ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ ಸಭೆ ಬಹಿಷ್ಕರಿಸಬಾರದಿತ್ತು

Last Updated 7 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಬಾಬಾ ರಾಮದೇವ್ ಹಾಗೂ ಪ್ರತಿಭಟನಾ ನಿರತರನ್ನು ದೆಹಲಿ ಪೊಲೀಸರು ತೆರವುಗೊಳಿಸಿದ ಪ್ರಕರಣಕ್ಕೆ ವಿರೋಧ ವ್ಯಕ್ತಪಡಿಸಿದ ನಾಗರಿಕಸಮಾಜ ಪ್ರತಿನಿಧಿಗಳು ಲೋಕಪಾಲ್ ಮಸೂದೆ ಕರಡು ರಚನಾ ಸಮಿತಿಯ ಸಭೆಯನ್ನು ಬಹಿಷ್ಕರಿಸಬಾರದಿತ್ತು~ ಎಂದು `ಐ ಪೇಡ್ ಎ ಬ್ರೈಬ್~ (ಐಪಿಎಬಿ) ಆನ್‌ಲೈನ್ ಸಂಘಟನೆಯ ಸಂಯೋಜಕ ಟಿ.ಆರ್. ರಘುನಂದನ್ ಅಭಿಪ್ರಾಯಪಟ್ಟರು. 

  ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು `ಸಭೆಯನ್ನು ಬಹಿಷ್ಕರಿಸಿದ್ದರಿಂದಾಗಿ ಅಪೂರ್ವ ಅವಕಾಶವೊಂದು ಕೈ ತಪ್ಪಿದಂತಾಗಿದೆ. ಸಭೆಯಲ್ಲಿ ಭಾಗವಹಿಸಿ ಪ್ರತಿಭಟನೆ ನಡೆಸಿದ್ದರೆ ಅದಕ್ಕೆ ಸಾಕಷ್ಟು ಒತ್ತು ಸಿಗುತ್ತಿತ್ತು~ ಎಂದರು.

`ಜನ ಲೋಕಪಾಲ್ ಕಾಯ್ದೆ ಅಸ್ತಿತ್ವಕ್ಕೆ ಬರುವವರೆಗೆ ಸರ್ಕಾರದೊಂದಿಗೆ ನಿರಂತರ ಮಾತುಕತೆ ಅವಶ್ಯಕ. ಈ ಸಂದರ್ಭದಲ್ಲಿ ಯಾವುದೇ ಪ್ರಚೋದನೆಗೆ ನಾಗರಿಕ ಸಮಾಜದ ಪ್ರತಿನಿಧಿಗಳು ಹಾದಿ ತಪ್ಪಬಾರದು~ ಎಂದು ಅವರು ತಿಳಿಸಿದರು.

`ಕರಡು ರಚನೆಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಅಣ್ಣಾ ಹಜಾರೆ ಹಾಗೂ ಪ್ರತಿನಿಧಿಗಳು ಚರ್ಚೆ, ಸಂಧಾನ ಮುಂದುವರಿಸಬೇಕು. ಅನೇಕ ಸಮಸ್ಯೆಗಳು ಸಭೆಯಲ್ಲಿ ಚರ್ಚೆಯಾಗಿದ್ದು ಕೆಲವು ಭಿನ್ನಾಭಿಪ್ರಾಯಗಳನ್ನು ಅಲ್ಲಿಯೇ ಬಗೆಹರಿಸಿಕೊಳ್ಳುವುದು ಸೂಕ್ತ~ ಎಂದು ಹೇಳಿದರು.

`ರಾಜ್ಯದ ಸಬ್‌ರಿಜಿಸ್ಟ್ರಾರ್ ಕಚೇರಿಗಳು ಲಂಚದ ಕೂಪಗಳಾಗಿರುವುದು ಐಪಿಎಬಿ ನಡೆಸಿದ ಅಧ್ಯಯನದಿಂದ ಬಹಿರಂಗಗೊಂಡಿದೆ. ಕಚೇರಿಯ ಸಿಬ್ಬಂದಿ ನೇರವಾಗಿ ಲಂಚ ಪಡೆಯುತ್ತಿರುವುದು 198 ವರದಿಗಳಲ್ಲಿ ಬಹಿರಂಗಗೊಂಡಿದೆ.113 ಪ್ರಕರಣಗಳಲ್ಲಿ ಬಿಲ್ಡರ್‌ಗಳು,ವಕೀಲರು, ಏಜೆಂಟರ ಮುಖಾಂತರ ಹಣ ಪಡೆಯಲಾಗಿದೆ. 42 ಪ್ರಕರಣಗಳಲ್ಲಿ ಲಂಚ ಪಡೆದಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ~ ಎಂದು ಅವರು ತಿಳಿಸಿದರು.

`ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ವರ್ಗಾವಣೆ ಎಂಬುದು ಉದ್ಯಮವಾಗಿದೆ. 2004ರಿಂದ ಈವರೆಗೆ ವಿವಿಧ ಪಕ್ಷಗಳ ಅಧಿಕಾರಾವಧಿಯಲ್ಲಿ ಬೆಂಗಳೂರು ಸುತ್ತಮುತ್ತಲಿನ ಕಚೇರಿಗಳಲ್ಲಿ 1462 ವರ್ಗಾವಣೆಗಳಾಗಿವೆ.ವರ್ಗಾವಣೆಗಾಗಿ ಶಾಸಕರು ಸಂಸದರಿಂದ ಕೂಡ ಶಿಫಾರಸು ಪತ್ರ ತರಲಾಗಿದೆ~ ಎಂದರು.

 `ವರ್ಗಾವಣೆಗೆ ಸಂಬಂಧಿಸಿದಂತೆ ಕಾರಣ ಕೇಳಿದರೆ ಸಾರ್ವಜನಿಕ ಹಿತಾಸಕ್ತಿಯ ಕಾರಣ ನೀಡಲಾಗುತ್ತಿದೆ. ಹಾಗಾದರೆ ಸಾರ್ವಜನಿಕ ಹಿತಾಸಕ್ತಿಯಿಂದ ನಡೆದ ವರ್ಗಾವಣೆಯ ಬಗ್ಗೆ ಸಾರ್ವಜನಿಕವಾಗಿ ಸಂಬಂಧಪಟ್ಟವರು ಹೇಳಿಕೆ ನೀಡಬೇಕು~ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT