ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಲ್ ಬಾಂಡ್

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪೂಜೆ ನಡೆದ ಪೆಂಡಾಲಿನಿಂದ ಗುಂಡಿನ ಮಳೆಗರೆವ ಸದ್ದು. ಕಂಠೀರವ ಸ್ಟುಡಿಯೋ ಆವರಣದಲ್ಲಿ ಚೆಲ್ಲಾಪಿಲ್ಲಿಯಾಗಿದ್ದವರೆಲ್ಲ ಒಂದೆಡೆ ಜಮೆಗೊಂಡು ಸದ್ದು ಬಂದಕಡೆ ಇಣುಕತೊಡಗಿದರು. ದೊಡ್ಡ ಪರದೆಯ ಮೇಲೆ `ಟ್ರೇಲರ್~ ಪ್ರಸಾರ.

ಮುಹೂರ್ತದ ದಿನವೇ ಕೆಲವು ಸ್ಟೆಪ್ಪು, ಪೋಸುಗಳನ್ನೊಳಗೊಂಡ `ಪ್ರೋಮೋ~ ತೋರಿಸಿದ ಖ್ಯಾತಿ ನಿರ್ದೇಶಕ ಸೂರಿ ಅವರಿಗೆ ಸಲ್ಲಬೇಕು. `ಪರಮಾತ್ಮ~ ತೆರೆಕಂಡ ಮರುದಿನವೇ ಪುನೀತ್ ಬಣ್ಣ ಹಚ್ಚಿಕೊಂಡು ಚಿತ್ರೀಕರಣಕ್ಕೆ ಸಿದ್ಧರಾಗಿದ್ದ ಹೊಸ ಸಿನಿಮಾ

`ಅಣ್ಣಾ ಬಾಂಡ್~.
ಮೈಗಂಟಿದ ಟಿ-ಶರ್ಟ್ ತೊಟ್ಟಿದ್ದ ಪುನೀತ್‌ಗೆ ಅಡಿಗಡಿಗೆ ಅಭಿಮಾನಿಗಳು ಇದಿರಾಗುತ್ತಿದ್ದರು. ಕೆಲವರು ಹೂಗುಚ್ಛ ಕೊಟ್ಟು ಶುಭ ಕೋರಿದರೆ, ಇನ್ನು ಕೆಲವರು ಹಸ್ತಾಕ್ಷರಕ್ಕೆ ಕೈಯೊಡ್ಡಿ ನಿಲ್ಲುತ್ತಿದ್ದರು.
 
ಯಾರಿಗೂ ನಿರಾಸೆ ಮಾಡದೆ ಪುನೀತ್ ಎಲ್ಲರನ್ನೂ ನಿಭಾಯಿಸುತ್ತಲೇ ಸಹಾಯಕ ಹಿಡಿದುಕೊಂಡ ಕೊಡೆಯಡಿ ಲವಲವಿಕೆಯಿಂದ ನಡೆದಾಡುತ್ತಿದ್ದರು.
 
ಅದೇ ಸಂದರ್ಭದಲ್ಲಿ ನಾಯಕಿರಾದ ಪ್ರಿಯಾಮಣಿ, ನಿಧಿ ಸುಬ್ಬಯ್ಯ ಅವರಿಗೆ ಕ್ಯಾಮೆರಾ ಕಣ್ಣು ಬಯಸಿದ ಭಂಗಿಯಲ್ಲಿ ನಿಲ್ಲುವ ಅನಿವಾರ್ಯತೆ.
 
ಒಂದು ಹಂತದಲ್ಲಂತೂ ಪ್ರಿಯಾಮಣಿ ನಾಲಗೆಯನ್ನು ಹೊರಗೆ ಚಾಚಿ ಥೇಟ್ ಚಾಮುಂಡೇಶ್ವರಿಯ ಪೋಸು ಕೊಟ್ಟು, ಅದು ತಮಾಷೆಗೆಂಬಂತೆ ನಕ್ಕರು.

ಒಟ್ಟಿನಲ್ಲಿ ಕಂಠೀರವ ಸ್ಟುಡಿಯೋದ ಹಸಿರು ಅಂಗಣದಲ್ಲಿ ಇದ್ದದ್ದು ಹಬ್ಬದ ವಾತಾವರಣ.
ವಜ್ರೇಶ್ವರಿ ಕಂಬೈನ್ಸ್ ನಿರ್ಮಾಣದ 80ನೇ ಚಿತ್ರ `ಅಣ್ಣಾ ಬಾಂಡ್~. ಶುರುವಾಗಿ ಮುಗಿಯುವವರೆಗೆ ಜನ ಮೈಮರೆತು ನೋಡಬೇಕು; ಹಾಗಿರುತ್ತೆ ಈ ಸಿನಿಮಾ ಎಂದು ಮಾತು ಪ್ರಾರಂಭಿಸಿದ್ದು ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್.
 
ಏಳೆಂಟು ತಿಂಗಳು ಸುತ್ತಾಡಿ ಸೂರಿ ಲೊಕೇಷನ್‌ಗಳನ್ನು ಕಂಡು, ಮನಸ್ಸಿನಲ್ಲಿಯೇ ದೃಶ್ಯ ಪರಿಕಲ್ಪನೆ ಮಾಡಿಕೊಂಡಿದ್ದಾರೆ. `ಸ್ಕ್ರಿಪ್ಟ್~ ಎಂಬುದು ಅವರಿಗೆ ಒಂದು `ಪ್ರಾಪರ್ಟಿ~ ಅಷ್ಟೆ.

`ಒಂದು ಸೀನ್‌ನಲ್ಲಿ ಶಾಟ್‌ಗಳು ಹೇಗಿರಬೇಕು ಎಂಬುದನ್ನು ನಿರ್ಧರಿಸುತ್ತಲೇ ಸಿನಿಮಾ ತೆಗೆಯುತ್ತಾ ಹೋಗುವುದು ನನ್ನ ಶೈಲಿ. ಜಾಕಿ ಚಿತ್ರವನ್ನೂ ಮೀರಿಸುವಂಥ ಸಿನಿಮಾ ಮಾಡಬೇಕು ಎಂಬ ಚಾಲೆಂಜನ್ನು ನನಗೆ ನಾನೇ ಹಾಕಿಕೊಂಡೆ.

ಕನ್ನಡ ಗೊತ್ತಿರುವ ಇಬ್ಬರು ನಾಯಕಿಯರು ನನಗೆ ಸಿಕ್ಕಿದ್ದಾರೆ. ಪ್ರಿಯಾಮಣಿ ಮನೆ ಕೆ.ಆರ್.ಸರ್ಕಲ್ ಹತ್ತಿರವೇ ಇದೆ. ಅದು ನನ್ನ ಮನೆಗೂ ಸಮೀಪದ ಜಾಗ.

`ಪರುತ್ತಿವೀರನ್~ ಸಿನಿಮಾ ನೋಡಿ ಅವರನ್ನು ಮೆಚ್ಚಿಕೊಂಡಿದ್ದೆ. ನಮ್ಮ ಸಿನಿಮಾ ಪಾತ್ರಕ್ಕೆ ಅವರು ಸೂಕ್ತ ಎನ್ನಿಸಿತು. ಅವರಿಗೆ ಪಾತ್ರ ಪರಿಚಯ ಮಾಡಿಕೊಟ್ಟೆ. ತಕ್ಷಣ ಒಪ್ಪಿಕೊಂಡರು.
ನಿಧಿ ಸುಬ್ಬಯ್ಯ ನಮ್ಮ ಪಂಚರಂಗಿ ಹುಡುಗಿ. ಅವರಿಗೂ ಪಾತ್ರವೇನು ಅಂತ ಸ್ವಲ್ಪಸ್ವಲ್ಪವೇ ಹೇಳಿದೆ. ಒಪ್ಪಿದರು. ಈಗ ಸಿನಿಮಾ ಮುಹೂರ್ತ ನಡೆದಿದೆ...~ ಸೂರಿ ಬಿಡಿಬಿಡಿ ಮಾತುಗಳಿಗೆ ಇಡಿಯಾದ ಸ್ವರೂಪ ಕೊಡುವ ಗೋಜಿಗೆ ಹೋಗಲಿಲ್ಲ.

`ಅಣ್ಣಾ ಬಾಂಡ್~ ಎಂಬುದು ಲೋಕಲ್ ಶೈಲಿಯಲ್ಲಿ ನಾಯಕನಿಗೆ ಇರುವ ಅಡ್ಡಹೆಸರು. ಗೋಲಿ ಚೆನ್ನಾಗಿ ಆಡುವ ಹುಡುಗನನ್ನು ಗೆಳೆಯರು ಅಣ್ಣಾ ಬಾಂಡ್ ಎಂದು ಕರೆದದ್ದು ಸೂರಿ ಕಿವಿಮೇಲೆ ಬಿದ್ದಿತ್ತಂತೆ.
 
ಪೊಲೀಸ್ ಅಧಿಕಾರಿಯಲ್ಲದ ಸ್ಥಳೀಯ ಹುಡುಗನೊಬ್ಬ ಸಮಸ್ಯೆಗಳನ್ನು ಹೇಗೆ ಬಗೆಹರಿಸುತ್ತಾನೆ ಎಂಬ ಆಶಯ ಚಿತ್ರದ್ದು. ಇದು ಕಿರಿಕ್ ಟೈಟಲ್ ಇರುವ ದೊಡ್ಡ ಆಕ್ಷನ್ ಸಿನಿಮಾ ಎಂದು ಸೂರಿ ಬಣ್ಣಿಸಿಕೊಂಡರು.

ನನ್ನ ಪಾತ್ರ, ಕಥೆ ಏನು ಅಂತ ಈಗೀಗ ಸ್ವಲ್ಪ ಸ್ವಲ್ಪ ಗೊತ್ತಾಗುತ್ತಿದೆ ಎಂದಷ್ಟೇ ಹೇಳಿ ಪುನೀತ್ ಕೂಡ ಜಾರಿಕೊಂಡರು. ಹುರಿಗಟ್ಟಿದ ಅವರ ಮೈ ಕ್ಯಾಮೆರಾ ಕಣ್ಣುಗಳನ್ನು ಆಕರ್ಷಿಸುತ್ತಿತ್ತು.

ಪುನೀತ್ `ಸಿಕ್ಸ್‌ಪ್ಯಾಕ್~ ಮಾಡುವ ಸಾಧ್ಯತೆಯನ್ನು `ಟ್ರೇಲರ್~ ತೋರಿಸಿತು. ಆ ಬಗ್ಗೆ ಪುನೀತ್ ಸೇರಿದಂತೆ ಯಾರೂ ಏನೂ ಹೇಳಿಕೊಳ್ಳಲಿಲ್ಲ. ದೈಹಿಕವಾಗಿ ವಿಶೇಷ ಸಿದ್ಧತೆಯನ್ನೇನೂ ಮಾಡಿಕೊಂಡಿಲ್ಲ ಎನ್ನುವ ಮೂಲಕ ಪುನೀತ್ ಕುತೂಹಲವನ್ನು ತಣ್ಣಗಾಗಿಸಿದರು.

ಸಂಗೀತ ಕೇಳಿ ಕೂತಲ್ಲೇ ಮೈಕುಣಿಸುತ್ತಿದ್ದ ಪ್ರಿಯಾಮಣಿ, ಪುನೀತ್ ಜೊತೆ ಮತ್ತೊಮ್ಮೆ ನೃತ್ಯ ಮಾಡುವ ಅವಕಾಶ ಕೂಡಿಬಂದಿರುವುದೇ ಸಂತೋಷದ ಸಂಗತಿ ಎಂದು ಹೆಮ್ಮೆಪಟ್ಟರು.

ಅರ್ಧ ಗಂಟೆ ಕಥೆ ಹೇಳಿ, `ಏನಾದರೂ ಅರ್ಥವಾಯ್ತೇನಮ್ಮಾ?~ ಎಂದು ಸೂರಿ ಪ್ರಶ್ನೆ ಕೇಳಿದ ರೀತಿಯನ್ನು ನೆನಪಿಸಿಕೊಂಡು ನಕ್ಕವರು ನಿಧಿ. ಚಿತ್ರದಲ್ಲಿ ಅವರದ್ದು ಫೋಟೋಗ್ರಾಫರ್ ಪಾತ್ರ.

ಸತ್ಯ ಹೆಗಡೆ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ರಾಜ್‌ಕುಮಾರ್ ಕುಟುಂಬದ ಬ್ಯಾನರ್‌ನಲ್ಲಿ ಅವರಿಗಿದು ಮೂರನೇ ಅವಕಾಶ. ಪದೇಪದೇ ಹೀಗೆ ಸಿಗುವ ಅವಕಾಶದಿಂದ ಜವಾಬ್ದಾರಿಯೂ ಹೆಚ್ಚಾಗುತ್ತದೆ ಎಂಬ ಅರಿವು ಅವರಿಗಿದೆ.

ಒಟ್ಟು 97-98 ದಿನಗಳಲ್ಲಿ ಚಿತ್ರೀಕರಣ ಮುಗಿಸಬೇಕು ಎಂದುಕೊಂಡಿರುವ ಸೂರಿ ಬಜೆಟ್ ಇನ್ನೂ ನಿಗದಿಯಾಗಿಲ್ಲ ಎಂದರು.

ಕಥೆಯೇ ಗೊತ್ತಿಲ್ಲದ ಹರಿಕೃಷ್ಣ ಎಂಥ ಹಾಡುಗಳನ್ನು ಕೊಡಬೇಕು ಎಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಅವಿನಾಶ್, ರಂಗಾಯಣ ರಘು, ಸತೀಶ್ ನೀನಾಸಂ ಮೊದಲಾದವರು ತಾರಾಬಳಗದಲ್ಲಿದ್ದಾರೆ.

ನಟರಂಗ ರಾಜೇಶ್ ಈ ಚಿತ್ರದಲ್ಲಿ ಸೂರಿ ಅವರ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವುದು ಇನ್ನೊಂದು ವಿಶೇಷ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT