ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕ್ಫ್ ಆಸ್ತಿ ಅತಿಕ್ರಮಣ ತೆರವು ಕ್ರಮ

Last Updated 24 ಜನವರಿ 2012, 5:45 IST
ಅಕ್ಷರ ಗಾತ್ರ

ಬೀದರ್: ಬೀದರ್ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಅತಿಕ್ರಮಣ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಆರ್. ಅಬ್ದುಲ್ ರಿಯಾಜ್ ತಿಳಿಸಿದರು.

ಬೀದರ್‌ನಲ್ಲಿ ಶೇ. 40 ರಷ್ಟು ವಕ್ಫ್ ಆಸ್ತಿ ಕಬಳಿಕೆ ಆಗಿರುವ ವರದಿ ಇದೆ. ಈ ಕುರಿತು ಸರ್ವೇ ನಡೆಸಲಾಗುತ್ತಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ವಕ್ಫ್ ಆಸ್ತಿ ಅತಿಕ್ರಮಣ ಮಾಡಿದವರಿಗೆ ಮೊದಲು ನೋಟಿಸ್ ನೀಡಲಾಗುತ್ತದೆ. ಅನಂತರ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಒಮ್ಮೆ ವಕ್ಫ್ ಆಸ್ತಿ ಎಂದು ಘೋಷಣೆ ಆದ ನಂತರ ಅದು ಕೊನೆಯವರೆಗೆ ವಕ್ಫ್ ಸ್ವತ್ತಾಗಿಯೇ ಉಳಿಯುತ್ತದೆ. ಹೀಗಾಗಿ ಖರೀದಿ, ಮಾರಾಟ ಅಥವಾ ಯಾವುದೇ ಸಂಸ್ಥೆಗೆ ನೀಡಲು ಬರುವುದಿಲ್ಲ. ಒಂದು ವೇಳೆ ಹಾಗೆ ಮಾಡಿದ್ದಲ್ಲಿ ಅದು ಕಾನೂನು ಉಲ್ಲಂಘನೆ ಆಗುತ್ತದೆ ಎಂದರು.

ಯಾವುದೇ ವ್ಯಕ್ತಿ ವಕ್ಫ್ ಆಸ್ತಿ ಅತಿಕ್ರಮಣ ಮಾಡಿರುವುದು ಸಾಬೀತಾದರೆ ಒಂದು ವರ್ಷದಿಂದ ಮೂರು ವರ್ಷದವರೆಗೆ ಜೈಲು ಶಿಕ್ಷೆಗೆ ಗುರಿಪಡಿಸಬಹುದಾಗಿದೆ ಎಂದು ತಿಳಿಸಿದರು.
ಬೀದರ್‌ನಲ್ಲಿ ವಕ್ಫ್ ಆಸ್ತಿ ಕಬಳಿಕೆ ಆಗಿರುವ ಬಗ್ಗೆ ಅನೇಕ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಬೆಂಗಳೂರನ್ನು ಹೊರತುಪಡಿಸಿ ಇದೇ ಮೊದಲ ಬಾರಿಗೆ ಬೀದರ್‌ನಲ್ಲಿ ವಕ್ಫ್ ಮಂಡಳಿ ಸಭೆ ನಡೆಸಲಾಗಿದೆ. ರಾಜ್ಯಸಭಾ ಉಪಸಭಾಪತಿ, ಕೆ. ರೆಹಮಾನ್‌ಖಾನ್, ಶಾಸಕ ಖಮರುಲ್ ಇಸ್ಲಾಂ, ವಕ್ಫ್ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳು ಇದರಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ಸಭೆಯಲ್ಲಿ ವಕ್ಫ್ ಆಸ್ತಿ ಅತಿಕ್ರಮಣ ಕುರಿತು ಚರ್ಚೆ ನಡೆಸಲಾಗಿದೆ. ಖಾಲಿ ಇರುವ ವಕ್ಫ್ ಮಂಡಳಿಯ ಜಾಗಕ್ಕೆ ಸುತ್ತುಗೋಡೆ ನಿರ್ಮಿಸಿ, ತಂತಿ ಬೇಲಿ ಅಳವಡಿಸಿ ರಕ್ಷಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸುತ್ತುಗೋಡೆ ನಿರ್ಮಾಣಕ್ಕಾಗಿ ತಮ್ಮ ಅನುದಾನದಿಂದ 10 ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಕೆ. ರೆಹಮಾನ್‌ಖಾನ್ ಭರವಸೆ ನೀಡಿದ್ದಾರೆ. ಅದೇ ರೀತಿ ಸಂಸದ ಎನ್. ಧರ್ಮಸಿಂಗ್, ಶಾಸಕ ರಹೀಮ್‌ಖಾನ್, ವಿಧಾನ ಪರಿಷತ್ ಸದಸ್ಯ ಕಾಜಿ ಅರ್ಷದ್ ಅಲಿ ಅವರಿಗೂ ಅನುದಾನಕ್ಕಾಗಿ ಒದಗಿಸುವಂತೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.

ವಕ್ಫ್ ಮಂಡಳಿ ತನ್ನ ಆಸ್ತಿಯನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಇದನ್ನು ಪುನರ್ ರಚನೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ನೀಡಿರುವ ಹೇಳಿಕೆ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ಮಂಡಳಿ ಮೇಲೆ ಕ್ರಮ ಜರುಗಿಸುವ ಯಾವುದೇ ಅಧಿಕಾರ ಮಾಣಿಪ್ಪಾಡಿ ಅವರಿಗಿಲ್ಲ. ಅವರು ಕೇವಲ ಸರ್ಕಾರಕ್ಕೆ ಸಲಹೆ, ವರದಿ ಸಲ್ಲಿಸಬಹುದು ಎಂದು ಹೇಳಿದರು.

ವಕ್ಫ್ ಆಸ್ತಿ ಕಬಳಿಕೆಯಲ್ಲಿ ಮಂಡಳಿ ಸದಸ್ಯರು ಶಾಮೀಲಾಗಿರುವುದು ಸಾಬೀತಾದರೆ ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಮಾಣಿಪ್ಪಾಡಿ ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ಶಾಸಕ ಖಮರುಲ್ ಇಸ್ಲಾಂ ವ್ಯಂಗ್ಯವಾಡಿದರು. ಒಂದು ವೇಳೆ ತಾವು ವಕ್ಫ್ ಆಸ್ತಿ ಅತಿಕ್ರಮಣ ಮಾಡಿರುವುದ ದೃಢಪಟ್ಟರೆ ತಕ್ಷಣ ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದಾಗಿ ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ರಹೀಮ್‌ಖಾನ್ ಉಪಸ್ಥಿತರಿದ್ದರು.

ವಕ್ಫ್ ಆಸ್ತಿ ಅತಿಕ್ರಮಣ ತೆರವು ಕ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT