ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ ಮಸೂದೆ ವ್ಯಾಪ್ತಿಗೆ ಪ್ರಧಾನಿ ಸ್ಥಾನ...

Last Updated 18 ಜೂನ್ 2011, 19:30 IST
ಅಕ್ಷರ ಗಾತ್ರ

 ನವದೆಹಲಿ (ಪಿಟಿಐ/ಐಎಎನ್‌ಎಸ್): ಪ್ರಧಾನಿ ಅವರನ್ನು ಲೋಕಪಾಲ ಮಸೂದೆ ವ್ಯಾಪ್ತಿಗೆ ತರುವ ವಿವಾದಾತ್ಮಕ ವಿಚಾರ ಕುರಿತಂತೆ ಸರ್ಕಾರ ಶೀಘ್ರದಲ್ಲೇ ಸರ್ವಪಕ್ಷಗಳ ಸಭೆ  ಕರೆಯುವ ಸಾಧ್ಯತೆ ಇದೆ.
ಜಂಟಿ ಕರಡು ರಚನಾ ಸಮಿತಿಯಲ್ಲಿರುವ ಸರ್ಕಾರದ ಪ್ರತಿನಿಧಿಗಳು ಮತ್ತು ನಾಗರಿಕ ಪ್ರತಿನಿಧಿಗಳ ನಡುವೆ ಈ ವಿಚಾರದಲ್ಲಿ ತೀವ್ರ ಭಿನ್ನಾಭಿಪ್ರಾಯ ಉಂಟಾಗಿರುವ ಹಿನ್ನೆಲೆಯಲ್ಲಿ ಶನಿವಾರ ನಡೆದ ಕಾಂಗ್ರೆಸ್‌ನ ಪ್ರಮುಖರ ಸಭೆಯಲ್ಲಿ ಸರ್ವ ಪಕ್ಷಗಳ ಸಭೆ ಕರೆಯುವ ನಿರ್ಧಾರ ಕೈಗೊಳ್ಳಲಾಗಿದೆ.

ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ  ನೇತೃತ್ವದಲ್ಲಿ ನಡೆದ ಸಭೆಯಲ್ಲಿ   ಪ್ರಧಾನಿ ಮನಮೋಹನ್ ಸಿಂಗ್, ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಗೃಹ ಸಚಿವ ಪಿ. ಚಿದಂಬರಂ ಸೇರಿದಂತೆ  ಅನೇಕ ಹಿರಿಯ ಮುಖಂಡರು ಭಾಗವಹಿಸಿದ್ದರು. 
 
ಶುಕ್ರವಾರ ರಾತ್ರಿ ಕೂಡ ಇದೇ ವಿಚಾರವಾಗಿ ಎರಡು ತಾಸುಗಳ ಕಾಲ ಸಭೆ ನಡೆಸಲಾಗಿತ್ತು. ಲೋಕಪಾಲ ಮಸೂದೆ ವ್ಯಾಪ್ತಿಗೆ ಪ್ರಧಾನಿ ಮತ್ತು ನ್ಯಾಯಾಂಗದ ಮುಖ್ಯಸ್ಥರನ್ನು ತರಬೇಕು ಎಂಬುದು ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಪ್ರತಿನಿಧಿಗಳ ಒತ್ತಾಯ.

ಆದರೆ ಸಮಿತಿಯಲ್ಲಿರುವ ಸಚಿವರು ಇದಕ್ಕೆ ವಿರುದ್ಧ ನಿಲುವು ತಳೆದಿದ್ದರಿಂದ ಬುಧವಾರ ನಡೆದ ಕರಡು ರಚನಾ ಸಮಿತಿ ಸಭೆಯಲ್ಲಿ ಒಮ್ಮತ ಮೂಡಲಿಲ್ಲ.  ಜಂಟಿ ಕರಡು ರಚನಾ ಸಮಿತಿಯ ಮುಂದಿನ ಸಭೆಯು ಜೂ 20, 21ರಂದು ನಡೆಯಲಿದೆ.

ತೆಲಂಗಾಣ ವಿಷಯ ಚರ್ಚೆ: ಕಗ್ಗಂಟಾಗಿರುವ ತೆಲಂಗಾಣ ವಿವಾದ ಕುರಿತು ಶುಕ್ರವಾರ ಮತ್ತು ಶನಿವಾರ ನಡೆದ ಕಾಂಗ್ರೆಸ್‌ನ ಉನ್ನತ ಸಮಿತಿ ಸಭೆಯಲ್ಲಿ ಚರ್ಚೆ ನಡೆದರೂ ಅಂತಿಮ ನಿರ್ಧಾರಕ್ಕೆ ಬರಲು ಆಗಿಲ್ಲ.
ಈ ವಿಚಾರ ಪ್ರಸ್ತಾಪಿಸಿದ ಸಚಿವರಾದ ಪ್ರಣವ್ ಮುಖರ್ಜಿ ಮತ್ತು ಪಿ. ಚಿದಂಬರಂ, ಈ ಬಗ್ಗೆ ಪ್ರಧಾನಿ ಮತ್ತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಿಲುವು ತಿಳಿಯಲು ಬಯಸಿದರು.

ಪ್ರತ್ಯೇಕ ತೆಲಂಗಾಣ ರಚನೆ ಕುರಿತು ನಿರ್ಧಾರ ಕೈಗೊಳ್ಳದಿದ್ದರೆ ಆಂಧ್ರಪ್ರದೇಶದ ಕಾಂಗ್ರೆಸ್ ಸಂಸದರು, ಆ ರಾಜ್ಯದ ಶಾಸಕರು ಮತ್ತು ಸಚಿವರು ಅಧಿಕಾರ ತೊರೆಯುವುದಾಗಿ ಬೆದರಿಕೆ ಹಾಕಿರುವುದು ಪಕ್ಷದ ಹೈಕಮಾಂಡ್‌ಗೆ ತಲೆಬಿಸಿ ತಂದಿದೆ.

ಪಟ್ನಾ ವರದಿ: ಪ್ರಧಾನ ಮಂತ್ರಿ ಅವರನ್ನು ಲೋಕಪಾಲ ಮಸೂದೆ ವ್ಯಾಪ್ತಿಯಡಿ ತರುವ ಬಗ್ಗೆ ಕಾಂಗ್ರೆಸ್ ಮತ್ತು ಸರ್ಕಾರ, ತಮ್ಮ ನಿಲುವುಗಳನ್ನು ಪ್ರಕಟಿಸಿದ ಮೇಲೆ ಅಭಿಪ್ರಾಯ ತಿಳಿಸಲು ಬಿಜೆಪಿ ನಿರ್ಧರಿಸಿದೆ. `ಲೋಕಪಾಲ  ಮಸೂದೆ ಕರಡು ರಚನೆ ಸಂಬಂಧ ಸರ್ವಪಕ್ಷ ಸಭೆ ಕರೆದರೆ ಅದರಲ್ಲಿ ಪಾಲ್ಗೊಳ್ಳಲು ಪಕ್ಷ ಸಿದ್ಧವಿದೆ.

ಆದರೆ ಪ್ರಧಾನಿಯವರನ್ನು ಮಸೂದೆ ವ್ಯಾಪ್ತಿಯಡಿ ತರುವ ಬಗ್ಗೆ ಯುಪಿಎ ಮತ್ತು ಕಾಂಗ್ರೆಸ್‌ನ ನಿಲುವು ಏನೆಂಬುದನ್ನು ತಿಳಿಯಲು ನಾವು ಬಯಸುತ್ತೇವೆ~ ಎಂದು ವಕ್ತಾರ ರವಿಶಂಕರ್ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಿತ್ರಪಕ್ಷಗಳಲ್ಲಿ ಭಿನ್ನಾಭಿಪ್ರಾಯ: ಪ್ರಧಾನಿಯವರನ್ನು ಲೋಕಪಾಲ  ಮಸೂದೆ ಚೌಕಟ್ಟಿಗೆ ಒಳಪಡಿಸಬೇಕೇ, ಬೇಡವೇ ಎಂಬುದಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಯುಪಿಎ ಸರ್ಕಾರದ ಮಿತ್ರಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಕಂಡುಬಂದಿದೆ.

ಪ್ರಧಾನಿ ಅವರನ್ನು ಈ ಮಸೂದೆ ವ್ಯಾಪ್ತಿಯಡಿ ತರಬಾರದು ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಹೇಳಿದ್ದರೆ, ಅದಕ್ಕೆ ತನ್ನದೇನೂ ಆಕ್ಷೇಪವಿಲ್ಲ ಎಂದು ಡಿಎಂಕೆ ಹೇಳಿದೆ.ಪ್ರಧಾನಿಯಾದವರು ಅನೇಕ ರಹಸ್ಯ ವಿಷಯಗಳ ಜತೆ ವ್ಯವಹರಿಸಬೇಕಾಗುತ್ತದೆ. ಅವರನ್ನು ಮಸೂದೆ ವ್ಯಾಪ್ತಿಗೆ ತಂದರೆ ಆಡಳಿತ ವ್ಯವಸ್ಥೆ ದುರ್ಬಲಗೊಳ್ಳುತ್ತದೆ ಎಂದು ಎನ್‌ಸಿಪಿ ವಕ್ತಾರ ಡಿ.ಪಿ.ತ್ರಿಪಾಠಿ ಹೇಳಿದ್ದಾರೆ.

ಆದರೆ ಡಿಎಂಕೆ ವಕ್ತಾರ ಟಿ.ಕೆ.ಎಸ್.ಇಳಂಗೋವನ್ ಮಾತನಾಡಿ, ಪ್ರಧಾನಿಯವರನ್ನು ಮಸೂದೆ ವ್ಯಾಪ್ತಿಯಡಿ ತರುವುದಕ್ಕೆ ತಮ್ಮ  ಪಕ್ಷದ ವಿರೋಧವಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT