ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಅಲ್ಪಸಂಖ್ಯಾತರಿಗೆ ವಿಶೇಷ ವಿವಾಹ ಕಾಯ್ದೆ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಲೈಂಗಿಕ ಅಲ್ಪಸಂಖ್ಯಾತರಿಗಾಗಿ ವಿಶೇಷ ವಿವಾಹ ಕಾಯ್ದೆಯನ್ನು ರೂಪಿಸುವತ್ತ ಆಡಳಿತ ವ್ಯವಸ್ಥೆ ಚಿಂತನೆ ನಡೆಸಬೇಕು~ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಸಂರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತ ಪ್ರಾದೇಶಿಕ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

`ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಕೂಲಕಂಷವಾಗಿ ಅಧ್ಯಯನ ನಡೆಸಲು ಮದ್ರಾಸ್ ಹೈಕೋರ್ಟ್ ವಿಶೇಷ ಅಧಿಕಾರಿಯನ್ನು ನೇಮಿಸಿದೆ. ಇಂತಹ ವ್ಯವಸ್ಥೆ ಎಲ್ಲಾ ರಾಜ್ಯಗಳಲ್ಲೂ ಜಾರಿಯಾಗಬೇಕಿದೆ~ ಎಂದು ಅಭಿಪ್ರಾಯಪಟ್ಟರು.

`ಪ್ರತಿಯೊಬ್ಬರು ಸಂವಿಧಾನದತ್ತ ಹಕ್ಕುಗಳನ್ನು ಪಡೆದಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಸಾಮಾಜಿಕ ಕಳಂಕವೆಂದು ಭಾವಿಸಿರುವುದು ವಿಪರ್ಯಾಸ. ಈ ಬಗ್ಗೆ ಜನರ ಮನೋಸ್ಥಿತಿ ಬದಲಾಗದೇ ಇದ್ದರೆ ಅಲ್ಪಸಂಖ್ಯಾತರು ಉತ್ತಮ ಜೀವನ ನಡೆಸಲು ಸಾಧ್ಯವಿಲ್ಲ~ ಎಂದು ಹೇಳಿದರು.

`ಲಿಂಗದ ವಿಷಯದಲ್ಲಿ ತೊಳಲಾಟ ಅನುಭವಿಸುವ ಅಲ್ಪಸಂಖ್ಯಾತರು ಜೀವನದ ವಿವಿಧ ಹಂತಗಳಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಕಷ್ಟಪಡುತ್ತಾರೆ. ಅವರ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಸಮಾಜವು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕಿದೆ~ ಎಂದರು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಂಜಿತ್ ಸೇನ್, `ಪ್ರತಿ ಹಂತದಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಈ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸರ್ಕಾರ ಮತ್ತು ಸ್ವಯಂ ಸೇವಾ ಸಂಘಗಳ ಪಾತ್ರ ಮಹತ್ತರವಾಗಿದೆ~ ಎಂದು ಹೇಳಿದರು.

`ಲೈಂಗಿಕ ಅಲ್ಪಸಂಖ್ಯಾತರಾಗುವುದೇ ಒಂದು ನೈಸರ್ಗಿಕ ಪ್ರಕ್ರಿಯೆ. ಅದನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಬದಲಿಗೆ ಉದಾರ ಮನಸ್ಸಿನಿಂದ ಒಪ್ಪಿಕೊಳ್ಳಬೇಕಾದ ಅಗತ್ಯವಿದೆ~ ಎಂದರು. `ಇತರರಂತೆ ಅವರಿಗೂ ಉತ್ತಮ ಜೀವನ ಕಲ್ಪಿಸುವ ಅಗತ್ಯವಿದ್ದು, ಸಾಮಾಜಿಕ ಮತ್ತು ಆರ್ಥಿಕವಾಗಿ ಅವರನ್ನು ಸಧೃಡಗೊಳಿಸುವತ್ತ ಸಮಾಜ ಹೆಜ್ಜೆ ಹಾಕಬೇಕಿದೆ~ ಎಂದರು.

ನ್ಯಾಯಮೂರ್ತಿಗಳಾದ ಎನ್.ಕೆ.ಪಾಟೀಲ್, ಮಂಜುಳಾ ಚೆಲ್ಲೂರು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT