ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಪ್ರತಿಭಟನೆಗೆ ಜನಾಭಿಪ್ರಾಯ...

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

`ವಕೀಲರಿಗೆ ಪ್ರತ್ಯೇಕ ಕಾನೂನಿಲ್ಲ~
`ಶಾಸಕರು, ವಕೀಲರು, ಮಂತ್ರಿಗಳಿಗೆ ಪ್ರತ್ಯೇಕ ಕಾನೂನು ಇಲ್ಲ. ಕಾನೂನು ತಜ್ಞರೆಂದೇ ಹೆಸರು ಪಡೆದಿರುವ ವಕೀಲರು ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಭಟನೆ ನಡೆಸುವುದು ಒಳಿತು~
`ಈಗಾಗಲೇ ಪರಿಸ್ಥಿತಿ ಸುಧಾರಣೆಗಾಗಿ ವಕೀಲರ ಸಂಘದ ಮುಖಂಡರೊಂದಿಗೆ ಮಾತುಕತೆ ನಡೆಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆಂಬ ನಿರೀಕ್ಷೆಯಿದೆ~.
-ಆರ್.ಅಶೋಕ, ಗೃಹ ಸಚಿವರು

`ವಕೀಲರು ಪ್ರತಿಷ್ಠೆ ಬಿಡಲಿ~
`ಪ್ರಜ್ಞಾವಂತ ವಕೀಲರೇ ಪೊಲೀಸರ ಮೇಲೆ ಸೇಡು ತೀರಿಸಿಕೊಳ್ಳುವ ರೀತಿ ಸಂಘರ್ಷಕ್ಕಿಳಿದು ಈ ರೀತಿಯ ಹೋರಾಟ ನಡೆಸುವುದನ್ನು ಕಂಡು ನನಗೆ ನಿಜಕ್ಕೂ ಬೇಸರವಾಯಿತು. ವಕೀಲರು ಪ್ರತಿಷ್ಠೆ ಬಿಟ್ಟು ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು. ಬೀದಿಗಿಳಿಯುವುದರಿಂದ ಸಾರ್ವಜನಿಕರಿಗೆ ತೊಂದರೆಯೇ ಹೊರತು ಅದರಿಂದ ಯಾರಿಗೂ ಲಾಭವಿಲ್ಲ~.
-ರವಿಕುಮಾರ್, ಸರ್ಕಾರಿ ನೌಕರ
 
`ಪ್ರತಿಭಟನೆಗೆ ಅವಕಾಶ ಬೇಡ~
`ಮಂಗಳವಾರ ಟ್ರಾಫಿಕ್ ಜಾಮ್‌ನಿಂದ ಕಂಪೆನಿಯೊಂದಕ್ಕೆ ವಸ್ತುಗಳನ್ನು ತಲುಪಿಸಲು ಸಾಧ್ಯವಾಗಲಿಲ್ಲ. ಇನ್ನು ಮುಂದೆ ಕಂಪೆನಿಯವರು ಆರ್ಡರ್ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಇದರಿಂದ ಬಹಳ ಬೇಸರವೆನಿಸಿದೆ. ನಗರದ ಹೃದಯ ಭಾಗದಲ್ಲಿ ಈ ರೀತಿಯ ಪ್ರತಿಭಟನೆ ನಡೆಸಲು ಸರ್ಕಾರ ಯಾರಿಗೂ ಅವಕಾಶ ನೀಡಬಾರದು~.
-ಸುರೇಂದ್ರ, ಎಲೆಕ್ಟ್ರಿಕಲ್ ವ್ಯಾಪಾರಿ

`ಕಾಲೇಜಿಗೆ ಬರಲು ಅಂಜಿಕೆಯಾಗುತ್ತಿದೆ~
`ಮೊನ್ನೆಯಿಂದ ಕಾಲೇಜಿಗೆ ಬರಲು ಅಂಜಿಕೆಯಾಗುತ್ತಿದೆ. ಟ್ರಾಫಿಕ್ ಜಾಮ್‌ನಿಂದ ಬೇಸತ್ತಿದೆ. ಮನೆಯಲ್ಲಿ ತಂದೆ-ತಾಯಿಗೂ ಆತಂಕ. ಹೀಗಾಗಿ, ನಾಳೆಯಿಂದ ಕಾಲೇಜಿಗೆ ರಜೆ ಹಾಕಿ ಮನೆಯಲ್ಲೇ ಇದ್ದು ಬಿಡೋಣ ಎಂದು ನಿರ್ಧರಿಸಿದ್ದೇನೆ~.
-ತೇಜಸ್, ಎಸ್‌ಜೆಪಿ ಪಾಲಿಟೆಕ್ನಿಕ್ ವಿದ್ಯಾರ್ಥಿ

`ಯಾವ ತಪ್ಪಿಗೆ ಶಿಕ್ಷೆ?~
`ಇವತ್ತು ವಕೀಲರು ಮುಷ್ಕರ ಮಾಡ್ತಾರೆ ಎಂದು ಯಾರೋ ಹೇಳಿದ್ದರು. ಆದರೆ ಕೇಸ್ ನಡೆಸಲು ಕೋರ್ಟ್‌ಗೆ ಹಾಜರು ಆಗಲ್ಲ ಎಂದು ತಿಳಿದಿರಲಿಲ್ಲ. ಕ್ರಿಮಿನಲ್ ಪ್ರಕರಣ ಇತ್ತು. ಇವತ್ತು ಬರುವಂತೆ ವಕೀಲರು ಹೇಳಿದ್ರು. ಆದ್ರೆ ಕೇಸು ಇವತ್ತು ನಡೆಯೋದಿಲ್ಲ ಎಂದು ಹೇಳಲೇ ಇಲ್ಲ. ಮಂಗಳೂರಿನಿಂದ ಬಂದಿದ್ದೇನೆ. ನೋಡಿ ಏನ್ ಮಾಡೋದು ಹೇಳಿ. ಯಾವ ತಪ್ಪಿಗೆ ಈ ಶಿಕ್ಷೆ?~
-ಗೃಹಿಣಿ ಮಂಜುಳಾ ಬಡ್ತಿ

`ಕೆಲಸಕ್ಕೆ ಚಕ್ಕರ್~

`ನನ್ ವಕೀಲರು ಇವತ್ತು ಬೆಳಿಗ್ಗೆ ಫೋನ್ ಮಾಡಿ ತಾವು ಕೋರ್ಟ್‌ಗೆ ಬರುವುದಿಲ್ಲ. ವಿಚಾರಣೆ ಮುಂದಕ್ಕೆ ಹಾಕುವಂತೆ ನ್ಯಾಯಮೂರ್ತಿಗಳನ್ನು ನೀನೇ ಹೋಗಿ ಕೋರಿಕೋ ಅಂದ್ರು. ಕೇಸು ಯಾವಾಗ ಬರ‌್ತದೆ ಎಂದು ಗೊತ್ ಇರ‌್ಲಿಲ್ಲ. ಅದಕ್ಕೆ ಇಡೀ ದಿನ ಕೆಲಸಕ್ಕೆ ರಜೆ ಹಾಕಿ ಬಂದಿದ್ದೇನೆ. ದಿಢೀರ್ ರಜೆ ಹಾಕಿದ್ದಕ್ಕೆ ಒಂದು ದಿನದ ಸಂಬಳ ಕಟ್ ಮಾಡ್ತಾರೋ ಗೊತ್ತಿಲ್ಲ. ಇವ್ರಿಗೆ ಕೋಡೋ ಫೀಸ್‌ನಲ್ಲಿ ನನಗೆ ಬರಬೇಕಿರುವ ಹಣ ಕಟ್ ಮಾಡ್ಕೊಳಿ ಅಂದ್ರೆ ಮಾಡ್ಕೋತಾರಾ..?
-ಬಸಪ್ಪ ನಾಮಧಾರಿ

`ಬೆದರಿಕೆ ಹಾಕಿದರು~
`ಕೋರ್ಟ್‌ಗೆ ಬನ್ನಿ ನೋಡ್ಕೋತೀವಿ ಅಂತ, ಛಾಯಾಗ್ರಾಹಕನಾಗಿ ಕರ್ತವ್ಯ ನಿರ್ವಹಿಸಲು ಹೋದ ನನಗೆ ಪ್ರತಿಭಟನಾನಿರತ ವಕೀಲರು ಬೆದರಿಕೆ ಹಾಕಿದರು. ಕೋರ್ಟ್ ಕಡೆ ತಲೆಹಾಕಬೇಡಿ ಎಂದು ಬೆದರಿಕೆ ಹಾಕಿದ್ದು ಭಯ ಉಂಟು ಮಾಡಿದೆ~
-ವಿಶ್ವನಾಥ ಸುವರ್ಣ, ಪತ್ರಿಕಾ ಛಾಯಾಗ್ರಾಹಕ

`ಸಭ್ಯತೆಯ ಅರಿವಿಲ್ಲ~
`ದಿಢೀರ್ ಪ್ರತಿಭಟನೆ ನಡೆಸಿ ಲಕ್ಷಾಂತರ ಮಂದಿಗೆ ತೊಂದರೆ ಉಂಟಾದ ಘಟನೆ ಬಗ್ಗೆ ವಕೀಲರಲ್ಲಿ ಸ್ವಲ್ಪವೂ ವಿಷಾದವಿಲ್ಲ. ಗುರುವಾರ ರ‌್ಯಾಲಿ ನಡೆಸುವ ಸಂದರ್ಭದಲ್ಲೂ ಕೆಲವರು ಕಸ, ಕಲ್ಲು ಎಸೆದುದನ್ನು ಗಮನಿಸಿದರೆ ಅವರಿಗೆ ಸಭ್ಯತೆಯ ಅರಿವಿಲ್ಲ ಎಂಬುದು ಗೊತ್ತಾಗುತ್ತದೆ~.
-ಎಂ. ಕಿರಣ್‌ಕುಮಾರ್, ಖಾಸಗಿ ಕಂಪೆನಿ ನೌಕರ

`ಕಿಡಿಗೇಡಿ ಕೃತ್ಯ~

`ಪ್ರತಿಭಟನಾನಿರತ ಕೆಲ ವಕೀಲರು ವೃತ್ತಿ ಘನತೆ ಉಳಿಸಿಕೊಂಡಂತೆ ಕಾಣುತ್ತಿಲ್ಲ. ಕೆಲವರ ವರ್ತನೆ ಹುಡುಗಾಟಕ್ಕೆ ಎಂಬಂತೆ ವಕೀಲಿ ವೃತ್ತಿ ಮಾಡಿಕೊಂಡಿರುವಂತೆ ಕಾಣುತ್ತದೆ. ಗುರುವಾರ ರ‌್ಯಾಲಿ ನಡೆಸಿದ ಸಂದರ್ಭದಲ್ಲಿ ಕೆಲ ವಕೀಲರು ಪೊಲೀಸರನ್ನು ಕೆಣಕಿದ್ದು, ಅವಾಚ್ಯವಾಗಿ ನಿಂದಿಸಿದ್ದನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ~.
-ಶಿವಶಂಕರ್, ಪದವಿ ವಿದ್ಯಾರ್ಥಿ

`ಗೋಳು ಕೇಳುವವರು ಯಾರು~

`ಕಾನೂನಿನ ಬಗ್ಗೆ ತಿಳಿವಳಿಕೆ ನೀಡಬೇಕಾಗಿದ್ದ ವಕೀಲರು ಪ್ರತಿಭಟನೆಯ ಮೂಲಕ ಕಿಡಿಗೇಡಿಗಳಂತೆ ವರ್ತಿಸಿದ್ದು ನಿಜಕ್ಕೂ ಬೇಸರ ಮೂಡಿಸಿದೆ. ಪೊಲೀಸ್ ಮತ್ತು ವಕೀಲರ ಕಚ್ಚಾಟದಲ್ಲಿ ಜನ ಸಾಮಾನ್ಯರು ಪರದಾಡುವಂತಾಯಿತು.  ಸಾರ್ವಜನಿಕರ ಗೋಳನ್ನು ಕೇಳುವವರಾರು?~
-ರಾಧಿಕಾ, ಪಿಯು ವಿದ್ಯಾರ್ಥಿನಿ

`ಬೌದ್ಧಿಕ ದಿವಾಳಿತನ~
`ಕಾನೂನು ಉಲ್ಲಂಘಿಸಿದ ವಕೀಲರೊಬ್ಬರ ಪರವಾಗಿ ಇಡೀ ವಕೀಲ ವೃಂದ ಹೋರಾಟಕ್ಕಿಳಿದಿರುವುದು ಶೋಚನೀಯ. ಕರ್ತವ್ಯನಿರತ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಬೆಂಬಲಿಸಿ ರ‌್ಯಾಲಿ ನಡೆಸಿರುವುದು ವಕೀಲರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ದುಂಡಾವರ್ತನೆ ಪ್ರದರ್ಶಿಸುವ ವಕೀಲರ ವಿರುದ್ಧ ನ್ಯಾಯಮೂರ್ತಿಗಳು ಗಮನ ಹರಿಸಬೇಕು. ಇಲ್ಲದಿದ್ದಲ್ಲಿ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಜನತೆ ನಂಬಿಕೆ ಕಳೆದಕೊಳ್ಳಲಿದ್ದಾರೆ~.
-ಪರಮಶಿವಯ್ಯ, ಉಪನ್ಯಾಸಕರು

ಕಿಡಿಗೇಡಿ ವರ್ತನೆ ನಿಯಂತ್ರಿಸಿ
ಮೊನ್ನೆಯಷ್ಟೆ ವಕೀಲರು ಕಿಡಿಗೇಡಿಗಳಂತೆ ಪ್ರತಿಭಟನೆ ನಡೆಸಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಗುರಿಯಾಗಿದ್ದರು. ಜಟ್ಟಿ ಬಿದ್ದರು ಮೀಸೆ ಮಣ್ಣಾಗಲಿಲ್ಲ ಎಂಬ ಮಾತು ಪಾಲಿಸುವಂತೆ ಮತ್ತೆ ನಗರದಲ್ಲಿ ಪ್ರತಿಭಟನೆ ನಡೆಸಿರುವುದು ವಕೀಲಿ ವೃತ್ತಿಗೆ ಶೋಭೆ ತರುವಂತದ್ದಲ್ಲ.
- ಸೀಮಾ, ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT