ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಪದ ಸರಮಾಲೆ: ಅಕ್ರಮ ಬಯಲು

Last Updated 15 ಸೆಪ್ಟೆಂಬರ್ 2011, 5:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಿಂದಿನ ಜಿಲ್ಲಾಧಿಕಾರಿ ಕೆ. ಅಮರನಾರಾಯಣ ಅವಧಿಯಲ್ಲಿ ಅನುಷ್ಠಾನವಾದ `ರೈತಮಿತ್ರ~ ಯೋಜನೆಯಲ್ಲಿನ ಹಲವು ಲೋಪದೋಷಗಳನ್ನು ಕಂಡು ವಿಧಾನಮಂಡಲ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ರಾಜ್ ಸಂಸ್ಥೆಗಳ ಸಮಿತಿ ಅಚ್ಚರಿ ವ್ಯಕ್ತಪಡಿಸಿತು.

ಮಹಾಲೆಕ್ಕ ಪರಿಶೋಧಕರ ವರದಿ ಆಧರಿಸಿ ಜ್ಲ್ಲಿಲೆಯಲ್ಲಿ ಅನುಷ್ಠಾನಗೊಳಿಸಿದ `ರೈತಮಿತ್ರ~ ಯೋಜನೆಯಲ್ಲಿನ ಲೋಪದೋಷಗಳ ಕುರಿತು ವಿಚಾರಣೆ ಕೈಗೊಂಡಿರುವ ಸಮಿತಿ ದಾಖಲೆಗಳಿಗೂ ವಾಸ್ತವ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿರುವುದನ್ನು ಖುದ್ದಾಗಿ ಮನವರಿಕೆ ಮಾಡಿಕೊಂಡಿತು.

ನಿರ್ವಹಣೆ ಇಲ್ಲದೇ ಬಾಡಿರುವ ಸಸಿಗಳು, ಸಂಶಯಕ್ಕೀಡು ಮಾಡುವ ದಾಖಲೆಗಳು, ತಿದ್ದುಪಡಿ ಮಾಡಿರುವ ದಾಖಲೆಗಳು ಭೇಟಿ ಸಂದರ್ಭದಲ್ಲಿ ಕಂಡು ಬಂದವು. ಯೋಜನೆ ಅನುಷ್ಠಾನದಲ್ಲಿ ಭಾಗವಹಿಸಿದ್ದ ಸ್ವಯಂಸೇವಾ ಸಂಸ್ಥೆಗಳ ಕಾರ್ಯ ನಿರ್ವಹಣೆ ಸಂಶಯಕ್ಕೀಡಾಯಿತು.

ಸಮಿತಿ ಅಧ್ಯಕ್ಷ ಶ್ರೀಶೈಲ ಬಿದನೂರು ಮತ್ತು ಸದಸ್ಯರು ಹಾಗೂ ಶಾಸಕರಾದ ಬಿ.ಎಂ. ನರೇಂದ್ರಸ್ವಾಮಿ, ಎಚ್. ಹಾಲಪ್ಪ, ಶಿವರಾಜ್ ತಂಗಡಗಿ, ಜಿ.ಎಚ್. ತಿಪ್ಪಾರೆಡ್ಡಿ, ಸುನೀಲ್ ಹೆಗ್ಡೆ, ವಿರೂಪಾಕ್ಷಪ್ಪ, ಪಟೇಲ್ ಶಿವರಾಂ, ಉಪ ಕಾರ್ಯದರ್ಶಿ ನರಸಿಂಹಮೂರ್ತಿ ಪರಿಶೀಲನೆ ನಡೆಸಿದರು.

ಬುಧವಾರ ಚಿತ್ರದುರ್ಗ ತಾಲ್ಲೂಕಿನ ಮೆದೇಹಳ್ಳಿ, ಮದಕರಿಪುರ ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿದ ಸಮಿತಿ, 2006-07ನೇ ಸಾಲಿನಲ್ಲಿ ರೈತಮಿತ್ರ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆಳೆಯಿತು.

ರೈತಮಿತ್ರ ಯೋಜನೆ ಅಡಿಯಲ್ಲಿ ಪ್ರತಿ ಗ್ರಾಮ ಪಂಚಾಯ್ತಿಗೆ 20 ಸಾವಿರ ಹೊಂಗೆ, ಜಟ್ರೋಪ ಸಸಿಗಳನ್ನು ನೀಡಲಾಗಿದೆ ಎಂದು ದಾಖಲೆಯಿದ್ದು, ಅದಕ್ಕೆ ಖರ್ಚು ಭರಿಸಲಾಗಿದೆ. ಈ ಬಗ್ಗೆ ಸಮಿತಿ ಪರಿಶೀಲನೆ ನಡೆಸಿದಾಗ ಸಾಕಷ್ಟು ಲೋಪಗಳಿರುವುದು ಕಂಡುಬಂತು.

ಮದಕರಿಪುರ ಗ್ರಾಮ ಪಂಚಾಯ್ತಿಗೆ 2006ರ ಸೆ.8ರಲ್ಲಿ ಅರಣ್ಯ ಇಲಾಖೆಯಿಂದ 3,800 ಹೊಂಗೆ, 5ಸಾವಿರ ಜಟ್ರೋಪ ಸಸಿ ಮಾತ್ರ ವಿತರಿಸಲಾಗಿದೆ ಎಂದು ಗ್ರಾ.ಪಂ. ಸ್ವೀಕೃತಿ ಪತ್ರದ ದಾಖಲೆ ಹೇಳುತ್ತದೆ. ಆದರೆ, ಈ ದಾಖಲೆಯನ್ನು ಕೂಡ ತಿದ್ದಿರುವುದು ಬಯಲಾಯಿತು.

`ಸಸಿಗಳನ್ನು ವಿತರಿಸಲಾಗಿದೆ. ಆದರೆ, ಎಷ್ಟು ಎನ್ನುವುದು ನಮಗೆ ತಿಳಿದಿಲ್ಲ. ಈ ಸಸಿಗಳನ್ನು ರೈತರ ಬದುಗಳು ಇನ್ನಿತರೆಡೆ ನೆಡಲು ಹಂಚಿಕೆ ಮಾಡಲಾಗಿದೆ. ಬಹಳ ಎಂದರೆ 3-4 ಸಾವಿರ ಸಸಿ ನೀಡಿರಬಹುದು~ ಎಂದು ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ಅಧ್ಯಕ್ಷರು  ಸಮಿತಿಗೆ ತಿಳಿಸಿದರು.

ಗ್ರಾಮದ ಸಮೀಪದಲ್ಲಿದ್ದ ರೈತರೊಬ್ಬರ ಜಮೀನಿನಲ್ಲಿ ಪರಿಶೀಲಿಸಿದಾಗ  ಬದುವಿನಲ್ಲಿ ನೆಟ್ಟಿದ್ದ, ನಿರ್ವಹಣೆಯಿಲ್ಲದೆ ಹಾಳು ಬಿದ್ದ ಬೆರಳೆಣಿಕೆಯಷ್ಟು ಜಟ್ರೋಪ ಸಸಿಗಳು ಕಂಡುಬಂದವು.

ನಂತರ ಮೆದೇಹಳ್ಳಿ ಗ್ರಾ.ಪಂ.ಗೆ 47 ಸಾವಿರ ಸಸಿಗಳನ್ನು ವಿತರಿಸಲಾಗಿದೆ ಎನ್ನುವ ದಾಖಲೆಗಳಿದ್ದು, ಅಲ್ಲಿಯೂ ಸಮಿತಿ ಪರಿಶೀಲನೆ ನಡೆಸಿತು. ಅಲ್ಲಿನ ಸದಸ್ಯರು ಮತ್ತು ಅಧ್ಯಕ್ಷರು ಆರಂಭದಲ್ಲಿ ಸಸಿಗಳು ಸರಬರಾಜು ಮಾಡಿದ್ದಾರೆ. ಗ್ರಾ.ಪಂ.ನಿಂದ ರೈತರಿಗೆ ವಿತರಿಸಲಾಗಿದೆ. ಕೆರೆ ಅಂಗಳದಲ್ಲಿ ನೆಟ್ಟಿದ್ದ ಒಂದಿಷ್ಟು ಸಸಿಗಳು ನೀರು ತುಂಬಿ ಹಾಳಾದರೆ, ಇನ್ನೊಂದಿಷ್ಟು ಕಡೆ ನೀರಿಲ್ಲದೆ ಹಾಳಾಗಿವೆ ಎಂದು ಮಾಹಿತಿ ನೀಡಿದರು.

47 ಸಾವಿರ ಸಸಿಗಳನ್ನು ನಿಜಕ್ಕೂ ಇಲ್ಲಿಗೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ ಅಧ್ಯಕ್ಷ ಶ್ರೀಶೈಲ ಬಿದನೂರು, ಸದಸ್ಯರಾದ ಹಾಲಪ್ಪ, ಬಿ.ಎಂ. ನರೇಂದ್ರಸ್ವಾಮಿ, ಸತ್ಯ ಹೇಳಿ. ಇದು ಸಾರ್ವಜನಿಕ ಹಣ. ನಾವು-ನೀವು ಇಬ್ಬರೂ ಜನಪ್ರತಿನಿಧಿಗಳಾಗಿದ್ದು, ಸಾರ್ವಜನಿಕ ಹಣಕ್ಕೆ ಉತ್ತರದಾಯಿಗಳು. ಈ ಲೋಪದಲ್ಲಿ ನಿಮ್ಮ ಪಾಲಿಲ್ಲ, ಒಬ್ಬ ಅಧಿಕಾರಿ ಹಾಗೂ ಬೋಗಸ್ ಎನ್‌ಜಿಓಗಳು ಈ ಕೆಲಸ ಮಾಡಿದ್ದಾರೆ ಎಂದಾಗ ಎಷ್ಟು ಸಸಿ ಸರಬರಾಜಾಗಿವೆ ಎನ್ನುವುದು ಸರಿಯಾಗಿ ಗೊತ್ತಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಹುಟ್ಟಿಸಿದರು.

ಜತೆಗೇ, 7 ಎಕರೆಯಲ್ಲಿ ಸಸಿಗಳನ್ನು ನೆಟ್ಟಿದ್ದ ಪ್ರದೇಶವನ್ನು ಮೊರಾರ್ಜಿ ದೇಸಾಯಿ ಶಾಲೆಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸಸಿ ವಿತರಣೆಯಾದ ಬಗೆಗಿನ ದಾಖಲೆ ವಶಪಡಿಸಿಕೊಂಡು ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಮಿತಿ ಅಧ್ಯಕ್ಷ ಶೈಲಪ್ಪ ಬಿದನೂರು, ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಪರಿಶೀಲನೆ ನಂತರ ಹಣ ದುರುಪಯೋಗ ಆಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಅಧ್ಯಕ್ಷರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT