ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಮುಗಿಸಲು ಹುನ್ನಾರ: ಸಾಹಿತಿ ಕೆ. ಮರುಳಸಿದ್ದಪ್ಪ ವಿಷಾದ

Last Updated 21 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಲೋಕಾಯುಕ್ತರು ಅಕ್ರಮ ಗಣಿಗಾರಿಕೆ ಕುರಿತು ನೀಡಿರುವ ವರದಿಯನ್ನು ಜಾರಿಗೊಳಿಸಲು ಮನಸ್ಸಿಲ್ಲದ ರಾಜ್ಯ ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಲು ಇನ್ನಿಲ್ಲದ ಉತ್ಸುಕತೆಯನ್ನು ತೋರುತ್ತಿದೆ. ಇಂದಿನ ಸರ್ಕಾರ ಲೋಕಾಯುಕ್ತವನ್ನು ಕೊಲೆ ಮಾಡಲು ಹೊರಟಿದೆ~ ಎಂದು ಸಾಹಿತಿ ಕೆ.ಮರುಳಸಿದ್ದಪ್ಪ ಅವರು ವಿಷಾದ ವ್ಯಕ್ತಡಿಸಿದರು.

ನಗರದಲ್ಲಿ ಸೋಮವಾರ ಭ್ರಷ್ಟಾಚಾರ ವಿರೋಧಿ ಪ್ರಗತಿಪರ ವೇದಿಕೆ ಆಯೋಜಿಸಿದ್ದ `ಲೋಕಾಯುಕ್ತ ಸಂಸ್ಥೆ: ಒಂದು ಸಂವಾದ~ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಸಣ್ಣ ಪುಟ್ಟ ಅಧಿಕಾರಿಗಳ ಭ್ರಷ್ಟಾಚಾರವನ್ನು ಬಯಲಿಗೆ ತರುತ್ತಿದ್ದ ಲೋಕಾಯುಕ್ತ ಸಂಸ್ಥೆ ರಾಜಕಾರಣಿಗಳ ಮೂಲಕ್ಕೇ ಕೈ ಹಾಕಿದ ಕಾರಣಕ್ಕೆ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚುವ ಮಾತು ಇಂದು ಕೇಳಿ ಬರುವಂತಾಗಿದೆ~ ಎಂದು ಕಿಡಿಕಾರಿದರು.

`ಎಲ್ಲದಕ್ಕೂ ಗುಜರಾತ್ ಮಾದರಿ ಎಂದು ಹೇಳುವ ರಾಜ್ಯ ಸರ್ಕಾರ ಲೋಕಾಯುಕ್ತ ನೇಮಕದ ವಿಚಾರದಲ್ಲೂ ಗುಜರಾತ್ ಮಾದರಿ ಅನುಸರಿಸುತ್ತಿದೆ. ರಾಜ್ಯದಲ್ಲೂ ಲೋಕಾಯುಕ್ತ ಸಂಸ್ಥೆಯನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿವೆ~ ಎಂದು ಅವರು ಹೇಳಿದರು.

`ಹಣ ಮಾಡುವುದೊಂದೇ ಇಂದಿನ ಅಭಿವೃದ್ಧಿಯ ವ್ಯಾಖ್ಯೆಯಾಗಿದೆ. ಇದರಿಂದ ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಇಂದಿನ ರಾಜಕಾರಣಿಗಳು ಲಜ್ಜೆಗೆಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ಈಗ ಭ್ರಷ್ಟಾಚಾರ, ಕೋಮುವಾದ, ಜಾತಿವಾದ ಹಾಗೂ ಪಾಳೆಗಾರಿಕೆಗಳು ಒಟ್ಟೊಟ್ಟಿಗೇ ಸಾಗಿವೆ. ಕರ್ನಾಟಕದ ಇಂದಿನ ರಾಜಕೀಯ ಬೆಳವಣಿಗೆಗಳು ನಾಗರಿಕರಲ್ಲಿ ನಾಚಿಕೆ ಹುಟ್ಟಿಸುವಂತೆ ಮಾಡಿವೆ~ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಚಿಂತಕ ಜಿ.ಕೆ.ಗೋವಿಂದರಾವ್, `ವ್ಯವಸ್ಥೆಯ ಸದ್ಯದ ಪರಿಸ್ಥಿತಿ ಜನರನ್ನೇ ಭ್ರಷ್ಟರನ್ನಾಗಿ ಮಾಡುತ್ತಿದೆ. ವ್ಯವಸ್ಥೆಯ ಬಗ್ಗೆ ಸಾಮಾನ್ಯ ಜನ ಸಿನಿಕರಾಗತೊಡಗಿದ್ದಾರೆ. ಇದೇ ಹಂತದಲ್ಲಿ ಲೋಕಾಯುಕ್ತ ಮುಚ್ಚುವ ಪ್ರಯತ್ನಗಳು ನಡೆದಿರುವುದು ವ್ಯವಸ್ಥೆಯ ಶೋಚನೀಯ ಸ್ಥಿತಿ~ ಎಂದರು.

`ಇಂದಿನ ರಾಜಕಾರಣಿಗಳಿಗೆ ನೈತಿಕತೆಯೇ ಇಲ್ಲದಂತಾಗಿದೆ. ಇಂದಿನ ಕೆಲವು ರಾಜಕಾರಣಿಗಳು ಸಾರ್ವಜನಿಕವಾಗಿ ಅಸಹ್ಯ ಹುಟ್ಟುವ ರೀತಿ ವರ್ತಿಸುತ್ತಿದ್ದಾರೆ. ಸನ್ಯಾಸಿಗಳೆನಿಕೊಂಡವರೂ ಭ್ರಷ್ಟರನ್ನು ಪೋಷಿಸುತ್ತಿರುವುದು ದುರಂತ~ ಎಂದು ಅವರು ಹೇಳಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, `ಆರ್ಥಿಕ ಭ್ರಷ್ಟತೆ ರಾಜಕೀಯ ಭ್ರಷ್ಟತೆಯ ಮೂಲವಾಗಿದೆ. ಹಾಗಾಗಿ ಖಾಸಗಿ ವಲಯದ ಭ್ರಷ್ಟಾಚಾರದ ವಿರುದ್ಧವೂ ಹೋರಾಟ ಅಗತ್ಯ. ಅಣ್ಣಾ ಹಜಾರೆ ಹೋರಾಟದಲ್ಲಿ ಕೆಲವು ಮಿತಿಗಳಿವೆ. ಭ್ರಷ್ಟಾಚಾರವನ್ನು ತಳಮಟ್ಟದಿಂದ ಕಿತ್ತು ಹಾಕುವ ಪ್ರಯತ್ನ ಆಗಬೇಕಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ  ಮತ್ತು ಪತ್ರಿಕಾಂಗ ಸೇರಿದಂತೆ ಖಾಸಗಿ ವಲಯವನ್ನೂ ಲೋಕಪಾಲ್ ವ್ಯಾಪ್ತಿಗೆ ತರಬೇಕಿದೆ. ರಾಜ್ಯದ ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾಗಬೇಕಾದ ಅಗತ್ಯವಿದೆ~ ಎಂದರು.

ಸಾಹಿತಿ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, `ಲೋಕಾಯುಕ್ತ ಹುದ್ದೆಗಾಗಿ ಒಬ್ಬ ಪ್ರಾಮಾಣಿಕರನ್ನು ಗುರುತಿಸಲು ಸಾಧ್ಯವಾಗದೇ ಇರುವುದು ಸದ್ಯದ ವಿಪರ್ಯಾಸ. ಈ ಸಂದರ್ಭದಲ್ಲಿ ಎಲ್ಲ ಪ್ರಜ್ಞಾವಂತರೂ  ಲೋಕಾಯುಕ್ತ ಹುದ್ದೆಯಲ್ಲಿ ಕೂರಲು ಅರ್ಹರಿರುವ ಒಬ್ಬರ ಹೆಸರನ್ನು ಸೂಚಿಸಬೇಕು. ಅದನ್ನು ಸರ್ಕಾರ ಪರಿಗಣಿಸುವಂತಾಗಬೇಕು~ ಎಂದರು.

ನಿವೃತ್ತ ನ್ಯಾಯಮೂರ್ತಿ ಬನ್ನೂರಮಠ ಅವರು ಯಾವುದೇ ಕಾರಣಕ್ಕೂ ಲೋಕಾಯುಕ್ತ ಹುದ್ದೆಯನ್ನು ಒಪ್ಪಬಾರದು. ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ಬಗ್ಗೆ ರಾಜಕಾರಣಿಗಳು ನಡೆದುಕೊಳ್ಳುತ್ತಿರುವ ರೀತಿಯನ್ನು ವಿರೋಧಿಸುವ ಹೋರಾಟ ಮತ್ತು  ಲೋಕಾಯುಕ್ತ ಸಂಸ್ಥೆ ಮುಚ್ಚಬಾರದೆಂಬ ಹೋರಾಟವನ್ನು ಮುಂದಿನ ದಿನಗಳಲ್ಲಿ ಚುರುಕುಗೊಳಿಸುವ ಬಗ್ಗೆ ಸಂವಾದದಲ್ಲಿ ನಿರ್ಣಯಕ್ಕೆ ಬರಲಾಯಿತು.

ಸಂವಾದದಲ್ಲಿ ಭ್ರಷ್ಟಾಚಾರ ವಿರೋಧಿ ಪ್ರಗತಿಪರ ವೇದಿಕೆಯ ಜಿ.ಎನ್.ನಾಗರಾಜು, ಎ.ಕೆ.ಸುಬ್ಬಯ್ಯ,  ಸುರೇಂದ್ರ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT