ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಬಲೆಗೆ ನಿರ್ದೇಶಕಿ

Last Updated 21 ಜನವರಿ 2011, 10:50 IST
ಅಕ್ಷರ ಗಾತ್ರ

ಸುರತ್ಕಲ್: ಟೆಂಡರ್ ಪ್ರಕ್ರಿಯೆ ಸಂಬಂಧ ಅರ್ಜಿದಾರರಿಂದ ಲಂಚ ಸ್ವೀಕರಿಸುತ್ತಿದ್ದಾಗಲೇ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಆದಿಲಕ್ಷ್ಮಮ್ಮ ಅವರನ್ನು ಲೋಕಾಯುಕ್ತ ಪೊಲೀಸರು ಪಣಂಬೂರು ಬೀಚ್‌ನಲ್ಲಿ ಗುರುವಾರ ಬಂಧಿಸಿದರು. ತಣ್ಣೀರುಬಾವಿ ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಟೆಂಡರ್ ಕರೆಯಲಾಗಿತ್ತು. ಒಟ್ಟು 7 ಕಂಪೆನಿಗಳು ಟೆಂಡರ್ ಹಾಕಿದ್ದು, ಆದಿಲಕ್ಷ್ಮಮ್ಮ ಎಲ್ಲಾ ಕಂಪೆನಿಗಳಿಂದಲೂ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಜವಾಬ್ದಾರಿ ಹೊತ್ತಿರುವ ಯತೀಶ್ ಬೈಕಂಪಾಡಿ ಅವರೂ ಈ ಟೆಂಡರ್‌ಗೆ ಅರ್ಜಿ ಹಾಕಿದ್ದು, ಆದಿಲಕ್ಷ್ಮಮ್ಮ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಲಾಗಿದೆ. ಯತೀಶ್ ಬೈಕಂಪಾಡಿ ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲಂಚದ ಹಣ ಪಡೆಯಲು ಪಣಂಬೂರು ಬೀಚ್‌ಗೆ ಆಗಮಿಸಿದ್ದ ಆದಿಲಕ್ಷ್ಮಮ್ಮ ರೂ. 5 ಸಾವಿರ ಲಂಚ ಸ್ವೀಕರಿಸುವಾಗಲೇ ಪೊಲೀಸರು ಬಂಧಿಸಿದರು.

ಲೋಕಾಯುಕ್ತ ಎಸ್‌ಪಿ ಜಗಮಯ್ಯನವರ್, ಡಿವೈಎಸ್‌ಪಿ ಸದಾನಂದ ವರ್ಣೇಕರ್, ಇನ್ಸ್‌ಪೆಕ್ಟರ್ ಉದಯನಾಯ್ಕ, ಸಿಬ್ಬಂದಿ ದಿಲೀಪ್ ಲಕ್ಷ್ಮೀಕಾಂತ್  ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಸದ್ಯ ಲೋಕಾಯುಕ್ತ ಪೊಲೀಸರ ವಶದಲ್ಲಿರುವ ಸಹಾಯಕ ನಿರ್ದೇಶಕಿಯನ್ನು ಶುಕ್ರವಾರ ವೈದ್ಯಕೀಯ ತಪಾಸಣೆಗೆ ಒಳಪಡಿಸುವ ನಿರೀಕ್ಷೆ ಇದೆ.

2 ತಿಂಗಳಲ್ಲಿ ಬಡ್ತಿ ಭಾಗ್ಯವಿತ್ತು!
ಲೋಕಾಯುಕ್ತ ಬಲೆಗೆ ಬಿದ್ದ ಆದಿಲಕ್ಷ್ಮಮ್ಮ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿಯಾಗಿದ್ದು, ಪ್ರಸ್ತುತ ಹಾಸನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ರಭಾರವನ್ನೂ ಇವರಿಗೆ ವಹಿಸಲಾಗಿದ್ದು, ಮಂಗಳೂರಿನಲ್ಲಿ ಸಹಾಯಕ ನಿರ್ದೇಶಕರ ಹುದ್ದೆ ರದ್ದಾಗಿರುವುದರಿಂದ ಆದಿಲಕ್ಷ್ಮಮ್ಮ ಇಲ್ಲಿಗೆ ಬಂದು ಹೋಗುತ್ತಿದ್ದರು.

ನಿವೃತ್ತಿಯಂಚಿಗೆ ಬಂದಿರುವ ಆದಿಲಕ್ಷ್ಮಮ್ಮ, ಇನ್ನು 2-3 ತಿಂಗಳಲ್ಲಿ ಉಪ ನಿರ್ದೇಶಕಿಯಾಗಿ ಬಡ್ತಿ ಹೊಂದುವ ಅವಕಾಶಕ್ಕಾಗಿ ಕಾಯುತ್ತಿದ್ದರು ಎಂದು ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT