ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ: ಎಲ್‌ಐಸಿ ಅಧಿಕಾರಿಗಳಿಗೆ ಮುತ್ತಿಗೆ

Last Updated 16 ಜುಲೈ 2013, 10:17 IST
ಅಕ್ಷರ ಗಾತ್ರ

ತುರುವೇಕೆರೆ: ಜೀವನ್ ಮಧುರ್ ಮೈಕ್ರೋ ವಿಮಾ ಪಾಲಿಸಿ ಕಂತು ಪಾವತಿಸದೆ ಕೋಟ್ಯಂತರ ರೂಪಾಯಿ ವಂಚಿಸಿರುವ ಸಮನ್ವಯ ಸಂಸ್ಥೆಯ ಪದಾಧಿಕಾರಿಗಳನ್ನು ಕೂಡಲೇ ಬಂಧಿಸಬೇಕು. ತಮ್ಮ ಹಣವನ್ನು ಕೂಡಲೇ ಜೀವ ವಿಮಾ ನಿಗಮ ವಾಪಸ್ ನೀಡಬೇಕು ಎಂದು ಆಗ್ರಹಿಸಿ ನೂರಾರು ಪಾಲಿಸಿದಾರರು ಸೋಮವಾರ ಸ್ಥಳೀಯ ಜೀವ ವಿಮಾ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಜೀವ ವಿಮಾ ನಿಗಮದ ಮುಂದೆ ಧರಣಿ ನಡೆಸಿದ ಪಾಲಿಸಿದಾರರು ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಜೀವ ವಿಮಾ ನಿಗಮ ನಂಬಿಕಸ್ಥ ಸಂಸ್ಥೆ ಎಂದು ಭಾವಿಸಿ ನಾವು ಹಣ ತೊಡಗಿಸಿದ್ದೇವೆ. ಆದರೆ ಗ್ರಾಮಾಂತರ ಪ್ರದೇಶದ ಸಾವಿರಾರು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚನೆ ನಡೆದಿದೆ. ವಿಮಾದಾರರು ಮತ್ತು ಪ್ರತಿನಿಧಿಗಳು ಬೀದಿಗೆ ಬಿದ್ದಿದ್ದಾರೆ. ಆದರೆ ಎಲ್‌ಐಸಿ ಯಾವುದೇ ಕ್ರಮ ಕೈಗೊಳ್ಳದೆ ತಟಸ್ಥ ನೀತಿ ಅನುಸರಿಸುತ್ತಿದೆ ಎಂದು ದೂರಿದ ವಿಮಾದಾರರು ಜೀವ ವಿಮಾ ಕಚೇರಿಯೊಳಗೆ ನುಗ್ಗಿ ಅಧಿಕಾರಗಳಿಗೆ ಮುತ್ತಿಗೆ ಹಾಕಿದರು. ಇದರಿಂದ ನಿಗಮದ ಕಾರ್ಯಕಲಾಪ ಅಸ್ತವ್ಯಸ್ಥಗೊಂಡಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಲ್‌ಐಸಿ ಮೈಕ್ರೋ ಹಣಕಾಸು ವಿಭಾಗದ ವ್ಯವಸ್ಥಾಪಕ ರಾಮಚಂದ್ರ ಇದರಲ್ಲಿ ಜೀವ ವಿಮಾ ನಿಗಮದ ತಪ್ಪೇನಿಲ್ಲ. ಮಧ್ಯವರ್ತಿ ಸಂಸ್ಥೆ ಒಪ್ಪಂದ ಉಲ್ಲಂಘಿಸಿದೆ. ವಿಮಾದಾರರಿಗೆ ಆಗಿರುವ ನಷ್ಟದ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು ಮಧ್ಯವರ್ತಿ ಸಂಸ್ಥೆಯ ಪದಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ಇದರಿಂದ ತೃಪ್ತರಾಗದ ವಿಮಾದಾರರು, ಪ್ರತಿನಿಧಿಗಳು ವಿಮಾ ಕಂತು ಸಂಗ್ರಹಿಸಿದವರು ಊರು ಬಿಟ್ಟಿದ್ದಾರೆ. ಪೋಲೀಸರಿಗೆ ದೂರು ನೀಡಿದ್ದರೂ ಈವರೆಗೆ ಪತ್ತೆ ಮಾಡಿಲ್ಲ, ಎಲ್‌ಐಸಿ ತಕ್ಷಣ ನಮ್ಮ ಹಣ ಹಿಂದಿರುಗಿಸಬೇಕು ಎಂದು ಪಟ್ಟು ಹಿಡಿದು ಕುಳಿತರು.

ಅಧಿಕಾರಿಗಳು, ಪೊಲೀಸರು, ವಿಮಾದಾರರ ಮಧ್ಯೆ ಎರಡು ಗಂಟೆ ಮಾತುಕತೆ ನಡೆದರೂ ಫಲಪ್ರದವಾಗಲಿಲ್ಲ. ಅಧಿಕಾರಿಗಳು ವಿಮಾದಾರರ ಹಣ ಹಿಂದಿರುಗಿಸುವ ಖಚಿತ ಭರವಸೆ ನೀಡುವ ಅಧಿಕಾರ ತಮಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಈ ಹಂತದಲ್ಲಿ ಆಕ್ರೋಶಗೊಂಡು ಭಾವೋದ್ವೇಗಕ್ಕೆ ಒಳಗಾದ ಹಲ ಮಹಿಳೆಯರು ನಮ್ಮ ಮಾನ ಮರ್ಯಾದೆ ಹರಾಜಾಗುತ್ತಿದೆ. ಇಲ್ಲೇ ವಿಷ ಕುಡಿದು ಸಾಯುತ್ತೇವೆ ಹೊರತು ದುಡ್ಡು ವಾಪಸ್ ಕೊಡುವ ಭರವಸೆ ಇಲ್ಲದೆ ಇಲ್ಲಿಂದ ಕದಲುವುದಿಲ್ಲ ಎಂದು ಹಠ ಹಿಡಿದರು.

ಸಭೆಗೆ ಆಗಮಿಸಿದ ತಹಶೀಲ್ದಾರ್ ಜಿ.ಪಿ.ಮಂಜೇಗೌಡ 15 ದಿನಗಳಲ್ಲಿ ಜೀವ ವಿಮಾ ನಿಗಮ ವಿಮಾದಾರರ ಹಣದ ಪಾವತಿ ಕುರಿತು ಸ್ಪಷ್ಟ ನಿಲುವು ಪ್ರಕಟಿಸಬೇಕು. ಆರೋಪಿಗಳನ್ನು ಬಂಧಿಸಬೇಕು. ಅಲ್ಲಿವರೆಗೆ ವಿಮಾದಾರರು ಪ್ರತಿಭಟನೆ ಕೈ ಬಿಡಬೇಕು ಎಂಬ ಸಂಧಾನಸೂತ್ರ ಮುಂದಿಟ್ಟರು. ಇದಕ್ಕೆ ಒಪ್ಪಿದ ವಿಮಾದಾರರು ಪ್ರತಿಭಟನೆ ಹಿಂತೆಗೆದುಕೊಂಡರು.


ಶ್ರೀರಾಮಸೇನೆ ಅಧ್ಯಕ್ಷ ಹೇಮಂತ್, ವಿಮಾ ಪ್ರತಿನಿಧಿಗಳಾದ ನರಸಮ್ಮ, ಕಲಾವತಿ, ಕಮಲಮ್ಮ, ರಾಜಮ್ಮ, ಮಲ್ಲಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಎಲ್‌ಐಸಿ ವಿಭಾಗೀಯ ಕಚೇರಿ ವ್ಯವಸ್ಥಾಪಕ ಮಧು, ಶಾಖಾ ವ್ಯವಸ್ಥಾಪಕರಾದ ಜಿ.ಪ್ರಸಾದ್, ಓ.ರಾಘವೇಂದ್ರ ಶರ್ಮ, ಅಭಿವೃದ್ಧಿ ಅಧಿಕಾರಿಗಳಾದ ಗಜಾನನ ಹೆಗಡೆ, ಪ್ರಭಾಕರ್ ಇತರರು ಹಾಜರಿದ್ದರು.

ಬಸ್‌ಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ
ಕೊರಟಗೆರೆ: ತೋವಿನಕೆರೆ ಗ್ರಾಮದಿಂದ ಸಿದ್ದರಬೆಟ್ಟ, ಕೊರಟಗೆರೆ ಮಾರ್ಗವಾಗಿ ತುಮಕೂರಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಡಿವೈಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ಸಿದ್ದರಬೆಟ್ಟದ ಕಡೆಯಿಂದ ನಿತ್ಯ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ರೈತರು, ವ್ಯಾಪಾರಸ್ಥರು ತಮ್ಮ ಕೆಲಸಕ್ಕಾಗಿ ಪಟ್ಟಣಕ್ಕೆ ಬಂದು ಹೋಗುತ್ತಿದ್ದಾರೆ. ಆದರೆ ಈ ಮಾರ್ಗವಾಗಿ ಕೇವಲ ಒಂದೆರಡು ಖಾಸಗಿ ಬಸ್‌ಗಳು ಓಡಾಡುತ್ತಿದ್ದು, ಅವೂ ಕೂಡ ನಿಗದಿತವಾಗಿ ಬರುವುದಿಲ್ಲ. ಈ ಬಗ್ಗೆ ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಈ ಭಾಗದ ತೋವಿನಕೆರೆ, ಜೋನಿಗರಹಳ್ಳಿ, ಗಟ್ಟಿತಿಮ್ಮನಹಳ್ಳಿ, ಮರೇನಾಯ್ಕನಹಳ್ಳಿ, ನೇಗಲಾಲ, ಮಾರಿಪಾಳ್ಯ, ಅನುಪಲು, ಬೆಂಡೋಣೆ, ಗೌಜಗಲ್ಲು, ಮಲ್ಲೆಕಾವು, ದೊಗ್ಗನಹಳ್ಳಿ, ಚನ್ನರಾಯನದುರ್ಗಾ ಮಾರ್ಗವಾಗಿ ಸರ್ಕಾರಿ ಬಸ್ ಒದಗಿಸುವ ಮೂಲಕ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಡಿವೈಎಫ್‌ಐ ಕಾರ್ಯಕರ್ತರು, ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.


ಕಲಿಕೋಪರಣಗಳಿಗೆ ಬೆಂಕಿ
ತಿಪಟೂರು: ರಾತ್ರಿ ವೇಳೆ ದುಷ್ಕರ್ಮಿಗಳು ಶಾಲಾ ಕೊಠಡಿಯಲ್ಲಿದ್ದ ಕಲಿಕಾ ಸಾಮಗ್ರಿಗಳಿಗೆ ಬೆಂಕಿ ಹಚ್ಚಿರುವ ಘಟನೆ ತಾಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಹಾಲ್ಕುರಿಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಲಿ-ಕಲಿ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧನಾ ತರಬೇತಿಗೆ ಸಂಗ್ರಹಿಸಿದ್ದ ಕಲಿ-ನಲಿ ಪುಸ್ತಕ, ಚಾರ್ಟ್ (ಚಿತ್ರಪಟ) ಹಾಗೂ  ಕಲಿಕೋಪರಣಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇದರ ಜತೆ ಗೋಡೆ ಮೇಲೆ ಅವಾಚ್ಯ ಬರಹ ಬರೆಯಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಹೊನ್ನವಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT