ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಲೋಕಾಯುಕ್ತ ದಾಳಿ ಹಿಂದೆ ಗೃಹ ಸಚಿವರ ಕೈವಾಡ'

ಮಾಜಿ ಸಚಿವ ಕೊಳಿವಾಡ ಆರೋಪ
Last Updated 27 ಡಿಸೆಂಬರ್ 2012, 9:41 IST
ಅಕ್ಷರ ಗಾತ್ರ

ಹಾವೇರಿ: ಉಪಮುಖ್ಯಮಂತ್ರಿ ಕೆ.ಎಚ್. ಈಶ್ವರಪ್ಪ ಅವರ ಮನೆ ಮೇಲೆ ನಡೆದ ಲೋಕಾಯುಕ್ತ ದಾಳಿ ಹಿಂದೆ ಗೃಹ ಸಚಿವ ಆರ್.ಅಶೋಕ ಅವರ ಕೈವಾಡವಿದ್ದು, ಚುನಾವಣೆ ವೇಳೆಗೆ ರಾಜ್ಯ ಬಿಜೆಪಿ ಮತ್ತೊಂದು ಹೋಳಾಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಲಿವೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಕೆ.ಬಿ. ಕೋಳಿವಾಡ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಿಜೆಪಿಯಿಂದ ಸಿಡಿದು ಹೋಗಿರುವ ಶ್ರೀರಾಮುಲು ಬಿಎಸ್‌ಆರ್ ಕಾಂಗ್ರೆಸ್, ಬಿ.ಎಸ್.ಯಡಿಯೂರಪ್ಪ ಕೆಜೆಪಿ ಪಕ್ಷ ಸ್ಥಾಪಿಸಿ ಮೂರು ಹೋಳು ಆಗಿದೆ. ಈಗ ಈಶ್ವರಪ್ಪ ಹಾಗೂ ಆರ್.ಅಶೋಕ ಅವರ ಮುಸುಕಿನ ಗುದ್ದಾಟದಿಂದ ಮತ್ತೊಂದು ಹೋಳಾಗಲಿದೆ ಎಂದರು.

ಪಕ್ಷದಲ್ಲಿನ ಆಂತರಿಕೆ ಗೊಂದಲದ ಪರಿಣಾಮ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಅಧಿಕಾರಿಗಳ ಮೇಲೆ ಮುಖ್ಯಮಂತ್ರಿಗಳಿಂದ ಹಿಡಿದು ಯಾರಿಗೂ ಹಿಡಿತವಿಲ್ಲದಾಗಿದೆ. ಸರ್ಕಾರದ ಯಾವುದೇ ಆದೇಶ ಪಾಲಿಸದೇ ಬೇಕಾಬಿಟ್ಟಿ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದ ಜನತೆಯ ಹಿತದೃಷ್ಠಿಯಿಂದ ಇಂತಹ ಕೆಲಸಕ್ಕೆ ಬಾರದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು.

ನಾಮಕವಾಸ್ತೆ ಸರ್ಕಾರ ನಡೆಸುವುದಕ್ಕಿಂತ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೇ ಸರ್ಕಾರವನ್ನು ವಿಸರ್ಜಿಸಬೇಕು ಇಲ್ಲವೇ ಯಡಿಯೂರಪ್ಪ ತಮ್ಮ ಬೆಂಬಲಿಗ ಶಾಸಕರ ರಾಜೀನಾಮೆ ಕೊಡಿಸಿ ಸರ್ಕಾರ ಉರುಳಿಸಬೇಕು ಅಥವಾ ರಾಜ್ಯಪಾಲರೇ ಮಧ್ಯ ಪ್ರವೇಶಿಸಿ ಅಲ್ಪಮತದ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಬರುವ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಎಐಸಿಸಿ ಯಾವುದೇ ನಿಯಮಗಳನ್ನು ರೂಪಿಸಿಲ್ಲ. ಗುಜರಾತ್ ಚುನಾವಣೆಯಲ್ಲಿ ರೂಪಿಸಿದ ನಿಯಮಗಳೇ ರಾಜ್ಯದಲ್ಲಿ ಬರಬಹುದೆಂಬ ಊಹೆಯ ಮೇಲೆ ಮಾಧ್ಯಮಗಳು ವರದಿ ಮಾಡಿವೆ ಹೊರತೂ ಅಂತಹ ಯಾವುದೇ ಅಧಿಕೃತ ಸುತ್ತೋಲೆ ಹೊರಡಿಸಿಲ್ಲ. ಈ ಬಾರಿಯ ಚುನಾಣೆಯಲ್ಲಿ ಅಧಿಕಾರ ಹಿಡಿಯುವುದೇ ಕಾಂಗ್ರೆಸ್‌ನ ಗುರಿಯಾಗಿದ್ದು, ಗೆಲ್ಲುವ ಅಭ್ಯರ್ಥಿಗಳಿಗೆ ಪ್ರಾಧಾನ್ಯತೆ ನೀಡಿ ಶೇ. 90ರಷ್ಟು ಟಿಕೆಟ್‌ಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.

128ನೇ ವರ್ಷದ ಸಂಸ್ಥಾಪನಾ ದಿನಾಚರಣೆ: ಕಾಂಗ್ರೆಸ್ ಪಕ್ಷದ 128ನೇ ವರ್ಷದ ಸಂಸ್ಥಾಪನಾ ದಿನವನ್ನು ಡಿ. 28 ರಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಗುವುದು. ಆ ಕಾರ್ಯಕ್ರಮದಲ್ಲಿ ಜಿಲ್ಲೆಯ ಸ್ವಾತಂತ್ರ್ಯಯೋಧರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮನೋಹರ ತಹಸೀಲ್ದಾರ್ ತಿಳಿಸಿದರು.

ಪಕ್ಷ ಸಂಘಟನೆ ಹಾಗೂ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 7ರಿಂದ 14ವರೆಗೆ ಕೃಷ್ಣಾ ನದಿ ಬಿ ಸ್ಕೀಮ್ ನೀರು ಹಂಚಿಕೆ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಹೊಸಪೇಟೆಯಿಂದ ಕೂಡಲಸಂಗಮವರೆಗೆ  ಪಾದಯಾತ್ರೆಮ ಕಲಂ 371(ಜಿ) ಕುರಿತು ಬಸವಕಲ್ಯಾಣದಿಂದ ಬೀದರವರೆಗೆ. ಮೈಸೂರಿನಿಂದ ಬೆಂಗಳೂರುವರೆಗೆ ಹೀಗೆ ಒಟ್ಟು 23 ಜಿಲ್ಲೆಗಳ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಯಲಿದೆ ಎಂದು ಹೇಳಿದರು.

ಡಿ. 30ರಂದು ಹುಬ್ಬಳ್ಳಿಯಲ್ಲಿ ಪಕ್ಷದ ಪರಿಶಿಷ್ಟ ಜಾತಿ, ಪಂಗಡದ ಘಟಕದ ವಿಭಾಗ ಮಟ್ಟದ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ಜಿಲ್ಲೆಯಿಂದ ಸುಮಾರು ಎರಡು ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದ ಅವರು, ಜನವರಿಯಿಂದ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಸನಗೌಡ, ಹಿರೇಮಠ ಮತ್ತಿತರರು ಹಾಜರಿದ್ದರು.

ಕಾರ್ತೀಕೋತ್ಸವ ನಾಳೆ
ಹಾವೇರಿ:
ಗ್ರಾಮ ದೇವತೆ ಕಾರ್ತಿಕೋತ್ಸವ ಸಮಾರಂಭ ಡಿ. 28ರಂದು ಸಂಜೆ ನಗರದ ದ್ಯಾಮವ್ವದೇವಿ ದೇವಸ್ಥಾನದಲ್ಲಿ ನಡೆಯಲಿದೆ.
ಅಂದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT