ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ದಾಳಿ: ಈಗ ಬಾಲಕೃಷ್ಣೇಗೌಡ ಸರದಿ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಹಿರಿಯ ಪುತ್ರ ಎಚ್.ಡಿ.ಬಾಲಕೃಷ್ಣೇಗೌಡ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಲೋಕಾಯುಕ್ತ ಪೊಲೀಸರು, ಆರೋಪಿಯ ಮನೆ, ಸಂಬಂಧಿಗಳ ನಿವಾಸ, ಉದ್ಯಮ ಸಂಸ್ಥೆಗಳ ಕಚೇರಿಗಳು ಸೇರಿದಂತೆ 12 ಕಡೆಗಳಲ್ಲಿ ಶುಕ್ರವಾರ ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ 11 ಮತ್ತು ಮೈಸೂರಿನ ಒಂದು ಕಡೆ ಏಕಕಾಲಕ್ಕೆ ದಾಳಿ ನಡೆದಿದೆ. ದಿನವಿಡೀ ನಡೆದ ದಾಳಿಯ ವೇಳೆ ಸ್ಥಿರಾಸ್ತಿ ಖರೀದಿ ಮತ್ತು ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ವಹಿವಾಟು, ಶಿಕ್ಷಣ ಸಂಸ್ಥೆಯ ಮೂಲಕ ನಡೆದಿರುವ ಹಣಕಾಸು ವ್ಯವಹಾರ, ಚಲನಚಿತ್ರ ನಿರ್ಮಾಣದಲ್ಲಿ ಹೂಡಿಕೆ ಮತ್ತು ವಹಿವಾಟಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ತನಿಖಾ ತಂಡ ವಶಪಡಿಸಿಕೊಂಡಿದೆ.

ಕೆಎಎಸ್ ಅಧಿಕಾರಿಯಾಗಿದ್ದ ಬಾಲಕೃಷ್ಣೇ ಗೌಡ 2005ರಲ್ಲಿ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಸೇವೆಯಲ್ಲಿದ್ದ ಅವಧಿಯ ಅವರ ಒಟ್ಟು ಆದಾಯ 70 ಲಕ್ಷ ರೂಪಾಯಿ. ಆದರೆ, ಸ್ವಯಂನಿವೃತ್ತಿ ಪಡೆದ ತಕ್ಷಣ 70 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಖರೀದಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ಭದ್ರಾವತಿ ಮೂಲದ ಎಸ್.ಎನ್.ಬಾಲಕೃಷ್ಣ ಎಂಬುವರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

ದೂರನ್ನು ವಿಚಾರಣೆಗೆ ಅಂಗೀಕರಿಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದ್ದರು. ಪ್ರಕರಣದ ಸಂಬಂಧ ಲೋಕಾಯುಕ್ತ ಪೊಲೀಸರು ಸೆಪ್ಟೆಂಬರ್ 30ರಂದು ಬಾಲಕೃಷ್ಣೇಗೌಡ ವಿರುದ್ಧ `ಪ್ರಥಮ ಮಾಹಿತಿ ವರದಿ~ (ಎಫ್‌ಐಆರ್) ದಾಖಲಿಸಿ ತನಿಖೆ ಆರಂಭಿಸಿದ್ದರು.

ಮೂರು ಮನೆಗಳ ಮೇಲೆ ದಾಳಿ: ಪ್ರಕರಣದ ತನಿಖೆ ನಡೆಸುತ್ತಿರುವ ಡಿವೈಎಸ್‌ಪಿ ಪ್ರಸನ್ನ ವಿ.ರಾಜು ನೇತೃತ್ವದ ತಂಡ ಪದ್ಮನಾಭನಗರದಲ್ಲಿರುವ ಬಾಲಕೃಷ್ಣೇಗೌಡ ನಿವಾಸದ ಮೇಲೆ ಬೆಳಿಗ್ಗೆ 6 ಗಂಟೆಗೆ ದಾಳಿ ನಡೆಸಿ, ತಪಾಸಣೆ ಆರಂಭಿಸಿತು. ಸಂಜೆ 7 ಗಂಟೆಯವರೆಗೂ ಪರಿಶೀಲನೆ ನಡೆಸಿದ ಅಧಿಕಾರಿಗಳು, ಬಾಲಕೃಷ್ಣೇಗೌಡ, ಅವರ ಪತ್ನಿ, ಕುಟುಂಬದ ಸದಸ್ಯರು ಮತ್ತು ಹತ್ತಿರದ ಸಂಬಂಧಿಗಳು ಹೊಂದಿರುವ ಆಸ್ತಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ದಾಳಿಯ ವೇಳೆ ಬಾಲಕೃಷ್ಣೇಗೌಡ, ಅವರ ಪತ್ನಿ ಕವಿತಾ ಮತ್ತು ಪುತ್ರಿ ಮನೆಯಲ್ಲೇ ಇದ್ದರು. ಬೆಂಗಳೂರು ಸೇರಿದಂತೆ ವಿವಿಧೆಡೆ ಸ್ಥಿರಾಸ್ತಿ ಖರೀದಿ ನಡೆಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಅವರ ಮನೆಯಲ್ಲಿ ಪತ್ತೆಯಾಗಿವೆ. ಈ ದಾಖಲೆಗಳನ್ನು ವಶಕ್ಕೆ ಪಡೆದಿರುವ ತನಿಖಾ ತಂಡ, ಬ್ಯಾಂಕ್ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನೂ ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಕವಿತಾ ಅವರ ಸಹೋದರಿ ಸವಿತಾ ಕುಟುಂಬ ವಾಸಿಸುತ್ತಿರುವ ಚಂದ್ರಾ ಲೇಔಟ್‌ನ ನಿವಾಸದ ಮೇಲೂ ದಾಳಿ ನಡೆದಿದೆ. ಈ ಮನೆಯನ್ನು ಕವಿತಾ ಅವರ ಹೆಸರಿನಲ್ಲೇ ಖರೀದಿಸಲಾಗಿತ್ತು. ಮನೆಯೂ ಸೇರಿದಂತೆ ಕೆಲ ಸ್ವತ್ತುಗಳ ಖರೀದಿಯಲ್ಲಿ ಬಾಲಕೃಷ್ಣೇಗೌಡ ಕುಟುಂಬದ ನಂಟು ಇರುವ ಬಗ್ಗೆ ಅಲ್ಲಿ ದಾಖಲೆಗಳು ಲಭ್ಯವಾಗಿವೆ ಎಂದು ಗೊತ್ತಾಗಿದೆ.

ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿರುವ ಬಾಲಕೃಷ್ಣೇಗೌಡ ಅವರ ಮಾವ ಹೊನ್ನಪ್ಪ ನಿವಾಸದ ಮೇಲೂ ಒಂದು ತಂಡ ದಾಳಿ ನಡೆಸಿದೆ. ಮೈಸೂರಿನ ಲೋಕಾಯುಕ್ತ ಎಸ್‌ಪಿ ಡಿಸೋಜಾ ನೇತೃತ್ವದ ತಂಡ ತಪಾಸಣೆ ನಡೆಸಿದ್ದು, ಅಲ್ಲಿಯೂ ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಎಂಟು ಕಂಪೆನಿಗಳಲ್ಲಿ ತಪಾಸಣೆ: ರಿಯಲ್ ಎಸ್ಟೇಟ್, ಅದಿರು ಮಾರಾಟ, ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟವೂ ಸೇರಿದಂತೆ ವಿವಿಧ ವಹಿವಾಟು ನಡೆಸುತ್ತಿರುವ ಎಂಟು ಸಂಸ್ಥೆಗಳ ಮೇಲೂ ಶುಕ್ರವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ಎಲ್ಲ ಸಂಸ್ಥೆಗಳಲ್ಲೂ ಬಾಲಕೃಷ್ಣೇಗೌಡ ಪಾಲುದಾರರಾಗಿದ್ದಾರೆ.

ಪದ್ಮನಾಭನಗರದಲ್ಲಿರುವ ಬಿಎಸ್‌ಕೆ ಎಂಟರ್‌ಪ್ರೈಸಸ್, ಶಾಕಾಂಬರಿ ಎಂಟರ್‌ಪ್ರೈಸಸ್, ರಾಜರಾಜೇಶ್ವರಿನಗರದಲ್ಲಿರುವ ಬಿಎಸ್‌ಕೆ ಟ್ರೇಡರ್ಸ್, ರಾಜರಾಜೇಶ್ವರಿ ಪಾಲಿಮರ್ಸ್ ಪ್ರೈವೇಟ್ ಲಿಮಿಟೆಡ್, ಕೋರಮಂಗಲದಲ್ಲಿರುವ ಗೋಲ್ಡನ್ ಗೇಟ್ಸ್ ಉದ್ಯಮ ಸಂಸ್ಥೆಗಳ ಮೇಲೆ ಪ್ರತ್ಯೇಕ ತಂಡಗಳು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನೆಸಿದವು.

ಲಾಲ್‌ಬಾಗ್ ರಸ್ತೆಯಲ್ಲಿರುವ ಕುನಾಲ್ ಎಂಟರ್‌ಪ್ರೈಸಸ್, ಉತ್ತರಹಳ್ಳಿಯಲ್ಲಿರುವ ಬೆಸ್ಟ್ ಪಾಮ್ ಡೆವಲಪರ್ಸ್ ಅಂಡ್ ಪ್ರೆಸ್ಟೀಜ್ ಎಸ್ಟೇಟ್ಸ್‌ನಲ್ಲೂ ಪರಿಶೀಲನೆ ನಡೆಸಲಾಗಿದೆ.

ಈ ಎಲ್ಲ ಸಂಸ್ಥೆಗಳು ನಡೆಸಿರುವ ವಹಿವಾಟು, ಹೊಂದಿರುವ ಆಸ್ತಿ, ಹಣದ ವರ್ಗಾವಣೆ ಮತ್ತಿತರ ವಿಷಯಗಳ ಬಗ್ಗೆ ಲೋಕಾಯುಕ್ತ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದು, ತನಿಖೆಗೆ ಪೂರಕವಾಗಿ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿಕ್ಷಣ ಸಂಸ್ಥೆಯಲ್ಲೂ ಪರಿಶೀಲನೆ: ಕನಕಪುರ ರಸ್ತೆಯ ತಲಘಟ್ಟಪುರ ಸಮೀಪದಲ್ಲಿ ಬಾಲಕೃಷ್ಣೇಗೌಡ ಸ್ಥಾಪಿಸಿರುವ ಜ್ಞಾನಸ್ವೀಕಾರ ಫೌಂಡೇಷನ್ ಟ್ರಸ್ಟ್ ಮತ್ತು ಶಾಲೆಯ ಮೇಲೆ ಡಿವೈಎಸ್‌ಪಿ ಎಸ್.ಗಿರೀಶ್ ನೇತೃತ್ವದ ತಂಡ ದಾಳಿ ನಡೆಸಿ, ಪರಿಶೀಲಿಸಿತು.

ದೊಡ್ಡ ಪ್ರಮಾಣದ ಆಸ್ತಿ ಹೊಂದಿರುವ ಈ ಟ್ರಸ್ಟ್ ಮತ್ತು ಶಾಲೆಗೆ ಸಂಬಂಧಿಸಿದ ಕೆಲ ಪ್ರಮುಖ ದಾಖಲೆಗಳು ತನಿಖಾ ತಂಡಕ್ಕೆ ಲಭ್ಯವಾಗಿವೆ. ಕಟ್ಟಡಗಳ ನಿರ್ಮಾಣಕ್ಕೆ ಮಾಡಿರುವ ವೆಚ್ಚ, ಶಿಕ್ಷಣ ಸಂಸ್ಥೆಯ ವಹಿವಾಟಿನ ಪ್ರಮಾಣ, ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳು ಲೋಕಾಯುಕ್ತ ಪೊಲೀಸರ ಕೈಸೇರಿವೆ.

ಬಳ್ಳಾರಿ ರಸ್ತೆಯ ಕಾವೇರಿ ಜಂಕ್ಷನ್ ಸಮೀಪವಿರುವ ರಾಜರಾಜೇಶ್ವರಿ ಕ್ರಿಯೇಷನ್ಸ್ ಮೇಲೆ ಮತ್ತೊಂದು ತಂಡದಿಂದ ದಾಳಿ ನಡೆಯಿತು. ಈ ಸಂಸ್ಥೆಯು ಚಲನಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿರುವ ಬಂಡವಾಳ ಮತ್ತು ಅದರ ವಹಿವಾಟಿನ ಬಗ್ಗೆ ಪರಿಶೀಲನೆ ನಡೆಸಿ, ಮಾಹಿತಿ ಪಡೆಯಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

65ಕ್ಕೂ ಹೆಚ್ಚು ಸದಸ್ಯರ ತಂಡ: ಬೆಳಿಗ್ಗೆ 6 ಗಂಟೆಗೆ ಆರಂಭವಾದ ದಾಳಿ ಸಂಜೆ 7 ಗಂಟೆಯವರೆಗೂ ನಡೆಯಿತು. ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜೀವನ್‌ಕುಮಾರ್ ಗಾಂವ್ಕರ್ ಮತ್ತು ಬೆಂಗಳೂರು ನಗರ ಎಸ್‌ಪಿ ಪಿ.ಕೆ.ಶಿವಶಂಕರ್ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ, ನಾಲ್ವರು ಡಿವೈಎಸ್‌ಪಿಗಳು, 14 ಇನ್‌ಸ್ಪೆಕ್ಟರ್‌ಗಳು ಮತ್ತು 50ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT