ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ ಹುದ್ದೆ ಆಕಾಂಕ್ಷಿಯಲ್ಲ- ಹೆಗ್ಡೆ

Last Updated 16 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಶನಿವಾರ ನಡೆದ ಲೋಕಪಾಲ ಮಸೂದೆಯ ಜಂಟಿ ಸಮಿತಿಯ ಮೊತ್ತಮೊದಲ ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಲೋಕಾಯುಕ್ತ ಸಂತೋಷ್ ಹೆಗ್ಡೆ ಲೋಕಪಾಲ ಹುದ್ದೆಗೆ ತಾವು ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ್ ಹೆಗ್ಡೆ ಅವರಿಗೆ ಈ ಸಭೆ, ವಕೀಲರಾಗಿ ಈ ಮುನ್ನ ತಮಗೆ ಪರಿಚಿತರಾಗಿದ್ದ ಕಪಿಲ್ ಸಿಬಲ್, ಪಿ.ಚಿದಂಬರಂ ಮತ್ತು ಸಲ್ಮಾನ್ ಖುರ್ಷಿದ್ ಅವರನ್ನು ಅಪರೂಪಕ್ಕೆ ಭೇಟಿಯಾಗುವ ಅವಕಾಶ ಕಲ್ಪಿಸಿತು. ಅವರಿಗೆ ಕರ್ನಾಟಕದವರೇ ಆದ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ಅಪರೂಪದವರೇನಲ್ಲ.

ಇದಕ್ಕೆ ಮುಂಚೆ ಶುಕ್ರವಾರ ಬೆಂಗಳೂರಿನಿಂದ ಬಂದ ಅವರು ಶಾಂತಿ ಭೂಷಣ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ಭೇಟಿಯಾಗಿದ್ದರು.

‘ಪ್ರಣವ್ ಮುಖರ್ಜಿ ಅವರನ್ನು ಬಿಟ್ಟು ಉಳಿದ ಸಚಿವರೆಲ್ಲರೂ ನನಗೆ ಪರಿಚಿತರೇ ಆಗಿದ್ದರು. ಇವತ್ತಿನ ಸಭೆಯಲ್ಲಿ ಪ್ರಣವ್ ಅವರ ಪರಿಚಯವಾಯಿತು. ಅದೇ ರೀತಿ ಅಣ್ಣಾ ಹಜಾರೆ ಅವರನ್ನು ಶುಕ್ರವಾರದ ತನಕ ನಾನು ಭೇಟಿಯಾಗಿರಲೇ ಇಲ್ಲ’ ಎಂದೂ ಅವರು ತಿಳಿಸಿದರು.

ಕರಡು ರಚನಾ ಸಮಿತಿಯಲ್ಲಿರುವ ಏಕೈಕ ಲೋಕಾಯುಕ್ತರಾದ ಹೆಗ್ಡೆ ಮೊದಲ ಸಭೆಯಲ್ಲಿ ಹೆಚ್ಚು ಮಾತನಾಡಲಿಲ್ಲ. ಸಮಿತಿಯ ಎಲ್ಲಾ ಸಭೆಗಳಿಗೂ ಹಾಜರಾಗುವುದು ತಮಗೆ ಕಷ್ಟ ಎಂದು ಪ್ರಣವ್ ಅವರಿಗೆ ಇದೇ ವೇಳೆ ತಿಳಿಸಿದರು.

‘ಕರ್ನಾಟಕ ಲೋಕಾಯುಕ್ತನಾಗಿ ನನ್ನ ಅವಧಿ ಇನ್ನು ಕೆಲವೇ ತಿಂಗಳುಗಳಲ್ಲಿ ಮುಗಿಯಲಿದ್ದು, ಮಾಡಬೇಕಾದ ಕೆಲಸ ತುಂಬಾ ಇದೆ. ಅಕ್ರಮ ಗಣಿ ಕುರಿತ ನನ್ನ ಎರಡನೇ ವರದಿಯನ್ನು ಸಲ್ಲಿಸಬೇಕಾಗಿದೆ’ ಎಂದರು.

‘ಪರಿಣಾಮಕಾರಿ ಲೋಕಪಾಲ ಮಸೂದೆ ಇರಬೇಕೆಂಬುದು ನನ್ನ ಒತ್ತಾಯ. ಆದರೆ ಈ ಹುದ್ದೆಗೆ ನಾನು ಆಕಾಂಕ್ಷಿಯಲ್ಲ. ಬೆಂಗಳೂರನ್ನು ಬಿಟ್ಟು ಬೇರೆಲ್ಲಿಗೂ ಕಾಲು ಇಡುವುದಿಲ್ಲವೆಂದು ನನ್ನ ಪತ್ನಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಲೋಕಪಾಲ ಹುದ್ದೆಗೆ ಆಹ್ವಾನಿಸಿದರೂ ಒಪ್ಪಿಕೊಳ್ಳುವುದಿಲ್ಲ’ ಎಂದರು.

ಸಮಿತಿ ಸದಸ್ಯರಾಗಿರುವ ಹೆಗ್ಡೆ ಅವರು, ತಾವೇ ಹೇಳಿದ ಪ್ರಕಾರ ತಮಗೆ ಲಭ್ಯವಿರುವ ಸವಲತ್ತನ್ನೂ ಬಲು ಎಚ್ಚರಿಕೆಯಿಂದ ಬಳಸಿಕೊಳ್ಳುತ್ತಿದ್ದಾರೆ.

‘ಸರ್ಕಾರವೇ ಸಭೆಗೆ ಆಹ್ವಾನಿಸಿದ್ದರಿಂದ ವಿಮಾನದ ಟಿಕೆಟ್ ಕಳುಹಿಸಿಕೊಡುವಂತೆ ಸಮಿತಿಯ ಸಂಚಾಲಕರಾದ ವೀರಪ್ಪ ಮೊಯಿಲಿ ಅವರಿಗೆ ಕೋರಿದ್ದೆ. ಆದರೆ ಪ್ರತಿದಿನದ ವೆಚ್ಚಕ್ಕೆಂದು ನೀಡಲಾಗುವ 3,000 ರೂಪಾಯಿಯನ್ನು ನಾನು ತೆಗೆದುಕೊಳ್ಳುವುದಿಲ್ಲ. ಕರ್ನಾಟಕ ಭವನದಲ್ಲಿನ ಕೊಠಡಿಯ ಬಾಡಿಗೆ ಮತ್ತು ಆಹಾರಕ್ಕೆ ನನ್ನ ಜೇಬಿನಿಂದಲೇ ಹಣ ನೀಡುತ್ತಿದ್ದೇನೆ. ನಾನು ಸಮಿತಿ ಸದಸ್ಯತ್ವ ಒಪ್ಪಿಕೊಂಡಿದ್ದನ್ನು ಸೇರಿದಂತೆ ಇಂಥವೆಲ್ಲವನ್ನೂ ಪ್ರಶ್ನಿಸುವವರೂ ಇದ್ದೇ ಇರುತ್ತಾರೆ ಎಂಬುದು ನನಗೆ ಗೊತ್ತು. ಹೀಗಾಗಿ ನಿಯಮಾವಳಿಯ ಪ್ರಕಾರವೇ ನಡೆದುಕೊಳ್ಳುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT