ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕೋಪಯೋಗಿ ಕಚೇರಿಗೆ ಬೀಗ

Last Updated 25 ಜನವರಿ 2011, 10:45 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದ ಮುಖ್ಯರಸ್ತೆಯಲ್ಲಿರುವ ಕಟ್ಟಡಗಳ ತೆರವು, ವಿದ್ಯುತ್ ಕಂಬಗಳ ಸ್ಥಳಾಂತರ ಹಾಗೂ ರಸ್ತೆಗೆ ಸುರಿದಿರುವ ದೂಳನ್ನು ಕೂಡಲೇ ತೆರವುಗೊಳಿಸಬೇಕು ಹಾಗೂ ರಸ್ತೆಯನ್ನು ಸೂಕ್ತ ನಿರ್ವಹಣೆ ಮಾಡಬೇಕು ಎಂದು ಒತ್ತಾಯಿಸಿ ಸಿಪಿಎಂ ನೇತೃತ್ವದಲ್ಲಿ ನೂರಾರು ಮಂದಿ ಪಟ್ಟಣದಲ್ಲಿರುವ ಲೋಕೋಪಯೋಗಿ ಕಚೇರಿಗೆ ಬೀಗ ಜಡಿದು ಸೋಮವಾರ ಪ್ರತಿಭಟಿಸಿದರು.

ಪಟ್ಟಣದ ಹೆಚ್.ಎನ್.ವೃತ್ತದಿಂದ ಹೊರಟ ಪ್ರತಿಭಟನಾಕಾರರ ಮೆರವಣಿಗೆ ಮುಖ ರಸ್ತೆಯಲ್ಲಿ ಸಂಚರಿಸಿ ರಸ್ತೆಯುದ್ದಕ್ಕೂ ಲೋಕೋಪಯೋಗಿ, ಪುರಸಭೆ ಹಾಗೂ ಬೆಸ್ಕಾಂ ಅಧಿಕಾರಿಗಳ ವಿರುದ್ದ ಧಿಕ್ಕಾರಗಳನ್ನು ಕೂಗಿದರು. ನಂತರ ಲೋಕೋಪಯೋಗಿ ಇಲಾಖೆಯ ಮುಂಭಾಗದಲ್ಲಿ ಜಮಾಯಿಸಿ ಅಕ್ರಮ ಕಟ್ಟಡಗಳ ತೆರವು, ರಸ್ತೆಯ ವಿಸ್ತರಣೆ ಮಾಡದೇ ಇರುವ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲ ಸಮಯ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಡಿವೈಎಫ್‌ಐನ ತಂಡವು ತಮಟೆಗಳ ವಾದನಗಳ ಮೂಲಕ ಕ್ರಾಂತಿ ಗೀತೆಗಳನ್ನು ಹಾಡಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಚನ್ನರಾಯಪ್ಪ ಮಾತನಾಡಿ, ಹೈಕೋರ್ಟ್ ಆದೇಶದಂತೆ ರಸ್ತೆ ವಿಸ್ತರಣೆ ಮಾಡಬೇಕು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಗಂಗಮ್ಮ ದೇವಾಲಯದ ಮುಂಭಾಗ, ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ ಎಂದು ಒತ್ತಾಯಿಸಿದರು.

ಮುಖ್ಯರಸ್ತೆಯಲ್ಲಿ ಒಳಚರಂಡಿ ನಿರ್ಮಿಸಬೇಕಾಗಿದೆ. ಮುಖ್ಯರಸ್ತೆಯಲ್ಲಿದ್ದ ಗುಂಡಿಗಳಿಗೆ ಮಣ್ಣು ಮಿಶ್ರಿತ ಸಿಮೆಂಟ್ ಸುರಿದು ರಸ್ತೆ ಹಾಳುಗೆಡವಲಾಗಿದೆ ಎಂದು ಆರೋಪಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಎಂಜಿನಿಯರಗಳಾದ ಬಸವರಾಜ್,  ಮಲ್ಲೇಶಪ್ಪ, ಪುರಸಭೆ ಮುಖ್ಯಾಧಿಕಾರಿ ಸುಧಾಕರ್, ಬೆಸ್ಕಾಂ ಇಲಾಖೆಯ ಸಹಾಯಕ ಎಂಜಿನಿಯರ್ ವಿವೇಕ್ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು.

ಮುಖಂಡ ಗೋರ್ವಧಚಾರಿ ಆರೋಪಕ್ಕೆ ಪ್ರತಿಕ್ರಿಯಿಸಿದ ಬಸವರಾಜ್, ಬಾಗೇಪಲ್ಲಿ ಮುಖ್ಯ ರಸ್ತೆ ಇದೀಗ ರಾಜ್ಯ ಹೆದ್ದಾರಿ ರಸ್ತೆಯಾಗಿದೆ. ಒಳಚರಂಡಿ, ಫುಟ್‌ಪಾತ್ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ  ಸರ್ಕಾರಕ್ಕೆ ಸುಮಾರು 9 ಕೋಟಿ  ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣ ಬಿಡುಗಡೆಯಾದ ಕೊಡಲೇ ಮುಖ್ಯರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು. ಮುಖ್ಯರಸ್ತೆಯಲ್ಲಿರುವ ದೂಳನ್ನು ತಕ್ಷಣವೇ ತೆಗೆಸುವುದಾಗಿ ಪುರಸಭಾ ಮುಖ್ಯಾಧಿಕಾರಿ ಸುಧಾಕರ್ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ವೆಂಕಟಸ್ವಾಮಿರೆಡ್ಡಿ, ಮುಖಂಡರಾದ ಸಿ.ಡಿ.ಗಂಗುಲಪ್ಪ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಗಡಿದಂನಂಜಿರೆಡ್ಡಿ, ಕದಿರನ್ನಗಾರಿಪಲ್ಲಿ ಜಯಶಂಕರ, ಮಹಮದ್ ಅಕ್ರಂ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT