ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತರ ರಾಜೀನಾಮೆ

Last Updated 19 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗೃಹ ನಿರ್ಮಾಣ ಸಹಕಾರ ಸಂಘಗಳ ಉಪನಿಯಮ (ಬೈಲಾ) ಉಲ್ಲಂಘಿಸಿ ನಿವೇಶನಗಳನ್ನು ಪಡೆದಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಸೋಮವಾರ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಅಧಿಕಾರ ಸ್ವೀಕರಿಸಿದ 47 ದಿನಗಳಲ್ಲೇ ಅವರು ರಾಜೀನಾಮೆ ನೀಡಿದ್ದಾರೆ.

ಸ್ವಂತ ಮನೆ ಹೊಂದಿದ ಬಳಿಕವೂ ಗೃಹ ನಿರ್ಮಾಣ ಸಹಕಾರ ಸಂಘಗಳ ಬೈಲಾ ಉಲ್ಲಂಘಿಸಿ ಎರಡು ನಿವೇಶನಗಳನ್ನು ಪಡೆದ ಆರೋಪ ನ್ಯಾ. ಪಾಟೀಲ್ ಅವರ ಮೇಲಿತ್ತು. ಸೋಮವಾರ ಸಂಜೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಭೇಟಿಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು.

ಸಂಜೆ 7 ಗಂಟೆಗೆ ಲೋಕಾಯುಕ್ತ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, `ಕಾನೂನಿನ ಪ್ರಕಾರವೇ ನಿವೇಶನಗಳನ್ನು ಪಡೆದಿದ್ದರೂ ನಮ್ಮ ವಿರುದ್ಧ ಕೆಲವರು ವಾರದಿಂದ ನಿರಂತರ ಅಪಪ್ರಚಾರ ನಡೆಸುತ್ತಿದ್ದಾರೆ.

ಇದರಿಂದ ನನ್ನ ಮನಸ್ಸಿಗೆ ತೀವ್ರವಾಗಿ ನೋವಾಗಿದೆ. ಹಿತಕರವಲ್ಲದ ವಾತಾವರಣದಲ್ಲಿ ಕೆಲಸ ಮಾಡುವುದು ಸರಿಯಲ್ಲ ಎಂಬುದು ನನ್ನ ಭಾವನೆ. ಆದ್ದರಿಂದ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ~ ಎಂದರು.
`ನಾನು ಲೋಕಾಯುಕ್ತ ಹುದ್ದೆಯ ಆಕಾಂಕ್ಷಿಯಾಗಿರಲಿಲ್ಲ, ಕೋರಿಕೆಯನ್ನೂ ಸಲ್ಲಿಸಿರಲಿಲ್ಲ.

ಅವಕಾಶ ಬಂದಾಗ ರಾಜ್ಯದ ಜನತೆಗೆ ಸೇವೆ ಸಲ್ಲಿಸುವ ಬದ್ಧತೆ ಮತ್ತು ಆಶಯದೊಂದಿಗೆ ಸ್ವೀಕರಿಸಿದ್ದೆ~ ಎಂದು ಹೇಳಿದರು.

`ಪ್ರಾಮಾಣಿಕನಾಗಿಯೇ ಇದ್ದೇನೆ~: `1990ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗುವ ಮುನ್ನ ವಕೀಲಿ ವೃತ್ತಿಯಲ್ಲಿ ಹೆಚ್ಚಿನ ಸಂಪಾದನೆ ಇತ್ತು. ಆದರೆ ಸಮಾಜದ ಸೇವೆಗಾಗಿ ಅದನ್ನು ತ್ಯಜಿಸಿ ನ್ಯಾಯಮೂರ್ತಿ ಹುದ್ದೆ ಪಡೆದೆ. ಮತ್ತೊಮ್ಮೆ ಕೈತುಂಬ ಸಂಪಾದಿಸುವ ಅವಕಾಶಗಳನ್ನು ಬಿಟ್ಟು ಈ ಹುದ್ದೆಗೆ ಬಂದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹುದ್ದೆಯೂ ಸೇರಿದಂತೆ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ಎಲ್ಲ ಕಡೆಗಳಲ್ಲೂ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಬದ್ಧತೆಯನ್ನು ಕಾಯ್ದುಕೊಂಡು ಬಂದಿದ್ದೇನೆ~ ಎಂದರು.

`ಭ್ರಷ್ಟಾಚಾರದ ವಿರುದ್ಧ ಸಮರ ಅಥವಾ ಭ್ರಷ್ಟಾಚಾರದ ವಿರುದ್ಧ ಸಮರ ನಡೆಸುವವರ ಚಾರಿತ್ರ್ಯಹನನದಲ್ಲಿ ಯಾವುದು ಬೇಕು ಎಂಬುದನ್ನು ಎಲ್ಲರೂ ನಿರ್ಧರಿಸಬೇಕು. ಜೀವನಪರ್ಯಂತ ಪ್ರಾಮಾಣಿಕತೆ ಉಳಿಸಿಕೊಂಡು, ವ್ಯಕ್ತಿತ್ವ ಕಟ್ಟಿಕೊಂಡವರ ವಿರುದ್ಧ ಆಧಾರರಹಿತ ಅಪಪ್ರಚಾರ ನಡೆಸುವುದು ಸರಿಯಲ್ಲ ಎಂಬುದನ್ನು ಮಾಧ್ಯಮಗಳಿಗೆ ಎಚ್ಚರಿಸಲು ಬಯಸುತ್ತೇನೆ. ಇದರಿಂದ ಇಂತಹ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಭಯಪಡುವ ವಾತಾವರಣ ನಿರ್ಮಾಣವಾಗುತ್ತದೆ. ಅದು ಭ್ರಷ್ಟರಿಗೆ ಲಾಭ ಮಾಡಿಕೊಡುತ್ತದೆ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.

 ಸರ್ಕಾರದ ಗೊಂದಲ
ಬೆಂಗಳೂರು: ಲೋಕಾಯುಕ್ತ ಸ್ಥಾನಕ್ಕೆ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಕೊಟ್ಟಿರುವ ರಾಜೀನಾಮೆ ಅಂಗೀಕಾರವಾದ ನಂತರ ಅವರ ಸ್ಥಾನಕ್ಕೆ ಬೇರೆ ಯಾರನ್ನು ನೇಮಕ ಮಾಡಬೇಕು ಎಂಬ ವಿಚಾರದಲ್ಲಿ ರಾಜ್ಯ ಸರ್ಕಾರ ಗೊಂದಲದಲ್ಲಿ ಇದ್ದು, ಈ ಕುರಿತು ಹೈಕಮಾಂಡ್ ನೆರವು ಕೋರಲು ತೀರ್ಮಾನಿಸಿದೆ.

ಪಾಟೀಲ್ ಅವರ ರಾಜೀನಾಮೆಯನ್ನು ರಾಜ್ಯಪಾಲರು ಇನ್ನೂ ಅಂಗೀಕರಿಸಿಲ್ಲ. ಹೀಗಾಗಿ ಈಗಲೇ ಹೊಸ ಲೋಕಾಯುಕ್ತರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡುವುದು ಬೇಡ ಎನ್ನುವ ತೀರ್ಮಾನಕ್ಕೂ ಸರ್ಕಾರ ಬಂದಿದೆ. ಮುಖ್ಯಮಂತ್ರಿ  ನೇತೃತ್ವದಲ್ಲಿ ಸೋಮವಾರ ಸಂಜೆ ನಡೆದ ಪ್ರಮುಖರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಒಂದು ವೇಳೆ ರಾಜ್ಯಪಾಲರು ರಾಜೀನಾಮೆ ಅಂಗೀಕರಿಸಿದರೆ, ತಕ್ಷಣವೇ ಹೊಸ ಲೋಕಾಯುಕ್ತರ ನೇಮಕ ಕುರಿತು ಪ್ರತಿಪಕ್ಷಗಳ ಮುಖಂಡರ ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿದೆ. ನಂತರ ಪಕ್ಷದ ಹೈಕಮಾಂಡ್ ಜತೆ ಚರ್ಚಿಸಿ, ಸೂಕ್ತ ವ್ಯಕ್ತಿಯನ್ನು ನೇಮಿಸಲು ತೀರ್ಮಾನಿಸಲಾಗಿದೆ  ಎಂದು ಗೊತ್ತಾಗಿದೆ.



ಆರೋಪಕ್ಕೆ ವಿವರಣೆ: ತಮ್ಮ ವಿರುದ್ಧದ ಆರೋಪಗಳಿಗೆ ಸುದೀರ್ಘ ವಿವರಣೆ ನೀಡಿದ ಪಾಟೀಲ್, 1982ರಲ್ಲಿ ತಾವು ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದಾಗ ವಸಂತನಗರದಲ್ಲಿ ಚಿಕ್ಕ ನಿವೇಶನವೊಂದನ್ನು ಖರೀದಿಸಿದ್ದು, ಅಲ್ಲಿಯೇ ಮನೆ ನಿರ್ಮಿಸಲಾಯಿತು. ಈ ನಿವೇಶನವನ್ನು ಖಾಸಗಿ ವ್ಯಕ್ತಿಯೊಬ್ಬರಿಂದ ಖರೀದಿಸಲಾಗಿತ್ತು. ಅದು ತಮಗೆ ಸರ್ಕಾರ ಮಂಜೂರು ಮಾಡಿದ್ದ ನಿವೇಶನವಲ್ಲ. ಯಾವುದೇ ಸಹಕಾರ ಸಂಘದಿಂದ ಪಡೆದದ್ದೂ ಅಲ್ಲ ಎಂದರು.

1994ರಲ್ಲಿ ತಾವು ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ನ್ಯಾಯಾಂಗ ಇಲಾಖೆಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿವೇಶನ ಮಂಜೂರು ಮಾಡಿತ್ತು. ತಮ್ಮಂತೆ ಇತರೆ ಹಲವು ನ್ಯಾಯಮೂರ್ತಿಗಳಿಗೂ ನಿವೇಶನ ನೀಡಲಾಗಿತ್ತು. ನ್ಯಾಯಮೂರ್ತಿಗಳಿಗೆ ನಿವೇಶನ ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಬಳಿಕ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯೂ ವಜಾ ಆಗಿತ್ತು ಎಂದು ವಿವರಣೆ ನೀಡಿದರು.

ಪತ್ನಿಯಿಂದಲೂ ಲೋಪವಾಗಿಲ್ಲ:
ತಮ್ಮ ಪತ್ನಿ ಅನ್ನಪೂರ್ಣ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದಿಂದ 2006ರಲ್ಲಿ ನಿವೇಶನ ಖರೀದಿಸಿರುವುದರಲ್ಲೂ ಕಾನೂನು ಉಲ್ಲಂಘನೆ ನಡೆದಿಲ್ಲ. ಅನ್ನಪೂರ್ಣ ಅವರ ಸಹೋದರ ಶಿವರಾಜ್ 1982ರಲ್ಲೇ ಸಹಕಾರ ಸಂಘದ ಸದಸ್ಯರಾಗಿದ್ದರು. ನಿವೇಶನ ಪಡೆಯಲು ಹಣವನ್ನೂ ಪಾವತಿಸಿದ್ದರು. ಆದರೆ ಹಣ ಪಡೆದ ಸಹಕಾರ ಸಂಘ ಬಡಾವಣೆ ನಿರ್ಮಿಸದೇ ದಿವಾಳಿಯತ್ತ ಸಾಗಿತ್ತು. ಈ ಸಂದರ್ಭದಲ್ಲಿ ಶಿವರಾಜ್ ತಮ್ಮ ಹಣ ಮರುಪಾವತಿಗೆ ಅರ್ಜಿ ಸಲ್ಲಿಸಿದ್ದರು. ಇತರೆ 2,700 ಸದಸ್ಯರೂ ಇದೇ ರೀತಿ ಹಣ ವಾಪಸ್ ನೀಡುವಂತೆ ಕೋರಿದ್ದರು ಎಂಬ ಮಾಹಿತಿ ಇದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕ್‌ಗಳು ಮುಂದಾಗಿದ್ದವು. ಆಗ ಸಂಘದ ಸದಸ್ಯರು ಸರ್ಕಾರವನ್ನು ಸಂಪರ್ಕಿಸಿ ಆಸ್ತಿಯ ಹರಾಜು ನಡೆಸಲು ಅನುಮತಿ ಪಡೆದಿದ್ದರು. ಈ ಹರಾಜಿನಲ್ಲಿ ಶಿವರಾಜ್ ಅವರ ಪರವಾಗಿ ಅನ್ನಪೂರ್ಣ ನಿವೇಶನ ಖರೀದಿಸಿದ್ದರು. ಸಂಘದ ಸಹ ಸದಸ್ಯೆಯಾಗಿ ಅವರು ಪೂರ್ಣ ಪ್ರಮಾಣದ ಖರೀದಿ ಮೂಲಕ ಈ ನಿವೇಶನ ಪಡೆದಿದ್ದರು ಎಂದು ವಿವರಿಸಿದರು. `ಅಧಿಕೃತ ಆದಾಯದ ಮೂಲಕ ಗಳಿಸಿದ್ದ ಹಣದಿಂದಲೇ ನಿವೇಶನ ಖರೀದಿಸಲಾಗಿತ್ತು. ಈ ಸಂದರ್ಭದಲ್ಲಿ ತಮ್ಮ ಬಳಿ ಮನೆ ಅಥವಾ ನಿವೇಶನ ಇಲ್ಲ ಎಂಬ ಪ್ರಮಾಣ ಪತ್ರವನ್ನು ಪತ್ನಿ ಸಲ್ಲಿಸಿರಲಿಲ್ಲ.

 ಆರೋಪ ಕೇಳಿಬಂದ ತಕ್ಷಣವೇ ನಿವೇಶನವನ್ನು ಸಹಕಾರ ಸಂಘಕ್ಕೆ ಹಿಂದಿರುಗಿಸುವಂತೆ ಪತ್ನಿಗೆ ಸೂಚಿಸಿದ್ದೆ. ಕಾನೂನಿನ ಪ್ರಶ್ನೆಯನ್ನು ಬದಿಗಿಟ್ಟು ಈ ಸೂಚನೆ ನೀಡಿದ್ದೆ. ಅದರಂತೆ ಅವರು ಸಂಘಕ್ಕೆ ಸೆಪ್ಟೆಂಬರ್ 14ರಂದು ಪತ್ರ ಬರೆದು ತಿಳಿಸಿದ್ದರು. ನಿವೇಶನವನ್ನು ಹಿಂದಿರುಗಿಸಿದ ವಿಷಯವನ್ನು ಸರಿಯಾದ ದಿಕ್ಕಿನಲ್ಲಿ ಗ್ರಹಿಸಬೇಕಿತ್ತು. ಆದರೆ ನಾವು ಅಪರಾಧವನ್ನು ಒಪ್ಪಿಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ ಎಂಬಂತೆ ಬಿಂಬಿಸಿದರು~ ಎಂದು ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

47 ದಿನಗಳ ಅಧಿಕಾರ
ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಾದ ಶಿವರಾಜ್ ಪಾಟೀಲ್ ಅವರನ್ನು ರಾಜ್ಯದ ನೂತನ ಲೋಕಾಯುಕ್ತರನ್ನಾಗಿ ನೇಮಕ ಮಾಡಿ ರಾಜ್ಯಪಾಲರು ಜುಲೈ 26ರಂದು ಆದೇಶ ಹೊರಡಿಸಿದ್ದರು. ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ಅಧಿಕಾರದ ಅವಧಿ ಆಗಸ್ಟ್ 2ರಂದು ಕೊನೆಗೊಂಡಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ 3ರಂದು ಶಿವರಾಜ್ ಪಾಟೀಲ್ ಅಧಿಕಾರ ಸ್ವೀಕರಿಸಿದ್ದರು.

ಪಾಟೀಲ್ ಕೇವಲ 47 ದಿನಗಳ ಅವಧಿಯಲ್ಲೇ ನಿವೇಶನ ವಿವಾದದಿಂದಾಗಿ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ. ಲೋಕಾಯುಕ್ತರೇ ಕಾನೂನು ಉಲ್ಲಂಘಿಸಿ ನಿವೇಶನ ಪಡೆದಿದ್ದಾರೆ ಎಂಬ ವಿವಾದ ರಾಷ್ಟ್ರವ್ಯಾಪಿ ಪ್ರತಿಧ್ವನಿಸುತ್ತಿರುವುದು ಅವರಿಗೆ ಮುಜುಗರ ಉಂಟುಮಾಡಿತ್ತು. ಹಲವು ಮಂದಿ ನಿವೃತ್ತ ನ್ಯಾಯಮೂರ್ತಿಗಳು ರಾಜೀನಾಮೆ ನೀಡದಂತೆ ಮನವೊಲಿಸುವ ಪ್ರಯತ್ನ ಮಾಡಿದರೂ ಅವರು ಮಣಿಯಲಿಲ್ಲ.

ಸೋಮವಾರ ಬೆಳಿಗ್ಗೆಯೇ ವಿವಾದದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದಾಗಿ ಪಾಟೀಲ್ ಭಾನುವಾರ ತಿಳಿಸಿದ್ದರು. ಸೋಮವಾರ 3 ಗಂಟೆಯವರೆಗೂ ಕಚೇರಿಯಲ್ಲಿದ್ದ ಅವರು ನಂತರ ಸದಾಶಿವನಗರದ ನಿವಾಸಕ್ಕೆ ತೆರಳಿದರು. ರಾಜೀನಾಮೆ ಪತ್ರದೊಂದಿಗೆ 5 ಗಂಟೆಗೆ ಮನೆಯಿಂದ ನಿರ್ಗಮಿಸಿದ ಅವರು 5.30ಕ್ಕೆ ರಾಜ್ಯಪಾಲರನ್ನು ಭೇಟಿಮಾಡಿ ರಾಜೀನಾಮೆ ಸಲ್ಲಿಸಿದರು. ಮುಖ್ಯದ್ವಾರದಿಂದ ರಾಜಭವನ ಪ್ರವೇಶಿಸಿದ ಪಾಟೀಲ್ ಹಿಂಬದಿಯ ದ್ವಾರದಿಂದ ನಿರ್ಗಮಿಸಿದರು. ಅಲ್ಲಿಂದ ನೇರವಾಗಿ ಕಚೇರಿಗೆ ಬಂದು ಪತ್ರಿಕಾಗೋಷ್ಠಿ ನಡೆಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT