ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಆದೇಶ

Last Updated 7 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೋಟಾದ ಅಡಿ ಮಂಜೂರು ಆಗುವ ಜಮೀನನನ್ನು ಉದ್ದೇಶಪೂರ್ವಕವಾಗಿ ಮೇಲಿಂದ ಮೇಲೆ ಮಾರಾಟ ಮಾಡುವ ವಂಚಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ವಂಚಿತರಿಗೆ  ಹೈಕೋರ್ಟ್ ಮಂಗಳವಾರ ಆದೇಶಿಸಿದೆ.

ಅದರಂತೆ, ಜಮೀನು ಪಡೆದು ಮೋಸ ಹೋಗಿರುವವರು ಮೂಲ ಮಾಲೀಕರಿಂದ ಜಮೀನಿನ ಹಣವನ್ನು ಬಡ್ಡಿಸಹಿತ ವಸೂಲು ಮಾಡಬಹುದು ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ.

`ಎಸ್ಸಿ, ಎಸ್ಟಿ ಜಮೀನು ಪರಭಾರೆ ನಿಷೇಧ ಕಾಯ್ದೆ-1978ರ ಅನ್ವಯ ಈ ಕೋಟಾದ ಅಡಿ ಮಂಜೂರು ಆಗುವ ಜಮೀನು ಪರಭಾರೆ ಮಾಡಬಾರದು ಎಂಬ ಕಾನೂನು ಇದೆ. ಇದನ್ನು ತಿಳಿದಿದ್ದರೂ ಅದನ್ನು ಪರಭಾರೆ ಮಾಡಿ ಹಣ ಪಡೆದುಕೊಳ್ಳಲಾಗುತ್ತಿದೆ.  ನಂತರ ತಿಳಿಯದೇ ಪರಭಾರೆ ಮಾಡಿಬಿಟ್ಟೆ ಎಂದು ಸಂಬಂಧಿತ ಅಧಿಕಾರಿಗಳ ಮುಂದೆ ಮನವಿ ಸಲ್ಲಿಸಿ ಜಮೀನನ್ನು ವಾಪಸು ಪಡೆದುಕೊಂಡು ಪುನಃ ಬೇರೆಯವರಿಗೆ ಮಾರಾಟ ಮಾಡುತ್ತಿರುವ ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ~ ಎಂದು ಕೋರ್ಟ್ ತಿಳಿಸಿದೆ.

ಮೂಲ ಮಾಲೀಕರಿಂದ ಜಮೀನು ಪಡೆದು ಇತ್ತ ಹಣವನ್ನೂ ಕಳೆದುಕೊಂಡು, ಅತ್ತ ಜಮೀನನ್ನೂ ಕಳೆದುಕೊಂಡು ಹೈಕೋರ್ಟ್ ಮೊರೆ ಹೋಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಪೀಠ ಮನಗಂಡು ಈ ತೀರ್ಪು ನೀಡಿದೆ.

ಪ್ರಕರಣ ವಿವರ: ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಚೆಲುವಯ್ಯ ಎನ್ನುವವರಿಗೆ ಈ ಕೋಟಾದ ಅಡಿ 1955ರಲ್ಲಿ ನಾಲ್ಕು ಎಕರೆ ಜಮೀನು ಮಂಜೂರು ಆಗಿತ್ತು. ಆ ಜಮೀನು ಹಲವರ ಕೈ ಸೇರಿ ಕೊನೆಗೆ ಅದನ್ನು ಮರಿದೇವಗೌಡ ಎನ್ನುವವರು ಖರೀದಿಸಿದರು.

ಆದರೆ ಚೆಲುವಯ್ಯ ಅವರು ಉಪವಿಭಾಗಾಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಿ ತಮಗೆ ತಿಳಿಯದೇ ನಿಯಮ ಉಲ್ಲಂಘಿಸಿ ಜಮೀನು ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ ಜಮೀನು ತಮಗೇ ವಾಪಸು ನೀಡುವಂತೆ ಕೋರಿದರು. ಉಪವಿಭಾಗಾಧಿಕಾರಿ ಅವರ ಪರವಾಗಿ ಆದೇಶ ಹೊರಡಿಸಿದರು. ಈ ಪ್ರಕರಣ ಹೈಕೋರ್ಟ್ ವರೆಗೂ ಹೋಗಿ ಅವರ ಪರವಾಗಿಯೇ ತೀರ್ಪು ಬಂದು ಜಮೀನು ಅವರ ಕೈ ಸೇರಿತು.

ಅಲ್ಲಿಗೆ ಸುಮ್ಮನಿರದ ಚೆಲುವಯ್ಯನವರು ಪುನಃ ಸೋಮೇಗೌಡ ಎನ್ನುವವರಿಗೆ ಅದೇ ಜಮೀನು ಮಾರಾಟ ಮಾಡಿ ಮೊದಲಿನಂತೆಯೇ ಉಪವಿಭಾಗಾಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಿದರು. ಅವರ ಪರವಾಗಿ ಆದೇಶ ಹೊರಬಿದ್ದು, ಮಂಗಳವಾರ ಅದು ಏಕಸದಸ್ಯಪೀಠದಿಂದ ನ್ಯಾ. ಕೇಹರ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಕಾಯ್ದೆ ಅನ್ವಯ ಜಮೀನು ಪರಭಾರೆ ಮಾಡಬಾರದು ಎಂಬ ನಿಯಮ ಇರುವ ಕಾರಣ, ಚೆಲುವಯ್ಯನವರ ಪರವಾಗಿಯೇ ಪೀಠ ತೀರ್ಪು ನೀಡಿತು. ಆದರೆ ಇನ್ನು ಮುಂದೆ ಇಂತಹ ಕೃತ್ಯಕ್ಕೆ ಕಡಿವಾಣ ಹಾಕಬೇಕಾದ ಅಗತ್ಯ ಇದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT