ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯಕ್ಕೆ ಮಕ್ಕಳು: ಆತಂಕ

Last Updated 7 ಜುಲೈ 2013, 11:30 IST
ಅಕ್ಷರ ಗಾತ್ರ

ಗದಗ: ಜಗತ್ತಿನಲ್ಲಿ ಶೇ 53 ರಷ್ಟು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಜಿಲ್ಲಾ ಮತ್ತು ಸೇಷನ್ಸ್  ನ್ಯಾಯಾಧೀಶ  ಟಿ.ಎಚ್.ಆವಿನ ಹೇಳಿದರು.

ನಗರದ ತೋಂಟದಾರ್ಯ ಪ್ರೌಢಶಾಲೆಯಲ್ಲಿ ಶನಿವಾರ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ವಿದ್ಯಾರ್ಥಿಗಳಿಗಾಗಿ ಕಾನೂನು ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, 15 ರಿಂದ 19 ವರ್ಷದ ಮಕ್ಕಳಿಗೆ ಪ್ರಮುಖ ಘಟ್ಟವಾಗಿದ್ದು, ಈ ಸಂದರ್ಭದಲ್ಲಿ ಮಕ್ಕಳನ್ನು ಯಾವುದೇ ಪ್ರಲೋಭಕ್ಕೆ ಒಳಗಾಗದಂತೆ ನೋಡಿಕೊಳ್ಳುವದು ಅವಶ್ಯಕವಾಗಿದೆ. ಸಂಬಂಧಿಕರಿಂದಲೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ.

ದೌರ್ಜನ್ಯಕ್ಕೊಳಗಾದ ಮಕ್ಕಳು ಊಟ, ಮಾತನಾಡುವುದು ಕಡಿಮೆ. ಮಕ್ಕಳು ಪಾಲಕರಲ್ಲಿ ಲೈಂಗಿಕ ವಿಷಯಗಳ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಪಾಲಕರು ಮಕ್ಕಳಿಗೆ ಮುಕ್ತವಾಗಿ ಮಾತನಾಡುವಂತಹ  ವಾತಾವರಣ ನಿರ್ಮಾಣ ಮಾಡುವುದರಿಂದ ಹಾಗೂ ಅಪರಿಚಿತ ವ್ಯಕ್ತಿಗಳೊಂದಿಗೆ ಬೆರೆಯದಂತೆ ನೋಡಿಕೊಳ್ಳುವುದರಿಂದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಕಡಿಮೆ ಮಾಡಬಹುದು ಎಂದು ಹೇಳಿದರು.

ಮಕ್ಕಳನ್ನು ಕಡೆಗಣಿಸುವುದರಿಂದ ಮಾದಕ ವಸ್ತು ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಇದರಿಂದ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ರಕ್ತದೊತ್ತಡ, ಅಧಿಕ ರಕ್ತಸ್ರಾವ, ನಿಶ್ಯಕ್ತಿಯಿಂದ ಬಳಲುತ್ತಾರೆ. ಮಾದಕ ವ್ಯಸನದಿಂದ ದೂರು ಮಾಡಿ ಮಕ್ಕಳ ಮನಪರಿವರ್ತಿಸಲು ಪಾಲಕರು ಶ್ರಮವಹಿಸಬೇಕು ಎಂದು ಹೇಳಿದರು.

ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದರು. ಮಾದಕ ವಸ್ತು ಸೇವನೆ, ಬಾಲ ಕಾರ್ಮಿಕ ಪದ್ದತಿ, ಮಕ್ಕಳ ಕಾನೂನು, ಗುಟ್ಕಾ ನಿಷೇಧ, ಸಾರಾಯಿ ನಿಷೇಧ ಹಾಗೂ ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ ಕುರಿತು ಮಕ್ಕಳ ಪ್ರಶ್ನೆಗಳಿಗೆ ನ್ಯಾಯಾಧೀಶರು ಉತ್ತರಿಸಿದರು.

ಬಾಲ ಕಾರ್ಮಿಕ ಪದ್ದತಿ ನಿಷೇಧಿಸಿದ್ದರೂ ಬಡತನ, ಅನಕ್ಷರತೆ ಮುಂತಾದ ಕಾರಣಗಳಿಂದಾಗಿ ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಿಲ್ಲ. ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಕಾನೂನಿನ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ಕಠಿಣ ಕ್ರಮ ಕೈಗೊಳ್ಳ ಬಹುದಾಗಿದೆ. ಅಲ್ಲದೆ ಹೆಣ್ಣು ಮಕ್ಕಳನ್ನು ದೃಷ್ಟಿಸಿ ನೋಡಿದರೆ ಕೂಡಾ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗುತ್ತದೆ ಎಂದರು.
ಪ್ರಧಾನ ಹಿರಿಯ ನ್ಯಾಯಾಧೀಶ ಹೊಸಮನಿ ಪುಂಡಲಿಕ ಮಾತನಾಡಿ,  ನ್ಯಾಯಾಲಯ ತಿರ್ಮಾನವೇ ನಿಜವಾದ ಕಾನೂನು. ಎಲ್ಲರು ಗೌರವಿಸಬೇಕಾದದ್ದು ಕರ್ತವ್ಯವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ.ಬೆನಕೊಪ್ಪ ಮಾತನಾಡಿ, ಮಕ್ಕಳಲ್ಲಿ ಕಾನೂನು ಅರಿವು ಇಲ್ಲದೇ ಇರುವುದರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಅಸಮರ್ಪಕ ಶಿಕ್ಷಣ ವ್ಯವಸ್ಥೆಯಿಂದಾಗಿ ಸುಪ್ರೀಂ ಕೋರ್ಟ್ ಕೂಡಾ ಪಠ್ಯಗಳಲ್ಲಿ ಮೌಲ್ಯಧಾರಿತ ಪಠ್ಯಕ್ರಮ ಹೊಂದಬೇಕೆಂದು ಆದೇಶಿಸಿದೆ ಎಂದರು.

ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಹಂಚಿನಾಳ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಜಿ.ಸಿ.ರಶ್ಮಿ ಅವರು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ  ಹಾಗೂ ದುರ್ಬಳಕೆ ತಡೆ ಹಾಗೂ ಮಾದಕ ಪದಾರ್ಥಗಳ ಸೇವನೆ ನಿಷೇಧ, ಗೀತಾ ಅಸೂಟಿ  ಅವರು ಮಕ್ಕಳ ಹಕ್ಕುಗಳ,  ಭಾರತಿ ಶಲವಡಿ ಸಂಚಾರಿ ನಿಯಮಗಳ ಕುರಿತು  ವೈ. ಡಿ.ತಳವಾರ “ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಮಕ್ಕಳಿಗೆ ಇರುವ ಸೌಲಭ್ಯಗಳು ಕುರಿತು ಉಪನ್ಯಾಸ ನೀಡಿದರು.

ನಾಗರಾಜ ಗಾಳಿ  ಸ್ವಾಗತಿಸಿದರು. ಕೊಟ್ರೇಶ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT