ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ನೇಮಕ ಮೋದಿಗೆ ಮುಖಭಂಗ

ಗುಜರಾತ್ ರಾಜ್ಯಪಾಲರ ಕ್ರಮಕ್ಕೆ `ಸುಪ್ರೀಂ' ಸಮರ್ಥನೆ
Last Updated 2 ಜನವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗುಜರಾತ್ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ಆರ್.ಎ.ಮೆಹ್ತಾ ಅವರನ್ನು ನೇಮಿಸಿದ ರಾಜ್ಯಪಾಲರ ಕ್ರಮವನ್ನು ಸುಪ್ರೀಂ ಕೋರ್ಟ್ ಬುಧವಾರ ಎತ್ತಿಹಿಡಿದಿದೆ. ಇದರಿಂದ ನರೇಂದ್ರ ಮೋದಿ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.

ಆದರೆ, `ಈ ವಿಚಾರದಲ್ಲಿ ರಾಜ್ಯಪಾಲರಾದ ಕಮಲಾ ಬೇನಿವಾಲ್ ಅವರು ರಾಜ್ಯ ಸರ್ಕಾರದ ಜೊತೆಗೆ ಸಮಾಲೋಚನೆ ಮಾಡದೇ ಇರುವುದು ಸರಿಯಾದ ತೀರ್ಮಾನವಲ್ಲ' ಎಂದು ಆಕ್ಷೇಪಿಸುವುದರ ಜತೆಜತೆಗೇ `ಲೋಕಾಯುಕ್ತದಂತಹ ಪ್ರಮುಖ ಹುದ್ದೆಯನ್ನು ಒಂಬತ್ತು ವರ್ಷಗಳಿಗೂ ಹೆಚ್ಚು ಕಾಲ ಭರ್ತಿ ಮಾಡದ ರಾಜ್ಯ ಸರ್ಕಾರದ ನಡೆ ಸರಿಯಲ್ಲ' ಎಂದು ಅದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

`ರಾಜ್ಯ ಹೈಕೋರ್ಟ್ ಮುಖ್ಯ ನಾಯ್ಯಮೂರ್ತಿ ಅವರ ಸಲಹೆ ಪಡೆದೇ ರಾಜ್ಯಪಾಲರು ಈ ನೇಮಕಾತಿ ಮಾಡಿದ್ದಾರೆ. ನ್ಯಾ. ಮೆಹ್ತಾ ಅವರು ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಲು ಯಾವುದೇ ತೊಡಕಿಲ್ಲ' ಎಂದೂ ಕೋರ್ಟ್ ಹೇಳಿದೆ. 

ಮೆಹ್ತಾ ನೇಮಕ ಪ್ರಶ್ನಿಸಿ ಗುಜರಾತ್ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಬಿ.ಎಸ್. ಚೌಹಾಣ್ ಮತ್ತು ಎಫ್.ಎಂ. ಇಬ್ರಾಹಿಂ ಕಲಿಫುಲ್ಲಾ ಅವರಿದ್ದ ದ್ವಿಸದಸ್ಯ ಪೀಠ ವಜಾ ಮಾಡಿದೆ.

`ರಾಜ್ಯಪಾಲರು ಸರ್ಕಾರದ ಅಭಿಪ್ರಾಯ ಪಡೆಯದೇ, ತಮ್ಮ ವಿವೇಚಾನಾಧಿಕಾರ ಬಳಸಿ ಲೋಕಾಯುಕ್ತರನ್ನು ನೇಮಕ ಮಾಡಿದ್ದಾರೆ. ಇದು ಕಾನೂನು ಬಾಹಿರ. ಆದ್ದರಿಂದ ಈ ನೇಮಕಾತಿ ರದ್ದು ಮಾಡಬೇಕು' ಎಂದು ರಾಜ್ಯ ಸರ್ಕಾರ ಕೋರಿತ್ತು.

ಹಿನ್ನೆಲೆ: ರಾಜ್ಯಪಾಲರು ಗುಜರಾತ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ಎ. ಮೆಹ್ತಾ ಅವರನ್ನು ಲೋಕಾಯುಕ್ತರನ್ನಾಗಿ  ನೇಮಿಸಿದ (2011ರ ಆಗಸ್ಟ್ 25) ತರುವಾಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿತ್ತು. ಈ ನೇಮಕಾತಿ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು.

ಈ ನೇಮಕಾತಿಯನ್ನು ಪ್ರಶ್ನಿಸಿ ಗುಜರಾತ್ ಸರ್ಕಾರ ಮೊದಲು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ವಿಚಾರಣೆ ಕೈಗೊಂಡ ದ್ವಿಸದಸ್ಯ ವಿಭಾಗೀಯ ಪೀಠದ ತೀರ್ಪಿನಲ್ಲಿ (2011ರ ಅಕ್ಟೋಬರ್ 11) ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ  ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ವಿ.ಎಂ. ಸಹಾಯ್ ಅವರಿಗೆ ವಹಿಸಲಾಗಿತ್ತು. ಅವರು ರಾಜ್ಯಪಾಲರ ಕ್ರಮವನ್ನು (2012ರ ಜನವರಿ 18) ಎತ್ತಿಹಿಡಿದಿದ್ದರು. ನಂತರ ರಾಜ್ಯ ಸರ್ಕಾರ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.

ಶೀಘ್ರ ಅನುಷ್ಠಾನ: ಸರ್ಕಾರ (ಗಾಂಧಿನಗರ ವರದಿ): ಲೋಕಾಯುಕ್ತರ ನೇಮಕಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಶೀಘ್ರ ಅನುಷ್ಠಾನ ಮಾಡುವುದಾಗಿ ಗುಜರಾತ್ ಸರ್ಕಾರ ಪ್ರತಿಕ್ರಿಯಿಸಿದೆ.

ಕಾಂಗ್ರೆಸ್ ಕಿಡಿ:  ತೀರ್ಪು ಹೊರಬೀಳುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದಿದೆ.

`ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಗುಜರಾತ್ ಸರ್ಕಾರಕ್ಕೆ ಮನಸ್ಸಿಲ್ಲ. ಈ ವಿಚಾರದಲ್ಲಿ ರಾಜ್ಯ ಸರ್ಕಾರದ್ದು ದ್ವಂದ್ವ ನಿಲುವು' ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಮನೀಶ್ ತಿವಾರಿ ಟೀಕಿಸಿದ್ದಾರೆ.

`ಬಿಜೆಪಿ ಕೇಂದ್ರದಲ್ಲಿ ಲೋಕಪಾಲ ವ್ಯವಸ್ಥೆ ಬೇಕು ಎಂದು ಬಯಸುತ್ತದೆ. ಆದರೆ ಪಕ್ಷದ ಆಡಳಿತವಿರುವ ಗುಜರಾತ್‌ನಲ್ಲಿ ಇಂತಹ ವ್ಯವಸ್ಥೆಯನ್ನು ವಿರೋಧಿಸಿ ದ್ವಿಮುಖ ನೀತಿಯನ್ನು ಪ್ರದರ್ಶಿಸುತ್ತಿದೆ' ಎಂದು ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT