ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲಕ್ಕೆ ನೀವೇಕೆ ಅಂಜುವಿರಿ: ಅಣ್ಣಾ ಹಜಾರೆ

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ಲೋಕಪಾಲ ಮಸೂದೆ ವ್ಯಾಪ್ತಿಗೆ ಪ್ರಧಾನಿಯವರನ್ನು ತಂದರೆ ಪ್ರಾಮಾಣಿಕರಾದ ಅವರು (ಮನಮೋಹನ್ ಸಿಂಗ್) ಅಂಜುವುದೇಕೆ~ ಎಂದು ಲೋಕಪಾಲ ಕರಡು ರಚನಾ ಜಂಟಿ ಸಮಿತಿಯಲ್ಲಿರುವ ಅಣ್ಣಾ ಹಜಾರೆ ಮುಂದಾಳತ್ವದ ನಾಗರಿಕ ಪ್ರತಿನಿಧಿಗಳ ತಂಡ ಪ್ರಶ್ನಿಸಿದೆ.

ಲೋಕಪಾಲ ಮಸೂದೆ ವ್ಯಾಪ್ತಿಗೆ ಪ್ರಧಾನಿ ಅವರನ್ನು ತರುವುದರಿಂದ ಸಂಸದೀಯ ವ್ಯವಸ್ಥೆ ಮತ್ತು ಸಂವಿಧಾನದ ತಳಹದಿಯೇ ಕುಸಿಯುತ್ತದೆ ಎಂಬ ಸರ್ಕಾರದ ಟೀಕೆಗೆ ಅಣ್ಣಾ ಹಜಾರೆ ಅವರ ತಂಡವು ಪ್ರಧಾನಿ ಅವರಿಗೆ ಪತ್ರ ಬರೆಯುವ ಮೂಲಕ ಪ್ರತ್ಯುತ್ತರ ನೀಡಿದೆ.

`ದೇಶಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಿಗಳಲ್ಲಿ ನೀವು (ಮನಮೋಹನ್ ಸಿಂಗ್) ಕೂಡ ಒಬ್ಬರು. ಆದರೆ ನಿಮ್ಮ ನೇತೃತ್ವದ ಸರ್ಕಾರ ಪ್ರಧಾನಿ ಅವರನ್ನು ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲು ಬಯುಸುತ್ತಿರುವುದು ವ್ಯವಸ್ಥೆಯ ವ್ಯಂಗ್ಯ~ ಎಂದು ಹೇಳಿದೆ.

`ಸರ್ಕಾರದ ಇಂತಹ ಧೋರಣೆ ನಮಗೆ ಅಚ್ಚರಿ ತಂದಿದೆ. ಪ್ರಧಾನಿ ವಿರುದ್ಧ ತನಿಖೆ ನಡೆಸುವ ಅಧಿಕಾರ ಸಿಬಿಐಗೆ ಇದೆ ಎಂದ ಮೇಲೆ ಪ್ರಾಮಾಣಿಕರಾದ ಪ್ರಧಾನಿಯವರು ಸ್ವಾಯತ್ತ ಸಂಸ್ಥೆಯಾದ ಲೋಕಪಾಲ ನಡೆಸುವ ತನಿಖೆಗೆ ಏಕೆ ಹೆದರಬೇಕು~ ಎಂದು ಮನಮೋಹನ್ ಸಿಂಗ್ ಅವರಿಗೆ ಬರೆದಿರುವ 3 ಪುಟಗಳ ಪತ್ರದಲ್ಲಿ ಪ್ರಶ್ನಿಸಲಾಗಿದೆ.

`ಈ ರೀತಿ ಟೀಕೆ- ಟಿಪ್ಪಣಿ ಮಾಡಿ ಸರ್ಕಾರ ಲೋಕಪಾಲ ಮಸೂದೆಯ ವ್ಯಾಪ್ತಿಯನ್ನು ಸಂಕುಚಿತಗೊಳಿಸಲು ನೋಡುತ್ತಿದೆ. ಉದ್ದೇಶಿತ ಮಸೂದೆಯಿಂದ ಪ್ರಧಾನಿ ಅವರನ್ನು ಹೊರಗಿಡುವುದು ಅವನತಿ ತರುವ ಧೋರಣೆ ಆಗಿದೆ~ ಹಜಾರೆ ತಂಡವು ಹೇಳಿದೆ.

`ಈಗ ಸಮಿತಿಯಲ್ಲಿರುವ ಸರ್ಕಾರದ ಐವರು ಪ್ರತಿನಿಧಿಗಳಲ್ಲಿ ಮೂವರು ಸಚಿವರು ಈ ಮೊದಲು ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಧಾನಿ ಅವರನ್ನು ಲೋಕಪಾಲ ವ್ಯಾಪ್ತಿಗೆ ತರಬೇಕು ಎಂದು ಅಭಿಮತ ವ್ಯಕ್ತಪಡಿಸಿದ್ದರು. ಜಂಟಿ ಕರಡು ಸಮಿತಿಯ ಅಧ್ಯಕ್ಷರಾದ ಪ್ರಣವ್ ಮುಖರ್ಜಿ ಅವರು 2001ರಲ್ಲಿ ಲೋಕಪಾಲ ಮಸೂದೆ ರಚನೆ ಕುರಿತಂತೆ ರಚಿತವಾಗಿದ್ದ ಇಂತಹದ್ದೇ ಒಂದು ಸಮಿತಿಗೆ ಅಧ್ಯಕ್ಷರಾಗಿದ್ದಾಗ ಪ್ರಧಾನಿ ಅವರನ್ನು ಈ ಮಸೂದೆ ವ್ಯಾಪ್ತಿಗೆ ತರಲು ಪ್ರತಿಪಾದಿಸಿದ್ದರು. ಅದನ್ನು ಆಗಿನ ಪ್ರಧಾನಿ ವಾಜಪೇಯಿ ಅವರು ಒಪ್ಪಿದ್ದರು. ಹಾಗೆಯೇ ಕಾನೂನು ಸಚಿವ ವೀರಪ್ಪ ಮೊಯಿಲಿ, ಗೃಹ ಸಚಿವ ಪಿ. ಚಿದಂಬರಂ ಕೂಡ ಇಂತಹದ್ದೇ ಆಶಯ ವ್ಯಕ್ತಪಡಿಸಿದ್ದರು~ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT