ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಸರ್ ಲೇವಲ್‌ನಿಂದ ನೀರಿನ ಸಮರ್ಥ ಬಳಕೆ

Last Updated 13 ಜುಲೈ 2012, 7:20 IST
ಅಕ್ಷರ ಗಾತ್ರ

ಸುರಪುರ: ಜಮೀನು ಸಮತಟ್ಟು ಮಾಡುವಲ್ಲಿ ಲೇಸರ್ ಲೇವಲರ್ ಒಂದು ಅದ್ಭುತ ಅವಿಷ್ಕಾರ. ಈ ಲೇವಲರ್ ಭೂಮಿಯನ್ನು ಜೀರೋ ಲೆವಲ್‌ನಲ್ಲಿ ಸಮತಟ್ಟು ಮಾಡುತ್ತದೆ. ಇದರಿಂದ ನೀರಿನ ಬಳಕೆ ಸಮರ್ಥವಾಗಿ ಬಳಕೆಯಾಗುತ್ತದೆ.

ಖರ್ಚು ಕಡಿಮೆ. ನೀರು ಸಮರ್ಪಕವಾಗಿ ಎಲ್ಲೆಡೆ ಒಂದೆ ಲೆವಲ್‌ನಲ್ಲಿ ಹರಿದಾಡುವುದರಿಂದ ಇಳುವರಿ ಹೆಚ್ಚಿಗೆ ಬರುತ್ತದೆ. ಭೂಮಿ ಸವಳು ಜವಳಾಗುವುದಿಲ್ಲ ಎಂದು ಕೃಷಿ ವಿಜ್ಞಾನಿ ಡಾ. ಪ್ರಕಾಶ ಕುಚನೂರ್ ವಿವರಿಸಿದರು.

ತಾಲ್ಲೂಕಿನ ಹಾವಿನಾಳ ಗ್ರಾಮದಲ್ಲಿ ಭೀಮರಾಯನಗುಡಿಯ ಕೃಷಿ ಕಾಲೇಜಿನ ಗ್ರಾಮೀಣ ಕಾರ್ಯಾನುಭವದ ವಿದ್ಯಾರ್ಥಿಗಳು ಗುರುವಾರ ಏರ್ಪಡಿಸಿದ್ದ ಲೇಸರ್ ಲೇವಲ್‌ನಿಂದ ಭೂಮಿ ಸಮತಟ್ಟು ಮಾಡುವ ಪ್ರಾತಕ್ಷಿಕೆಯ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.

ಒಣ ಬೇಸಾಯದಲ್ಲೂ ಲೇಸರ್ ಲೇವಲರ್‌ನಿಂದ ಸಮತಟ್ಟು ಮಾಡಿದ ಭೂಮಿ ಫಲವತ್ತತೆ ಉಳಿಸಿಕೊಂಡು ಉಪಯುಕ್ತವಾಗುತ್ತದೆ. ಬೇಸಾಯ ಕ್ಷೇತ್ರದ ಹೆಚ್ಚಳ ಆಗುತ್ತದೆ. ನೀರಿನ ಬಳಕೆ ಶೇಕಡಾ 30 ರಷ್ಟು ಕಡಿಮೆಯಾಗುತ್ತದೆ. ನೀರಾವರಿ ಕ್ಷಮತೆ ಮತ್ತು ಉತ್ಪಾದಕತೆ ಹೆಚ್ಚುತ್ತದೆ. ಪೋಷಕಾಂಶಗಳ ಸಮರ್ಥ ಬಳಕೆಯಾಗುತ್ತದೆ ಎಂದರು.

ಭೂಮಿ ಹೆಚ್ಚು ಇಳಿಜಾರುವಿನಿಂದ ಕೂಡಿದ್ದರೆ ಬುಲ್ಡೋಜರ್‌ನಿಂದ ತಕ್ಕ ಮಟ್ಟಿಗೆ ಸಮತಟ್ಟು ಮಾಡಬೇಕು. ನಂತರ ಲೇಸರ್ ಲೆವಲ್‌ನಿಂದ ಲೇವಲಿಂಗ್ ಮಾಡಬೇಕು. ಬೂಮಿಯ ಇಳಿಜಾರು ಅರಿಯಲು ಭೂಮೇಲ್ಮೈ ಸರ್ವೆ ಮಾಡಿ ಭೂಮಿಯ ಸರಾಸರಿ ಎತ್ತರ ಕಂಡುಕೊಳ್ಳಬೇಕು. ಲೇಸರ್ ನಿಯಂತ್ರಿತ ಮಣ್ಣು ಎಳೆಯುವ ಸಾಧನವನ್ನು ಮಟ್ಟ ಮಾಡುವ ಭೂಮಿಯ ಸರಾಸರಿ ಎತ್ತರಕ್ಕೆ ಜೋಡಿಸಬೇಕು ಎಂದು ಮಾಹಿತಿ ಒದಗಿಸಿದರು.

ಮಟ್ಟ ಮಾಡುವ ಭೂಮಿಯ ಸರಾಸರಿ ಎತ್ತರವನ್ನು ನಿಯಂತ್ರಣ ಪೆಟ್ಟಿಗೆಗೆ ನೊಂದಾಯಿಸಬೇಕು. ಟ್ರ್ಯಾಕ್ಟರ್‌ನ್ನು ಎತ್ತರದ ಪ್ರದೇಶದಿಂದ ತಗ್ಗು ಪ್ರದೇಶದ ಕಡೆಗೆ ವೃತ್ತಾಕಾರಾದಲ್ಲಿ ಚಲಿಸಬೇಕು. ಮಟ್ಟ ಮಾಡಬೇಕಿರುವ ಭೂಮಿಯನ್ನು ವೃತ್ತಾಕಾರದಲ್ಲಿ ಲೇವಲ್ ಮಾಡಿ ಮುಗಿಸಿದ ನಂತರ ಅಂತಿಮ ಲೇವಲಿಂಗ್‌ನ್ನು ಎತ್ತರದ ಪ್ರದೇಶದಿಂದ ತಗ್ಗು ಪ್ರದೇಶದ ಕಡೆಗೆ ಉದ್ದುದ್ದಾಗಿ ಕೈಗೊಳ್ಳಬೇಕು. ಆಗ ಭೂಮಿ ಜೀರೋ ಲೆವಲ್ ಸಮತಟ್ಟಾತ್ತದೆ ಎಂದು ವಿವರಿಸಿದರು.

ವಿದ್ಯಾರ್ಥಿಗಳಾದ ಪವನಕುಮಾರ ಚಿಮಕೋಡೆ, ಪಿ. ಎಸ್. ಭರತ್, ವೆಂಕಟೇಶ ಜವಳಿ, ಶಿವಾನಂದ ಪಾಟೀಲ, ಗೌಸುದ್ದೀನ್, ಬಾಲಾಜಿ, ಮುರುಳಿ, ಬಿ. ಲೋಕೇಶ, ಧರ್ಮರಾಜ ಹಣಮಶೆಟ್ಟಿ, ಅನಿಲ ಪಾಟೀಲ, ರಾಮನಗೌಡ ಹೊನ್ನೂರ್ ಪ್ರಾತ್ಯಕ್ಷಕೆ ನಡೆಸಿಕೊಟ್ಟರು. ಸುತ್ತಮುತ್ತಲಿನ ರೈತರು ಇದರ ಲಾಭ ಪಡೆದುಕೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT