ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ವಿವಾದ: ಬೇರೆ ಹೆಸರು ಸೂಚಿಸುವ ಪ್ರಶ್ನೆ ಇಲ್ಲ

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ಅವರನ್ನು ಹೊರತುಪಡಿಸಿ ಬೇರೊಬ್ಬರ ಹೆಸರು ಸೂಚಿಸುವುದಾಗಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರಲ್ಲಿ ಹೇಳಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದರು.

`ಲೋಕಾಯುಕ್ತರ ಹುದ್ದೆಗೆ ಬೇರೊಬ್ಬರ ಹೆಸರನ್ನು ಸೂಚಿಸಲು ಸರ್ಕಾರ ಒಪ್ಪಿದೆ. ನೂತನ ಲೋಕಾಯುಕ್ತರ ನೇಮಕ ಏಳರಿಂದ ಹತ್ತು ದಿನಗಳಲ್ಲಿ ಬಗೆಹರಿಯುವ ವಿಶ್ವಾಸ ಇದೆ~ ಎಂದು ರಾಜ್ಯಪಾಲರು ಭಾನುವಾರ ರಾಜಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.

ರಾಜ್ಯಪಾಲರ ಹೇಳಿಕೆ ಕುರಿತು ಗೃಹ ಕಚೇರಿ `ಕೃಷ್ಣಾ~ದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, `ಲೋಕಾಯುಕ್ತ ಹುದ್ದೆಗೆ ನ್ಯಾ. ಬನ್ನೂರಮಠ ಅವರೇ ಸರ್ಕಾರದ ಆಯ್ಕೆ. ಬೇರೊಬ್ಬರ ಹೆಸರನ್ನು ಸೂಚಿಸುವ ಮಾತಿಲ್ಲ. ನೂತನ ಲೋಕಾಯುಕ್ತರ ಹುಡುಕಾಟಕ್ಕೆ ಯಾವುದೇ ಸಮಿತಿಯನ್ನೂ ರಚಿಸಲಾಗಿಲ್ಲ~ ಎಂದು ಸ್ಪಷ್ಟಪಡಿಸಿದರು.

`ವಿವರ ನೀಡಿರುವೆ~: `ಬನ್ನೂರಮಠ ಅವರನ್ನೇ ಲೋಕಾಯುಕ್ತರನ್ನಾಗಿ ಏಕೆ ನೇಮಕ ಮಾಡಬೇಕು ಎಂಬ ಕುರಿತು ರಾಜ್ಯಪಾಲರು ವಿವರಣೆ ಕೇಳಿದ್ದರು. ಅವರು ಕೇಳಿದ್ದ ಎಲ್ಲ ವಿಷಯಗಳ ಕುರಿತು ವಿವರಣೆ ನೀಡಲಾಗಿದೆ. ಅವರಿಂದ ಪ್ರತಿಕ್ರಿಯೆ ಬಂದಿಲ್ಲ~ ಎಂದ ಅವರು, `ಲೋಕಾಯುಕ್ತ ನೇಮಕ ಸಂಬಂಧ ಮಾಧ್ಯಮಗಳು ಮತ್ತೆ ಮತ್ತೆ ಒಂದೇ ಪ್ರಶ್ನೆ ಕೇಳುವುದು, ನಾನೂ ಒಂದೇ ವಿಷಯ ಕುರಿತು ಸ್ಪಷ್ಟನೆ ನೀಡುತ್ತಿರುವುದು ಅಷ್ಟು ಸೂಕ್ತವಲ್ಲ~ ಎಂದರು.

`ಸಭೆ ಇಲ್ಲ~: ಇದೇ 30ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿಲ್ಲ. ಅಗತ್ಯ ಕಂಡುಬಂದರೆ ಅಧಿವೇಶನ ನಡೆಯುವ ಸಂದರ್ಭದಲ್ಲೇ ಶಾಸಕಾಂಗ ಪಕ್ಷದ ಸಭೆ ನಡೆಸಲಾಗುವುದು. ಆದರೆ 30ರಂದು ಪಕ್ಷದ ಹಿರಿಯ ಮುಖಂಡರ ಸಭೆ ನಡೆಯಲಿದೆ. ಅಲ್ಲಿ ಪಕ್ಷದ ವಿದ್ಯಮಾನಗಳ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.

ರಾಜ್ಯದ ಆರ್ಥಿಕ ಸ್ಥಿತಿ ದಕ್ಷಿಣ ಭಾರತದ ಯಾವುದೇ ರಾಜ್ಯಕ್ಕಿಂತ ಹೆಚ್ಚು ಸದೃಢವಾಗಿದೆ. ಸಾಲ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎಂಬ ಮಾತು ತಪ್ಪು. ಆರ್ಥಿಕ ಸ್ಥಿತಿ ಕುರಿತು ಕಾಲಕಾಲಕ್ಕೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕೆಎಂಎಫ್ ವಿವಾದ: `ರಾಜ್ಯ ಹಾಲು ಮಹಾಮಂಡಳದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ಸಹಕಾರ ಸಚಿವ ಲಕ್ಷ್ಮಣ ಸವದಿ ಮಾಹಿತಿ ಪಡೆದುಕೊಳ್ಳುತ್ತಾರೆ. ಮಾಹಿತಿ ಆಧರಿಸಿ ಕ್ರಮ ಜರುಗಿಸಲಾಗುವುದು~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT