ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಆರ್ಭಟ:ನಲುಗಿದ ನಗರ

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಕೀಲ ಬಾಲಕೃಷ್ಣ ಎಂಬುವರ ಮೇಲೆ ತ್ಯಾಗರಾಜನಗರ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಸಾವಿರಾರು ವಕೀಲರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿ ಏಳು ತಾಸಿಗೂ ಹೆಚ್ಚು ಕಾಲ ರಸ್ತೆ ತಡೆ ಮಾಡಿದ್ದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ವಾಹನ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರೇ ಸ್ಥಳಕ್ಕೆ ಧಾವಿಸಿ ಮನವೊಲಿಸಲು ಯತ್ನಿಸಿದರೂ ಸ್ಪಂದಿಸದ ವಕೀಲರು ಸಂಜೆವರೆಗೂ ಪ್ರತಿಭಟನೆ ನಡೆಸಿದರು.

ವಕೀಲರು ರಸ್ತೆ ತಡೆ ನಡೆಸಿದ್ದರಿಂದ ನಗರದ ಹೃದಯಭಾಗವಾದ ಕೆ.ಜಿ.ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತು. ಮೆಜೆಸ್ಟಿಕ್, ಚಿಕ್ಕಪೇಟೆ, ಅವಿನ್ಯೂ ರಸ್ತೆ, ಜೆ.ಸಿ.ರಸ್ತೆ, ಆರ್. ವಿ.ರಸ್ತೆ, ಕೆ.ಎಚ್.ರಸ್ತೆ, ಸಿಟಿ ಮಾರುಕಟ್ಟೆ, ಮೈಸೂರು ರಸ್ತೆ, ಹಡ್ಸನ್ ವೃತ್ತ, ನೃಪತುಂಗ ರಸ್ತೆ, ಶೇಷಾದ್ರಿ ರಸ್ತೆ, ಕೆ.ಆರ್.ವೃತ್ತ, ಅಂಬೇಡ್ಕರ್ ವೀದಿ ಸುತ್ತಮುತ್ತಲ ಪ್ರದೇಶದಲ್ಲಿ ಇಡೀ ದಿನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ಸಾರ್ವಜನಿಕರು ಪರದಾಡಿದರು.

ಪ್ರತಿಭಟನಾನಿರತ ವಕೀಲರು ಆಂಬುಲೆನ್ಸ್‌ಗಳ ಸಂಚಾರಕ್ಕೂ ಅವಕಾಶ ನೀಡದ ಹಿನ್ನೆಲೆಯಲ್ಲಿ ರೋಗಿಗಳು ಸಕಾಲಕ್ಕೆ ಆಸ್ಪತ್ರೆಗೆ ತಲುಪಲಾಗದೆ ತೊಂದರೆ ಅನುಭವಿಸಿದರು. ಬಿಎಂಟಿಸಿ ಬಸ್‌ಗಳು ಹಾಗೂ ಆಟೊಗಳಲ್ಲಿದ್ದ ಪ್ರಯಾಣಿಕರು ಟ್ರಾಫಿಕ್ ಕಿರಿ ಕಿರಿ ತಾಳಲಾರದೆ ವಾಹನದಿಂದ ಕೆಳಗಿಳಿದು ನಡೆದು ಹೋಗುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.

ಟ್ರಾಫಿಕ್ ಜಾಮ್‌ನಿಂದ ಬಸವಳಿದ ದ್ವಿಚಕ್ರ ವಾಹನ ಸವಾರರು ಸ್ಥಳಾವಕಾಶ ಲಭ್ಯವಿದ್ದ ಕಡೆ ಸಾಗಿ ಮುಂದೆ ಹೋಗಲು ಯತ್ನಿಸಿದಾಗ ವಕೀಲರು ಅವರ ಮೇಲೆ ದುಂಡಾವರ್ತನೆ ಪ್ರದರ್ಶಿಸಿದರು. ದ್ವಿಚಕ್ರ ವಾಹನ ಸವಾರರಿಗೆ ಮುಂದೆ ಹೋಗಲು ಅವಕಾಶ ನೀಡದ ವಕೀಲರು ಅವರನ್ನು ಎಳೆದಾಡಿ ಹಲ್ಲೆ ನಡೆಸಲು ಯತ್ನಿಸಿದರು.

ಪ್ರತಿಭಟನೆಯ ತೀವ್ರತೆ ಹೆಚ್ಚುತ್ತಿದ್ದರೂ ಅದನ್ನು ನಿಯಂತ್ರಿಸುವಲ್ಲಿ ಪೊಲೀಸರಿಗೆ ಸಾಧ್ಯವಾಗಲಿಲ್ಲ. ಗಂಟೆಗಟ್ಟಲೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ನಲುಗಿದ್ದ ಸಾರ್ವಜನಿಕರು, ವಕೀಲರು ಹಾಗೂ ಪೊಲೀಸರ ಮೇಲೆ ಹರಿಹಾಯ್ದರು. ಈ ವೇಳೆ ವಕೀಲರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ನಡೆದು ಪರಸ್ಪರರು ಕೈ ಕೈ ಮಿಲಾಯಿಸಿದ ಘಟನೆಯೂ ನಡೆಯಿತು.

ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದ ಪೊಲೀಸ್ ಅಧಿಕಾರಿ ಗಳೊಂದಿಗೂ ಕೆಲ ವಕೀಲರು ಅನುಚಿತವಾಗಿ ವರ್ತಿಸಿದರು. ಡಿಸಿಪಿ ಹಾಗೂ ಎಸಿಪಿ ದರ್ಜೆಯ ಪೊಲೀಸ್ ಅಧಿಕಾರಿಗಳನ್ನು ವಕೀಲರು ಎಳೆದಾಡಿದರು. ಸಮಯ ಕಳೆದಂತೆ ವಕೀಲರ ಗುಂಪು ಸಹ ದೊಡ್ಡದಾಗುತ್ತಾ ಹೋಯಿತು. ಪರಿಣಾಮವಾಗಿ ಗದ್ದಲ ಕೂಡ ಹೆಚ್ಚಾಯಿತು. ಇಷ್ಟೆಲ್ಲ ಆದರೂ ಪೊಲೀಸರು ಅಸಹಾಯಕರಾಗಿ ನಿಂತಿದ್ದರು.

ಘಟನಾ ಸ್ಥಳದಲ್ಲಿದ್ದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್‌ಕುಮಾರ್, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ.ಸಲೀಂ ಅವರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು.
 
ಆದರೆ, ಗೃಹ ಸಚಿವ ಆರ್. ಅಶೋಕ ಅಥವಾ ನಗರ ಪೊಲೀಸ್ ಕಮಿಷನರ್ ಅವರೇ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕೆಂದು ವಕೀಲರು ಪಟ್ಟು ಹಿಡಿದರು. ಅಲ್ಲದೇ ಮಿರ್ಜಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಅವರು, ದೌರ್ಜನ್ಯ ನಡೆಸಿರುವ ಪೊಲೀಸ್ ಸಿಬ್ಬಂದಿಯನ್ನು ಕೂಡಲೇ ಅಮಾನತುಪಡಿಸಬೇಕು ಎಂದು ಒತ್ತಾಯಿಸಿದರು.

ವಕೀಲರ ಅಟಾಟೋಪ
ವಕೀಲರು ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ಮಿರ್ಜಿ ಅವರೇ ಘಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ನಂತರ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಅವರು, `ವಕೀಲರು ಹಾಗೂ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತದೆ. ಸಿಬ್ಬಂದಿ ದೌರ್ಜನ್ಯ ಎಸಗಿರುವುದು ತನಿಖೆಯಲ್ಲಿ ಸಾಬೀತಾದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ~ ಎಂದು ಭರವಸೆ ನೀಡಿದರು. ಇದರಿಂದಲೂ ತೃಪ್ತರಾಗದ ವಕೀಲರು ತ್ಯಾಗರಾಜನಗರ ಠಾಣೆಯ ಇನ್‌ಸ್ಪೆಕ್ಟರ್ ಅವರನ್ನು ಅಮಾನತುಪಡಿಸುವಂತೆ ಆಗ್ರಹಿಸಿದರು.

ಈ ಬೇಡಿಕೆಗೆ ಮಿರ್ಜಿ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಸ್ಥಳದಿಂದ ನಿರ್ಗಮಿಸಿದರು. ವಕೀಲರು ಪ್ರತಿಭಟನೆಯನ್ನು ನಿಲ್ಲಿಸುವ ಲಕ್ಷಣ ಕಾಣದ ಹಿನ್ನೆಲೆಯಲ್ಲಿ ಪೊಲೀಸರು ಜಲಪ್ರಹಾರ ದಳವನ್ನು ಸ್ಥಳಕ್ಕೆ ಕರೆಸಿ ಪ್ರತಿಭಟನಾಕರರನ್ನು ಚದುರಿಸಲು ಮುಂದಾದರು. ಆದರೆ, ವಕೀಲರು ಜಲಪ್ರಹಾರ ದಳದ ವಾಹನಗಳ ಚಾಲಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಯತ್ನಿಸಿದರು.
 
ಆ ನಂತರ ಸುನಿಲ್‌ಕುಮಾರ್ ಅವರು ವಕೀಲರ ಪ್ರತಿನಿಧಿಗಳನ್ನು ಭೇಟಿ ಮಾಡಿ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಕಾನ್‌ಸ್ಟೇಬಲ್ ಅರುಣ್‌ಕುಮಾರ್ ಅವರನ್ನು ಅಮಾನತು ಮಾಡಿರುವುದಾಗಿ ತಿಳಿಸಿದರು. ಆ ಬಳಿಕ ವಕೀಲರು ಪ್ರತಿಭಟನೆ ಹಿಂತೆಗೆದುಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಸುನಿಲ್‌ಕುಮಾರ್, `ಕಾನ್‌ಸ್ಟೇಬಲ್ ಅರುಣ್‌ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ ಮತ್ತು ಅವರ ವಿರುದ್ಧ ಇಲಾಖಾ ತನಿಖೆ ನಡೆಸಲು ಆದೇಶಿಸಲಾಗಿದೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT