ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಸಂಸ್ಥೆ ಕುಂದು-ಕೊರತೆ ಸಭೆ

Last Updated 4 ಅಕ್ಟೋಬರ್ 2012, 8:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಲೋಕಾಯುಕ್ತ ಸಂಸ್ಥೆಯು ಭ್ರಷ್ಟಾಚಾರದ ವಿರುದ್ಧ ಮಾತ್ರವಲ್ಲದೇ ಸರ್ಕಾರ ಮತ್ತು ಇಲಾಖೆಗಳ ಉತ್ತಮ ಆಡಳಿತದ ಬಗ್ಗೆಯೂ ನಿಗಾ ವಹಿಸುತ್ತದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಾಮಾಣಿಕತೆ ಮತ್ತು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಲೋಕಾಯುಕ್ತ ನೂತನ ಡಿವೈಎಸ್ಪಿ ಎಂ.ನಾರಾಯಣ ತಿಳಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ನಡೆದ ತಾಲ್ಲೂಕು ಅಧಿಕಾರಿಗಳ ಮಟ್ಟದ ಕುಂದು-ಕೊರತೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, `ಲೋಕಾಯುಕ್ತ ಸಂಸ್ಥೆಯು ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಮತ್ತು ದುರಾಡಳಿತ ಸಹಿಸುವುದಿಲ್ಲ~ ಎಂದರು.

`ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಿಬಿಐ ಹಲವು ಅಧಿಕಾರಗಳನ್ನು ಚಲಾಯಿಸಲು ಅವಕಾಶ ಮಾಡಿಕೊಟ್ಟಿದೆ. ಮುಖ್ಯಮಂತ್ರಿ, ಸಚಿವರು ಮಾತ್ರವಲ್ಲದೇ ಐಎಎಸ್, ಐಪಿಎಸ್ ಅಧಿಕಾರಿಗಳವರೆಗೆ ಕ್ರಮ ಜರುಗಿಸಬಹುದು. ಆರೋಪ ಸಾಬೀತಾದಲ್ಲಿ ಅವರು ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ~ ಎಂದು ಅವರು ತಿಳಿಸಿದರು.

`ತಪ್ಪಿತಸ್ಥ ಅಧಿಕಾರಿ ಅಥವಾ ಜನಪ್ರತಿನಿಧಿ ವಿರುದ್ಧ ದೂರು ಕೇಳಿ ಬಂದ ಕೂಡಲೇ ಸೂಕ್ತ ಪರಿಶೀಲನೆ ನಡೆಸಿ, ಲೋಕಾಯುಕ್ತ ಸಂಸ್ಥೆಯು ಕಾರ್ಯಾಚರಣೆ ನಡೆಸಲಿದೆ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಿದೆ. ತನಿಖೆ ವೇಳೆ ತಪ್ಪಿತಸ್ಥರು ತಮ್ಮ ಹುದ್ದೆಗಳನ್ನು ತ್ಯಜಿಸಬೇಕಾಗುತ್ತದೆ~ ಎಂದು ಅವರು ಹೇಳಿದರು. `ಬಹುತೇಕ ಮಂದಿ ಲೋಕಾಯುಕ್ತ ಸಂಸ್ಥೆಯೆಂದರೆ ಭ್ರಷ್ಟಾಚಾರ ವಿರುದ್ಧ ಕಾರ್ಯಾಚರಣೆ ನಡೆಸುವ ಸಂಸ್ಥೆಯೆಂದು ಭಾವಿಸಿದ್ದಾರೆ. ಆದರೆ ಸಂಸ್ಥೆಯ ಕಾರ್ಯವ್ಯಾಪ್ತಿಯು ವಿಶಾಲವಾಗಿದೆ.

ಉತ್ತಮ ಆಡಳಿತ ನಿರ್ವಹಣೆ ಮತ್ತು ಸರ್ಕಾರದ ಇತರ ಕಾರ್ಯಗಳ ಬಗ್ಗೆಯೂ ಸಂಸ್ಥೆಯು ನಿಗಾ ವಹಿಸಬಹುದು. ತನಗಿರುವ ಅಧಿಕಾರದ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬಹುದು. ಕರ್ತವ್ಯದತ್ತ ನಿರ್ಲಕ್ಷ್ಯ ಮತ್ತು ನಿರಾಸಕ್ತಿ ತೋರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಬಹುದು~ ಎಂದು ಅವರು ತಿಳಿಸಿದರು.

`ಭಾರಿ ನಿರೀಕ್ಷೆಗಳನ್ನು ಹೊತ್ತುಕೊಂಡು ಬರುವ ಜನರನ್ನು ಯಾವುದೇ ಕಾರಣಕ್ಕೂ ನಿರಾಸೆಗೊಳಿಸಬಾರದು. ಅವರ ಸಮಸ್ಯೆ ಮತ್ತು ದೂರುಗಳನ್ನು ಪರಿಹರಿಸಲು ಪ್ರಥಮ ಆದ್ಯತೆ ನೀಡಬೇಕು. ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು. ಸರ್ಕಾರ ಮತ್ತು ಇಲಾಖೆಯ ಕಾರ್ಯನಿರ್ವಹಣೆ ಬಗ್ಗೆ ಜನರು ಹೊಂದಿರುವ ಒಳ್ಳೆಯ ಭಾವನೆಯನ್ನು ಕಾಪಾಡಿಕೊಳ್ಳಬೇಕು~ ಎಂದು ಎಂ.ನಾರಾಯಣ ತಿಳಿಸಿದರು. ತಹಶೀಲ್ದಾರ್ ಡಾ.ಎನ್.ಭಾಸ್ಕರ್, ತಾಲ್ಲೂಕು ಪಂಚಾಯಿತಿ ಇಓ ರಾಮಚಂದ್ರರೆಡ್ಡಿ ಮತ್ತು ಲೋಕಾಯುಕ್ತ ಇನ್ಸ್‌ಪೆಕ್ಟರ್ ಕೃಷ್ಣ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT