ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕೋಪಯೋಗಿ ಇಲಾಖೆಗೆ ಗ್ರಹಣ

Last Updated 4 ಜೂನ್ 2013, 6:17 IST
ಅಕ್ಷರ ಗಾತ್ರ

ಚಿಕ್ಕೋಡಿ: ಲೋಕೋಪಯೋಗಿ ಇಲಾಖೆಯ ವಿಭಾಗೀಯ ಕಚೇರಿ ಎದುರಿನಲ್ಲೇ ಅದೇ ಇಲಾಖೆಗೆ ಸೇರಿದ ಕಟ್ಟಡವೊಂದರ ನಿರ್ಮಾಣ ಕಾರ್ಯ ಕಳೆದ ಏಳು ವರ್ಷಗಳಿಂದ ಆಮೆಗತಿಯಲ್ಲಿ ಸಾಗಿದೆ. ಇನ್ನೊಂದೆಡೆ ಸದಲಗಾದಲ್ಲಿ ನಿರ್ಮಿಸಿರುವ ಕಟ್ಟಡ ಪೂರ್ಣಗೊಂಡರೂ ಲೋಕಾರ್ಪಣೆ ಮಾಡಲು ಮುಹೂರ್ತ ಕೂಡಿ ಬಂದಿಲ್ಲ.

ಹೌದು, ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಲೋಕೋಪಯೋಗಿ ಇಲಾಖೆಯು ರೂ 30 ಲಕ್ಷ ಅನುದಾನದಡಿ ನಿರ್ಮಿಸುತ್ತಿರುವ  ನಿರೀಕ್ಷಣಾ ಮಂದಿರದ 2ನೇ ಬ್ಲಾಕ್ ಕಟ್ಟಡ ನಿರ್ಮಾಣ ಕಾಮಗಾರಿಯ ವ್ಯಥೆಯ ಕಥೆಯಿದು.

ಪಟ್ಟಣದಲ್ಲಿ 2006, ಮಾರ್ಚ್‌ನಲ್ಲಿ ಆರಂಭಗೊಂಡಿರುವ ನಿರೀಕ್ಷಣಾ ಮಂದಿರದ 2ನೇ ಬ್ಲಾಕ್ ಕಟ್ಟಡ ನಿರ್ಮಾಣ ಕಾಮಗಾರಿ ತೆವಳುತ್ತಾ ಸಾಗಿದೆ. ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡು ವರ್ಷ ಕಳೆದ ನಂತರ ಸದ್ಯ ಒಳಾಂಗಣ ಕೆಲಸ ಆರಂಭಿಸಲಾಗಿದೆ. ಇನ್ನು ಕಟ್ಟಡದಲ್ಲಿ ಪೀಠೋಪಕರಣ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಅಳವಡಿಸಿ ಲೋಕಾರ್ಪಣೆ ಯಾವಾಗ ಆಗಲಿದೆ? ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

ಕಟ್ಟಡ ನಿರ್ಮಾಣ ಕಾಲಮಿತಿಯಲ್ಲಿ ಮುಗಿಯದೇ ಇರುವುದಕ್ಕೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ ಕಾರಣ. ಲೋಕೋಪಯೋಗಿ ಇಲಾಖೆಗೆ ಸೇರಿದ ಕಟ್ಟಡ ನಿರ್ಮಾಣವೇ ಈ ಪರಿಯ ವಿಳಂಬವಾದರೆ ಇತರ ಇಲಾಖೆಗಳ ಕಟ್ಟಡಗಳ ನಿರ್ಮಾಣದ ಗತಿ ಏನು? ಎಂಬಂತಾಗಿದೆ.

ತಾಲ್ಲೂಕಿನ ಸದಲಗಾ ಪಟ್ಟಣದಲ್ಲಿಯೂ ಲೋಕೋಪಯೋಗಿ ಇಲಾಖೆಯು ್ಙ 30 ಲಕ್ಷ ಅನುದಾನದಲ್ಲಿ ನಿರ್ಮಿಸುತ್ತಿರುವ ಸುಸಜ್ಜಿತ ಪ್ರವಾಸಿ ಮಂದಿರದ ಕಟ್ಟಡ ಕಾಮಗಾರಿಯನ್ನೂ ಮಾರ್ಚ್, 2006ರಲ್ಲೇ ಆರಂಭಿಸಲಾಗಿದ್ದು, ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇನ್ನು ನಿಪ್ಪಾಣಿ ಪಟ್ಟಣದಲ್ಲಿ 20 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಿಸುತ್ತಿರುವ ಪ್ರವಾಸಿ ಮಂದಿರ ಕಾಮಗಾರಿಯನ್ನು ನವೆಂಬರ್, 2006ರಲ್ಲಿ ಆರಂಭಿಸಿ ಒಂದೇ ವರ್ಷದಲ್ಲಿ ಪೂರ್ಣಗೊಳಿಸಲಾಗಿದೆ.

ಉಪವಿಭಾಗೀಯ ಕೇಂದ್ರಸ್ಥಾನವೂ ಆಗಿರುವ ಚಿಕ್ಕೋಡಿ ಪಟ್ಟಣದಲ್ಲಿ ಚಿಕ್ಕೋಡಿ, ಹುಕ್ಕೇರಿ, ಗೋಕಾಕ, ಅಥಣಿ, ರಾಯಬಾಗ ತಾಲ್ಲೂಕುಗಳ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಹಲವು ಸರ್ಕಾರಿ ಕಚೇರಿಗಳೂ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಪಟ್ಟಣಕ್ಕೆ ಮೇಲಿಂದ ಮೇಲೆ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಭೇಟಿ ನೀಡುತ್ತಿರುತ್ತಾರೆ. ಇಂಥಹ ಕೆಲವು ಸಂದರ್ಭದಲ್ಲಿ ಈಗಿರುವ ಪ್ರವಾಸಿ ಮಂದಿರದ ವಿಐಪಿ ಕೊಠಡಿಗಳು ಉನ್ನತ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಮೀಸಲಾಗಿರುತ್ತವೆ. ಇಂಥ ಸನ್ನಿವೇಶದಲ್ಲಿ ಪಟ್ಟಣಕ್ಕೆ ಭೇಟಿ ನೀಡುವ ಇತರ ಕ್ಷೇತ್ರಗಳ ಗಣ್ಯರು ವಸತಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಪ್ರತ್ಯೇಕ ಜಿಲ್ಲಾ ಸ್ಥಾನಮಾನ ಹೊಂದಲು ತುದಿಗಾಲ ಮೇಲೆ ನಿಂತಿರುವ ಚಿಕ್ಕೋಡಿಯಲ್ಲಿ ಗಣ್ಯರ ಅನುಕೂಲಕ್ಕಾಗಿ ನೂತನ ಪ್ರವಾಸಿ ಮಂದಿರ ನಿರ್ಮಾಣ ಮಾಡುತ್ತಿರುವುದು ಸಮಂಜಸವಾಗಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚಿಕ್ಕೋಡಿ ಮತ್ತು ಸದಲಗಾ ಪಟ್ಟಣಗಳಲ್ಲಿ ನಿರ್ಮಿಸುತ್ತಿರುವ ಸುಸಜ್ಜಿತ ಪ್ರವಾಸಿ ಮಂದಿರಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT