ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ ಮಸೂದೆಗೆ ಮಾರ್ಪಾಡು: ಸ್ಥಾಯಿ ಸಮಿತಿ ಮುಂದೆ ಪ್ರತಿಪಾದನೆಗೆ ಸಿವಿಸಿ ಸಿದ್ಧತೆ

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭ್ರಷ್ಟಾಚಾರ ಪ್ರಕರಣಗ ಳಲ್ಲಿ ಮೇಲ್ಮಟ್ಟದ ಆಡಳಿತಶಾಹಿಯನ್ನು ತನಿಖೆಗೆ ಒಳಪಡಿಸುವಲ್ಲಿ ಹೆಚ್ಚಿನ ಅಧಿಕಾರ ಕೋರುವ ಜತೆಗೆ ಈಗ ಸಿದ್ಧಪಡಿಸಲಾಗಿರುವ ಲೋಕಪಾಲ ಮಸೂದೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲು ಕೇಂದ್ರ ಜಾಗೃತ ಆಯೋಗವು (ಸಿವಿಸಿ) ಸಂಸತ್ ಸ್ಥಾಯಿ ಸಮಿತಿಗೆ ಸಲಹೆ ನೀಡಲಿದೆ.

ಸರ್ಕಾರಿ ಇಲಾಖೆಗಳ ಭ್ರಷ್ಟಾಚಾರಕ್ಕೆ ತಡೆಯೊಡ್ಡುವಲ್ಲಿ ಆಯೋಗದ ಪಾತ್ರ ಕುರಿತ ವಿವರವಾದ ಪ್ರಾತ್ಯಕ್ಷಿಕೆಯನ್ನು ಸ್ಥಾಯಿ ಸಮಿತಿಗೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿರುವುದಾಗಿ ಆಯೋಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಾಗರಿಕ ಸಮಿತಿ ಹೇಳುತ್ತಿರುವ ರೀತಿಯಲ್ಲಿ ಮಸೂದೆ ಜಾರಿಗೊಂಡರೆ ಲೋಕಪಾಲರ ಮತ್ತು ಕೇಂದ್ರ ಜಾಗೃತ ಆಯುಕ್ತರ ಕಾರ್ಯನಿರ್ವಹಣೆ ನಡುವೆ ಸಂಘರ್ಷ ಏರ್ಪಡುವ ಸಂಭವವಿದೆ. ಪ್ರಸ್ತುತ ಕೇಂದ್ರ ಸರ್ಕಾರಿ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ದೂರು ಕೇಳಿಬಂದಾಗ ಅವರನ್ನು ತನಿಖೆಗೆ ಒಳಪಡಿಸುವ ಅಧಿಕಾರ ಸಿವಿಸಿಗೆ ಇದೆ. ಇದೀಗ ಲೋಕಪಾಲರಿಗೂ ಈ ಅಧಿಕಾರ ನೀಡಲಾಗಿದೆ ಎಂದೂ ಅವರು ವಿವರಿಸುತ್ತಾರೆ.

ಕೇಂದ್ರ ಜಾಗೃತ ಆಯುಕ್ತ ಪ್ರದೀಪ್ ಕುಮಾರ್,  ಉಪ ಆಯುಕ್ತರಾದ ಆರ್.ಶ್ರೀಕುಮಾರ್ ಮತ್ತು ಜೆ.ಎಂ.ಗರ್ಗ್ ಸಂಸತ್ತಿನ ಸಮಿತಿ ಮುಂದೆ ಸೆ.7ರಂದು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.
 
ಸಿವಿಸಿ ಮತ್ತು ಉದ್ದೇಶಿತ ಲೋಕಪಾಲರ ನಡುವೆ ಕಾರ್ಯ ಹಂಚಿಕೆ ಸೂಕ್ತವಾಗಿ ಇರಬೇಕು. ಭ್ರಷ್ಟಾಚಾರ ವಿರುದ್ಧದ ಪ್ರಕರಣಗಳ ತನಿಖೆಗೆ ತೊಡಕಾಗದಂತೆ ಇದು ಇರಬೇಕಾದರೆ ಲೋಕಪಾಲ ಮಸೂದೆಗೆ ಕೆಲವು ಬದಲಾವಣೆಗಳು ಅಗತ್ಯ. ಲೋಕಪಾಲ ಸಮಿತಿಯಲ್ಲಿ ಕೇಂದ್ರ ಜಾಗೃತ ಆಯುಕ್ತರನ್ನು ಅಥವಾ ಇಬ್ಬರಲ್ಲಿ ಒಬ್ಬ ಉಪ ಆಯುಕ್ತರನ್ನು ನೇಮಿಸಿದರೆ ತನಿಖೆಗಳು ಸುಗಮವಾಗಿ ನಡೆಯಲು ಅನುಕೂಲ ಎನ್ನುವುದು ಅವರ ಪ್ರತಿಪಾದನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT