ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಡ್ ಶೆಡ್ಡಿಂಗ್: ಈಗ ಅಧಿಕೃತ

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ರಾಜಧಾನಿ ಹೊರತುಪಡಿಸಿ ಉಳಿದ ನಗರ- ಪಟ್ಟಣಗಳಲ್ಲಿ ಒಂದು ಗಂಟೆ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ ಮೂರು ಗಂಟೆ ತ್ರಿಫೇಸ್ ವಿದ್ಯುತ್ ಹಾಗೂ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಸಿಂಗಲ್‌ಫೇಸ್ ವಿದ್ಯುತ್ ಪೂರೈಸಲಾಗುವುದು ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಸೋಮವಾರ ಇಲ್ಲಿ ಪ್ರಕಟಿಸಿದರು.

ಕರ್ನಾಟಕ ವಿದ್ಯುತ್ ನಿಗಮ ಸಭಾಂಗಣದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಬೆಂಗಳೂರು ನಗರದಲ್ಲಿ ವಿದ್ಯುತ್ ಕಡಿತ ಮಾಡುವುದಿಲ್ಲ. ಆದರೆ ಉಳಿದ ನಗರ-ಪಟ್ಟಣ ಪ್ರದೇಶಗಳಲ್ಲಿ ಸಂಜೆ 6ರಿಂದ ರಾತ್ರಿ 10 ಗಂಟೆ ಒಳಗೆ ಸರದಿ ಪ್ರಕಾರ ಸೋಮವಾರದಿಂದ ಒಂದು ಗಂಟೆ ಕಾಲ ಅಧಿಕೃತ ಲೋಡ್ ಶೆಡ್ಡಿಂಗ್ ಜಾರಿಗೊಳಿಸಲಾಗಿದೆ~ ಎಂದರು.

`ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 9 ಗಂಟೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತದೆ. ಹಳ್ಳಿಗಳಲ್ಲಿ ಇನ್ನು ಮುಂದೆ ಮಧ್ಯಾಹ್ನದವರೆಗೂ ವಿದ್ಯುತ್ ಪೂರೈಕೆ ಇರುವುದಿಲ್ಲ. ಮಧ್ಯಾಹ್ನ ಒಂದರಿಂದ ಸಂಜೆ 6 ಗಂಟೆ ಒಳಗೆ ಮೂರು ಗಂಟೆ ಕಾಲ ತ್ರಿಫೇಸ್ ವಿದ್ಯುತ್ ಪೂರೈಸಲಾಗುವುದು. ಸ್ಥಳೀಯವಾಗಿ ಆಯಾ ವಿದ್ಯುತ್ ಸರಬರಾಜು ಕಂಪೆನಿಗಳು ವಿದ್ಯುತ್ ಕಡಿತದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಿವೆ~ ಎಂದು ಅವರು ಹೇಳಿದರು.

`ವಿದ್ಯುತ್ ಸಮಸ್ಯೆ ತಲೆದೋರಿದಾಗಿನಿಂದ ಹಳ್ಳಿಗಳಿಗೆ ಮೂರು ಗಂಟೆ ಕಾಲ ಮಾತ್ರ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದೆ. ಹೀಗಾಗಿ ಸೋಮವಾರ ಪ್ರಕಟಿಸಿರುವ ವೇಳಾಪಟ್ಟಿಯಿಂದ ಹೆಚ್ಚಿನ ಬದಲಾವಣೆಯಾಗುವುದಿಲ್ಲ. ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡುತ್ತಿದ್ದನ್ನು ಈಗ ಅಧಿಕೃತವಾಗಿ ಕಡಿತ ಮಾಡಿ, ಯಾವಾಗ ವಿದ್ಯುತ್ ಇರುವುದಿಲ್ಲ ಎಂಬುದನ್ನು ಮೊದಲೇ ತಿಳಿಸಲಾಗುತ್ತದೆ~ ಎಂದು ತಿಳಿಸಿದರು.

`ನಗರ-ಪಟ್ಟಣಗಳಲ್ಲಿ ಒಂದು ಗಂಟೆ ಮಾತ್ರ ಲೋಡ್‌ಶೆಡ್ಡಿಂಗ್ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಆದರೆ ವಾಸ್ತವವಾಗಿ 5-6 ಗಂಟೆ ಕಡಿತ ಮಾಡಲಾಗುತ್ತಿದೆ. ಅಲ್ಲದೆ ಬೆಂಗಳೂರಿನ ಕೆಲವು ಕಡೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ~ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬಂದಿವೆ.

`ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಸಮಸ್ಯೆ ಗಂಭೀರ ಸ್ವರೂಪ ಪಡೆದಿದೆ. ಹೀಗಾಗಿ ನವೆಂಬರ್‌ವರೆಗೂ ವಿದ್ಯುತ್ ಕಡಿತ ಅನಿವಾರ್ಯ. ತೆಲಂಗಾಣ ಹೋರಾಟದಿಂದ ಸಿಂಗರೇಣಿಯಿಂದ ಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ. ರೈಲು ತಡೆ ಚಳವಳಿ ಆರಂಭವಾದರೆ ಮಹಾರಾಷ್ಟ್ರದ ವೆಸ್ಟರ್ನ್ ಕೋಲ್ ಫೀಲ್ಡ್ಸ್ ಮತ್ತು ಒಡಿಶಾದ ಮಹಾನಂದಿ ಕೋಲ್ ಫೀಲ್ಡ್ಸ್‌ನಿಂದ ಬರುವ ಕಲ್ಲಿದ್ದಲು ಪೂರೈಕೆಗೂ ತೊಂದರೆಯಾಗುತ್ತದೆ. ಆದ್ದರಿಂದ ಪರ್ಯಾಯ ಮಾರ್ಗದ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಬೇಕು~ ಎಂದು ಅವರು ಕೇಂದ್ರಕ್ಕೆ ಮನವಿ ಮಾಡಿದರು.

`ತೆಲಂಗಾಣ ಹೋರಾಟದ ಬಿಸಿ ದಕ್ಷಿಣದ ಎಲ್ಲ ರಾಜ್ಯಗಳ ವಿದ್ಯುತ್ ಪೂರೈಕೆಗೂ ತಟ್ಟಿದೆ. ಉತ್ತರ ಭಾರತದ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಿದರೂ ವಿದ್ಯುತ್ ಜಾಲದ ಸಮಸ್ಯೆಯಿಂದ ಪೂರೈಕೆಗೆ ತೊಂದರೆಯಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಪ್ರತ್ಯೇಕ ಜಾಲದ ವ್ಯವಸ್ಥೆ ಮಾಡಬೇಕು~ ಎಂದು ಅವರು ಆಗ್ರಹಿಸಿದರು.

`ಸಿಂಹಾದ್ರಿ ಮತ್ತು ರಾಮಗುಂಡಂನ ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತಗೊಂಡಿರುವುದರಿಂದ ರಾಜ್ಯಕ್ಕೆ ಬರಬೇಕಾದ 350 ಮೆಗಾವಾಟ್ ವಿದ್ಯುತ್ ಖೋತಾ ಆಗಿದೆ. ಈ ಕೊರತೆಯನ್ನು ಬೇರೆ ರೂಪದಲ್ಲಿ ತುಂಬಿಕೊಡುವಂತೆ~ ಒತ್ತಾಯಿಸಿದರು.

ಸಭೆ: ಕಬ್ಬಿನ ಸಿಪ್ಪೆಯಿಂದ ವಿದ್ಯುತ್ ಉತ್ಪಾದನೆ ಮಾಡುತ್ತಿರುವ ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಪಡೆಯುವ ಸಂಬಂಧ ಚರ್ಚಿಸಲು ಮಂಗಳವಾರ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆಯಲಾಗಿದೆ. ಈಗಾಗಲೇ 300 ಮೆಗಾವಾಟ್ ವಿದ್ಯುತ್ ಅನ್ನು ಕಾರ್ಖಾನೆಗಳಿಂದ ಪಡೆಯುತ್ತಿದ್ದು, ಇನ್ನೂ 200 ಮೆಗಾವಾಟ್ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಹೇಳಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ), ಸಣ್ಣ ಕೈಗಾರಿಕೆಗಳ ಸಂಸ್ಥೆ (ಕಾಸಿಯಾ) ಸೇರಿದಂತೆ ಕೈಗಾರಿಕಾ ಸಂಸ್ಥೆಗಳ ಪದಾಧಿಕಾರಿಗಳ ಸಭೆಯನ್ನು ಮಂಗಳವಾರ ಕರೆಯಲಾಗಿದ್ದು, ಹೆಚ್ಚು ಬೇಡಿಕೆ ಇರುವ ಅವಧಿಯಲ್ಲಿ ವಿದ್ಯುತ್ ಬಳಸದಂತೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT