ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ ಮಸೂದೆ ಪ್ರತಿಗಳ ದಹನ

Last Updated 4 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ರಾಳೇಗಣಸಿದ್ಧಿ/ಗಾಜಿಯಾಬಾದ್/ನವದೆಹಲಿ (ಪಿಟಿಐ): ಸರ್ಕಾರವು ಲೋಕಸಭೆಯಲ್ಲಿ ಗುರುವಾರ ಮಂಡಿಸಿದ ಲೋಕಪಾಲ ಮಸೂದೆ `ದುರ್ಬಲ, ಬಡವ ಹಾಗೂ ದಲಿತ ವಿರೋಧಿ~ ಎಂದು ಖಂಡಿಸಿ, ಅದರ ಪ್ರತಿಗಳನ್ನು ಗಾಂಧಿವಾದಿ ಅಣ್ಣಾ ಹಜಾರೆ ಮತ್ತು ನಾಗರಿಕ ಸಮಾಜದ ಸದಸ್ಯರು ದಹಿಸಿದರು.

ಹಜಾರೆ ಮತ್ತು ಬೆಂಬಲಿಗರು ಮಹಾರಾಷ್ಟ್ರದ ರಾಳೇಗಣಸಿದ್ಧಿಯಲ್ಲಿ ಹಾಗೂ ನಾಗರಿಕ ಸಮಾಜದ ಸದಸ್ಯರಾದ ಅರವಿಂದ ಕೇಜ್ರಿವಾಲ್, ಪ್ರಶಾಂತ್ ಭೂಷಣ್, ಕಿರಣ್ ಬೇಡಿ ಇನ್ನಿತರರು ಉತ್ತರಪ್ರದೇಶದ ಗಾಜಿಯಾಬಾದ್ ಬಳಿಯ ಕೌಶಂಬಿ ಪ್ರದೇಶದಲ್ಲಿ ಸರ್ಕಾರದ ಲೋಕಪಾಲ ಮಸೂದೆಯ ಪ್ರತಿಗಳನ್ನು ಸುಟ್ಟು ಪ್ರತಿಭಟನೆ ವ್ಯಕ್ತಪಡಿಸಿದರು.
 
ಇದಲ್ಲದೇ ಸಂಸತ್ತಿನ ಹೊರಗೆ ಮತ್ತು ದೇಶದ ವಿವಿಧೆಡೆ ಅಣ್ಣಾ ತಂಡ ಪ್ರತಿಭಟಿಸಿತು. ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಭ್ರಷ್ಟಾಚಾರ ವಿರುದ್ಧ ತನಿಖೆ ನಡೆಸಲು ಸಾಧ್ಯವಿರುವ ಸ್ವತಂತ್ರ ಸಂಸ್ಥೆ ಸ್ಥಾಪಿಸಲು ಒತ್ತಾಯಿಸಿದರು.

ಈ ಸಂಬಂಧ ಕಠಿಣ ಕಾಯ್ದೆ ಜಾರಿಯಾಗದಿದ್ದಲ್ಲಿ ಆಗಸ್ಟ್ 16ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹಜಾರೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ದೇಶದಿಂದ ಭ್ರಷ್ಟಾಚಾರವನ್ನು ಸಂಫೂರ್ಣ ತೊಲಗಿಸಲು ಇದು ಕೊನೆಯ ಅವಕಾಶವಾಗಿದ್ದು, ಬಲಿಷ್ಠ ಲೋಕಪಾಲ ಮಸೂದೆ ಜಾರಿಯಾಗುವವರೆಗೆ ಹೋರಾಡಲಾಗುವುದು ಎಂದು ಘೋಷಿಸಿದರು. ಸರ್ಕಾರ ಮಂಡಿಸಿರುವ ಮಸೂದೆ ಅತ್ಯಂತ ದುರ್ಬಲ ಮತ್ತು ಕೆಟ್ಟದ್ದು ಎಂದ ಅವರು, ನಮಗೆ ಹೊಸ ಮಸೂದೆ ಬೇಕೆಂದು ಆಗ್ರಹಿಸಿದರು.

ಸರ್ಕಾರದ ಖಂಡನೆ: (ನವದೆಹಲಿ ವರದಿ): ಲೋಕಪಾಲ ಮಸೂದೆಯ ಪ್ರತಿಗಳಿಗೆ ಬೆಂಕಿ ಹಚ್ಚಿರುವ ಅಣ್ಣಾ ಹಜಾರೆ ನೇತೃತ್ವದ ಸಾಮಾಜಿಕ ಕಾರ್ಯಕರ್ತರ ಕ್ರಮವನ್ನು ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು ಗುರುವಾರ ಕಟುವಾಗಿ ಟೀಕಿಸಿದ್ದಾರೆ. `ಸಂಸತ್ ಬಗ್ಗೆ ವಿಶ್ವಾಸ ಹೊಂದಿರುವುದಾಗಿ ಹೇಳುವ ಅಣ್ಣಾ ಅವರ ತಂಡ, ಸಂಸತ್ತಿನ ಆಸ್ತಿಯಾದ ಲೋಕಪಾಲ ಮಸೂದೆಯ ಪ್ರತಿಗಳನ್ನು ಸುಟ್ಟಿರುವುದು ಅಕ್ಷಮ್ಯ~ ಎಂದು ಸಚಿವರು ಖಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT