ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರು-ಇಲಾಖೆ ನಡುವೆ ಸಮನ್ವಯತೆ ಕೊರತೆ: ಸಚಿವ

Last Updated 17 ಡಿಸೆಂಬರ್ 2012, 9:21 IST
ಅಕ್ಷರ ಗಾತ್ರ

ತುಮಕೂರು: ಸರ್ಕಾರದ ಇಲಾಖೆಗಳು ಮತ್ತು ಸರ್ಕಾರಿ ವಕೀಲರ ನಡುವೆ ಸಮನ್ವಯದ ಕೊರತೆಯಿಂದ ಸರ್ಕಾರದ ಅತಿ ಹೆಚ್ಚು ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ಇದರಿಂದ ಜನರಿಗೆ ಪರಿಣಾಮಕಾರಿ ನ್ಯಾಯ ದೊರೆಯುತ್ತಿಲ್ಲ ಎಂದು ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಅಭಿಪ್ರಾಯಪಟ್ಟರು.

ಕಾನೂನು ಮತ್ತು ಮಾನವ ಹಕ್ಕುಗಳ ಇಲಾಖೆ ಮತ್ತು ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಾದೇಶಿಕ ಪ್ರಗತಿ ಪರಿಶೀಲನೆ ಮತ್ತು ಪ್ರಕರಣಗಳ ಪರಿಣಾಮಕಾರಿ ವಿಲೇವಾರಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ವಕೀಲರೊಂದಿಗೆ ಸಮನ್ವಯ ಸಾಧಿಸಲು ಅನುಕೂಲವಾಗುವಂತೆ ಪ್ರತಿ ಇಲಾಖೆಗೆ ನೋಡೆಲ್ ಅಧಿಕಾರಿಯನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಸರ್ಕಾರದ 49 ಸಾವಿರ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ. ನ್ಯಾಯಾಲಯದಲ್ಲಿರುವ ಪ್ರಕರಣಗಳ ಶೇ 30ರಷ್ಟು ಸರ್ಕಾರದ್ದಾಗಿದೆ. ಈ ಪ್ರಕರಣಗಳ ಶೀಘ್ರ ಮತ್ತು ಪರಿಣಾಮಕಾರಿ ವಿಲೇವಾರಿಗೆ ಕ್ರಮಕೈಗೊಳ್ಳಬೇಕಾಗಿದೆ.

ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು, ಅಂದರೆ 3037 ಪ್ರಕರಣ ಬಾಕಿ ಇದ್ದು, ಬೆಂಗಳೂರು ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿದೆ. ಬೆಂಗಳೂರು ಗ್ರಾಮಾಂತರ 1971, ಬೆಂಗಳೂರು 1085, ದಾವಣಗೆರೆ 856, ರಾಮನಗರ 811, ಶಿವಮೊಗ್ಗ 765, ಕೋಲಾರ 522, ಚಿತ್ರದುರ್ಗ 356, ಚಿಕ್ಕಬಳ್ಳಾಪುರದಲ್ಲಿ 231 ಪ್ರಕರಣ ಬಾಕಿ ಉಳಿದಿವೆ ಎಂದು ಹೇಳಿದರು.

ರಾಜಕಾರಣ ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ವಿಶ್ವಾಸರ್ಹತೆ ಕೊರತೆ ಹೆಚ್ಚುತ್ತಿದೆ. ನ್ಯಾಯವನ್ನು ಸರಳ, ಶೀಘ್ರ ಮತ್ತು ಪರಿಣಾಮಕಾರಿಯಾಗಿ ನೀಡುವ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸಬೇಕಾಗಿದೆ. ಈ ಕೆಲಸ ಸರ್ಕಾರಿ ವಕೀಲರಿಂದ ಆಗಬೇಕು. ಕೇಸು ಗೆಲ್ಲುವುದೇ ಮುಖ್ಯವಾಗಬಾರದು. ನ್ಯಾಯ ಸಿಗುವಂತೆ ಮಾಡುವುದು ಮುಖ್ಯ. ಈ ದೃಷ್ಟಿಯಿಂದ ರಾಜ್ಯದ ಎಲ್ಲ ವಿಭಾಗಗಳಲ್ಲಿ ಕಾರ್ಯಾಗಾರ ನಡೆಸಲಾಗುತ್ತಿದೆ. ಇದು ಸರ್ಕಾರಿ ಇಲಾಖೆ ಮತ್ತು ವಕೀಲರ ಆತ್ಮಾವಲೋಕನ ಸಭೆ ಸಹ ಹೌದು ಎಂದು ಅವರು ಅಭಿಪ್ರಾಯಪಟ್ಟರು.

ಸರ್ಕಾರಿ ವಕೀಲರ ಗೌರವಧನವನ್ನು ಈಗಾಗಲೇ ಹೆಚ್ಚಳ ಮಾಡಲಾಗಿದೆ. ಅಲ್ಲದೆ ಸಮಸ್ಯೆಗಳ ನಿವಾರಣೆ ಬಗ್ಗೆ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದ ಸಮಿತಿ ವರದಿ ನೀಡಿದ ನಂತರ ಕ್ರಮಕೈಗೊಳ್ಳಲಾಗುವುದು. ಸಮರ್ಪಕವಾಗಿ ಪಟ್ಟಿ ನೀಡದ ಜಿಲ್ಲೆಗಳಲ್ಲಿ ಶಿಷ್ಯ ವೇತನ ಬಿಡುಗಡೆಯಲ್ಲಿ ಸಮಸ್ಯೆ ಆಗಿದೆ. ಜಿಲ್ಲೆಯಲ್ಲಿ ಶಿಷ್ಯ ವೇತನ ಬಾರದಿದ್ದಲ್ಲಿ, ಅಂತಹ ವಕೀಲರ ಪಟ್ಟಿಯನ್ನು ಕಳುಹಿಸಿಕೊಟ್ಟರೆ ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು  ಭರವಸೆ ನೀಡಿದರು.

ಕಾನೂನು, ನ್ಯಾಯ, ಮಾನವಹಕ್ಕು ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ಎನ್.ಫಣೀಂದ್ರ ಮಾತನಾಡಿ, ಸಂವಿಧಾನದ ಆಶೋತ್ತರಗಳನ್ನು ಈಡೇರಿಸುವ ಜವಾಬ್ದಾರಿ ನ್ಯಾಯಾಂಗದ ಮೇಲಿದೆ. ಶೀಘ್ರ ಮತ್ತು ಪರಿಣಾಮಕಾರಿ ನ್ಯಾಯ ನೀಡುವುದು ವಕೀಲರ ಕರ್ತವ್ಯ. ಸಾಕಷ್ಟು ಪ್ರಕರಣಗಳಲ್ಲಿ ವಿಳಂಬವಾಗಲು ವಕೀಲರು ಕಾರಣರಾಗುತ್ತಿದ್ದಾರೆ. ವಕೀಲರ ನಡವಳಿಕೆಯನ್ನು ನ್ಯಾಯಾಲಗಳು ಗಮನಿಸುತ್ತವೆ. ಹೀಗಾಗಿ ವಕೀಲರು ಉತ್ತಮ ನಡವಳಿಕೆ ಪ್ರದರ್ಶಿಸಬೇಕು. ಇಲ್ಲದಿದ್ದಲ್ಲಿ ಇದು ಕಕ್ಷಿದಾರರ ವಿರುದ್ಧ ದುಷ್ಪಾರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ 10 ಕೌಟುಂಬಿಕ ನ್ಯಾಯಾಲಯ ಸೇರಿದಂತೆ ನೂತನ 125 ನ್ಯಾಯಾಲಯಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. 5 ವರ್ಷದಲ್ಲಿ ನ್ಯಾಯಾಲಯಗಳ ಸಂಖ್ಯೆ ದ್ವಿಗುಣವಾಗಲಿದೆ. ಅಲ್ಲದೆ ನ್ಯಾಯಾಂಗ ಇಲಾಖೆಗೆ ಮೂಲಸೌಲಭ್ಯ ಕಲ್ಪಿಸುವ ಕೆಲಸ ಸಹ ನಡೆಯತ್ತಿದೆ ಎಂದು ಅವರು ತಿಳಿಸಿದರು

ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೆ.ಎಂ.ನಟರಾಜ್ ಮಾತನಾಡಿ, ದೇಶದಲ್ಲಿಯೇ ನ್ಯಾಯಾಂಗ ಸೌಲಭ್ಯಗಳ ವಿಚಾರದಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಕಳೆದ 4 ವರ್ಷದಲ್ಲಿ ಸಾಕಷ್ಟು ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಹೇಳಿದರು.

ಕಾನೂನು ಇಲಾಖೆ ವಿಶೇಷ ಕಾರ್ಯದರ್ಶಿ ಕೆ.ಜಿ.ವಿ.ಮೂರ್ತಿ, ಹೆಚ್ಚುವರಿ ಕಾರ್ಯದರ್ಶಿ ಎಂ.ಶ್ರೀದೇವಿ, ವಕೀಲ ವಿ.ವೀರಪ್ಪ, ಜಿಲ್ಲಾಧಿಕಾರಿ ಆರ್.ಕೆ.ರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT