ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ್‌ ಜಾರಿಯಾದರೆ ಕಾಂಗ್ರೆಸ್‌ಗೆ ಸಂಕಷ್ಟ

ಮಹಿಳಾ ಮೋರ್ಚಾ ಸಭೆಯಲ್ಲಿ ಶಾಸಕ ತಿಪ್ಪಾರೆಡ್ಡಿ ಹೇಳಿಕೆ
Last Updated 16 ಡಿಸೆಂಬರ್ 2013, 5:54 IST
ಅಕ್ಷರ ಗಾತ್ರ

ಚಿತ್ರದುರ್ಗ: ಲೋಕಪಾಲ್ ಮಸೂದೆ ಜಾರಿಯಾದರೆ ಕಾಂಗ್ರೆಸ್‌ನ  ಅರ್ಧದಷ್ಟು ಮುಖಂಡರಿಗೆ ಜೈಲು ವಾಸವೇ ಗತಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭವಿಷ್ಯ ನುಡಿದರು.

ನಗರದ ಕ್ರೀಡಾಭವನದಲ್ಲಿ ಭಾನುವಾರ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಮೋರ್ಚಾ ಜಿಲ್ಲಾ  ಘಟಕದ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.

ಲೋಕ್‌ಪಾಲ್‌ ಅಂಗೀಕಾರವಾದರೆ ಜೈಲು ಸೇರುತ್ತೇವೆ ಎನ್ನುವ  ಆತಂಕದಿಂದ ಕಾಂಗ್ರೆಸ್‌ ಮುಖಂಡರು ಮಸೂದೆಯನ್ನು ಮೂಲೆ ಗುಂಪು ಮಾಡಲು ಯತ್ನಿಸುತ್ತಿದ್ದಾರೆ. ಆದರೆ, ನಾಲ್ಕು ರಾಜ್ಯಗಳ ನಡೆದ ಚುನಾವಣೆಯಲ್ಲಿ ಅದರಲ್ಲೂ ದೆಹಲಿಯ ಫಲಿತಾಂಶದ ಬಳಿಕ ರಾಹುಲ್ ಗಾಂಧಿ ಸ್ವಯಂ ಪ್ರೇರಿತರಾಗಿ ಲೋಕಪಾಲ್ ಮಸೂದೆ ಜಾರಿ ಮಾಡುವುದಾಗಿ ಹೇಳಿಕೆ ನೀಡಿದ್ದರು. ಅದಕ್ಕೆ ಅವರು ಬದ್ಧರಾಗಿರಬೇಕು. ನಮ್ಮ ಪಕ್ಷ ತಕ್ಷಣ ಸ್ಪಂದಿಸಿ ಯಾವುದೇ ಚರ್ಚೆ ಇಲ್ಲದೆ ಮಸೂದೆ ಒಪ್ಪಿಕೊಳ್ಳುವುದಾಗಿ ಹೇಳಿದೆ ಎಂದು ಹೇಳಿದರು.

ಕೇಂದ್ರ ಸಚಿವ ಸುಶೀಲ್‌ಕುಮಾರ್‌ ಶಿಂಧೆ ಮರಾಠಿಯಲ್ಲಿ ಮಾಡಿದ ಭಾಷಣದಲ್ಲಿ ಕಾಂಗ್ರೆಸ್ ಕಲ್ಲಿದ್ದಲು ಮುಟ್ಟಿದ್ದರಿಂದ ಕೈ ಮಸಿಯಾಗಿದೆ ತೊಳೆದುಕೊಂಡರೆ ಹೋಗುತ್ತದೆ ಎನ್ನುವುದಾಗಿ ಬಹಳ ಹಗುರವಾಗಿ ಮಾತನಾಡುವ ಮೂಲಕ ಕಾಂಗ್ರೆಸ್ ತಮ್ಮ ಸಂಸ್ಕೃತಿ ಎತ್ತಿ ತೋರಿದೆ. ಭ್ರಷ್ಟಾಚಾರ, ಹಗರಣಗಳು ಆ ಪಕ್ಷದ ಮುಖಂಡರಿಗೆ ಸಣ್ಣ ವಿಚಾರವೇ, ಕಾಂಗ್ರೆಸ್ ೨ಜಿ, ಕಲ್ಲಿದ್ದಲು, ಇಂಧನ, ಭೂ ಕಬಳಿಕೆ, ಕ್ರೀಡೆ ಸೇರಿದಂತೆ ಮತ್ತಿತರ ಎಲ್ಲ ರಂಗಗಳಲ್ಲಿ ಭ್ರಷ್ಟಾಚಾರ ಮಾಡಿದೆ ಎಂದು ದೂರಿದರು.

ಬಿಜೆಪಿಯಲ್ಲಿ ಎಲ್ಲ ಹಂತದಲ್ಲೂ ಮಹಿಳೆಯರಿಗೆ ಶೇ ೩೩ರಷ್ಟು ಅವಕಾಶ ಕಲ್ಪಿಸಿದ್ದೇವೆ. ಇದರಿಂದ ಅವರ ಹಕ್ಕುಗಳ ರಕ್ಷಣೆಗೆ ಅನುಕೂಲವಾಗಲಿದೆ. ಮಹಿಳಾ ಮೀಸಲು ಮಸೂದೆಗೆ ಬಿಜೆಪಿ ಸದಾ ಸಿದ್ಧವಿದೆ ಎಂದರು.

ದೇಶದಲ್ಲಿ ಮೋದಿ ಪ್ರಧಾನಮಂತ್ರಿ ಆಗಲಿದ್ದಾರೆ ಎನ್ನುವ ವಿಶ್ವಾಸದ ಮಾತುಗಳು ಇಲ್ಲಿನ ಜನ ಸಾಮಾನ್ಯರು ಸೇರಿದಂತೆ ವಿಶ್ವದ ವಿವಿಧ ಭಾಗಗಳಿಂದ ಕೇಳಿ ಬರುತ್ತಿದೆ. ಒಂದು ವೇಳೆ ಮೋದಿ ಪ್ರಧಾನಿಯಾದರೆ ಬಲಿಷ್ಠ ದೇಶ ಕಟ್ಟುವಲ್ಲಿ ಅನುಮಾನ ಬೇಡ ಎಂದು ಹೇಳಿದರು.

ಸಂಸತ್‌ ಸದಸ್ಯ ಜನಾರ್ದನಸ್ವಾಮಿ ಮಾತನಾಡಿ,  ಮೋದಿ ಭರವಸೆಯ ನಾಯಕರಾಗಿದ್ದಾರೆ. ಮೋದಿ ಪ್ರಧಾನಿಯಾದರೆ ದೇಶ ಬಲಿಷ್ಠಗೊಳ್ಳಲಿದೆ ಎನ್ನುವ ಆತಂಕವಾದಿಗಳು ಷಡ್ಯಂತ್ರ ರೂಪಿಸುತ್ತಿದ್ದಾರೆ. ಅಮೆರಿಕಾ ಸೇರಿದಂತೆ ವಿಶ್ವದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮೋದಿಗೆ ಬೆಂಬಲ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

ತಪ್ಪು ಕಲ್ಪನೆ ದೂರ ಮಾಡಿ. ದೇಶದ ಅಸ್ಥಿರತೆಗೆ ಯತ್ನಿಸುತ್ತಿರುವವರು ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ತೊಂದರೆ ಎನ್ನುವ ಸುದ್ದಿ ಬಿತ್ತರಿಸುತ್ತಾರೆ. ಅಂಥ ಪ್ರಸಂಗ ಎಲ್ಲೂ ನಡೆದಿಲ್ಲ. ಆತ್ಮಾವಲೋಕನ ಮಾಡಿಕೊಂಡು ಮತ ನೀಡಿ ಬಿಜೆಪಿ ಗೆಲ್ಲಿಸುವಂತೆ ಎಲ್ಲರಿಗೆ ಮನವಿ ಮಾಡಿಕೊಂಡರು.

ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ರತ್ನಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪಾಧ್ಯಕ್ಷೆ ಕೊಲ್ಲಿಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಜಿ.ಎಂ.ಸುರೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್, ಪ್ರಧಾನ ಕಾರ್ಯದರ್ಶಿ ಬದರಿನಾಥ್, ಉಪಾಧ್ಯಕ್ಷ ಕೆ.ಎಸ್.ನವೀನ್ ಕುಮಾರ್, ಮೋಹನ್, ರಾಜ್ಯ ಘಟಕದ ಮಹಿಳಾ ಕಾರ್ಯದರ್ಶಿ ಭಾರತಿ, ಕಾರ್ಯದರ್ಶಿ ಸುಧಾ, ಅನ್ನಪೂರ್ಣ, ಗಿರಿಜಾ, ಪ್ರತಿಭಾ ಹಾಜರಿದ್ದರು.

ಕಾಂಗ್ರೆಸ್‌ನಿಂದ ಮಹಿಳಾ ವಿರೋಧಿ ನೀತಿ

ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ನೀಡುತ್ತಿದ್ದ ಸ್ವಸಹಾಯ ಸಂಘಗಳ ಸಬ್ಸಿಡಿ ಹಣವನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿಲ್ಲ. ಇದರಿಂದ ಮಹಿಳಾ ವಿರೋಧಿ ನೀತಿ ಅನುಸರಿಸಲಾಗುತ್ತಿದೆ.
–ಶಾಸಕ ಜಿ.ಎಚ್. ತಿಪ್ಪಾರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT