ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖನ ಬಹುಭಾಷಿಕರ ಮಿಲನ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕೇವಲ ಭೀಷಣ ಭಾಷಣಗಳಿಲ್ಲಿ ಇಲ್ಲ. ಚರ್ವಿತ ಚರ್ವಣ ಎನ್ನುವ ಮಾಹಿತಿಯೂ ಇಲ್ಲಿ ಸಿಗುವುದಿಲ್ಲ. ಬಂದವರೆಲ್ಲ ಹೊಸ ಭಾಷಿಕರು. ಓದಿದ್ದೆಲ್ಲವೂ ಹೊಸತು. ಅರ್ಥವಾಗದಿದ್ದರೆ ಅನುವಾದಕರೂ ಸಹಾಯಕ್ಕಿದ್ದಾರೆ. ಹಾಗೇಂತ ಇದು ಕೇವಲ ಒಂದೆರಡು ಭಾಷೆಗಳ ಸಂಭ್ರಮವಲ್ಲ. ಇದು 13 ಭಾಷೆಗಳ ಸಂಗಮ. 48 ಜನ ಲೇಖಕರ ಸಂಭ್ರಮ. 

ಇದು `ಲೇಖನ~ ವಾರಾಂತ್ಯಕ್ಕೆ ಆಯೋಜಿಸಿರುವ ಸಾಹಿತ್ಯ ಸಮ್ಮಿಲನ.  ಬೆಂಗಾಳಿ, ಡ್ಯಾನಿಷ್, ಇಂಗ್ಲಿಷ್, ಫ್ರೆಂಚ್, ಜರ್ಮನ್, ಹಿಂದಿ, ಇಟಾಲಿಯನ್, ಕನ್ನಡ, ಮಲಯಾಳಂ, ಮರಾಠಿ, ತಮಿಳು, ತುಳು ಹಾಗೂ ಉರ್ದು ಭಾಷಿಗರಿಂದ ವಾಚನ, ಶ್ರವಣ.

`ಬೆಂಗಳೂರಿನಲ್ಲಿ ಸಾಕಷ್ಟು ಸಾಹಿತ್ಯದ ಸಭೆ ಸಮ್ಮೇಳನಗಳು ನಡೆಯುತ್ತವೆ. ಹೆಚ್ಚಾಗಿ ಅವು ಭಾಷಾಧಾರಿತ. ನಿರ್ದಿಷ್ಟ ಭಾಷಿಗರಷ್ಟೇ ಒಟ್ಟಾಗುತ್ತಾರೆ. ಅಲ್ಲಿಗೇ ಆ ಸಭೆ ಸೀಮಿತವಾಗುತ್ತದೆ. ಸಾಹಿತ್ಯವನ್ನು ಇನ್ನೊಂದು ಸಂಸ್ಕೃತಿಗೆ ಪರಿಚಯಿಸುವ ಅವಕಾಶದಿಂದ ವಂಚಿತನನ್ನಾಗಿ ಮಾಡುತ್ತದೆ.
 
ಅನ್ಯ ಸಾಹಿತ್ಯದ ಸನ್ನಿವೇಶಗಳು, ನಡೆಯುತ್ತಿರುವ ಬದಲಾವಣೆಗಳು, ಅವರು ಎದುರಿಸುವ ಸಮಸ್ಯೆಗಳ ಅರಿವು ಎಲ್ಲರಿಗೂ ತಿಳಿಯಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎನ್ನುತ್ತಾರೆ ವಿವೇಕ ಶಾನಭಾಗ.

ನಗರದ ಸಾಹಿತಿಗಳನ್ನು ಒಂದೆಡೆ ತರುವ ನಿಟ್ಟಿನಲ್ಲಿ ಇದು ನಮ್ಮ ಮೊದಲ ಹೆಜ್ಜೆ. ಅದರಲ್ಲಿ 48 ಹೆಸರುಗಳನ್ನು ಮಾತ್ರ ಹೆಸರಿಸಲಾಗಿದೆ ಎಂದ ಮಾತ್ರಕ್ಕೆ ಅಷ್ಟೇ ಜನ ಪಾಲ್ಗೊಳ್ಳುತ್ತಾರೆ ಎಂದಲ್ಲ. ಅದು ಪ್ರಾತಿನಿಧಿಕ ಸಂಖ್ಯೆ ಮಾತ್ರ. ಸಂವಾದಗಳು ಹೆಚ್ಚು ನಡೆದಷ್ಟೂ ಕಾರ್ಯಕ್ರಮದ ಕಳೆ ಹೆಚ್ಚುತ್ತದೆ. ಇಲ್ಲಿ ಸಿಗುವ ಪ್ರತಿಕ್ರಿಯೆ ನೋಡಿ ಮುಂದಿನ ನಡೆ ನಿರ್ಧರಿಸಲಾಗುವುದು ಎನ್ನುತ್ತಾರವರು.

ಪಟ್ಟಣದಲ್ಲಿ ಎಲ್ಲಾ ಯುವ-ಹಳೆಯ ಲೇಖಕರನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ವಾರಾಂತ್ಯ `ಲೇಖನ~ ಕಾರ್ಯಕ್ರಮದ ಶುಕ್ರವಾರ, ಶನಿವಾರ, ಹಾಗೂ ಭಾನುವಾರ (ಫೆ.10ರಿಂದ 12) ಎನ್‌ಜಿಎಂಎ ಹಾಗೂ ಸ್ಮೃತಿ ನಂದನ್‌ನಲ್ಲಿ ಈ ಸಮ್ಮಿಲನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಗೋಷ್ಠಿ, ಸ್ಥಳೀಯ ಲೇಖಕರಿಂದ ಬರಹಗಳ ವಾಚನ, ನಾಟಕ, ಪುಸ್ತಕ ಪ್ರದರ್ಶನ, ಯುವ ಬರಹಗಾರರಿಗೆ ಹಾಗೂ ಛಾಯಾಚಿತ್ರಗ್ರಾಹಕರಿಗೆ ಸ್ಪರ್ಧೆಯೂ ನಡೆಯಲಿದೆ. ಟ್ರಾನ್ಸ್‌ಲೇಷನ್ ಆ್ಯಸ್ ಕನ್ವರ್ಸೇಶನ್, ಬರವಣಿಗೆ ಕುರಿತ ಬರಹಗಳು, ನಗರದ ಸಂಸ್ಕೃತಿ, ಕನ್ನಡದ ಹೊಸ ಬರವಣಿಗೆಗಳು, ಆತ್ಮಕಥನ, ಸಣ್ಣ ಕತೆಗಳು ನೀಡುವ ಖುಷಿ, ಬರಹದಲ್ಲಿ ಎದುರಾಗುವ ತೊಡಕುಗಳು-ಮೂರು ದಿನಗಳಲ್ಲಿ ಚರ್ಚೆಯಾಗುವ ಪ್ರಮುಖ ವಿಷಯಗಳು.
ಬೆಂಗಳೂರು ಬಹುಭಾಷಿಕರ ನಗರ. ಎಲ್ಲಾ ವರ್ಗದ ಸಾಹಿತಿಗಳಿಗೆ ಆಶ್ರಯತಾಣವಾದ ಕಾರಣಕ್ಕೆ ಅದೇ (ದಿ ಸಿಟಿ) ಚರ್ಚೆಯ ವಿಷಯವಾಗಲಿದೆ.
 
ಆ ಸಂಜೆ 4ಕ್ಕೆ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ `ನಗರದ ಸಾಹಿತ್ಯ~ (ದಿ ಸಿಟಿ ಇನ್ ಲಿಟ್ರೇಚರ್) ಗೋಷ್ಠಿಯಲ್ಲಿ ಎಂ.ಕೆ.ರಾಘವೇಂದ್ರ, ಅಂಜುಮ್ ಹಾಸನ್, ಜ್ಯಾಕ್ ಓ~ಯಾ, ಕೆ.ಆರ್.ಉಷಾ, ಸಾನಿಯಾ ಪಾಲ್ಗೊಳ್ಳುವರು.

ಕಲೆ, ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಂಗಳೂರು ಭಾರತದ ಇತರೆ ನಗರಗಳಿಂದ ವಿಭಿನ್ನವಾಗಿ ನಿಲ್ಲಲು ಕಾರಣಗಳೇನು, ಅನ್ಯ ಭಾಷೆ ಸಾಹಿತಿಗಳು ನಗರದಲ್ಲಿ ನೆಲೆಸುವ ಅವಧಿ ಎಷ್ಟು, ಲೇಖಕರ ಆರ್ಥಿಕ ಸ್ಥಿತಿಗಳು ಹಾಗೂ ಅವು ಬರಹಗಳ ಮೇಲೆ ಬೀರುವ ಪರಿಣಾಮಗಳು, ಅವರ ಲೇಖನಗಳ ಮೇಲೆ ಇಲ್ಲಿನ ಸಂಸ್ಕೃತಿ ಬೀರುವ ಪ್ರಭಾವಗಳು- ಗೋಷ್ಠಿಯಲ್ಲಿ ಚರ್ಚೆಯಾಗುವ ಅಂಶಗಳು.

ಶುಕ್ರವಾರ ಸಂಜೆ 4ಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಖಲೀನ್ ರೆಹಮಾನ್ ಹಾಗೂ ಗೋಪಾಲಕೃಷ್ಣ ಪೈ ಕೃತಿಯ ಆಯ್ದ ಭಾಗವನ್ನು ಓದುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಟೊಟೊ ಫಂಡ್ಸ್ ಆಫ್ ಆರ್ಟ್ಸ್, ಸಂಗಮ್ ಹೌಸ್, ದೇಶಕಾಲ ಹಾಗೂ ರೀಡಿಂಗ್ ಹವರ್ಸ್‌, ನ್ಯಾಶನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಕಾರ್ಯಕ್ರಮವನ್ನು ಆಯೋಜಿಸಿವೆ.  ಅಂದ ಹಾಗೆ ಸಾಹಿತ್ಯಾಸಕ್ತರಿಗೆ ಮುಕ್ತವಾಗಿರುವ `ಲೇಖನ~ ನಗರದ ಬರಹಗಾರರ ಮೊದಲ ಸಾಹಿತ್ಯ ಹಬ್ಬ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT