ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ: ಇಬ್ಬರು ಬ್ಯಾಂಕ್ ಅಧಿಕಾರಿಗಳಿಗೆ ಜೈಲು

Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸಾಲ ಮಂಜೂರಾತಿಯಲ್ಲಿ ಭ್ರಷ್ಟಾಚಾರ ನಡೆಸಿ, ಬ್ಯಾಂಕ್‌ಗಳಿಗೆ ನಷ್ಟ ಉಂಟುಮಾಡಿದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆಂಧ್ರಾ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ, ಸಿಂಡಿಕೇಟ್ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಮತ್ತು ಮೂವರು ಖಾಸಗಿ ವ್ಯಕ್ತಿಗಳಿಗೆ ನಗರದ ಸಿಬಿಐ ವಿಶೇಷ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಆಂಧ್ರಾ ಬ್ಯಾಂಕ್‌ನ ಎನ್.ಆರ್.ರಸ್ತೆ ಶಾಖೆಯ ಹಿಂದಿನ ಮುಖ್ಯ ವ್ಯವಸ್ಥಾಪಕ ಜಿ.ಸುಬ್ರಮಣಿಯನ್, ಸಿಂಡಿಕೇಟ್ ಬ್ಯಾಂಕ್‌ನ ಬೆಂಗಳೂರು ವಲಯ ಕಚೇರಿಯ ಹಿಂದಿನ ಹಿರಿಯ ವ್ಯವಸ್ಥಾಪಕ ಎಸ್.ಮುರಳಿ ಮತ್ತು ಖಾಸಗಿ ವ್ಯಕ್ತಿಗಳಾದ ಕೆ.ಎಸ್.ವಿಜಯಕುಮಾರ್, ಬಿ.ಕಾಶಿನಾಥ್ ಮತ್ತು ಸಿ.ಪುಣ್ಯವತಿ ಶಿಕ್ಷೆಗೆ ಒಳಗಾದವರು.

ಸುಬ್ರಮಣಿಯನ್ 1995-96ರಲ್ಲಿ ಆಂಧ್ರಾ ಬ್ಯಾಂಕ್‌ನ ಎನ್.ಆರ್.ರಸ್ತೆ ಶಾಖೆಯ ಮುಖ್ಯ ವ್ಯವಸ್ಥಾಪಕರಾಗಿದ್ದರು. ಈ ಅವಧಿಯಲ್ಲಿ ವಿಜಯಕುಮಾರ್ ರಫ್ತು ವ್ಯವಹಾರದ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ, ಬ್ಯಾಂಕ್‌ನಿಂದ ಸಾಲ ಪಡೆದು ವಂಚಿಸಿದ್ದರು. ಈ ಕುರಿತು ತನಿಖೆ ನಡೆಸಿದ್ದ ಸಿಬಿಐನ ಬೆಂಗಳೂರು ಬ್ಯಾಂಕಿಂಗ್ ಭದ್ರತೆ ಮತ್ತು ವಂಚನೆ ವಿಭಾಗ, ಸುಬ್ರಮಣಿಯನ್ ಮತ್ತು ವಿಜಯಕುಮಾರ್ ಸಂಚು ನಡೆಸಿ ಬ್ಯಾಂಕ್‌ಗೆ 25 ಲಕ್ಷ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಪಟ್ಟಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಇಬ್ಬರು ಆರೋಪಿಗಳಿಗೂ ಎರಡು ವರ್ಷ ಸಾದಾ ಜೈಲು ಶಿಕ್ಷೆ ಮತ್ತು ಮೂರು ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ ಎಂದು ಸಿಬಿಐ ಪ್ರಕಟಣೆ ತಿಳಿಸಿದೆ.

ಮುರಳಿ ಅವರು 1991-1993ರ ಅವಧಿಯಲ್ಲಿ ಸಿಂಡಿಕೇಟ್ ಬ್ಯಾಂಕ್‌ನ ಬೆಂಗಳೂರು ವಲಯ ಕಚೇರಿಯ ಹಿರಿಯ ವ್ಯವಸ್ಥಾಪಕ ಹುದ್ದೆಯಲ್ಲಿದ್ದರು. ಈ ಅವಧಿಯಲ್ಲಿ ಕಾಶಿನಾಥ್ ಮತ್ತು ಪುಣ್ಯವತಿ ಖಾತೆಯಲ್ಲಿ ಸಾಕಷ್ಟು ಮೊತ್ತ ಹೊಂದಿರದಿದ್ದರೂ, ದೊಡ್ಡ ಮೊತ್ತದ `ಪೇ ಆರ್ಡರ್'ಗಳನ್ನು ಅವರಿಗೆ ನೀಡಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಸಿಬಿಐ ಬ್ಯಾಂಕಿಂಗ್ ಭದ್ರತೆ ಮತ್ತು ವಂಚನೆ ವಿಭಾಗ, ಮೂವರೂ ಆರೋಪಿಗಳು ನಡೆಸಿದ ಸಂಚಿನಿಂದ ಬ್ಯಾಂಕ್‌ಗೆ ರೂ 14.90 ಲಕ್ಷ ನಷ್ಟ ಉಂಟಾಗಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ, ಮೂವರಿಗೂ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 3.90 ಲಕ್ಷ ದಂಡ ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT