ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಿಯ ಮುದ್ದೆ ಮೀಮಾಂಸೆ!

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಯುವ ನಿರ್ದೇಶಕ ರಾಘವ ಲೋಕಿ ಸದ್ದಿಲ್ಲದೆ ತೆಲುಗು ಚಿತ್ರಗಳತ್ತ ಗಮನ ಹರಿಸಿದ್ದಾರೆ. ಅಲ್ಲಿನ ಕೆಲವು ನಿರ್ಮಾಪಕರ ಜೊತೆ ಮಾತುಕತೆಯನ್ನೂ ನಡೆಸಿದ್ದಾರೆ. ಲೋಕಿ ಅವರ ಚೊಚ್ಚಿಲ ನಿರ್ದೇಶನದ ‘ಸತ್ಯಾ ಇನ್ ಲವ್‌’ನ ಸಾಧಾರಣ ಗೆಲುವಿನ ನಂತರ, ಅವರು ನಿರ್ದೇಶಿಸಿದ ‘ಗಿಲ್ಲಿ’ ಮತ್ತು ‘ಲಕ್ಷ್ಮಿ’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಆದರೆ ‘ಲಕ್ಷ್ಮಿ’ಯ ಚಿತ್ರಭಾಷೆ ಪರಭಾಷಾ ನಿರ್ಮಾಪಕರನ್ನು ಸೆಳೆದಿದೆ. ಅದರ ಪರಿಣಾಮವೇ ಇವರತ್ತ ತೆಲುಗು ಚಿತ್ರರಂಗದ ಕುತೂಹಲದ ನೋಟ.

ಪ್ರಸ್ತುತ ರಾಘವ ಲೋಕಿ ‘ಎ ಸೆಕೆಂಡ್ ಹ್ಯಾಂಡ್ ಲವರ್’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಕನ್ನಡದ ಈ ಸಿನಿಮಾ ಮುಗಿದ ನಂತರವೇ ಅವರು ತೆಲುಗಿನತ್ತ ಮುಖ ಮಾಡುವುದು. ಹೀಗೆ, ಎರಡು ಧ್ರುವಗಳ ನಡುವೆ ಜೀಕುತ್ತಿರುವ ಲೋಕಿ, ‘ಸಿನಿಮಾ ರಂಜನೆ’ ಜೊತೆ ತಮ್ಮ ತವಕತಲ್ಲಣಗಳನ್ನು ಹಂಚಿಕೊಂಡರು. ಅವರೊಂದಿಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

‘ಲಕ್ಷ್ಮಿ’ ಚಿತ್ರದ ನಂತರ ನೀವು ಗಾಂಧಿನಗರದಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಯಾಕೆ?
‘ಲಕ್ಷ್ಮಿ’ ಸಿನಿಮಾ ಜನವರಿಯಲ್ಲಿ ಬಿಡುಗಡೆಯಾಯಿತು. ಒಂದು ಚಿತ್ರವನ್ನು ಪೂರ್ಣಗೊಳಿಸಿದ ನಂತರವೇ ಮತ್ತೊಂದು ಚಿತ್ರ ಒಪ್ಪಿಕೊಳ್ಳುವುದು ನನ್ನ ನೀತಿ. ‘ಲಕ್ಷ್ಮಿ’ ನಂತರ ಯಾವ ಚಿತ್ರಗಳೂ ಕೈಯಲ್ಲಿರಲಿಲ್ಲ, ಆದ್ದರಿಂದ ಕೆಲ ಕಾಲ ವಿರಾಮ. ಈ ವೇಳೆ ಓದು, ಕುಟುಂಬದ ಜೊತೆ ಕಾಲಕಳೆದೆ.

ನೀವು ಹೆಚ್ಚು ಭರವಸೆ ಹೊಂದಿದ್ದ ‘ಲಕ್ಷ್ಮಿ’ ಗೆಲ್ಲಲಿಲ್ಲ! ಸೋಲಿಗೆ ನಿಮಗೆ ಹೊಳೆದ ಕಾರಣಗಳೇನು?
‘ಗಿಲ್ಲಿ’ ಮತ್ತು ‘ಲಕ್ಷ್ಮಿ’ ಚಿತ್ರಗಳು ವೀಕ್ಷಕರನ್ನು ಸೆಳೆಯಲು ವಿಫಲವಾದವು ನಿಜ. ಪ್ರಚಾರದ ಕೊರತೆಯಿಂದ ‘ಗಿಲ್ಲಿ’ ಜನರನ್ನು ಮುಟ್ಟಲಿಲ್ಲ. ಆದರೆ ನಾಯಕ ಗುರುಗೆ ‘ಗಿಲ್ಲಿ’ ಇಮೇಜ್ ತಂದುಕೊಟ್ಟಿತು. ಲಕ್ಷ್ಮಿಯೂ ಅಷ್ಟೇ, ನನಗೆ ಒಳ್ಳೆಯ ಸ್ಥಾನ ನೀಡಿತು. ಕನ್ನಡ ಚಿತ್ರರಂಗದಲ್ಲಿ ನನಗೆ ಐಡೆಂಟಿಟಿ ದೊರೆಯಿತು, ಪರಭಾಷಾ ಚಿತ್ರ ನಿರ್ಮಾಪಕರು ನನಗೆ ಹತ್ತಿರವಾದರು. ಪೂರ್ಣವಾಗಿ ಭಯೋತ್ಪಾದನೆ ವಿಚಾರದ ಬಗ್ಗೆ ಕೇಂದ್ರಿತವಾಗಿದ್ದ ಕನ್ನಡದ ಮೊದಲ ವ್ಯಾಪಾರಿ ಚಿತ್ರ ‘ಲಕ್ಷ್ಮಿ’. ಚಿತ್ರದ ಸೋಲಿಗೆ ಚಿತ್ರತಂಡದ ಕೆಲವು ತಪ್ಪುಗಳೂ ಇವೆ.

ಸಿನಿಮಾಕ್ಕೆ ಸಂಬಂಧಿಸಿದಂತೆ ಸೋಲುಗೆಲುವಿನ ಕಾರಣಗಳನ್ನು ಹುಡುಕಬಾರದು. ಗಟ್ಟಿತನವಿಲ್ಲದ ಚಿತ್ರಗಳು ಗೆದ್ದ ಉದಾಹರಣೆಗಳಿವೆ. ಹಾಗೆಯೇ ಉತ್ತಮ ಚಿತ್ರಗಳು ಸೋತ ನಿದರ್ಶನಗಳಿವೆ. ಮುಖ್ಯವಾಗಿ ಚಿತ್ರ ಸೋತಿದೆ ಎನ್ನುವ ವಾಸ್ತವವನ್ನು ಮಾತ್ರ ಒಪ್ಪಿಕೊಳ್ಳಬೇಕು.

ನಿಮ್ಮ ಚಿತ್ರಗಳಿಗೆ ಹೂಡಿದ ಬಂಡವಾಳ ವಾಪಸು ಬಂದಿದೆಯೇ?
‘ಸತ್ಯಾ ಇನ್ ಲವ್’ ಲಾಭ ತಂದಿದೆ. ‘ಗಿಲ್ಲಿ’ಯ ನಿರ್ಮಾಪಕರು ಕೂಡ ಸೇಫ್. ‘ಲಕ್ಷ್ಮಿ’ಯೇ ಸ್ವಲ್ವ ಕೈಹಿಡಿಯದಿರುವುದು.

ಪರಭಾಷಾ ಚಿತ್ರಗಳತ್ತ ಗಮನಹರಿಸಿದ್ದೀರಿ, ಅಲ್ಲಿನ ನಾಡಿ ಮಿಡಿತವನ್ನು ಅಧ್ಯಯನ ಮಾಡಿದ್ದೀರ? 
ಆಯಾ ಭಾಷೆಯ ಜನರ ಸೊಗಡು, ಸಂಸ್ಕೃತಿ, ರೀತಿ ನೀತಿಗಳಿಗೆ ಹತ್ತಿರವಿರುವಂತೆ ಚಿತ್ರವನ್ನು ನಿರ್ಮಿಸಬೇಕು. ಪ್ರಾದೇಶಿಕತೆಗೆ ಅನುಗುಣವಾಗಿ ಚಿತ್ರ ಅರಳಬೇಕು. ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ಇದ್ದೇಇದೆ.

ನೀವು ಕಂಡುಕೊಂಡಂತೆ ಪರಭಾಷೆ ಮತ್ತು ನಮ್ಮ ಚಿತ್ರ ರಂಗದ ನಡುವಿನ ವ್ಯತ್ಯಾಸವೇನು?
ಹೆಚ್ಚಿನದ್ದೇನೂ ಇಲ್ಲ. ಪರಭಾಷೆಗಳಲ್ಲಿ ಮನರಂಜನೆ ಮತ್ತು ಪ್ರಯೋಗಾತ್ಮಕತೆಯನ್ನು ಬೆಸೆಯುವ ಜಾಣ್ಮೆ ನಮಗಿಂತಲೂ ಹೆಚ್ಚಿತ್ತು. ಈಗ ಆ ಜಾಣ್ಮೆಯನ್ನು ನಾವೂ ಮೈಗೂಡಿಸಿಕೊಳ್ಳುತ್ತಿದ್ದೇವೆ. ನಮ್ಮ ಸಿನಿಮಾ ಪ್ರಯೋಗ ಮತ್ತು ಪೈಪೋಟಿ ಆರೋಗ್ಯಕರವಾಗಿವೆ. ತುಸು ಬೇಸರವೆಂದರೆ ಅನುಕರಣೆಗೆ ಒತ್ತು ನೀಡಿ ಹೊಸತನದಿಂದ ದೂರವಾಗುತ್ತಿದ್ದೇವೆ ಎನ್ನಿಸುತ್ತಿದೆ. ದಂಡುಪಾಳ್ಯದ ಯಶಸ್ಸು, ‘ಉಮೇಶ‘, ‘ಉಮೇಶ ರೆಡ್ಡಿ‘ಯಂತಹ ಚಿತ್ರಗಳ ಬರಲು ಕಾರಣವಾದರೆ, ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ‘ಯ ಚಿತ್ರಭಾಷೆಯನ್ನು ಅನುಕರಿಸಿ ಗೆಲ್ಲಲು ಕೆಲವರು ಯತ್ನಿಸಿದರು.     
ಗೆದ್ದ ಚಿತ್ರದ ಪಡಿಯಚ್ಚುಗಳಂತೆ ಸಿನಿಮಾಗಳು ಬರುವುದು ತಪ್ಪಬೇಕು.

ಚಿತ್ರರಂಗದ ಸಿದ್ಧಸೂತ್ರಗಳನ್ನು ಹೊರಗಿಟ್ಟು ನಿಮ್ಮದೇ ಆದ ಸೂತ್ರಗಳನ್ನು ಕಂಡುಕೊಂಡಿದ್ದೀರ? 
ಸಿದ್ಧಸೂತ್ರಗಳು ಅನಿವಾರ್ಯ. ನಮ್ಮ ಜನರು ಎಂದಿಗೂ ಇಷ್ಟಪಡುವುದು ರಾಗಿ ಮುದ್ದೆ, ತಲೆ ಮಾಂಸವನ್ನೇ ಹೊರತು ಫಿಜ್ಜಾ, ಬರ್ಗರ್‌ ಅಲ್ಲ. ಅದು ಆ ಕ್ಷಣಕ್ಕೆ ರುಚಿಸಬಹುಷ್ಟೇ.

ಹಾಗಾದರೆ ನಿಮ್ಮ ನಿರ್ದೇಶನದ ಪರಿಭಾಷೆ ಏನು?
ಮನರಂಜನೆಯೇ ಚಿತ್ರಗಳ ಮುಖ್ಯ ಧ್ಯೇಯ. ಮನರಂಜನೆ ಮತ್ತು ಪ್ರಯೋಗಾತ್ಮಕತೆ ಸಮ್ಮಿಲನದಲ್ಲಿ ಅರಳುವ ಚಿತ್ರಗಳು ಗಟ್ಟಿಯಾಗಿರುತ್ತವೆ. ಲೂಸಿಯಾ ಪ್ರಯೋಗಾತ್ಮಕ ಚಿತ್ರ. ಇದು ಒಂದು ವರ್ಗದ ಜನರನ್ನು ತಲುಪುತ್ತದೆ. ಕಲಾತ್ಮಕ ಚಿತ್ರಗಳೂ ಅಷ್ಟೇ ಒಂದು ವಲಯಕ್ಕೆ ಸೀಮಿತವಾಗುತ್ತವೆ. ಪ್ರೇಕ್ಷಕರು ಯಾವುದಕ್ಕೆ ಒಗ್ಗಿರುತ್ತಾರೊ ಅದಕ್ಕೆ ತಕ್ಕಂತೆ ಸಿನಿಮಾ ತಯಾರಿಸಬೇಕು. ಪ್ರಯೋಗಾತ್ಮಕ ಚಿತ್ರಗಳನ್ನು ಮನರಂಜನಾತ್ಮಕ ನೆಲೆಯಲ್ಲಿ ರೂಪಿಸಿದರೆ ಖಂಡಿತಾ ಯಶಸ್ಸು ಸಾಧಿಸಬಹುದು. ಕಲಾತ್ಮಕ ಚಿತ್ರಗಳು ಭಾವ ಮತ್ತು ವಿಚಾರ ಪ್ರಧಾನವಾಗಿದ್ದರೂ ಮನರಂಜನೆಯಿಂದ ಅಂತರ ಕಾಯ್ದುಕೊಂಡಿರುವುದರಿಂದ ಬಹು ಸಮುದಾಯವನ್ನು ತಲುಪುವಲ್ಲಿ ವಿಫಲವಾಗುತ್ತವೆ. ಮನರಂಜನೆ ಇಲ್ಲ ಅಂದರೆ ಚಿತ್ರವನ್ನು ಪ್ರೇಕ್ಷಕರು ಅರಗಿಸಿಕೊಳ್ಳುವುದು ಕಷ್ಟಸಾಧ್ಯ. ನಿರ್ದೇಶಕರು ತಾವು ಹೇಳಬೇಕು ಎನ್ನುವ ಕಲಾತ್ಮಕ ವಿಚಾರಣೆಗಳನ್ನು ಮಾಸ್ ಪ್ರೇಕ್ಷಕರಿಗೆ ಮುಟ್ಟಿಸುವುದು ಒಂದು ಜಾಣ್ಮೆ. 

ಮುಂದಿನ ಪ್ರಾಜೆಕ್ಟ್‌ಗಳು?
ನಿರ್ಮಾಪಕ ಸಿ.ಆರ್. ಮನೋಹರ್ ನಿರ್ಮಾಣದಲ್ಲಿ, ಶಿವರಾಜ್ ಕುಮಾರ್ ಅಭಿನಯದ ಅದ್ದೂರಿ ಬಜೆಟ್‌ನ ‘ನಾನೇ ರಾಜಕುಮಾರ’ ಸಿನಿಮಾಕ್ಕೆ ಸಿದ್ಧತೆ ನಡೆಯುತ್ತಿದೆ. ಸಿಕ್ಸ್ತ್‌ ಸೆನ್ಸ್ ಕುರಿತ ಕಥೆ ಚಿತ್ರದ್ದು. ತೆಲುಗು ತಮಿಳಿನಲ್ಲೂ ಏಕಕಾಲದಲ್ಲಿ ಚಿತ್ರೀಕರಣ ನಡೆಯಲಿದೆ. ಈ ಎರಡು ಭಾಷೆಗಳಲ್ಲಿ ನಾಯಕರ ಹುಡುಕಾಟ ನಡೆಯುತ್ತಿದೆ. ೧೯೮೮ರಲ್ಲಿ ನಡೆದ ಪ್ರೇಮಿಗಳ ನೈಜ ಘಟನೆ ಆಧಾರಿತ ಚಿತ್ರವೊಂದನ್ನು ಯೋಗೀಶ್‌ಗೆ ಮಾಡುವ ಸಿದ್ಧತೆಯಲ್ಲಿದ್ದೇನೆ. ನಟ ಚಿರಂಜೀವಿ ಅವರ ಸಂಬಂಧಿ ಮಾನ್ಯಂ ರಮೇಶ್‌ರ ತೆಲುಗಿನಲ್ಲಿ ಒಂದು ಚಿತ್ರ ನಿದೇಶಿಸಲು ಮಾತುಕತೆಯಾಗಿದೆ. ಮುಂದಿನ ವರ್ಷ ಚಿತ್ರದ ಆರಂಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT