ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಲೇಖಕನ ಬಂಧನ ಅಪಾಯದ ಸಂಕೇತ'

Last Updated 1 ಸೆಪ್ಟೆಂಬರ್ 2013, 20:17 IST
ಅಕ್ಷರ ಗಾತ್ರ

ಬೆಂಗಳೂರು: `ಸಮಾಜದಲ್ಲಿ ಸೃಜನಶೀಲತೆಯನ್ನು ಹೊಸಕಿಹಾಕುವ ಕರಿನೆರಳು ಅವ್ಯಾಹತವಾಗಿ ಬೆಳೆಯುತ್ತಿದೆ. ಲೇಖಕ ಉಳಿದರೆ ಮಾತ್ರ ಅವನ ಸಾಹಿತ್ಯ, ಸೃಜನಶೀಲತೆ ಉಳಿಯಲು ಸಾಧ್ಯವಾಗುತ್ತದೆ' ಎಂದು ಲೇಖಕಿ ಬಾನು ಮುಷ್ತಾಕ್ ಹೇಳಿದರು.

ಸ್ನೇಹ ಬುಕ್ ಹೌಸ್ ಮತ್ತು ಶುಭದ ಪ್ರಕಾಶನವು ನಗರದ ಯವನಿಕ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜರಗನಹಳ್ಳಿ ಶಿವಶಂಕರ್ ಅವರ `ವಚನ ಧ್ಯಾನ', `ಹೊಳೆ', `ಚಾತಕ' ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಢುಂಢಿ ಕೃತಿಯ ಲೇಖಕ ಯೋಗೇಶ್ ಮಾಸ್ಟರ್ ಯಾರೆಂದು ನನಗೆ ಗೊತ್ತಿಲ್ಲ. ಆದರೆ, ಆತ ಒಬ್ಬ ಬರಹಗಾರ. ಧಾರ್ಮಿಕತೆಯನ್ನು ವಾಸ್ತವದಲ್ಲಿ ತೆರೆದಿಟ್ಟಿದ್ದಾರೆ ಎಂಬುದು ಮಾತ್ರ ತಿಳಿದಿದೆ. ದೇಶದಲ್ಲಿ ಯಾವುದೇ ಬರಹಗಾರನ ಸೃಜನಶೀಲತೆಯನ್ನು ಕಟ್ಟಿಹಾಕುವಂತಿಲ್ಲ' ಎಂದು ಅವರು ಪ್ರತಿಪಾದಿಸಿದರು.

`ಇಂದು ರಾಜ್ಯದಲ್ಲಿ ಬರವಣಿಗೆಯ ಕಾರಣಕ್ಕಾಗಿ ಒಬ್ಬ ಲೇಖಕನ ಬಂಧನವಾಗಿದೆ. ವಿಧಾನಸೌಧದಲ್ಲಿ ಕುಳಿತು ಅಶ್ಲೀಲ ಚಿತ್ರಗಳನ್ನು ನೋಡಿದವರಿಗೆ ಯಾವುದೇ ಶಿಕ್ಷೆಯಿಲ್ಲ. ಆದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವ ರೀತಿಯಲ್ಲಿ ಬರೆದಿದ್ದಾರೆ ಎಂದು ಆರೋಪಿಸಿ ಒಬ್ಬ ಲೇಖಕನನ್ನು ಬಂಧಿಸಿದ್ದಾರೆ. ಹೀಗೆ ಬಂಧಿಸುವುದು ಆರಂಭ ಮಾತ್ರವಾಗಿದೆ. ನಂತರ ಇದೇ ಸಂಪ್ರದಾಯವಾಗುತ್ತದೆ' ಎಂದರು.

`ಒಂದು ಕೃತಿಯ 200 ಪ್ರತಿಗಳು ಪ್ರಕಟವಾದರೆ, ಧರ್ಮ ಹಾಳಾಗುತ್ತದೆಯೇ? ಧರ್ಮ ಅಷ್ಟು ಶಿಥಿಲವಾಗಿದೆಯೇ' ಎಂದು ಪ್ರಶ್ನಿಸಿದ ಅವರು, `ಸಾಹಿತಿ ಎಸ್.ಎಲ್. ಭೈರಪ್ಪನವರ ಆವರಣ ಮತ್ತು ಕವಲು ಕೃತಿಗಳು ಮನಸ್ಸಿಗೆ ತುಂಬಾ ನೋವುಂಟು ಮಾಡಿದ ಕೃತಿಗಳು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಪ್ರಕರಣವನ್ನು ಅವರ ಮೇಲೆ ದಾಖಲಿಸುವ ಸಾಧ್ಯತೆಯಿತ್ತು. ಆದರೆ, ವೈಯಕ್ತಿಕವಾಗಿ ಅವರ ಮೇಲೆ ಗೌರವವಿದ್ದು, ಅವರ ಜತೆ ಆರೋಗ್ಯಕರವಾದ ರೀತಿಯಲ್ಲಿ ವಾಗ್ವಾದ ನಡೆಸಿದೆವು. ಹೀಗೆ ಕೃತಿಗಳ ಬಗ್ಗೆ ಸತ್ಯಾಸತ್ಯತೆಯನ್ನು ಪರಾಮರ್ಶಿಸಬೇಕು. ಯಾವುದೇ ಕೃತಿಯನ್ನು ಸಂಪೂರ್ಣವಾಗಿ ಓದದೆ ಬಹಿಷ್ಕಾರ ಹಾಕುವುದು ಸರಿಯಲ್ಲ' ಎಂದು ಹೇಳಿದರು.

`ಈ ಸಮಯವು ಲೇಖಕರ ಸಾಹಿತ್ಯ ಮತ್ತು ಅಸ್ತಿತ್ವದ ಉಳಿಯುವಿಕೆಯ ಪ್ರಶ್ನೆಯಾಗಿದೆ. ಬಹು ಸಂಸ್ಕೃತಿಯ ದೇಶವಾದ ಭಾರತದಲ್ಲಿ ಒಂದಲ್ಲ ಒಂದು ವಿಷಯಗಳಿಂದ ನೋವಾಗುತ್ತದೆ. ಅದೇ ಕಾರಣವನ್ನು ನೀಡಿ, ಸೃಜನಶೀಲತೆ ಮತ್ತು ಬರವಣಿಗೆಯನ್ನು ನಿಲ್ಲಿಸಿಬಿಡಬೇಕೆ?' ಎಂದು ಅವರು ಪ್ರಶ್ನಿಸಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಾಹಿತಿ ಚಂದ್ರಶೇಖರ ಕಂಬಾರ ಅವರು, `ಪ್ರಜಾಪ್ರಭುತ್ವದಲ್ಲಿ ಯಾವುದೇ ಲೇಖಕನ ಪುಸ್ತಕದ ಮುಟ್ಟುಗೋಲು ಸರಿಯಲ್ಲ. ಅದನ್ನು ಸಹಿಸಲು ಸಾಧ್ಯವಿಲ್ಲ. ಈ ಕುರಿತು ಯಾವುದೇ ಪ್ರತಿಭಟನೆ ಕೈಗೊಂಡರೆ ನಾವೂ ಜತೆ ಸೇರುತ್ತೇವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT