ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಹಗರಣದ ಸುಳಿಯಲ್ಲಿ ಮಹಿಳೆಯರು

ರಾಜ್ಯ ವಾರ್ತಾಪತ್ರ
Last Updated 4 ಜುಲೈ 2013, 19:59 IST
ಅಕ್ಷರ ಗಾತ್ರ

ತಿರುವನಂತಪುರ:   ಸುಂದರ ಕಡಲ ತೀರ, ಹಚ್ಚ ಹಸಿರು ಪ್ರಕೃತಿ ಮಡಿಲ ನಡುವೆ ಸದ್ದಿಲ್ಲದೆ ನದಿ, ಸರೋವರಗಳ ಪ್ರಶಾಂತ ವಾತಾವರಣದಿಂದಾಗಿ ಸಮೃದ್ಧವಾದ ದೇವರನಾಡು ಕೇರಳ ಮತ್ತೆ ಸುದ್ದಿಯಲ್ಲಿದೆ. ಆದರೆ, ಒಳ್ಳೆಯ ಕಾರಣಕ್ಕಲ್ಲ!

ದೇಶದಲ್ಲಿಯೇ ಅತಿ ಹೆಚ್ಚು ಮಹಿಳಾ ಸಾಕ್ಷರತಾ ಪ್ರಮಾಣ ಹೊಂದಿದ ಹೆಮ್ಮೆಯಿಂದ ಬೀಗುತ್ತಿದ್ದ ಶಾಂತಿಯುತ ಪುಟ್ಟ ರಾಜ್ಯದಲ್ಲಿ ರಾಜಕೀಯಕ್ಕೆ ತಳಕು ಹಾಕಿಕೊಂಡ ಲೈಂಗಿಕ ಹಗರಣಗಳು, ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣಗಳು ಹೆಚ್ಚು ಸದ್ದು ಮಾಡುತ್ತಿವೆ. ಪ್ರತಿ ದಿನ ಒಂದಲ್ಲ ಒಂದು ಹಗರಣ ಇಲ್ಲವೇ ಲೈಂಗಿಕ ಹಗರಣದಲ್ಲಿ ರಾಜಕಾರಣಿಗಳು, ಮಹಿಳೆಯರು ಸಿಕ್ಕಿ ಬೀಳುತ್ತಿರ‌್ದುವುದು ಕೇರಳವನ್ನು ಬೆಚ್ಚಿಬೀಳಿಸಿದೆ.

ಅದೆಲ್ಲದಕ್ಕೂ ಹೆಚ್ಚಾಗಿ ರೋಗಿಗಳ ಸೇವೆಗೆ ತಮ್ಮನ್ನು ಅರ್ಪಿಸಿಕೊಳ್ಳುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಮಲೆಯಾಳದ ಅದೇ ವಿದ್ಯಾವಂತ ಮಹಿಳೆಯರು ಹೆಚ್ಚಾಗಿ ಪಾತಕ ಲೋಕದಲ್ಲೂ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿಯ ಇತ್ತೀಚಿನ ವಿದ್ಯಮಾನ, ಅಹಿತಕರ ಬೆಳವಣಿಗೆ ಮತ್ತು ಸಾಂಸ್ಕೃತಿಕ ವಾತಾವರಣದ ಪಲ್ಲಟಗಳು ಕೇರಳದ ಹೆಸರಿಗೆ ಕಳಂಕ ಹಚ್ಚುತ್ತಿವೆ.

ರಾಜ್ಯದ ಪತ್ರಿಕೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸುದ್ದಿ ಮಾಡಿದ್ದು ಸೌರವಿದ್ಯುತ್ ಕೋಶ ಅವ್ಯವಹಾರ ಹಗರಣ. ಕೋಟ್ಯಂತರ ರುಪಾಯಿ ಅವ್ಯವಹಾರದಿಂದ ಇಡೀ ರಾಜ್ಯದ ಗಮನ ಸೆಳೆದ ಈ ಹಗರಣದಲ್ಲಿ ಮುಖ್ಯಮಂತ್ರಿಯ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.  ಈ ಪ್ರಕರಣಕ್ಕೂ ಮಹಿಳೆಯರು ತಳಕು ಹಾಕಿಕೊಂಡಿದ್ದಾರೆ. ಈ ಹಗರಣ ಬೆಳಕಿಗೆ ಬಂದ ನಂತರ ಪ್ರತಿನಿತ್ಯ ಪತ್ರಿಕೆಗಳ ತಲೆಬರಹದಲ್ಲಿ ರಾರಾಜಿಸಿದ್ದು   ಸರಿತಾ ನಾಯರ್ ಎಂಬ ಹೆಸರು. ರಾತ್ರಿ ಬೆಳಗಾಗುವ ವೇಳೆಗೆ ರಾಜದಾದ್ಯಂತ ಈ ಹೆಸರು ಚಿರಪರಿಚಿತವಾಗಿ ಬಿಟ್ಟಿದೆ.

ಸರಿತಾ ಮಾಯಾಜಾಲದಲ್ಲಿ ಸರ್ಕಾರ: ಸೌರ ವಿದ್ಯುತ್ ಕೋಶ ಹಗರಣದಲ್ಲಿ ಇಬ್ಬರು ಪ್ರಮುಖ ಆರೋಪಿಗಳಲ್ಲಿ ಈ ಸರಿತಾ ಕೂಡ ಒಬ್ಬಾಕೆ. ಬಿಜು ರಾಧಾಕೃಷ್ಣನ್ ಎಂಬ ಪಾಲುದಾರನೊಂದಿಗೆ ಸೇರಿ ಈಕೆ ಹುಟ್ಟು ಹಾಕಿದ ಖಾಸಗಿ ಸಂಸ್ಥೆ ಈ ಅವ್ಯವಹಾರದ ಪ್ರಮುಖ ಲಾಭ ಪಡೆದಿದೆ. ಮುಖ್ಯಮಂತ್ರಿ ಜೊತೆ ಆಪ್ತಳಾಗಿರುವುದಾಗಿ ಹೇಳುತ್ತಾ ತಿರುಗಾಡಿಕೊಂಡಿದ್ದ ಈಕೆ ನೋಡು ನೋಡುತ್ತಿದ್ದಂತೆಯೇ ಸುಳ್ಳಿನ ಸಾಮ್ರಾಜ್ಯ ಕಟ್ಟಿಬಿಟ್ಟಳು. ಸಚಿವರ ಆದಿಯಾಗಿ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳು, ಉದ್ಯಮಿಗಳ ಸ್ನೇಹ ಗಳಿಸಿಕೊಂಡಳು. ಮುಖ್ಯಮಂತ್ರಿ ಕಚೇರಿಯನ್ನು ಮುಂದಿಟ್ಟುಕೊಂಡು ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸಿದಳು. ಮುಖ್ಯಮಂತ್ರಿ ಆಪ್ತಳು ಎಂದು ನಂಬಿದ್ದ ಪೊಲೀಸರು ಈಕೆಯ ಬೆನ್ನಿಗೆ ನಿಂತರು. ವಿರೋಧ ಪಕ್ಷಗಳನ್ನೂ ಈಕೆ ತನ್ನ ಮಾಯಾ ಜಾಲಕ್ಕೆ ಕೆಡವಿಕೊಂಡಿದ್ದಳು.

ಕೇವಲ ಒಬ್ಬ ಮಹಿಳೆ ಇಡೀ ಒಂದು ರಾಜ್ಯದ ಆಡಳಿತ ಯಂತ್ರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ದಾರಿ ತಪ್ಪಿಸಿದ್ದಳು. ರಾಜಕಾರಣಿಗಳು, ಉದ್ಯಮಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಮೋಸ ಹೋಗಿದ್ದರು. ಇದು ಕೇವಲ ಒಂದು ಉದಾಹರಣೆ ಮಾತ್ರ. ಕೇರಳದ ಒಂದಲ್ಲ, ಒಂದು ಕಡೆ ನಿತ್ಯ ನಡೆಯುತ್ತಿರುವ ಇಂಥ ಹತ್ತಾರು ಹಗರಣಗಳ ಹಿಂದೆ ಚಾಲಾಕಿ ಮಹಿಳೆಯರ ನೆರಳು ಇದ್ದೇ ಇರುತ್ತದೆ. ಪುರುಷರಿಗಿಂತ ಹೆಚ್ಚಿನ ಮಹಿಳಾ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಸದ್ದಿಲ್ಲದೆ ಮಹಿಳಾ ಅಪರಾಧಿಗಳ ಸಂಖ್ಯೆಯೂ ಹೆಚ್ಚುತ್ತಿರುವುದು ವಿಪರ್ಯಾಸ.

ಐಷಾರಾಮಿ ಜೀವನದ ಬೆನ್ನುಹತ್ತಿ...: ಐಷಾರಾಮಿ ಜೀವನ ನಡೆಸುವ ಒಂದೇ ಉದ್ದೇಶಕ್ಕಾಗಿ ಚೆಂಗಾನೂರ್ ಗ್ರಾಮದ ಶೆರಿನ್ ಎಂಬಾಕೆ ತನ್ನ ಮಾವನನ್ನೇ ಕೊಂದು ಹಾಕಿದ್ದಳು. ಅವಳ ಅದೃಷ್ಟ ನೆಟ್ಟಗಿರಲಿಲ್ಲ. ಪೊಲೀಸರ ಬಲೆಗೆ ಬಿದ್ದಳು. ಶೋಭನಾ ಜಾನ್ ಎಂಬಾಕೆಯದ್ದು ಮತ್ತೊಂದು ರೋಚಕ ಕಥೆ! ಕಳ್ಳರ ತಂಡವನ್ನು ಕಟ್ಟಿಕೊಂಡಿದ್ದ ಈಕೆ ಶಬರಿಮಲೆಯ ದೇವಸ್ಥಾನದ ಹಿಂದಿನ ಮುಖ್ಯ ಅರ್ಚಕನನ್ನೇ ಅಪಹರಿಸಿದ್ದಳು. ರಾಜದಾದ್ಯಂತ ವೇಶಾವಾಟಿಕೆಯನ್ನೂ ನಡೆಸುತ್ತಿದ್ದಳು.

1996ರಲ್ಲಿ ರಾಜ್ಯವನ್ನು ಬೆಚ್ಚಿ ಬೀಳಿಸಿದ ಡಾ. ಓಮನಾ ಎಡದಾನ್ ಎಂಬಾಕೆ ತನ್ನ ಪ್ರಿಯಕರನ್ನೇ ಚೂರು ಚೂರಾಗಿ ಕತ್ತರಿಸಿ ಹಾಕಿದ ಘಟನೆಯನ್ನು ನೆನಪಿಸಿಕೊಂಡರೆ ಸ್ಥಳೀಯರು ಈಗಲೂ ಕಂಪಿಸುತ್ತಾರೆ. ಜಾಮೀನು ಪಡೆದು ಹೊರಬಂದ ಈಕೆ 12 ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ತಿರುಗುತ್ತಿದ್ದಾಳೆ.

ಎರ್ನಾಕುಲಂನ ಮಹಿಳೆಯೊಬ್ಬಳು ಜೆಡಿಎಸ್ ಶಾಸಕ ಜೋಸ್ ಥೆಟ್ಟಾಯಿಲ್ ವಿರುದ್ಧ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪದ ನಂತರ ಅವರು ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಸೌರಕೋಶ ಹಗರಣದಲ್ಲಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ವಿರೋಧ ಪಕ್ಷಗಳ ವಿರುದ್ಧ ತಿರುಗೇಟು ನೀಡಲು ಸರ್ಕಾರ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ. ಥೆಟ್ಟಾಯಿಲ್ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ನಿಜವೋ ಸುಳ್ಳೋ ಮಹಿಳೆಯರು, ಧೈರ್ಯವಾಗಿ ಹೊರಬಂದು ತಮ್ಮ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದಾಖಲೆ ಸಮೇತ ಹೇಳುತ್ತಿದ್ದಾರೆ. ಮಹಿಳೆಯ ಮನೋಭಾವದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಇದು ನಿದರ್ಶನ ಎನ್ನುವುದನ್ನು ಸಾಮಾಜಿಕ ವಿಜ್ಞಾನಿಗಳು ಎತ್ತಿ ತೋರುತ್ತಾರೆ.      

ವ್ಯವಸ್ಥಿತ ಜಾಲ: ಅಪರಾಧ ಕೃತ್ಯಗಳಲ್ಲಿ ತೊಡಗಿರುವ ಮಹಿಳೆಯರಿಗೆ ಪ್ರಭಾವಿ ರಾಜಕಾರಣಿಗಳ ಶ್ರೀರಕ್ಷೆ ಇರುತ್ತದೆ. ಹಿರಿಯ ಪೊಲೀಸ್ ಅಧಿಕಾರಿಗಳು ರಕ್ಷಣೆಗಿರುತ್ತಾರೆ. ಮುಖ್ಯಮಂತ್ರಿ ಕಚೇರಿ ಸಮೇತ ಹಿರಿಯ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡ ಚಾಲಾಕಿ ಮತ್ತು ಮಾಯಾವಿ ಮಹಿಳೆಯರನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿವೆ.        `ಟೋಟಲ್ ಫಾರ್ ಯು' ಅವ್ಯವಹಾರ ಹಗರಣದ ಪ್ರಮುಖ ರೂವಾರಿ ಹಾಗೂ ಮಾಜಿ ರಾಜ್ಯ ಸರ್ಕಾರಿ ಉದ್ಯೋಗಿ ಚಂದ್ರಮತಿ ಮತ್ತೆ ಸುದ್ದಿಯಲ್ಲಿದ್ದಾಳೆ. ಮಾಜಿ ಸಚಿವ ಕೆ.ಬಿ. ಗಣೇಶ್ ಕುಮಾರ್ ಅವಳೊಂದಿಗೆ  ವೇದಿಕೆ ಹಂಚಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ಪಾಲ್ಗೊಳ್ಳದಂತೆ ಗುಪ್ತದಳ ಅಧಿಕಾರಿಗಳು ಮುಖ್ಯಮಂತ್ರಿ ಆದಿಯಾಗಿ ಎಲ್ಲ ಗಣ್ಯರಿಗೂ ಮುನ್ಸೂಚನೆ ನೀಡಿತ್ತು ಎನ್ನಲಾಗಿದೆ.

ರಾಜ್ಯದ ವಿವಿಧ ಕಾರಾಗೃಹಗಳಲ್ಲಿ 217 ಮಹಿಳಾ ಕೈದಿಗಳಿದ್ದಾರೆ. ಅಕ್ರಮ ಸಾರಾಯಿ ಮಾರಾಟ, ಸಣ್ಣಪುಟ್ಟ ಕಳ್ಳತನದ ಮೇಲೆ ಜೈಲು ಸೇರಿದವರ ಸಂಖ್ಯೆಯೂ ದೊಡ್ಡದಿದೆ. ಅವರಲ್ಲಿ ಬಹುತೇಕ ಮಹಿಳೆಯರು 35ರಿಂದ 40 ವರ್ಷ ವಯೋಮಾನದವರು ಎಂಬುವುದು ಗಮನಿಸಬೇಕಾದ ಸಂಗತಿ.  ಇದಕ್ಕೆಲ್ಲಾ ಹದಗೆಡುತ್ತಿರುವ ಕೌಟುಂಬಿಕ ಸಾಮರಸ್ಯ, ಶಿಥಿಲಗೊಳ್ಳುತ್ತಿರುವ ಸಂಬಂಧಗಳು, ಅಭದ್ರತೆಯ ಜೀವನ, ಐಷಾರಾಮಿ ಜೀವನದ ವ್ಯಾಮೋಹ, ಲೈಂಗಿಕ ದೌರ್ಜನ್ಯ, ಬಾಲ್ಯದಲ್ಲಿಯ ಮಾನಸಿಕ ಆಘಾತ ಕಾರಣ ಎನ್ನುವುದು ಮನೋವಿಜ್ಞಾನಿಗಳ ಅಭಿಮತ. ಈ ಮೇಲಿನ ಯಾವುದಾದರೂ ಒಂದು ಕಾರಣ ಮಹಿಳೆಯನ್ನು ಅಪರಾಧ ಜಗತ್ತಿಗೆ ದೂಡುತ್ತದೆ. ಒಮ್ಮೆ ಈ ಜಗತ್ತಿಗೆ ಕಾಲಿಟ್ಟವಳು ಸಹಜ ಜೀವನಕ್ಕೆ ಮರಳುವುದು ಕಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT