ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ವಚನ-ಸಂಗೀತದ ಚಿಂತನೆ ಅವಶ್ಯಕ'

Last Updated 14 ಏಪ್ರಿಲ್ 2013, 19:44 IST
ಅಕ್ಷರ ಗಾತ್ರ

ಬೆಂಗಳೂರು: `ಪಂಚಾಕ್ಷರ ಗವಾಯಿ ಅವರು ನಾದ ಲೋಕಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ' ಎಂದು ಹಿರಿಯ ಸಂಗೀತ ತಜ್ಞ ಪ್ರೊ.ಮೈಸೂರು ವಿ.ಸುಬ್ರಹ್ಮಣ್ಯ ಸ್ಮರಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರದ ಶಿವರಾತ್ರೀಶ್ವರ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗಾನಯೋಗಿ ಪಂಚಾಕ್ಷರ ಗವಾಯಿ ಅವರ ಸ್ಮರಣೆಯ `ವಚನ ಸಂಗೀತೋತ್ಸವ'ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಗವಾಯಿ ಅವರು ಅಂಧರಾಗಿದ್ದರೂ ತಮ್ಮ ದಿವ್ಯ ಚಕ್ಷುಗಳಿಂದಲೇ ಎಲ್ಲವನ್ನೂ ಅರಿತವರಾಗಿದ್ದರು. ದಿವ್ಯವಾದ ನಾದಲೋಕವನ್ನೇ ಸೃಷ್ಟಿಸಿದ್ದರು. ಅವರು ಅನೇಕರಿಗೆ ದಾರಿ ದೀಪವಾದರು. ಅವರಿಗೆ ಯಾವ ವಾದ್ಯ ನುಡಿಸಲು ಬರುತ್ತದೆ ಎಂದು ಕೇಳಬೇಕಿತ್ತೆ ಹೊರತು ಯಾವುದು ಬರುವುದಿಲ್ಲ ಎಂದು ಕೇಳಬೇಕಿರಲಿಲ್ಲ' ಎಂದು ಅವರನ್ನು ಬಣ್ಣಿಸಿದರು.

`ಇಂದು ವಚನ ಮತ್ತು ಸಂಗೀತದ ಚಿಂತನೆ ನಡೆಯಬೇಕಿದೆ. ವಚನವು ಬರೀ ಪದ್ಯ ಅಥವಾ ಗದ್ಯನಾ ಎಂಬ ಪ್ರಶ್ನೆಗೆ ವಚನ ಎರಡೂ ಆಗಿದೆ. ವಚನವನ್ನು ವಾಚಿಸಬಹುದು ಅಥವಾ ಹಾಡಲೂಬಹುದು. ವಚನಗಳನ್ನು ಸಂಗ್ರಹ ಮಾಡಿ ಅವುಗಳ ಸಮಗ್ರ ಸಂಪುಟವನ್ನು ಬಿಡುಗಡೆ ಮಾಡಬೇಕು' ಎಂದು ಹೇಳಿದರು.
`ಹರಿಹರ ತನ್ನ `ಬಸವದೇವರಗಳೆ' ಯಲ್ಲಿ ವಚನಕಾರರು ಆಗಿನ ಕಾಲದಲ್ಲಿಯೇ ವಚನಗಳನ್ನು ಹಾಡುತ್ತಿದ್ದರು ಎಂದು ಉಲ್ಲೇಖಿಸಿದ್ದಾನೆ. ಅಂದರೆ, ವಚನಗಳನ್ನು ಬರೀ ವಾಚಿಸುವುದಷ್ಟೇ ಅಲ್ಲ ಹಾಡುತ್ತಿದ್ದರು ಎಂಬುದು ಇಲ್ಲಿ ಸಾಬೀತಾಗುತ್ತದೆ.

ಶಿವಶರಣರು ಭಕ್ತಿಗೆ ಪ್ರಾಧಾನ್ಯತೆ ನೀಡಿದ್ದರು. ಅವರು ಸಂಗೀತದ ವಿರೋಧಿಗಳಲ್ಲ. ಅವರು ವಚನವನ್ನು ಹಾಡುತ್ತಿದ್ದರು. ಆದರೆ, ಅವರು ಸಂಗೀತಕ್ಕಿಂತ ಭಕ್ತಿಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಿದ್ದರು' ಎಂದರು.`ಎಲ್ಲ ವಚನಗಳನ್ನು ಹಾಡಿನ ರೂಪದಲ್ಲಿ ಹೇಳಲು ಬರುವುದಿಲ್ಲ. ಅವುಗಳಲ್ಲಿ ಕೆಲವು ಕ್ಲಿಷ್ಟವಾಗಿವೆ. ಆದ್ದರಿಂದ, ವಚನಗಳನ್ನು ಹಾಡುವಾಗ ಆಯ್ಕೆ ಮುಖ್ಯವಾಗುತ್ತದೆ. ವಚನಗಳಿಗೆ ಹೊಂದುವಂತಹ ರಾಗ ಸಂಯೋಜಿಸಿ, ವಚನಗಳ ಭಾವಾರ್ಥವನ್ನು ಹಾಡುಗಾರ ಅರ್ಥೈಸಿಕೊಂಡು ಹಾಡಬೇಕು' ಎಂದು ಹೇಳಿದರು.

`ವಚನಗಳೂ ಸಂಗೀತದ ಅವಿಭಾಜ್ಯ ಅಂಗವಾಗಿವೆ. ಅವುಗಳನ್ನು ಸಂಗೀತದ ಜತೆ ಜತೆಗೆ ಸಾಗಿಸಿಕೊಂಡು ಹೋಗಬೇಕು. ಇಲ್ಲವಾದರೆ, ವಚನಗಳು ಜನಮಾನಸದಿಂದ ಮರೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ' ಎಂದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗೊ.ರು.ಚನ್ನಬಸಪ್ಪ ಮಾತನಾಡಿ, `ಸಂಗೀತವನ್ನು ಹಾಡಲು ಶಿಸ್ತು ಮತ್ತು ಕಟ್ಟು ನಿಟ್ಟಿನ ಕ್ರಮಗಳಿವೆ. ಆದರೆ, ಕೇಳುವುದಕ್ಕೆ ಯಾವುದೇ ಕಟ್ಟುಪಾಡುಗಳಿಲ್ಲ' ಎಂದು ಹೇಳಿದರು.
`ಕಲಾವಿದ ಪೂರ್ಣ ಲೀನನಾಗಿ ತನ್ನ ಸಂಗೀತದ ರಸದೌತಣವನ್ನು ಉಣಿಸಬೇಕು. ಸಮಾಜದಲ್ಲಿರುವ ಒತ್ತಡ ಮತ್ತು ಗೊಂದಲಗಳಿಗೆ ಸಂಗೀತವು ಔಷಧಿಯಾಗಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT