ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಅಧ್ಯಯನದ ಪ್ರದಕ್ಷಿಣೆಕಾರರು

Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕನ್ನಡದಲ್ಲಿ ಈ ತನಕ ಇನ್ನೂರು ವರ್ಷಗಳಲ್ಲಿ ನಡೆದಿರುವ ವಚನ ಸಂಬಂಧಿತ ತಿಳಿವಳಿಕೆಯನ್ನು ಒಂದು ಹಂತದಲ್ಲಿ ಪ್ರಶ್ನಿಸುವ ಕೆಲಸವನ್ನು ಡಂಕಿನ್ ಝಳಕಿ ಅವರ ಮೂಲ ಥೀಸಿಸ್ (ಪಿ.ಎಚ್.ಡಿ. ಪ್ರಬಂಧ) ಮಾಡುತ್ತದೆ. ಅದಕ್ಕೆ ಅವರು ಅವರ ಪ್ರಕಾರ ಕೆಲವು ಪ್ರಮುಖ ವಚನ ವಿದ್ವಾಂಸರನ್ನು ಮಾದರಿಗಾಗಿ ತೆಗೆದುಕೊಂಡಿದ್ದಾರೆ.: ಡಾ.ಎಂ.ಎಂ. ಕಲಬುರ್ಗಿ, ಡಾ. ಚಿದಾನಂದಮೂರ್ತಿ, ಡಾ.ಡಿ.ಆರ್. ನಾಗರಾಜ್, ಡಾ.ಎಚ್. ತಿಪ್ಪೇರುದ್ರಸ್ವಾಮಿ. ಅಲ್ಲಲ್ಲಿ ಪ್ರೊ.ಕೆ.ಜಿ. ನಾಗರಾಜಪ್ಪ, ಒಂದು ಕಡೆ ಶಂಕರಮೊಕಾಶಿ ಪುಣೇಕರ ಅವರನ್ನು ಉಲ್ಲೇಖಿಸುತ್ತಾರೆ.

ವಚನ ಸಾಹಿತ್ಯದ ಬಗ್ಗೆ ಅಪಾರ ಒಳನೋಟವಿರುವ ಬರಹಗಳನ್ನು ಬರೆದಿರುವ ಜ.ಚ.ನಿ. ಸಿದ್ದೇಶ್ವರಸ್ವಾಮಿಗಳಾಗಲಿ, ಕಪಟರಾಳ ಕೃಷ್ಣರಾವ್, ಎಂ.ಆರ್. ಶ್ರಿನಿವಾಸಮೂರ್ತಿಯವರಾಗಲಿ, ಈ ಬರಹದುದ್ದಕ್ಕೂ ಎಲ್ಲೂ ಕಾಣಿಸುವುದಿಲ್ಲ. ಕಿ.ರಂ. ನಾಗರಾಜರೂ ಇಲ್ಲಿ ಗೈರುಹಾಜರಿ. (ಅವರ ಮೌಖಿಕ ಕ್ಯಾಸೆಟ್‌ಗಳು ಹಲವೆಡೆ ಆಸಕ್ತರ ಬಳಿ ಇದೆ).

ಕನ್ನಡ ವಚನ ಪರಂಪರೆ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ತಳೆದ ವಿವಿಧ ಬದಲಾವಣೆಗಳನ್ನು, ಆಗಮ-ತಂತ್ರಗಳು ವಚನ ಸಾಹಿತ್ಯದೊಳಗೆ ನಿಹಿತವಾಗಿರುವುದನ್ನೂ ಅಖಿಲ ಭಾರತೀಯ ಮಟ್ಟದಲ್ಲಿ ಗೋಪಿನಾಥ ಕವಿರಾಜ ತೋರಿಸಿಕೊಟ್ಟಿದ್ದಾರೆ. (ಭಾರತೀಯ ಸಂಸ್ಕೃತಿ ಔರ್ ಸಾಧನಾ ). ವಚನಗಳ ತಾಂತ್ರಿಕ ಪರಿ ತೀಕ್ಷ್ಣವನ್ನು ಕೆ.ಜಿ. ನಾಗರಾಜಪ್ಪ ತೋರಿಸಿದ್ದಾರೆ (ಅಲ್ಲಮನ ವಚನಗಳ ಬಗ್ಗೆ).

ವಚನ ಸಂಪ್ರದಾಯವಾಗಿ ಕನ್ನಡ ನಾಡಿನ ಜನರ ಆತ್ಮವಾಯಿತು. ಶೂನ್ಯ ಸಂಪಾದನೆಗಳು ಸಂಕಲನಗೊಂಡವು. ಸ್ವರ ವಚನ ಸಾಹಿತ್ಯ, ಉದ್ಧರಣೆ ಸಾಹಿತ್ಯ, ಬಂದಿತು. ಕನ್ನಡದಲ್ಲಿ ತತ್ತ್ವಪದಕಾರರು ಕಾಣಿಸಿಕೊಳ್ಳುವ ಸುಮಾರಿಗೆ ಡಂಕಿನ್ ಹೇಳುವ ಪ್ರಾಟೆಸ್ಟೆಂಟ್ ಮನೋಭಾವದ ಸಂಶೋಧನೆ, ದೃಷ್ಟಿಕೋನ ಈ ಮಣ್ಣಿಗೆ ಪರಿಚಿತವಾದದ್ದು. ಹನ್ನೆರಡರಿಂದ ಹದಿನೇಳನೇ ಶತಮಾನದಲ್ಲೇ ವಚನಗಳಲ್ಲಿ ಉಂಟಾದ ಆಂತರಿಕ ಬದಲಾವಣೆ ಡಂಕಿನ್ ಅವರು ಗಮನಿಸಿಯೇ ಇಲ್ಲ.

ಡಾ. ಬಾಲಗಂಗಾಧರ ಮತ್ತು ಡಾ. ಡಂಕಿನ್ ಅವರ ಸಂಶೋಧನೆಯ ದೊಡ್ಡ ಸಮಸ್ಯೆಯೆಂದರೆ ತಾವು ಹಿಡಿದಿರುವ ವೈಧಾನಿಕತೆಯ ಪರಮ ಪ್ರಾಮಾಣ್ಯವನ್ನು ಮಾತ್ರ ನೋಡುವುದು. ಹಳೆಯ ಸಂಸ್ಕೃತ-ತರ್ಕ ಪಾಂಡಿತ್ಯದವರ ದಾರಿ ಇದಾಗಿತ್ತು. ಈಗ ಕನ್ನಡವಿರಲಿ, ಉಳಿದ ಸ್ಥಳೀಯ ಭಾಷೆಗಳಿರಲಿ (ಅವರದ್ದು ಸ್ಥಳೀಯ ಸಂಸ್ಕೃತಿಗಳ ಸಂಶೋಧನಾ ಕೇಂದ್ರವಾದ್ದರಿಂದ ಈ ಮಾತು ಹೇಳುತ್ತೇನೆ) ಕೇವಲ ನಿಗಮನ ಅನುಗಮನ ತರ್ಕವನ್ನಾಗಲಿ, ನಾಲ್ಕು-ಐದು ಪ್ರಮಾಣಗಳ ತರ್ಕವನ್ನಾಗಲಿ ಇಟ್ಟುಕೊಂಡು ಬದುಕುತ್ತಿಲ್ಲ. ಲೋಕತರ್ಕ, ನಿಸರ್ಗತರ್ಕವನ್ನೂ ಅವು ಒಳಗೊಂಡಿವೆ. (ಅವುಗಳ ವಿವರಣೆ ಅಗತ್ಯವಿದ್ದರೆ ನೀಡಲು ಸಿದ್ಧ).

ಇದುವರೆಗೂ ಕನ್ನಡದಲ್ಲಿ ವಚನ ಸಂಶೋಧನೆ `ಸರಿಯಾಗಿ'  ನಡೆದಿಲ್ಲ ಎಂದು ಹೇಳುವ ಇವರಿಗೆ ಕರ್ನಾಟಕ ಸರ್ಕಾರ ಸಮಗ್ರ ವಚನಗಳ 15 ಸಂಪುಟ ಪ್ರಕಟಿಸಿದೆ ಎಂದು ತಿಳಿಯದೆ  `14'  ಎಂದು ಹೇಳುತ್ತಾರೆ.  `15' ನೆಯದು ವಚನ ಪರಿಭಾಷಾಕೋಶ. ಅದರ ಬಳಕೆ ಡಂಕಿನ್ ಬರವಣಿಗೆಯಲ್ಲಿ ಆದಂತಿಲ್ಲ. ಇದೊಂದು ಮುಖ್ಯ ದೋಷ.

ಸ್ಟಾನ್ಲಿವುಲ್ ಡರ್ಟ್ ಮುಂತಾದವರು ಹಿಂದೆಯೇ ವೀರಶೈವದ `ವೀರ' ಆಯಾಮವನ್ನು ತಮ್ಮ  `ಗಾಡ್ ಮೆನ್ ಆನ್ ವಾರ್ ಪಾತ್' ಕೃತಿಯಲ್ಲಿ ತೋರಿಸಿದ್ದಾರೆ. ಆದರೆ ಕನ್ನಡದ ಭಾಷೆಯ ಸೊಬಗು, ಇಲ್ಲಿಯ ಆಧ್ಯಾತ್ಮಿಕತೆ - ಸಾಮಾಜಿಕತೆ ಬೆರೆತ ಬನಿ ಪಾಶ್ಚಾತ್ಯರಿಗೆ ತಿಳಿಯದಿರುವುದು ಸಹಜ. ಆದರೆ ಉಪನಿಷತ್ ಋಷಿಗಳು, ಶಂಕರ, ಅಭಿನವಗುಪ್ತರಂತೆ ಸಂಪೂರ್ಣ ಲೋಕವಿಮುಖರಾಗದ ಅವಲೋಕಿತೇಶ್ವರರ, ಅವಧೂತರ ದಾರಿ ಕನ್ನಡದಲ್ಲೂ ಇದೆ.

ಅವರೇ ನಮ್ಮ ವಚನಕಾರರು. ವಚನಕಾರರನ್ನು ಇಂದಿನ ಬೀದಿ ಚಳವಳಿಗಾರರ ಮಟ್ಟಕ್ಕೆ ಇಳಿಸಬಾರದು ಎಂಬ ಡಂಕಿನ್ ಕಾಳಜಿ ಅರ್ಥವಾಗುತ್ತದೆ. ಆದರೆ ವಚನಕಾರರು ಕಾಡು, ಗುಹೆ ಸೇರಿ ಏಕಾಂತದಲ್ಲಿದ್ದವರಲ್ಲ, ಬದಲಿಗೆ ಈ ಲೋಕದಲ್ಲೇ ಇದ್ದವರು, ತಂತ್ರದ ಭುಕ್ತಿ-ಮುಕ್ತಿ ಸಿದ್ಧಾಂತ ಒಪ್ಪಿದವರು ಎಂಬುದು ಅಷ್ಟೇ ಮುಖ್ಯ. ಫೇಸ್‌ಬುಕ್ಕಿನ ಒಂದು ಕಮೆಂಟ್‌ನಲ್ಲಿ ಡಂಕಿನ್ ಅವರು ಶಂಕರರು ಹೇಳಿದ್ದಕ್ಕಿಂತ ವಚನಕಾರರು ಬೇರೆ ಏನನ್ನು ಹೊಸದಾಗಿ ಹೇಳಿದ್ದಾರೆ ಎಂದು ಐದು ವರ್ಷ ಪಿಎಚ್‌ಡಿ ಮಾಡಿದ ನಂತರ ಪ್ರಶ್ನಿಸಿದರೆ ಏನು ಮಾಡುವುದು? ಅವರೇ ಉತ್ತರಿಸಲಿ.

ಎಲ್ಲಕ್ಕಿಂತ ಮುಖ್ಯ ಪ್ರಶ್ನೆ ಇರುವುದು, ಈ ಸಂಶೋಧಕರ ಧೋರಣೆಯ ಬಗ್ಗೆ. ವಸಾಹತುಶಾಹಿ ಅಥವಾ ಪ್ರಾಟೆಸ್ಟೆಂಟ್ ಪ್ರಭಾವಕ್ಕೆ ಇಡೀ ಸಮಾಜವೇ ಕಣ್ಮುಚ್ಚಿಕೊಂಡು ಒಳಗಾಗಿ ಬಿಟ್ಟಿತು. ಹಾಗಾಗಿಯೇ ವೇದ ವಿರೋಧಿ, ಜಾತಿ ಪದ್ಧತಿ  ಧೋರಣೆಯನ್ನು ಬೆಳೆಸಿಕೊಂಡಿತು ಎಂಬುದು ಅತಿರೇಕದ ವಾದ. ಹಾಗಾದರೆ ವೀರಶೈವರಲ್ಲೇ ಯಾರೂ ಈ ಬಾಹ್ಯ ಪ್ರಭಾವಕ್ಕೆ ಒಳಗಾಗದೇ ಉಳಿಯಲಿಲ್ಲವೇ? ಅಥವಾ ಎಲ್ಲಾ ವಚನ ವಿದ್ವಾಂಸರೂ ಪ್ರಾಟೆಸ್ಟೆಂಟರು `ತೋರಿಸಿಕೊಟ್ಟ'  ಜಾತಿ `ಪದ್ಧತಿ'  ಯನ್ನೇ ನಂಬಿಬಿಟ್ಟರೆ? ಜಾತಿಪದ್ಧತಿಯ ನಿರೂಪಣೆಯಲ್ಲಿ ಬಹುತ್ವವಿದೆ, ಹಲವು ಐಡಿಯಾಲಜಿಗಳಿವೆ, ಅದರಲ್ಲಿ ಡಂಕಿನ್ ಅವರದೂ ಒಂದು ಪ್ರಯತ್ನ ಮಾತ್ರ ಎಂದು ನೋಡಬೇಕೇ ಹೊರತು ಅದೇ ಅಂತಿವಲ್ಲ.

ಸದ್ಯಕ್ಕೆ ಬಾಲಗಂಗಾಧರ ಮತ್ತು ಡಂಕಿನ್ ಮಾಡಿರುವ ಪ್ರಯತ್ನದಲ್ಲಿ  `ಚೌಕಟ್ಟಿನ'  (ಫ್ರೇಂವರ್ಕ್) ವಿಜೃಂಭಣೆಯೇ ಅತಿಯಾಗಿದೆ. ಇವರು ವಚನ ಅಧ್ಯಯನದ ಪ್ರದಕ್ಷಿಣೆಕಾರರ ಈಗಿರುವ ದೊಡ್ಡ ಗುಂಪಿಗೆ ಹೊಸ ಸೇರ್ಪಡೆಯಾಗಬಲ್ಲರೇ ಹೊರತು ಗರ್ಭಗುಡಿಗೆ ಹೋಗುವ ಸಾಮರ್ಥ್ಯ ಡಂಕಿನ್ ಅವರು ಮಂಡಿಸಿ ಡಾಕ್ಟರೇಟ್ ಪಡೆದಿರುವ ಪಿಎಚ್‌ಡಿ. ಮಹಾಪ್ರಬಂಧಕ್ಕೆ ಇಲ್ಲ. ಇದೇ ಮಾತು ಎಚ್.ಎಸ್. ಶಿವಪ್ರಕಾಶ್ ಮೊದಲಿಗೆ ಚರ್ಚಿಸಿದ್ದ ಡಂಕಿನ್‌ರ ಲೇಖನಕ್ಕೂ ಸಲ್ಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT