ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಶೋಷಿತ ಮಹಿಳೆಯರ ನೆರವಿಗೆ ಸಂವೇದನೆಯೋಜನೆ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೋಲಾರ: ಗೂಂಡಾಗಳು, ನಿಕಟ ಸಂಗಾತಿಗಳು, ನೆರೆಹೊರೆಯವರು, ದಲ್ಲಾಳಿಗಳು, ಕುಟುಂಬದವರಿಂದ ಶೋಷಣೆಗೆ ಒಳಗಾಗುವ ಲೈಂಗಿಕ ವೃತ್ತಿಪರ ಮಹಿಳೆಯರಿಗೆ ಇನ್ನು ಮುಂದೆ ನೆರವಿನ ಹಸ್ತ ಸುಲಭವಾಗಿ ದೊರಕಲಿದೆ. ಸಮುದಾಯದಲ್ಲಿ ಅನುಭವಿಸುವ ತೊಂದರೆ, ಕಿರುಕುಳಗಳಿಂದ ಅವರಿಗೆ ವಿಮುಕ್ತಿ ನೀಡುವ ಸಲುವಾಗಿ `ಸಂವೇದನೆ~ ಹೆಸರಿನ ಯೋಜನೆಯೊಂದು ರಾಜ್ಯದ 16 ಜಿಲ್ಲೆಗಳಲ್ಲಿ ಜಾರಿಯಾಗಿದೆ.

ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನ (ಕೆಎಚ್‌ಪಿಟಿ: ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್) ವಿಶ್ವ ಸಂಸ್ಥೆಯ ವಿಶ್ವಸ್ಥ ನಿಧಿಯ (ಯುನೈಟೆಡ್ ನೇಷನ್ಸ್ ಟ್ರಸ್ಟ್ ಫಂಡ್ ಟು ಎಂಡ್ ವಯಲೆನ್ಸ್ ಅಗೈನ್ಸ್ಟ್ ವಿಮೆನ್- ಯುಎನ್‌ಟಿಎಫಿವಿಎಡಬ್ಲ್ಯು) ಆಶ್ರಯದಲ್ಲಿ ಈ ಯೋಜನೆ ಜಾರಿಗೊಳ್ಳುತ್ತಿದೆ. ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ ಸಹಯೋಗವೂ ಇಲ್ಲಿದೆ.

ಗುಲ್ಬರ್ಗ, ವಿಜಾಪುರ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ  ಈ ಯೋಜನೆ ಅನುಷ್ಠಾನಗೊಂಡಿದೆ. ಮೊದಲ ಹಂತದಲ್ಲಿ ಲೈಂಗಿಕ ಕಾರ್ಯಕರ್ತೆಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸುವ ಕೆಲಸ ಶುರುವಾಗಿದೆ.
 
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ನಡೆಯುತ್ತಿದೆ. 2011ರ ಡಿಸೆಂಬರ್‌ನಲ್ಲಿ ಶುರುವಾಗಿರುವ ಯೋಜನೆ 2014ರ ವರೆಗೂ ಜಾರಿಯಲ್ಲಿರುತ್ತದೆ. ಲೈಂಗಿಕ ವೃತ್ತಿಯಲ್ಲಿರುವ ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ಯೋಜನೆಯು ಮಾನವ ಹಕ್ಕುಗಳ ದೊಡ್ಡ ಸಮಸ್ಯೆ ಎಂದೇ ಪರಿಗಣಿಸುತ್ತದೆ.

ದೌರ್ಜನ್ಯಕ್ಕೆ ಒಳಗಾಗುವ ಲೈಂಗಿಕ ಕಾರ್ಯಕರ್ತೆಯರಿಗೆ ಎಚ್‌ಐವಿ ಸೋಂಕು ತಗುಲುವ ಅಪಾಯ ತಡೆಯುವುದು ಯೋಜನೆಯ ಬಹುಮುಖ್ಯ ಉದ್ದೇಶ. ಈಗಾಗಲೇ ಇರುವ ಎಚ್‌ಐವಿ ತಡೆ ಕಾರ್ಯಕ್ರಮಗಳ ಮೂಲಕವೇ ಲೈಂಗಿಕ ವೃತ್ತಿಯಲ್ಲಿರುವ ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆಯುವ ಯೋಜನೆಯನ್ನು ಅನುಷ್ಠಾನ ಮಾಡುವ ಉದ್ದೇಶವೂ `ಸಂವೇದನೆ~ಕ್ಕೆ ಇದೆ.

ಉದ್ದೇಶ: ದೌರ್ಜನ್ಯಕ್ಕೂ ಮತ್ತು ಎಚ್‌ಐವಿಗೂ ಇರುವ ನಂಟಿನ ಬಗ್ಗೆ ಲೈಂಗಿಕ ವೃತ್ತಿಪರ ಮಹಿಳೆಯರಿಗೆ, ಸಮುದಾಯ ಸದಸ್ಯರ ಕುಟುಂಬಗಳಿಗೆ, ಸೇವೆ ಒದಗಿಸುವವರಿಗೆ, ನಿಕಟ ಸಂಗಾತಿಗಳಿಗೆ ಅರಿವು ಮೂಡಿಸುವುದು ಯೋಜನೆಯ ಪ್ರಮುಖ ಉದ್ದೇಶಗಳಲ್ಲಿ ಒಂದು.

ಸೇವೆ ಅಗತ್ಯವಿರುವ ಸಮುದಾಯದ ಮಹಿಳೆಯರಿಗೆ ಕಳಂಕ ತಾರತಮ್ಯ ಮುಕ್ತವಾದ ಗುಣಮಟ್ಟದ ಸೇವೆ ಕೈಗೆಟುಕುವಂಥ ಆರೋಗ್ಯ, ಕಾನೂನು, ನ್ಯಾಯಾಂಗ, ರಕ್ಷಣೆ, ಪೊಲೀಸ್, ಮನೋ ಸಾಮಾಜಿಕ ಬೆಂಬಲ ಸೇವೆ ಉತ್ತಮಪಡಿಸುವುದು, ಮಹಿಳೆಯರ ಮೇಲಿನ ದೌರ್ಜನ್ಯ, ಎಚ್‌ಐವಿ ನಡುವಿನ ನಂಟು ಕಡಿಯಲು ನಾಗರಿಕ ಸಮಾಜ, ಸಮುದಾಯ ಆಧಾರಿತ ಸಂಘ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಿ ಕೆಲಸ ಮಾಡುವುದು ಯೋಜನೆ ಇನ್ನೆರಡು ಪ್ರಮುಖ ಉದ್ದೇಶಗಳು.

ಹೇಗೆ? ಲೈಂಗಿಕ ವೃತ್ತಿ ಸಂಸ್ಥೆಗಳ ಜೊತೆ ನಿಕಟ ಸಂಪರ್ಕ ಹೊಂದುವುದು, ತಳಮಟ್ಟದಲ್ಲಿ ಕಾರ್ಯಕ್ರಮ ನಡೆಸುವ ಮೂಲಕ ಲೈಂಗಿಕ ವೃತ್ತಿಪರ ಮಹಿಳೆಯರ ವಿರುದ್ಧದ ದೌರ್ಜನ್ಯ ಕಡಿಮೆ ಮಾಡುವುದು. ಲೈಂಗಿಕ ವೃತ್ತಿಪರರ ಸಮುದಾಯ ಆಧಾರಿತ ಸಂಘಟನೆಗಳ ಜತೆ ಸೇರಿ ಕೆಲಸ ಮಾಡುವುದು.

ದೌರ್ಜನ್ಯ, ಎಚ್‌ಐವಿ ಮತ್ತು ಇತರ ಅತ್ಯಗತ್ಯ ಕಾನೂನುಗಳ ಬಗ್ಗೆ ನಿಕಟ ಸಂಗಾತಿಗಳಿಗೆ ಶಿಕ್ಷಣ ನೀಡುವುದು. ಆ ಮೂಲಕ ನಿಕಟ ಸಂಗಾತಿಗಳಿಂದ ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆಯುವುದು ಯೋಜನೆಯ ಪ್ರಮುಖ ಕಾರ್ಯಗಳು ಎನ್ನುತ್ತಾರೆ ಸಂವೇದನಾ ಜಿಲ್ಲಾ ಯೋಜನಾ ಸಂಯೋಜಕ ಜಿ.ಎಸ್.ವೆಂಕಟೇಶ್.

ಸಂವೇದನೆ ಯೋಜನೆ ತುಂಬ ಪ್ರಸ್ತುತವಾಗಿದೆ. ಲೈಂಗಿಕ ಕಾರ್ಯಕರ್ತೆಯರು ತಾವು ಅನುಭವಿಸುತ್ತಿರುವ ಸಂಕಟವನ್ನು ಯಾರಲ್ಲೂ ಹೇಳಿಕೊಳ್ಳಲಾಗದೇ ಸಂಕಟ ಅನುಭವಿಸುತ್ತಿದ್ದಾರೆ. ಅವರಿಗೆ ನೆರವು ನೀಡುವ ಸಂವೇದನೆ ಎಲ್ಲರಲ್ಲೂ ಮೂಡಬೇಕಾಗಿದೆ ಎನ್ನುತ್ತಾರೆ ಯೋಜನೆಯ ಜಿಲ್ಲಾ ಅಡ್ವೋಕೇಸಿ ಕೋ ಆರ್ಡಿಟೇನರ್ ನಾಗವೇಣಿ. ಅ. 18ರಂದು ಜಿಲ್ಲೆಯ ಮೊದಲ ಸಮಾವೇಶ ನಡೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT