ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಾಹಿತ್ಯ ಕೊಡುಗೆ ಅಪಾರ: ತೋಂಟದ ಶ್ರೀ

Last Updated 10 ಜುಲೈ 2013, 9:24 IST
ಅಕ್ಷರ ಗಾತ್ರ

ಗದಗ: ಬಸವಾದಿ ಶರಣರು ನೀಡಿದ ವಚನ ಸಾಹಿತ್ಯ ಕೇವಲ ಕನ್ನಡ ಸಾಹಿತ್ಯ ರಂಗವಲ್ಲೇ ವಿಶ್ವ ಸಾಹಿತ್ಯಕ್ಕೆ ನೀಡಿದ ಅಮೋಘ ಕೊಡುಗೆಯಾಗಿದೆ ಎಂದು ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವದಲ್ಲಿ ಫ.ಗು.ಹಳಕಟ್ಟಿ ಅವರ ಜಯಂತಿ ನಿಮಿತ್ತ ಕಲ್ಯಾಣದಿಂದ ಕಡಲಾಚೆಗೂ ವಚನ ಸಾಹಿತ್ಯ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ  ಮಾತನಾಡಿದ ಅವರು, ಅಮೋಘವಾದ ವಚನ ಸಾಹಿತ್ಯ ಉಳಿದು ಬೆಳೆದು ಬರಲು ತಮ್ಮ ಜೀವನವನ್ನೇ ಮುಡಿಪಾಗಿಸಿದ ಫ.ಗು.ಹಳಕಟ್ಟಿ ಅವರ ವ್ಯಕ್ತಿತ್ವ ಸಾಧನೆ ಸದಾ ಸ್ಮರಣೀಯ. 12 ನೇ ಶತಮಾನದಲ್ಲಿ ಶರಣರು ಬರೆದ ವಚನಗಳು ಕೇವಲ ಮಾತಾಗಿರದೆ ತಾವು ಜೀವನದಲ್ಲಿ ಅಳವಡಿಸಿಕೊಂಡು ಬಂದ ತತ್ವಗಳು ನೀತಿಗಳ ಆಧರಿತವಾಗಿದ್ದವು. ನಡೆ, ನುಡಿ ಒಂದಾದ ಪರಿಯೇ ವಚನಗಳಾಗಿದ್ದರಿಂದ ಅವುಗಳು ಹೆಚ್ಚು ಸಶಕ್ತವಾಗಿವೆ. ಅಲ್ಲದೆ ಕನ್ನಡ ಭಾಷೆಯನ್ನು ಜನಸಾಮಾನ್ಯರ ಭಾಷೆಯಿಂದ ದೇವಭಾಷೆಯನ್ನಾಗಿಸಿದ ಕೀರ್ತಿ ಕೂಡ ಬಸವಾದಿ  ಶರಣರದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಫ.ಗು. ಹಳಕಟ್ಟಿ ಜೀವನದಲ್ಲಿ ಏನೆಲ್ಲ ಕಷ್ಟ, ನಷ್ಟ ಎದುರಾದರೂ ಹಣ, ಕೀರ್ತಿ, ಆಮಿಷಗಳಿಗೆ ಬಲಿಯಾಗಲಿಲ್ಲ. ಇದರಿಂದಾಗಿ ಪ್ರಾಮಾಣಿಕ, ನಿಸ್ವಾರ್ಥ ಸಮಾಜ ಸೇವೆಗೆ ಫ.ಗು.ಹಳಕಟ್ಟಿ ಜೀವಂತ ನಿದರ್ಶನವಾಗಿದೆ. ಫ.ಗು. ಹಳಕಟ್ಟಿ ಅವರು ಬಯಸಿದ್ದರೆ ವಕೀಲಿ ವೃತ್ತಿ ನಡೆಸುತ್ತ ಅನೇಕ ಸ್ಥಾನಮಾನ ಗಳಿಸಿ ಹಾಯಾಗಿ ಜೀವನ ಕಳೆಯಬಹುದಿತ್ತು. ಆದರೆ ವೈಯಕ್ತಿಕ ಜೀವನದ ಹಿತ ಬದಿಗಿರಿಸಿ  ಎಲ್ಲೆಡೆ ಸಂಚರಿಸಿ ಅನಾದರಕ್ಕೊಳಗಾಗಿ ಅವರಿವರ ಜಗುಲಿಯ ಮೇಲೆ ಗೆದ್ದಲು ಹಿಡಿದು ಪೂಜೆಗೊಳ್ಳುತ್ತಿದ್ದ ವಚನಗಳ ಸುಮಾರು 25,000 ಕ್ಕೂ ಹೆಚ್ಚು ತಾಳೆ ಗರಿಗಳನ್ನು ಮೂಲ ಸ್ವರೂಪದಲ್ಲಿ ಸಂಗ್ರಹಿಸಿದರು ಎಂದು ನುಡಿದರು.

ಕಲ್ಯಾಣದಿಂದ ಕಡಲಾಚೆಗೂ ಪಸರಿಸಿದ ವಚನ ಸಾಹಿತ್ಯ  ಕುರಿತು ಉಪನ್ಯಾಸ ನೀಡಿದ ನಗರದ ಉರ್ದು ಪ್ರೌಢಶಾಲೆ ಶಿಕ್ಷಕ ಎಸ್.ಬಿ. ದೊಡ್ಡಣ್ಣವರ, ಫ.ಗು.ಹಳಕಟ್ಟಿ ಅವರ ಜೀವನ ಚರಿತ್ರೆಯನ್ನು ವಿಸ್ತೃತವಾಗಿ ವಿವರಿಸಿದರು.

ಪುರ್ತಗೇರಿಯ ಹೊನ್ನಪ್ಪ ಸೂಡಿ ಹಾಜರಿದ್ದರು. ಹಳ್ಳಿಗುಡಿ ರೈತರು ದಾಸೋಹಕ್ಕೆ 15 ಕ್ವಿಂಟಲ್ ಜೋಳ ನೀಡಿದರು. ದಾನಿ ಹನುಮಂತಪ್ಪ ರಡ್ಡೇರ ಹಾಗೂ ಇತರರನ್ನು ಸ್ವಾಮೀಜಿ ಸನ್ಮಾನಿಸಿದರು. ಓಕ ಸುತಾರ ಅವರಿಂದ ಸುಶ್ರಾವ್ಯ ವಚನಗೀತ ಸಂಗೀತ ನಡೆಯಿತು. ಐಶ್ಚರ್ಯ ಮಹಾಂತೇಶ ಯಚ್ಚಲಗಾರ, ಕರುಣಾ ನಂದಿಬಸಪ್ಪ ಯಚ್ಚಲಗಾರರಿಂದ ಧರ್ಮಗ್ರಂಥ ಪಠಣ, ಧರ್ಮಚಿಂತನ ನಡೆಯಿತು.

ಭಕ್ತಿಸೇವೆ ಒದಗಿಸಿದ್ದ ಮಹಾಬಳೇಶ್ವರ ಬ.ಅಂಗಡಿ ಹಾಗೂ ಡಾ.ಮಾಲಿಪಾಟೀಲ, ಎಲ್ಲಮ್ಮ ತೆಗ್ಗಿ ಪರಿವಾರದವರನ್ನು ಗೌರವಿಸಲಾಯಿತು. ಲಿಂಗಾಯತ ಪ್ರಗತಿಶೀಲ ಸಂಘದ ಕೋಶಾಧ್ಯಕ್ಷ  ಪ್ರಭುಸ್ವಾಮಿ ಹಿರೇಮಠ ಸ್ವಾಗತಿಸಿದರು. ಶಿವಾನುಭವ ಸಮಿತಿ ಅಧ್ಯಕ್ಷ ಪ್ರೊ. ಎಸ್.ಎನ್.ಆದಿ ಪರಿಚಯಿಸಿದರು. ಪ್ರೊ. ನಾಯಕ ನಿರೂಪಿಸಿದರು. ಸಂಘದ ಅಧ್ಯಕ್ಷ  ಪ್ರಕಾಶ ಕರಿಸೋಮನಗೌಡ್ರ, ಉಪಾಧ್ಯಕ್ಷ  ಮೃತ್ಯುಂಜಯ ಸಂಕೇಶ್ವರ, ಶಿವಲೀಲಾ ಕುರಡಗಿ, ವೀರಣ್ಣ ಹೊನಗಣ್ಣವರ, ಸಹ ಕಾರ್ಯದರ್ಶಿ ಗುರುಬಸವಲಿಂಗ ತಡಸದ ಹಾಜರಿದ್ದರು.

ಶಿರಹಟ್ಟಿಯಲ್ಲಿ ಭಾವಸಾರ ಕ್ಷತ್ರಿಯ ಸಮಾವೇಶ
ಗದಗ: ಅಖಿಲ ಭಾರತೀಯ ಭಾವಸಾರ ಕ್ಷತ್ರಿಯ ಮಹಾಸಭಾದ ತಾಲ್ಲೂಕು ಸಮಾವೇಶ ಇದೇ 10 ರಂದು   ಬೆಳಿಗ್ಗೆ 9 ಗಂಟೆಗೆ ಶಿರಹಟ್ಟಿಯ  ಫಕೀರೇಶ್ವರ ಸಮುದಾಯ ಭವನದಲ್ಲಿ ಜರುಗಲಿದೆ.  ಫಕೀರ ಸಿದ್ದರಾಮ ಸ್ವಾಮೀಜಿ ಹಾಗೂ ಶ್ರೀಕ್ಷೇತ್ರ ಪಂಢರಪುರದ ಗುರುವರ್ಯ ಪ್ರಭಾಕರ ದಾದಾ ಬೋದಲೆ ಮಹಾರಾಜರು ಆಗಮಿಸುವರು. ರಾಷ್ಟ್ರ ಘಟಕದ ಅಧ್ಯಕ್ಷ ನಾರಾಯಣರಾವ ತಾತುಸ್ಕರ, ಸಚಿವ ಎಚ್.ಕೆ. ಪಾಟೀಲ್, ಶಾಸಕ ರಾಮಕಷ್ಣ ದೊಡ್ಡಮನಿ, ಮಾಜಿ ಶಾಸಕ ರಾಮಣ್ಣ ಲಮಾಣಿ,  ರಮೇಶ ಮಹೇಂದ್ರಕರ, ರಾಜ್ಯ ಉಪಾಧ್ಯಕ್ಷ ಅನಂತರಾವ ಸುಲಾಖೆ, ಮಾಳದಕರ, ಗೋಪಾಲರಾವ ಉತ್ತರಕರ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಹಿಸಲಿದ್ದಾರೆ.
ರಾಘವೇಂದ್ರಸ್ವಾಮಿ ಮಠದಿಂದ ಫಕೀರೇಶ್ವರ ಮಠದವರೆಗೆ ಮೆರವಣಿಗೆ ಜರುಗಲಿದ್ದು, ಗದಗ ಹಾಗೂ ಸವಣೂರನಿಂದ ಮಹಿಳಾ ಭಜನಾ ಮಂಡಳದವರಿಂದ ಮೆರವಣಿಗೆ ನಡೆಯಲಿದೆ.

ಸಮಾವೇಶದಲ್ಲಿ ಸಮಾಜದ ವಧು-ವರರ ಸಂಗಮ ಕಾರ್ಯಕ್ರಮ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಹಾಗೂ ನೋಟಪುಸ್ತಕ ವಿತರಣೆ,  ಹಿರಿಯರಿಗೆ ಸನ್ಮಾನ ಜರುಗಲಿದೆ ಎಂದು  ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT