ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಶಿಕ್ಷಣ: ಪ್ರೌಢಶಾಲಾ ಹಂತದಿಂದ ಜಾರಿಗೆ ಶಿಫಾರಸು

ಜುಲೈ 19ರಂದು ಉನ್ನತ ಮಟ್ಟದ ಸಭೆ
Last Updated 17 ಜುಲೈ 2013, 6:19 IST
ಅಕ್ಷರ ಗಾತ್ರ

ಧಾರವಾಡ: 2007ರಲ್ಲಿ ಪ್ರಾಥಮಿಕ ಹಂತದಿಂದಲೇ ಲೈಂಗಿಕ ಶಿಕ್ಷಣವನ್ನು ಜಾರಿಗೆ ತರಲು ಹೊರಟ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ನಿರ್ಧಾರನ್ನು ವಾಪಸ್ ಪಡೆದ ಸರ್ಕಾರ, ಇದೀಗ ಮತ್ತೆ ಅದನ್ನು ಜಾರಿಗೆ ತಂದ ಬಳಿಕ ಆಗುವ ಸಾಧಕ- ಬಾಧಕಗಳನ್ನು ಪರಿಶೀಲಿಸಲು ಇದೇ 19ರಂದು ಬೆಂಗಳೂರಿನಲ್ಲಿ ಸಭೆ ನಡೆಸಲಿದೆ.

ಲೈಂಗಿಕ ಶಿಕ್ಷಣವನ್ನು ನೀಡಬೇಕಾದ ವಿಧಾನ, ಅದನ್ನು ಯಾರು ನೀಡಬೇಕು, ಬೋಧನೆಯ ಒಟ್ಟಾರೆ ಅವಧಿ ಸೇರಿದಂತೆ ಸಮಗ್ರ ವಿವರವುಳ್ಳ ಪ್ರಸ್ತಾವನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಅಧ್ಯಕ್ಷರಾಗಿರುವ `ಕರ್ನಾಟಕ ಮಾನಸಿಕ ಆರೋಗ್ಯ ಪ್ರಾಧಿಕಾರ'ಕ್ಕೆ `ಕರ್ನಾಟಕ ಮಾನಸಿಕ ಆರೋಗ್ಯ ಕಾರ್ಯಪಡೆ'ಯ ಅಧ್ಯಕ್ಷ ಡಾ.ಕೆ.ಎ.ಅಶೋಕ ಪೈ ಈಗಾಗಲೇ ಸಲ್ಲಿಸಿದ್ದಾರೆ.

ಸರ್ಕಾರ ಲೈಂಗಿಕ ಶಿಕ್ಷಣವನ್ನು ಜಾರಿಗೆ ತರುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲವಾದರೂ, ಅದನ್ನು ಜಾರಿಗೆ ತರುವ ಯತ್ನಗಳ ಮೊದಲ ಭಾಗವಾಗಿ ಈ ಸಭೆ ನಡೆಯಲಿರುವುದು ಮಹತ್ವ ಪಡೆದುಕೊಂಡಿದೆ. ಏಕೆಂದರೆ ಈಗಾಗಲೇ ಈ ಸಂಬಂಧದ ಪಠ್ಯಕ್ರಮ ತಯಾರಾಗಿದ್ದು, ಸರ್ಕಾರದ ಸಮ್ಮತಿಗಾಗಿ ಕಾಯುತ್ತಿದೆ.

ಪ್ರಾಥಮಿಕ ಹಂತದಿಂದಲೇ ಲೈಂಗಿಕ ಶಿಕ್ಷಣವನ್ನು ಜಾರಿಗೆ ತರಲು ಹೊರಟ ಸಂದರ್ಭದಲ್ಲಿ ಶಿಕ್ಷಕರಿಗೆ ಪಠ್ಯಕ್ರಮವನ್ನು ನೀಡಲಾಗಿತ್ತು. ಅದರ ರೇಖಾ ಚಿತ್ರಗಳು ಹಾಗೂ ಸುರಕ್ಷಿತ ಲೈಂಗಿಕತೆಗೆ ಸಂಬಂಧಪಟ್ಟಂತಹ ಪಾಠಗಳು ಮಕ್ಕಳನ್ನು ಪ್ರಚೋದಿಸುತ್ತವೆ ಎಂದು ಆರೋಪಿಸಿ ಹಲವು ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿದ್ದವು. ಇದರಿಂದ ಎಚ್ಚೆತ್ತ ಸರ್ಕಾರ ತಕ್ಷಣವೇ ಪಠ್ಯಕ್ರಮ ಜಾರಿಗೆ ತಡೆಹಿಡಿದಿತ್ತು.


ಇದೀಗ ಡಾ. ಅಶೋಕ ಪೈ ಅವರು ಲೈಂಗಿಕ ಶಿಕ್ಷಣ ಜಾರಿ ಸಂಬಂಧ ಹಲವು ಶಿಫಾರಸುಗಳನ್ನು ಮಾಡಿದ್ದು, ಅದರಲ್ಲಿ ಮುಖ್ಯವಾಗಿ ಪ್ರಾಥಮಿಕ ಶಾಲಾ ಹಂತದ ಬದಲು ಒಂಬತ್ತನೇ ತರಗತಿಯಿಂದ ಪಿಯು ಮೊದಲ ವರ್ಷದವರೆಗೆ ಲೈಂಗಿಕ ಶಿಕ್ಷಣ ನೀಡಬೇಕು. ಜೀವಶಾಸ್ತ್ರ ಓದಿದ ಶಿಕ್ಷಕರು ಲೈಂಗಿಕ ಪಠ್ಯಕ್ರಮವನ್ನು ಬೋಧಿಸಬೇಕು. ಅದಕ್ಕೂ ಮೊದಲು ಮನೋವಿಜ್ಞಾನಿಗಳಿಂದ ಅವರಿಗೆ ಸೂಕ್ತ ತರಬೇತಿ ನೀಡಬೇಕು. ಒಂದು ವರ್ಷಕ್ಕೆ 15 ತರಗತಿಗಳನ್ನು ಮಾತ್ರ ತೆಗೆದುಕೊಳ್ಳಬೇಕು. ಅದನ್ನು ಒಂದು ವಿಷಯವನ್ನಾಗಿ ಬೋಧಿಸಬೇಕು ಎಂದು ತಿಳಿಸಿದ್ದಾರೆ.

ಈ ಕುರಿತು `ಪ್ರಜಾವಾಣಿ'ಗೆ ಮಾಹಿತಿ ನೀಡಿದ ಡಾ.ಅಶೋಕ ಪೈ, `ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳಿಗೆ ಆರೋಗ್ಯ ಶಿಕ್ಷಣವನ್ನು ಬೋಧಿಸಲು ಆರಂಭಿಸಬೇಕು. 5ನೇ ತರಗತಿಯಿಂದ 7ನೇ ತರಗತಿವರೆಗೆ ಕಣ್ಣು, ಕಿವಿ, ಹೃದಯ, ಕಿಡ್ನಿ ಮತ್ತಿತರ ಅಂಗಗಳ ಬಗ್ಗೆ ಮಾಹಿತಿ ನೀಡಬೇಕು. ಹೈಸ್ಕೂಲ್ ಹಂತಕ್ಕೆ ಬರುವಷ್ಟರಲ್ಲಿ ಮಕ್ಕಳು ಲೈಂಗಿಕ ಶಿಕ್ಷಣವನ್ನು ಪಡೆಯಲು ಮಾನಸಿಕವಾಗಿ ಸಿದ್ಧರಾಗಿರುತ್ತಾರೆ' ಎಂದರು.

ಧಾರವಾಡದ ಹಿರಿಯ ಮನೋವಿಜ್ಞಾನಿ ಡಾ.ಆನಂದ ಪಾಂಡುರಂಗಿ, `ಲೈಂಗಿಕ ಶಿಕ್ಷಣವನ್ನು ಮಕ್ಕಳಿಗೆ ಕಲಿಸಬೇಕೆ ಬೇಡವೇ ಎಂಬುದು ಅತ್ಯಂತ ಚರ್ಚೆಗೆ ಒಳಪಡಬೇಕಾದ ವಿಷಯವಾಗಿದೆ. ಮಕ್ಕಳಿಗೆ ಲೈಂಗಿಕ ಶಿಕ್ಷಣ ಅವಶ್ಯವಾದರೂ ಅದನ್ನು ಯಾರೋ ಬೋಧಿಸಲು ಆಗುವುದಿಲ್ಲ. ಅತ್ಯಂತ ನುರಿತವರು ಮಕ್ಕಳ ಮನಸ್ಥಿತಿಗೆ ಹೊಂದಿಕೊಂಡು ಹೇಳಬೇಕಾದುದು ಅವಶ್ಯಕ. ಲೈಂಗಿಕ ಶಿಕ್ಷಣ ಜಾರಿಗೆ ತರುವುದು ಸ್ವಾಗತಾರ್ಹ. ಆದರೆ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಆಗಬೇಕು' ಎಂದು ಹೇಳಿದರು.

`ಬ್ರಿಟನ್‌ನ ಸೇರಿದಂತೆ ಹಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಈಗಾಗಲೇ ಲೈಂಗಿಕ ಶಿಕ್ಷಣ ಜಾರಿಗೆ ತರಲಾಗಿದೆ. ಆದರೆ, ಲೈಂಗಿಕ ಶಿಕ್ಷಣದ ಹೆಸರಿನಲ್ಲಿ ಸುರಕ್ಷಿತ ಲೈಂಗಿಕತೆ ಹೇಗೆ ಎಂಬ ಬಗ್ಗೆಯೇ ಸಾಕಷ್ಟು ಚರ್ಚೆ ನಡೆಯಿತು. ಇದರ ಪರಿಣಾಮ ಬಾಲಕಿಯರು ಗರ್ಭಿಣಿಯರಾಗುವ ಪ್ರಕರಣಗಳು ಜಾಸ್ತಿಯಾದವು. ಬಾಲಕಿಯರ ಮೇಲೆ ಅತ್ಯಾಚಾರಗಳು ಎಗ್ಗಿಲ್ಲದೇ ನಡೆದವು.

ರಾಜ್ಯ ಸರ್ಕಾರ ಇದನ್ನು ಜಾರಿಗೆ ತರುವ ಮುನ್ನ ಸಾಕಷ್ಟು ಎಚ್ಚರ ವಹಿಸಬೇಕು. ಮನಃಶಾಸ್ತ್ರವನ್ನು ಸರಿಯಾಗಿ ಅರ್ಥ ಮಾಡಿಕೊಂಡವರು ಇದನ್ನು ಬೋಧಿಸಬಹುದು. ಹುಡುಗಿಯರಿಗೆ ಮುಜುಗರವಾಗದಂತೆ ಪ್ರತ್ಯೇಕವಾಗಿ ಬೋಧಿಸುವ ಬಗ್ಗೆ ಚಿಂತನೆ ನಡೆಸಬೇಕು. ಅದರೊಂದಿಗೆ ಉನ್ನತ ನೀತಿ, ನೈತಿಕತೆ, ಇತರರೊಂದಿಗೆ ಹೇಗೆ ವರ್ತಿಸಬೇಕು ಎಂಬ ಬಗ್ಗೆಯೂ ಪಠ್ಯದಲ್ಲಿ ಸೇರಿಸಬೇಕು' ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ (ಎಐಎಸ್‌ಇಸಿ) ರಾಜ್ಯ ಸಂಚಾಲಕಿ ಕೆ.ಉಮಾ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT