ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆಯಲ್ಲಿ ತೆಲಂಗಾಣ ಗದ್ದಲ

Last Updated 23 ಫೆಬ್ರುವರಿ 2011, 18:45 IST
ಅಕ್ಷರ ಗಾತ್ರ

ನವದೆಹಲಿ: ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ನಡೆದಿರುವ ಹೋರಾಟ ಬುಧವಾರ ಲೋಕಸಭೆಯಲ್ಲೂ ಇಣುಕು ಹಾಕಿ ಅರ್ಧ ದಿನದ ಕಲಾಪವನ್ನು ನುಂಗಿ ಹಾಕಿತು. ಕಾಂಗ್ರೆಸ್ ಹಾಗೂ ‘ತೆಲಂಗಾಣ ರಾಷ್ಟ್ರ ಸಮಿತಿ’ (ಟಿಆರ್‌ಎಸ್) ಸದಸ್ಯರು ಪ್ರತ್ಯೇಕ ರಾಜ್ಯದ ಘೋಷಣೆ ಕೂಗಿದ್ದರಿಂದ ಗದ್ದಲ ಉಂಟಾಗಿ ಸದನವನ್ನು ಮೂರು ಸಲ ಮುಂದೂಡಲಾಯಿತು.

ಬೆಳಿಗ್ಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆ ಆಂಧ್ರದ ಕಾಂಗ್ರೆಸ್ ಸದಸ್ಯರು ಪ್ರತ್ಯೇಕ ತೆಲಂಗಾಣ ರಾಜ್ಯ  ಪರ ಘೋಷಣೆ ಕೂಗಿದರು. ಟಿಆರ್‌ಎಸ್ ಮುಖಂಡ ಕೆ.ಚಂದ್ರಶೇಖರರಾವ್, ವಿಜಯಶಾಂತಿ ಸಭಾಧ್ಯಕ್ಷರ ಪೀಠದ ಮುಂದಿನ ಆವರಣಕ್ಕೆ ಧಾವಿಸಿ ಕಾಂಗ್ರೆಸ್ ಸದಸ್ಯರ ಜತೆ ದನಿಗೂಡಿಸಿದರು. ಹೊಸ ರಾಜ್ಯ ರಚನೆ ಮಸೂದೆಯನ್ನು ಸದನದಲ್ಲಿ ಮಂಡಿಸುವಂತೆ ಒಕ್ಕೊರಲಿನಿಂದ ಒತ್ತಾಯಿಸಿದರು.

ಕಾರ್ಯಕ್ರಮ ಪಟ್ಟಿಯಂತೆ ಪ್ರಶ್ನೋತ್ತರ ಕಲಾಪ ಆರಂಭಿಸಲು ಸಹಕರಿಸುವಂತೆ ಸ್ಪೀಕರ್ ಮಾಡಿದ ಮನವಿಗೆ ಸದಸ್ಯರು ಕಿವಿಗೊಡದಿದ್ದರಿಂದ ಸದನವನ್ನು ಅರ್ಧಗಂಟೆ ಮುಂದೂಡಲಾಯಿತು. 11.30ಕ್ಕೆ ಪುನಃ ಸಮಾವೇಶಗೊಂಡಾಗಲೂ ಪರಿಸ್ಥಿತಿ ತಿಳಿಯಾಗಲಿಲ್ಲ.

ಕೆಸಿಆರ್, ವಿಜಯಶಾಂತಿ ಮತ್ತೆ ಸಭಾಧ್ಯಕ್ಷರ ಪೀಠದ ಮುಂದೆ ಧಾವಿಸಿದರು. ಘೋಷಣೆಗಳು ಮುಂದುವರಿದಾಗ ಕಲಾಪವನ್ನು 12ಕ್ಕೆ ಮುಂದೂಡಲಾಯಿತು. 12ಕ್ಕೂ ಉಭಯ ಪಕ್ಷಗಳ ಸದಸ್ಯರು ಬೇಡಿಕೆಗಾಗಿ ಪಟ್ಟು ಹಿಡಿದಿದ್ದರಿಂದ ಕಲಾಪವನ್ನು ಮಧ್ಯಾಹ್ನ 2ಕ್ಕೆ ಮುಂದಕ್ಕೆ ಹಾಕಲಾಯಿತು.

ಆಡಳಿತ ಪಕ್ಷದ 11ಮಂದಿ ಸದಸ್ಯರು ಘೋಷಣೆ ಕೂಗಿದ್ದಾರೆ. ಸಹೊದ್ಯೋಗಿಗಳಿಬ್ಬರು ಸ್ಪೀಕರ್  ಪೀಠದ ಮುಂದೆ ಧರಣಿ ನಡೆಸುತ್ತಿದ್ದಾರೆ. ಅವರಿಗೆ ಮಾತನಾಡಲು ಅವಕಾಶ ಕೊಡಬೇಕು. ಸಮಸ್ಯೆ  ಆಲಿಸಬೇಕು ಎಂದು ಸುಷ್ಮಾ ಸ್ವರಾಜ್ ಆಗ್ರಹಿಸಿದರು. 

ಪ್ರತ್ಯೇಕ ರಾಜ್ಯ ರಚನೆ ಮಸೂದೆಮಂಡಿಸಿದರೆ ಬಿಜೆಪಿ ಬೆಂಬಲಿಸಲಿದೆ ಎಂದು ಸುಷ್ಮಾ ಸ್ವರಾಜ್ ಭರವಸೆ ನೀಡಿದರು. ಅವರ ಮಾತಿನ ನಡುವೆಯೂ ಕಾಂಗ್ರೆಸ್ ಸದಸ್ಯರ ಘೋಷಣೆ ಮುಂದುವರಿದಾಗ ಸದಸ್ಯರಿಗೆ ಮಾತನಾಡಲು ಅವಕಾಶ ಕೊಡುವುದಾಗಿ ಮೀರಾ ಕುಮಾರ್ ಆಶ್ವಾಸನೆ ಕೊಟ್ಟರು. ಆದರೆ ಗದ್ದಲ ನಿಲ್ಲದಿದ್ದಾಗ ಸದನವನ್ನು ಮುಂದೂಡಲಾಯಿತು.

ಭರವಸೆ: ಬಜೆಟ್ ಮಂಡನೆ ಬಳಿಕ ತೆಲಂಗಾಣ ಭಾಗದ ಸಂಸದರನ್ನು ಕರೆದು ಮಾತುಕತೆ ನಡೆಸುವುದಾಗಿ ಪ್ರಧಾನಿ ಮನಮೋಹನ್‌ಸಿಂಗ್ ಹಾಗೂ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಭರವಸೆ ನೀಡಿದ್ದಾರೆ.

ತೆಲಂಗಾಣ ಭಾಗದ ಕಾಂಗ್ರೆಸ್ ಸಂಸತ್ ಸದಸ್ಯರು ಬುಧವಾರ ಇಬ್ಬರು ಮುಖಂಡರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಸಂದರ್ಭದಲ್ಲಿ ಈ ಆಶ್ವಾಸನೆ ದೊರೆತಿದೆ.

ಆಂಧ್ರ: 12 ಶಾಸಕರ ಅಮಾನತು: ಹೈದಾರಾಬಾದ್ (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಮಸೂದೆಗೆ ಆಗ್ರಹಿಸಿ ಆಂಧ್ರಪ್ರದೇಶ ವಿಧಾನಸಭಾ ಕಲಾಪಕ್ಕೆ ಅಡ್ಡಿ ಮಾಡಿದ 12 ಶಾಸಕರನ್ನು ಅಮಾನತು ಮಾಡಲಾಗಿದೆ. ಇದೇ ವೇಳೆ, ಕರೆ ನೀಡಲಾಗಿದ್ದ ಎರಡು ದಿನಗಳ ‘ತೆಲಂಗಾಣ ಬಂದ್’ಗೆ ಬುಧವಾರವೂ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.

ಸದನದಲ್ಲಿ ಸಭಾಧ್ಯಕ್ಷರ ಆದೇಶಕ್ಕೆ ಮಣಿಯದ ಸದಸ್ಯರು ತೆಲಂಗಾಣ ಪರ ಘೋಷಣೆ ಕೂಗಿ ಬಜೆಟ್ ಭಾಷಣಕ್ಕೆ ಅಡ್ಡಿ ಉಂಟು ಮಾಡಿದರು. ಟಿಆರ್‌ಎಸ್‌ನ 8 ಹಾಗೂ ಸಿಪಿಐನ ನಾಲ್ವರು ಶಾಸಕರ ವಿರುದ್ಧ ಕ್ರಮ ಜರುಗಿಸಲಾಗಿದ್ದು, ಟಿಆರ್‌ಎಸ್ ಶಾಸಕಾಂಗ ನಾಯಕ ಇ.ರಾಜೇಂದ್ರ, ಮುಖಂಡ ಚಂದ್ರಶೇಖರ ರಾವ್ ಅವರ ಪುತ್ರ ತಾರಕರಾಮ ರಾವ್ ಇವರಲ್ಲಿ ಪ್ರಮುಖರು.

ರೈಲಿಗೆ ಬೆಂಕಿ: ಪ್ರತಿಭಟನಾಕಾರರು ಕೆ ಸಮುದ್ರಂ ಮತ್ತು ತಲ್ಲಪುಸನಪಲ್ಲಿ ಮಾರ್ಗದಲ್ಲಿ ಪ್ರಯಾಣಿಕರ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹಚ್ಚಿದ್ದಾರೆ. ಆದರೆ ಪ್ರಯಾಣಿಕರನ್ನು ಕೆಳಗಿಳಿಸಿ ಈ ಕೃತ್ಯ ಎಸಗಿರುವುದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT