ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ದಿಢೀರ್ ಪ್ರತಿಭಟನೆ..ಜನರ ಪ್ರತಿಕ್ರಿಯೆ...

Last Updated 18 ಜನವರಿ 2012, 18:35 IST
ಅಕ್ಷರ ಗಾತ್ರ


`ವಕೀಲರ ದಿಢೀರ್ ಪ್ರತಿಭಟನೆ ಅವರ ಅಮಾನವೀಯತೆಯನ್ನು ಎತ್ತಿ ತೋರಿದೆ. ವೃದ್ಧರು, ಅಂಗವಿಕಲರು, ಮಕ್ಕಳು ಪ್ರತಿಭಟನೆಯಿಂದ ಪರದಾಡುತ್ತಿದ್ದರೂ ಅವರಿಗೆ ತಮ್ಮ ಸ್ವಪ್ರತಿಷ್ಠೆಯೇ ಮುಖ್ಯವಾಗಿತ್ತು.

ವಕೀಲರು ಸಾರ್ವಜನಿಕರ ಮೇಲೆ ನಡೆಸಿದ ಹಲ್ಲೆಯನ್ನು ಕಣ್ಣಾರೆ ಕಂಡೂ ಸುಮ್ಮನಿದ್ದ ಪೊಲೀಸರ ಕ್ರಮ ಸರಿಯಲ್ಲ. ಇದು ರಾಜ್ಯದ ಕಾನೂನು ವ್ಯವಸ್ಥೆ ಭಗ್ನಗೊಂಡಂತೆ ಕಾಣುತ್ತಿದೆ~
 -ಸತೀಶ್, ಖಾಸಗಿ ಕಂಪೆನಿ ಉದ್ಯೋಗಿ

`ಪೊಲೀಸರಿಂದ ತಪ್ಪಾಗಿದ್ದರೆ ಪೊಲೀಸ್ ಕಮಿಷನರ್ ಆಫೀಸ್ ಮುಂದೆ ಪ್ರತಿಭಟನೆ ನಡೆಸಬೇಕಿತ್ತು. ಆದರೆ ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶದಿಂದಲೇ ವಕೀಲರು ಕೆ.ಆರ್.ಸರ್ಕಲ್ ಹಾಗೂ ಮೈಸೂರ್ ಬ್ಯಾಂಕ್ ಸರ್ಕಲ್‌ಗಳಲ್ಲಿ ಪ್ರತಿಭಟನೆ ನಡೆಸಿದರು.

ಜನ ಸಾಮಾನ್ಯರು ಈ ರೀತಿ ಪ್ರತಿಭಟನೆ ನಡೆಸಿದ್ದರೆ ಗೋಲಿಬಾರ್ ಆಗುತ್ತಿತ್ತು. ಅಷ್ಟೆಲ್ಲಾ ಬೀದಿ ರಂಪ ಮಾಡಿದ್ದರೂ ಪೊಲೀಸರು ವಕೀಲರ ಮೇಲೆ ಯಾವುದೇ ಕ್ರಮ ಕೈಗೊಳ್ಳದಿದ್ದುದು ಪ್ರಜಾಪ್ರಭುತ್ವದ ಸೋಲು~
    -ರಾಮಣ್ಣ, ಆಟೊ ಚಾಲಕ

`ಕಾನೂನು ತಿಳಿದವರೇ ತಪ್ಪು ಮಾಡಿದ್ದಾರೆ. ಕಾನೂನನ್ನು ಕಾಯಬೇಕಾಗಿದ್ದವರು ತಮ್ಮ ಕರ್ತವ್ಯ ಮರೆತಿದ್ದಾರೆ. ಇದರ ಪರಿಣಾಮ ಆಗಿದ್ದು ಮಾತ್ರ ಜನ ಸಾಮಾನ್ಯರ ಮೇಲೆ. ನ್ಯಾಯವಾದಿಗಳ ಜನಪರ ಕಾಳಜಿ ಎಂಥದ್ದು ಎಂಬುದು ಇದರಿಂದ ಬಹಿರಂಗವಾಗಿದೆ. ವಕೀಲರ ಅಹಂಕಾರ ಪ್ರದರ್ಶನ ಬೀದಿಯಲ್ಲಿ ನಡೆದಿದೆ. ಪ್ರತಿಭಟನೆ ಸಮಯದಲ್ಲಿ ಪೊಲೀಸರು ಹೇಡಿಗಳಂತೆ ವರ್ತಿಸಿದ್ದಾರೆ~ -ದೀಪಕ್, ಸಾಫ್ಟ್‌ವೇರ್ ಎಂಜಿನಿಯರ್

`ಏಳು ಗಂಟೆಗಳಷ್ಟು ದೀರ್ಘಕಾಲ ರಸ್ತೆ ತಡೆಯನ್ನು ನಾನು ಎಂದೂ ನೋಡಿರಲಿಲ್ಲ. ಪ್ರತಿಭಟನೆ ವೇಳೆಯಲ್ಲಿ ವಕೀಲರ ವರ್ತನೆ ಯಾರೂ ಒಪ್ಪುವಂಥದ್ದಲ್ಲ. ಸಾರ್ವಜನಿಕರಿಗಾಗುವ ತೊಂದರೆಯನ್ನು ಅರಿತು ಶಾಂತಿಯುತವಾಗಿ ಒಂದು ಕಡೆ ಪ್ರತಿಭಟನೆ ನಡೆಸಲು ಸಾಧ್ಯವಿತ್ತು. ಆದರೆ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ವಕೀಲರ ಅಹಂ ಮನೋಭಾವದ ಪ್ರದರ್ಶನ ನಡೆದಿದೆ.

ಜೊತೆಗೆ ಪೊಲೀಸ್ ಯಾವ ರೀತಿ ಕೆಲಸ ಮಾಡುತ್ತಾರೆ ಎನ್ನುವುದು ಗೊತ್ತಾಗಿದೆ. . ಬೆಂಗಳೂರು ಹಿಂದೆಂದೂ ನೋಡಿರದ ಘಟನೆ ಇದು~ 
-ಸಾವಿತ್ರಿ, ಗೃಹಿಣಿ

`ವಕೀಲರ ಮೇಲೆ ಪೊಲೀಸರು ಹಲ್ಲೆ ನಡೆಸಿದ ಕಾರಣಕ್ಕೆ ಪ್ರತಿಭಟನೆ ನಡೆದಿದೆ. ಇದರಿಂದ ಅನೇಕರಿಗೆ ತೀವ್ರ ತೊಂದರೆಯಾಗಿರುವುದು ನಿಜ. ಆದರೆ ಕಾನೂನು ತಿಳಿದಿರುವ ವಕೀಲರೊಂದಿಗೇ ಪೊಲೀಸರು ಅನುಚಿತವಾಗಿ ವರ್ತಿಸಿರುವಾಗ ಸಾಮಾನ್ಯ ಜನರ ಸ್ಥಿತಿ ಏನು ಎಂಬ ಬಗ್ಗೆಯೂ ಯೋಚಿಸಬೇಕು.

ಪೊಲೀಸರು ಹಾಗೂ ವಕೀಲರ ಕಡೆಯಿಂದಲೂ ತಪ್ಪಾಗಿದೆ. ತಪ್ಪು ತಿದ್ದಿಕೊಳ್ಳಬೇಕು. ಈ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು~ 
 -ಸೋಮಣ್ಣ, ಆಡಿಟರ್

`ಪೊಲೀಸರ ಹಲ್ಲೆಯ ವಿರುದ್ಧ ವಕೀಲರು ಶಾಂತಿಯುತ ಪ್ರತಿಭಟನೆ ನಡೆಸಿದ್ದರೆ ಅವರೊಂದಿಗೆ ಅಸಂಖ್ಯ ಜನ ಸಾಮಾನ್ಯರೂ ಕೈ ಜೋಡಿಸುತ್ತಿದ್ದರು. ಆದರೆ ಇದು ವಕೀಲರ ಸ್ವಪ್ರತಿಷ್ಠೆಯಂತೆ ಕಾಣುತ್ತಿದ್ದೆ. ಇದನ್ನೇ ಕಾರಣವಾಗಿಸಿಕೊಂಡು ಇನ್ನಷ್ಟು ದಿನ ಗಲಭೆ ಮುಂದುವರೆಸುವುದು ಸರಿಯಲ್ಲ. ವಕೀಲರು ತಮ್ಮ ಮಾನವನ್ನು ತಾವೇ ಬೀದಿಯಲ್ಲಿ ಹರಾಜು ಹಾಕಿಕೊಳ್ಳುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಷಯ~  
-ಸುನೀಲ್, ಸಾಫ್ಟ್‌ವೇರ್ ಎಂಜಿನಿಯರ್

`ವಕೀಲರ ಪ್ರತಿಭಟನೆಯಿಂದ ಜನ ಸಾಮಾನ್ಯರು ಇಡಿಯ ಒಂದು ದಿನವನ್ನೇ ಅನವಶ್ಯಕವಾಗಿ ಬಲಿಕೊಡಬೇಕಾಯಿತು. ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ವಿಪರೀತ ತೊಂದರೆ ಅನುಭವಿಸಿದ್ದೇವೆ. ವಕೀಲರೇನು ದೇವಲೋಕದಿಂದ ಇಳಿದವರಲ್ಲ. ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಅವರೊಂದಿಗೆ ಮೃದು ಧೋರಣೆ ಅನುಸರಿಸಿರುವುದೂ ಸರಿಯಲ್ಲ~
  -ಅಕ್ಬರ್, ಆಟೊ ಚಾಲಕ

`ಪೊಲೀಸರು ಹಾಗೂ ವಕೀಲರಿಬ್ಬರ ಕಡೆಯಿಂದಲೂ ತಪ್ಪಾಗಿದೆ. ಆದರೆ ಪೊಲೀಸರು ತಾಳ್ಮೆ ಕಳೆದುಕೊಂಡಿದ್ದರೆ ಬಹುಶಃ ದೊಡ್ಡ ಅನಾಹುತ ಸಂಭವಿಸುತ್ತಿತ್ತೇನೋ. ತಾಳ್ಮೆ ಪೊಲೀಸರ ಅಸಹಾಯಕತೆಯಲ್ಲ. ರಾಜಕೀಯದ ಒತ್ತಡವೂ ಪೊಲೀಸರನ್ನು ನಿಯಂತ್ರಿಸಿರಬಹುದು. ಕೇವಲ ಪೊಲೀಸರು ಹಾಗೂ ವಕೀಲರನ್ನೇ ದೂರುವುದಲ್ಲ. ಇಡೀ ವ್ಯವಸ್ಥೆಯೇ ಹಾಳಾಗಿದೆ. ಅದರ ಪ್ರತಿಬಿಂಬ ಇದು~
 -ಶ್ರೀಕಂಠ, ಎಂ.ಎ ವಿದ್ಯಾರ್ಥಿ

`ಪೊಲೀಸರು ವಕೀಲರ ಮೇಲೆ ಹಲ್ಲೆ ಮಾಡಿರುವುದೂ ಸರಿಯಲ್ಲ. ವಕೀಲರು ಮಾಡಿದ ಪ್ರತಿಭಟನೆಯ ರೀತಿಯೂ ಸರಿಯಲ್ಲ. ನ್ಯಾಯವಾದಿಗಳು ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡದೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು~
 -ಭರತ್, ಖಾಸಗಿ ಕಂಪೆನಿ ಉದ್ಯೋಗಿ

`ಸರ್ಕಾರಿ ಅಧಿಕಾರಿಗಳು ಸಮಸ್ಯೆಗೀಡಾದರೆ ಅದರ ಪರಿಣಾಮ ಬೀರುವುದು ಸಾರ್ವಜನಿಕರ ಮೇಲೆ ಎಂಬುದಕ್ಕೆ ಮತ್ತೊಂದು ನಿದರ್ಶನವಿದು. ಗೊಂದಲಗಳನ್ನು ಕಾನೂನಿನ ಚೌಕಟ್ಟಿನಲ್ಲಿಯೇ ಬಗೆಹರಿಸಿಕೊಳ್ಳಬೇಕಾಗಿದ್ದ ಕಾನೂನು ಪಾಲಕರೇ ಬೀದಿಗಿಳಿದು ಗಲಭೆ ಸೃಷ್ಟಿಸಿದ್ದಾರೆ.

ಇನ್ನು ಇವರು ಜನರ ರಕ್ಷಣೆ ಹೇಗೆ ಮಾಡುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ. ಗಲಭೆಯನ್ನು ಕೂಡಲೇ ಅಂತ್ಯಗೊಳಿಸಿ ಸಾರ್ವಜನಿಕರ ಹಿತರಕ್ಷಣೆಯತ್ತ ಗಮನ ಹರಿಸಿ ಅಥವಾ ಸರ್ಕಾರಿ ರಜೆಯನ್ನಾದರು ಘೋಷಿಸಿ ನಿಮ್ಮ ಹಟವನ್ನು ಮುಂದುವರೆಸಿಕೊಳ್ಳಿ 
 - ಪುಷ್ಪಾವತಿ, ಶಿಕ್ಷಕಿ

ಕೂಸು ನುಗ್ಗಾದ ಹಾಗೆ...!
ಒಂದು ನಿಮಿಷದ ಸಿಗ್ನಲ್‌ಗಾಗಿ ಕಾಯುವಷ್ಟು ಕೂಡ ಚಡಪಡಿಸುತ್ತೇವೆ. ಅಂಥದರಲ್ಲಿ ಮೂರೂವರೆ ತಾಸು ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ  ಸಾಮಾನ್ಯ ಜನರು ನುಗ್ಗಾದೆವು. ಇಬ್ಬರೂ ಕಾನೂನು ಪಾಲಕರು ಅವರ ನಡಿವಿನ ಅಸಮಾಧಾನದ ಬಿಸಿ ಮಂಗಳವಾರ ಮಹಾರಸ್ತೆಗಳಿಗೆ ಬಂದವರಿಗೆಲ್ಲಾ ತಟ್ಟಿತು.

ರಸ್ತೆ ತಡೆಯಂಥ ಕೃತ್ಯದಿಂದ ಜನರಿಗೆ ಸಮಸ್ಯೆ ಆಗುವಂತೆ ಮಾಡುವವರಿಗೆ ತಕ್ಕ ಶಿಕ್ಷೆ ಆಗುವಂಥ ಕಾನೂನು ಕ್ರಮ ಅಗತ್ಯ. ಇಲ್ಲದಿದ್ದರೆ ಬುದ್ಧಿ ಬರುವುದಿಲ್ಲ.     
-ಡಿ.ಯೋಗೇಶ್, ಕುಮಾರಸ್ವಾಮಿ ಬಡಾವಣೆ

ಹಿಂಸೆಗೆ ಯಾರು ಹೊಣೆ?
ಮಂಗಳವಾರ ಮಧ್ಯಾಹ್ನ 2.15ಕ್ಕೆ ದ್ವಿಚಕ್ರ ವಾಹನ ಹತ್ತಿದ ನಾನು ಎಂ.ಜಿ ರಸ್ತೆಯಲ್ಲಿರುವ ನನ್ನ ಕಚೇರಿ ಮುಂದೆ ಬಂದಿಳಿದಾಗ 4 ಗಂಟೆ. ಸುಮಾರು ಏಳೆಂಟು ವರ್ಷಗಳಿಂದ ನಾನು ಜೆ.ಸಿ ರಸ್ತೆಯಲ್ಲಿ ಓಡಾಡುತ್ತಿದ್ದೇನೆ. ಆದರೆ ಆ ದಿನ ಆದಷ್ಟು ತೊಂದರೆಯನ್ನು ನಾನು ಹಿಂದೆಂದೂ ಅನುಭವಿಸಿರಲಿಲ್ಲ.

ನಾಗರಿಕರಿಗೆ ಇಂತಹ ಹಿಂಸೆ ನೀಡುವ ಅಧಿಕಾರವನ್ನು ವಕೀಲರಿಗೆ ಕೊಟ್ಟವರು ಯಾರು? ಸಣ್ಣ ಪುಟ್ಟ ಪ್ರತಿಭಟನೆ ನಡೆಸುವವರ ಮೇಲೆ, ನ್ಯಾಯಕ್ಕೆಆಗ್ರಹಿಸಿ ಧರಣಿ ಕೂರುವ ರೈತರ ಮೇಲೆ ಲಾಠಿ ಪ್ರಹಾರ, ಗೋಲಿಬಾರ್ ನಡೆಸುವ ಪೊಲೀಸರು, ವಕೀಲರ ವಿಷಯದಲ್ಲಿ ಮಾತ್ರ ಮೌನ ಪ್ರೇಕ್ಷಕರಂತೆ ವರ್ತಿಸಿದ್ದೇಕೆ?

ವಕೀಲರ ಈ ಗೂಂಡಾಗಿರಿಯ ಬಗ್ಗೆ ತನಿಖೆ ನಡೆಸಿದರಷ್ಟೇ ಸಾಲದು, ಅದನ್ನು ನೋಡುತ್ತಾ ನಿಂತ ಪೊಲೀಸರ ಅಸಹಾಯಕತೆಯ ಹಿಂದಿನ ಕಾಣದ ಕೈಗಳ ಬಗ್ಗೆಯೂ ತನಿಖೆ ನಡೆಯಬೇಕು.
   - ಭಾರತಿ, ಗಿರಿನಗರ

ಮಾಧ್ಯಮದವರ ಮೇಲೆ ಹಲ್ಲೆಗೆ ಖಂಡನೆ
ಪ್ರತಿಭಟನೆ ನಿರತ ವಕೀಲರ ಕುರಿತಾಗಿ ವರದಿ ಮಾಡಲು ಹೋದ ಮಾಧ್ಯಮಗಳ ಮೇಲೆ ವಕೀಲರು ಹಲ್ಲೆ ನಡೆಸಿರುವುದನ್ನು ಬೆಂಗಳೂರು ವರದಿಗಾರರ ಕೂಟ ತೀವ್ರವಾಗಿ ಖಂಡಿಸಿದೆ.

`ಮಾಧ್ಯಮದವರ ಮೇಲೆ ವಕೀಲರು ಹಲ್ಲೆ ನಡೆಸಿರುವುದು ಇದೇ ಮೊದಲಲ್ಲ. ಹಿಂದೆ ಹಲವು ಬಾರಿ ಕೆಲವು ಕಿಡಿಗೇಡಿಗಳು ಹಲ್ಲೆ ನಡೆಸುತ್ತಲೇ ಬಂದಿದ್ದಾರೆ. ವರದಿ ಮಾಡುವುದು ವರದಿಗಾರನ ಅಭಿವ್ಯಕ್ತಿ ಸ್ವಾತಂತ್ರ್ಯ. ಆದರೆ ಈ ಸ್ವಾತಂತ್ರ್ಯ ಹಾಗೂ ಕಾನೂನನ್ನು ರಕ್ಷಿಸಬೇಕಾದ ವಕೀಲರೇ ಇಂತಹ ದುಂಡಾವರ್ತನೆ ತೋರಿರುವುದು ಸರಿಯಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಅಗತ್ಯ ಇದೆ ಎಂದು ಕೂಟದ ಅಧ್ಯಕ್ಷ ಕೆ.ವಿ.ಪ್ರಭಾಕರ್ ತಿಳಿಸಿದ್ದಾರೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT