ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕ್ಫ್: ಅಧಿಕಾರಿಗೆ ಬುಲಾವ್

Last Updated 15 ಜೂನ್ 2011, 19:10 IST
ಅಕ್ಷರ ಗಾತ್ರ

ಬೆಂಗಳೂರು:  ರಾಜ್ಯ ವಕ್ಫ್  ಆಡಳಿತ ಮಂಡಳಿಯ ಅಧಿಕಾರ ಮುಗಿದು 18 ತಿಂಗಳು ಕಳೆದಿದ್ದರೂ ಚುನಾವಣೆ ನಡೆಸದ ಔಚಿತ್ಯವನ್ನು ಪ್ರಶ್ನಿಸಬಯಸಿರುವ ಹೈಕೋರ್ಟ್, ಈ ಸಂಬಂಧ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಖುದ್ದು ಹಾಜರಿಗೆ ಬುಧವಾರ ಆದೇಶಿಸಿದೆ.

`ಇಷ್ಟು ದೀರ್ಘ ಅವಧಿಯವರೆಗೆ ಆಡಳಿತಾಧಿಕಾರಿಯನ್ನು ಮುಂದುವರಿಸಿರುವ ಕುರಿತು ನಾವು ಮಾಹಿತಿ ಬಯಸಿದ್ದೇವೆ. ಇದರಿಂದ ಗುರುವಾರವೇ ಪ್ರಧಾನ ಕಾರ್ಯದರ್ಶಿಗಳು ಹಾಜರು ಇರಬೇಕು. ವಿವಾದಕ್ಕೆ ಸಂಬಂಧಿಸಿದ ಎಲ್ಲ ಮೂಲ ದಾಖಲೆಗಳನ್ನು ಅವರು ತರಬೇಕು~ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎಚ್. ಜಿ.ರಮೇಶ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.
 
2010ರ ಜನವರಿ 16ಕ್ಕೆ ಆಡಳಿತ ಮಂಡಳಿಯ ಅಧಿಕಾರ ಮುಗಿದಿದ್ದು, ಆಡಳಿತಾಧಿಕಾರಿಯನ್ನು ನೇಮಕ ಮಾಡಿರುವುದನ್ನು ಹಾಗೂ ಅವರ ಅವಧಿಯನ್ನು ವಿಸ್ತರಣೆ ಮಾಡುತ್ತ ಬಂದಿರುವ ಸರ್ಕಾರದ ಕ್ರಮ ಪ್ರಶ್ನಿಸಿ `ಕರ್ನಾಟಕ ವಕ್ಫ್  ಸಂರಕ್ಷಣೆ ಜಂಟಿ ಕ್ರಿಯಾ ಸಮಿತಿ~ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ಚುನಾವಣೆ ನಡೆಸಲು ಆರು ತಿಂಗಳ ಕಾಲಾವಕಾಶವನ್ನು ಸರ್ಕಾರ ಕೋರಿತು. ಇದನ್ನು ಒಪ್ಪದ ಪೀಠ ಮೇಲಿನಂತೆ ನಿರ್ದೇಶಿಸಿದೆ.

ಡಿಜಿಪಿ ಪ್ರಕರಣ ಮುಂದೂಡಿಕೆ
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಸಂಬಂಧಿಸಿದಂತೆ ಕೇಂದ್ರ ಆಡಳಿತ ನ್ಯಾಯಮಂಡಳಿಯ (ಸಿಎಟಿ) ರಾಜ್ಯ ಘಟಕದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ.

ಆಯೋಗ ಕಳುಹಿಸಿಕೊಟ್ಟಿರುವ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕೈಬಿಡಲಾಗಿದೆ ಎಂದು ದೂರಿ ಡಿಜಿಪಿ ಡಾ. ಎಸ್. ಟಿ.ರಮೇಶ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸಿಎಟಿಯ ಉಪಾಧ್ಯಕ್ಷ ಎನ್.ಡಿ.ರಾಘವನ್ ನೇತೃತ್ವದ ಪೀಠ ವಿಚಾರಣೆಯನ್ನು ನಡೆಸುತ್ತಿದೆ. ಅಂತೆಯೇ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ವಕೀಲ ಸಿರಾಜಿನ್ ಬಾಷಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು   ಹೈಕೋರ್ಟ್ ಗುರುವಾರಕ್ಕೆ ಮುಂದೂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT