡಿದ ದರದಲ್ಲೇ ವಾರ್ಷಿಕ 1.50 ಲಕ್ಷ ಟನ್ ಅಕ್ಕಿಯನ್ನು ಲೆವಿ ಆಧಾರದಲ್ಲಿ ನಿಡಿರೂ, 204ರ ಮಾರ್ಚ್‌ ಅಂತ್ಯದೊಳಗೆ 5ಲಕ್ಷ ಟನ್ ಅಕ್ಕಿ  ನೀಡಬೇಕೆಂಬ ಸರ್ಕಾರದ ಲೆವಿ ನೀತಿಯು ಅಧಿಕ ಹೊರೆಯಾಗಲಿದೆ ಎಂದು ಅಕ್ಕಿ ಗಿರಣಿ ಮಾಲೀಕರ ಸಂಘವ ಅಧ್ಯಕ್ಷ ಬಿ.ಜಿ. ಸಿದ್ದಾರೆಡ್ಡಿ ಆತಂಕ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಲೆವಿ ಮೂಲಕ ಅಕ್ಕಿ ನೀಡುವುದರಲ್ಲಿ ಬಳ್ಳಾರಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಲೆವಿ ಸಂಗ್ರಹಣೆಯ ಗುರಿ ತಲುಪಬೇಕಾದಲ್ಲಿ ಸರ್ಕಾರ ಹಳೇ ದರದ ಪದ್ಧತಿಯನ್ನು ಮುಂದುವರಿಸಬೇಕು ಎಂದು ಸಂಘದ ಕಾರ್ಯದರ್ಶಿ ಕೆ.ಮಾಣಿಕ್ಯರೆಡ್ಡಿ ಹೇಳಿದರು.

ಪ್ರತಿ ಕ್ವಿಂಟಲ್ ಅಕ್ಕಿಗೆ ರೂ2650 ದರ ನಿಗದಿಪಡಿಸಿ, ಕೇವಲ 1.50 ಲಕ್ಷ ಟನ್ ಪ್ರಮಾಣದ ಲೆವಿ ಸಂಗ್ರಹಣೆಗೆ ಅನುಮತಿ ನೀಡಬೇಕೆಂಬ ಬೇಡಿಕೆಗೆ ಸರ್ಕಾರ  ಸ್ಪಂದಿಸಬೇಕು ಎಂದು ಅವರ ತಿಳಿಸಿದರು.

ಭತ್ತ ಬೆಳೆಯುವ ರೈತರ ಹಾಗೂ ಅಕ್ಕಿ ಗಿರಣಿ ಮಾಲೀಕರ ಮತ್ತು ಕೂಲಿ ಕಾರ್ಮಿಕರ ಭವಿಷ್ಯ ಸರ್ಕಾರದ ಕೈಲಿದ್ದು, ಅಧಿಕ ಪ್ರಮಾಣದ ಲೆವಿ ನಿಗದಿ ಮಾಡಿದರೆ ಭತ್ತ ಹಾಗೂ ಅಕ್ಕಿ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅವರು ವಿವರಿಸಿದರು.
ಯಂತ್ರೋಪಕರಣಗಳ ವೆಚ್ಚ, ವಿದ್ಯುತ್ ಬಿಲ್ ದುಬಾರಿಯಾಗಿದ್ದು, ಅಕ್ಕಿ ತಯಾರಿಕೆಯ ವೆಚ್ಚ ದ್ವಿಗುಣಗೊಂಡಿದೆ. ಅವರು ತಿಳಿಸಿದರು.
ಪಟ್ಟಣದಿಂದ ನಿತ್ಯ ನೂರು ಲಾರಿಗಳಲ್ಲಿ ವಿವಿಧೆಡೆ ರೂ10 ಕೋಟಿ ಮೌಲ್ಯದ ಅಕ್ಕಿ ರವಾನೆಯಾಗುತ್ತಿದ್ದು, ಗಿರಣಿಗಳು ಸ್ಥಗಿತಗೊಂಡಿದ್ದರಿಂದ ಮಾರುಕಟ್ಟೆಯಲ್ಲಿ ಅಕ್ಕಿಯ ಕೊರತೆ ಉಂಟಾಗಲಿದೆ ಎಂದು ಮುತ್ಯಾಲಯ್ಯ ಶೆಟ್ಟಿ ಹೇಳಿದರು.

ಎಂ.ಶಿವಶಂಕರಗೌಡ, ಪಿ.ಗೋವಿಂದರೆಡ್ಡಿ, ಎಂ.ಜನಾರ್ದನ ಶೆಟ್ಟಿ, ಅರ್.ಪೊಂಪನಗೌಡ, ಬಿ.ಮಂಜುನಾಥ ಶೆಟ್ಟಿ, ವೈ.ಮೃತ್ಯುಂಜಯ, ಜಿ.ಗೋಪಾಲ, ಬಿ.ಶ್ರೀರಾಮು, ಪಿ.ವೆಂಕಟಸ್ವಾಮಿ ನಾರಾಯಣ, ಪಿ.ಕೇಶವ ರೆಡ್ಡಿ, ಬಿ.ಜಿ. ಸತ್ಯನಾರಾಯಾಣ ರೆಡ್ಡಿ, ಬಿ.ಸುಬಾನ್ ಸಾಬ್, ಮತ್ತಿತರರು ಪಾಲ್ಗೊಂಡಿದ್ದರು.
ಗಿರಣಿ ಸ್ಥಗಿತಗೊಂಡಿದ್ದರಿಂದ ಸಾವಿರಾರು ಕೂಲಿ ಕಾರ್ಮಿಕರಿಗೂ ತೀವ್ರಸಮಸ್ಯೆ ಎದುರಾಗಲಿದೆ.

ಜಿಲ್ಲೆಯ ಸಿರುಗುಪ್ಪದಲ್ಲಿ 75, ಬಳ್ಳಾರಿಯಲ್ಲಿ 70, ಕುರುಗೋಡಿನಲ್ಲಿ 2,  ಕಂಪ್ಲಿಯಲ್ಲಿ 21, ಹೊಸಪೇಟೆಯಲ್ಲಿ 1 ಅಕ್ಕಿ ಗಿರಣಿ ಇದ್ದು, ಮುಷ್ಕರದಿಂದಾಗಿ ಸಾವಿರಾರು ಜನ ­­ಕಾರ್ಮಿಕರು ಸಮಸ್ಯೆ ಎದುರಿಸುವಂತಾಗಿದೆ.

ಬಳ್ಳಾರಿ: ಅಕ್ಕಿ ಗಿರಣಿ ಮಾಲೀಕರಿಂದ ಪ್ರತಿಭಟನೆ
ಬಳ್ಳಾರಿ:
ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇರುವ ಅಕ್ಕಿ ಗಿರಣಿ ಮಾಲೀ­ಕರು, ಸರ್ಕಾರ ನಿಗದಿ ಮಾಡಿರುವ ಪ್ರಮಾಣದಲ್ಲಿ ಲೆವಿ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ಸೋಮವಾರ ಗಿರಣಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರವು ಇದೀಗ ಹೊರಡಿಸಿರುವ ಲೆವಿ ಆದೇಶವು 1999ರಲ್ಲಿನ ಲೆವಿ ಪದ್ಧತಿಯ ಮುಂದು­ವರಿದ ಭಾಗವಾಗಿದ್ದು, ಅವೈಜ್ಞಾನಿ­ಕವಾ­ಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ರಾಜ್ಯ ಸರ್ಕಾರವು ‘ಅನ್ನಭಾಗ್ಯ’ ಯೋಜನೆ ಅಡಿ ಬಡ ಕುಟುಂಬಗಳಿಗೆ ನೀಡಲು ಮಾರ್ಚ್‌ ಒಳಗೆ 5 ಲಕ್ಷ ಟನ್‌ ಅಕ್ಕಿಯನು್ನ ಲೆವಿ ರೂಪದಲ್ಲಿ ನೀಡುವಂತೆ ಆದೇಶಿಸಿದೆ. ಆದರೆ, 2 ಲಕ್ಷ ಟನ್‌ ಅಕ್ಕಿ ನೀಡಲು ಸಾಧ್ಯ ಎಂದು ತಿಳಿಸಿದ ಅಕ್ಕಿ ಗಿರಣಿ ಮಾಲೀಕರು, ವಾರ್ಷಿಕ 13.50 ಲಕ್ಷ ಟನ್‌ ಅಕ್ಕಿಯನ್ನು ಪಡೆಯುವುದು ಅವೈಜ್ಞಾನಿಕ ಎಂದು ಅವರು ತಿಳಿಸಿದರು.

ಸರ್ಕಾರ ನಿಗದಿ ಮಾಡಿರುವ ದರದಲ್ಲಿ ಅಕ್ಕಿ ನೀಡಿದರೆ ಗಿರಣಿ ಮಾಲೀಕರಿಗೆ ತೀವ್ರ ನಷ್ಟವಾಗಲಿದೆ. ಪ್ರಸಕ್ತ ಸಾಲಿನಲ್ಲಿ ಪ್ರತಿ ಕ್ವಿಂಟಲ್‌ ಭತ್ತಕ್ಕೆ ರೂ1310 ಬೆಂಬಲ ಬೆಲೆ, ರೂ290 ಪ್ರೋತ್ಸಾಹ ಧನ ನಿಗದಿ ಮಾಡಲಾ­ಗಿದ್ದು, ಪ್ರತಿ ಕ್ವಿಂಟಲ್‌ಗೆ ರೂ1600 ನೀಡಿ ರೈತರಿಂದ ಭತ್ತ ಖರೀದಿಸಲು ಆದೇಶಿಸಿಲಾಗಿದೆ.

ಭತ್ತದ ಬೆಲೆಯ ಆಧಾರದ ಮೇಲೆ ಪ್ರತಿ ಕ್ವಿಂಟಲ್‌ ಲೆವಿ ಅಕ್ಕಿಗೆ ರೂ2650 ಬೆಲೆ ಆಗುತ್ತದೆ. ಆದರೆ, ಸರ್ಕಾರ ಪ್ರತಿ ಕ್ವಿಂಟಲ್‌ಗೆ ಕೇವಲ ರೂ2400 ನಿಗದಿ ಮಾಡಿರು­ವು­ದರಿಂದ ನಷ್ಟ ಉಂಟಾ­ಗಲಿದೆ ಎಂದು ಹೇಳಿ­ದರು. 2005– -06ರಲ್ಲಿ ಸೋನಾ ಮಸೂರಿ ಭತ್ತ ಬೆಳೆ­ಯುವ ಕೆಲವು ಜಿಲ್ಲೆಗಳಿಗೆ ಲೆವಿಯಿಂದ ವಿನಾಯ್ತಿ ನೀಡಲಾಗಿದೆ. ರಾಜ್ಯದ ಬಹುತೇಕ ಕಡೆ ರೈತರು ಸೋನಾ ಮಸೂರಿ ಭತ್ತ ಬೆಳೆಯುತ್ತಿದ್ದು, ಲೆವಿ ವಿನಾಯ್ತಿಗೆ ಎಲ್ಲ ಜಿಲ್ಲೆಗ­ಳನ್ನೂ ಪರಿಗಣಿಸಬೇಕು ಎಂದು ಕೋರಲಾಯಿತು.

ರಾಜ್ಯದಲ್ಲಿ ಬೆಳೆಯುವ ಒಟ್ಟು ಭತ್ತದಲ್ಲಿ ವರ್ತಕರ ಮೂಲಕ ಹೊರ ರಾಜ್ಯಗಳಿಗೆ  ಶೇ 35ರಷ್ಟು ಭತ್ತ ಮಾರಾಟವಾಗುತ್ತಿದೆ. ಈ ಭತ್ತಕ್ಕೆ ಕಾನೂನಿನಲ್ಲಿ ಲೆವಿ ವಸೂಲಿ ಮಾಡಲು ಅವಕಾ­ಶವಿದ್ದರೂ, ಲೆವಿ ವಸೂಲಿ ಮಾಡದೆ, ಕೇವಲ ಅಕ್ಕಿ ಗಿರಣಿಗಳಿಗೆ ಮಾತ್ರ ಲೆವಿ ನಿಗದಿ ಮಾಡಿರು­ವುದು ಸರಿಯಲ್ಲ ಎಂದು ಅವರು ದೂರಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಪ್ರತಿಭಟನಾ ಮೆರ­ವಣಿಗೆ ಆರಂಭಿಸಿದ ಅಕ್ಕಿ ಗಿರಣಿ ಮಾಲೀಕರು ಹಾಗೂ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕುರಿತ ಮನವಿ ಸಲ್ಲಿಸಿದರು. ಅಕ್ಕಿ ಗಿರಣಿ ಮಾಲೀಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಬಿ.ರಮೇಶಗೌಡ, ಕಾರ್ಯದರ್ಶಿ ಗೋವಿಂದ ನಾರಾ­ಯಣ, ಉಪಾಧ್ಯಕ್ಷ ಫಕೀರಪ್ಪ, ಮಂಗಲ್ ಸೇಟ್, ಸಾಯಿ ಪವನ್, ಶ್ರೀನಿ­ವಾಸ್, ರಾಮು, ರಮೇಶ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಜಿಲ್ಲೆಯ ಸಿರುಗುಪ್ಪ, ಕಂಪ್ಲಿ, ಹೊಸಪೇಟೆ ಭಾಗದಿಂದಲೂ ಅಕ್ಕಿ ಗಿರಣಿ ಮಾಲೀಕರು ಹಾಗೂ ಕಾರ್ಮಿಕರು ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT